Sunday, September 25, 2011

ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ.....!ಅಡಿಕೆ ತೆಂಗಿನ ಮದ್ಯೆ ಅದೊಂದು ಅತ್ತಿ ಮರ. ನಮ್ಮ ನಿರ್ಮಾಣ ಹಂತದಲ್ಲಿರುವ ಹೋಂ ಸ್ಟೇಯ ಎದುರು ಚಂದವಾಗಿ ನಿಂತಿದೆ. ಮಳೆಗಾಲದ ಎಲೆ ಉದುರಿಸಿ ಹೊಸ ಚಿಗುರುಗಳನ್ನು ಇನ್ನೇನು ಹೊರ ಹೊಮ್ಮಿಸುವ ಹಂತದಲ್ಲಿದೆ. ಇರಲಿ ಅದು ಇರುವ ಮರದ ಕತೆಯಾಯಿತು, ಅಲ್ಲಿ ಇಲ್ಲದ ಮರಗಳ ವಿಚಾರದತ್ತ ಹೊರಳೋಣ.

ಸಂತೃಪ್ತ ಜೀವನಕ್ಕೆ ಗಂಡ-ಹೆಂಡತಿ-ಚಂದದ ಮಕ್ಕಳು-ಒಂದಿಷ್ಟು ಹಣ-ಮಾಡಲು ಕೆಲಸ ಮುಂತ್ ಮುಂತಾದ ಹಲವು ಇರಬೇಕು. ಬೇಕುಗಳ ಪಟ್ಟಿಯನ್ನು ಬೆಳೆಯಲು ಬಿಟ್ಟರೆ ಅಂತ್ಯವೇ ಇಲ್ಲ ಬಿಡಿ. ಬೆಳೆಯಲು ಬಿಟ್ಟ ಜನಕ್ಕೇ ನೆಮ್ಮದಿ ಅಂಬೋದು ದೂರದ ಮಾತೇ ಸರಿ. ಆದರೆ ನೆಮ್ಮದಿಯೊಂದು ಇದೆ ಅಂತಾದರೆ ಮಿಕ್ಕೆಲ್ಲ ಗೌಣ ಅಂತ ಅಂದುಕೊಳ್ಳಬಹುದು. ಈ ಮನಸ್ಸಿನ ನೆಮ್ಮದಿಗೆ ಉಸಿರಾಟ ಕ್ರಿಯೆ ಬಹಳ ಮುಖ್ಯವಂತೆ. ನಿಧಾನ ಉಸಿರಾಟ, ಗಮನಿಸಿ ಉಸಿರಾಟ, ತ್ವರಿತ ಉಸಿರಾಟ ಹೀಗೆ ಏನೇನೋ ಪದ್ದತಿ ಇದೆ. ಅದರ ವಿವರ ಯೋಗ ಧ್ಯಾನ ಅಭ್ಯಾಸ ಮಾಡುವವರನ್ನು ಕೇಳಬೇಕು ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವುದು ಎಂದರೆ ಆ ಉಸಿರಾಟಕ್ಕೆ ಶುದ್ಧವಾದ ಗಾಳಿಯ ವಿಷಯ.

ಹೌದೇ ಹೌದು ನಾವು ಎಲ್ಲಿ ಎಂಥಹಾ ಜಾಗದಲ್ಲಿ ಯಾವುದನ್ನ ಉಸಿರಾಡುತ್ತಿದ್ದೇವೆ ಎಂಬ ವಿಷಯದ ಮೇಲೆ ನಮ್ಮ ನರನಾಡಿಗಳ ನೆಮ್ಮದಿ ಅವಲಂಬಿಸಿದೆ ಎಂಬುದು ನಮ್ಮ ನಿಮ್ಮಂಥಹ ಸರಳ ಸಹಜ ಮಿದುಳಿಗೆ ಹೊಳೆಯುವ ವಿಷಯ. ಆದರೆ ಹಿಂದಿನ ಜನರು(ಯಾರು ಅಂತ ನನಗೂ ಗೊತ್ತಿಲ್ಲ....!) ಅಕಾರಾದಿ ಪಂಚ ವೃಕ್ಷಗಳ ಸಾಪಿಪ್ಯದಲ್ಲಿ ಉಸಿರಾಟ ನಡೆಯಿಸಿದರೆ ಲೈಫೆಂಬ ಲೈಫು ನೆಮ್ಮದಿಯ ಆಕಾಶದಲ್ಲಿ ಬೆಳ್ಳಿ ಮೋಡದಂತೆ ತೇಲಾಡುತ್ತದೆಯಂತೆ. ಆ ಅಕಾರಾದಿ ಪಂಚವೃಕ್ಷಗಳನ್ನು ದೇವಸ್ಥಾನದ ಸುತ್ತ ಬೆಳೆಸುತ್ತಿದ್ದರಂತೆ. ಕಾರಣ ಎಲ್ಲರ ಮನೆಯ ಸುತ್ತ ಹಾಗೆ ಬೆಳೆಸಲು ಅಸಾದ್ಯದ ಕಾರಣ ಹೀಗೆ ದೇವಸ್ಥಾನದ ಸುತ್ತ ಬೆಳೆಯಿಸದರೆ ದಿನಕ್ಕೊಮ್ಮೆ ಭಕ್ತರು ಅದರಿಂದ ಹೊರ ಹೊಮ್ಮುವ ಔಷಧೀಯ ಗುಣದ ಆಮ್ಲಜನಕ ಸೇವಿಸಿದರೆ ಮನಸ್ಸು ಪ್ರಫುಲ್ಲಗೊಂಡು ನೆಮ್ಮದಿಯ ಕೇಂದ್ರವಾಗುತ್ತದೆ ಅಂತ ಹಾಗೆಲ್ಲ ಮಾಡಿದ್ದಾರಂತೆ.

ಜತೆ ಜತೆಗೆ ಮಕ್ಕಳಾಗಲು, ದಮ್ಮು ಕೆಮ್ಮು ಮಾಯವಾಗಿ ಆರೋಗ್ಯ ನಳನಳಿಸಲು, ಕೂಡ ಅದರಿಂದ ಹೊರ ಹೊಮ್ಮುವ ಗಾಳಿ ಹೈ ಲೆವಲ್ ಅಂತೆ. ಈ ಅಂತೆಕಂತೆಗಳ ಕತೆಯನ್ನು ಮುಂದಿಟ್ಟುಕೊಂಡು ನಾನು ಕೆಲಕಾಲ ಅತ್ತಿಮರದ ಕೆಳಗೆ ಬರಬರನೆ ಉಸಿರಾಟ ಮಾಡಿದ್ದಿದೆ. ಹಾಗೂ ಜತೆಜತೆಯಲ್ಲಿಯೇ ಆಹಾ ಎಂಥ ಬರಪ್ಪೂರ್ ನೆಮ್ಮದಿ ಅಂತ ನಂಬಿಕೊಂಡದ್ದೂ ಇದೆ. ಇರಲಿ ಅದರ ತರ್ಕ ಕುತರ್ಕ ಬದಿಗಿಟ್ಟು ಅಕಾರಾದಿ ಪಂಚವೃಕ್ಷದತ್ತ ಹೊರಳೋಣ

ಅತಿ-ಆಲ-ಅಶ್ವಥ್ಥ-ಅಶೋಕ-ಅರಳಿ ಎಂಬುದು ಅಕಾರಾದಿ ಪಂಚವೃಕ್ಷ ಅಂತ ಯಾರೋ ಹೇಳಿದರು. ಅವು ಮನೆಯ ಸುತ್ತ ಇರಬೇಕಂತೆ. ಇದರಲ್ಲಿ ನನಗೆ ಒಂದು ಸಣ್ಣ ಡೌಟು ಹೊರಟಿತು. ಅರಳಿ ಹಾಗೂ ಅಶ್ವಥ್ಥ ಒಂದೇ ಅಂತ. ಆದರೆ ಅಲ್ಲ ಅಂತ ಮತ್ಯಾರೋ ಹೇಳಿದರು. ಅಶೋಕ ವೃಕ್ಷದ ಬಗ್ಗೆಯೂ ಮತ್ತೊಂದು ಡೌಟು. ಈಗ ನೇರವಾಗಿ ಮೇಲಕ್ಕೆ ಹೋಗುವ ಅಶೋಕದ ಮರ ಇದೆಯಲ್ಲ ಅದು ಇದಲ್ಲ. ಅಶೋಕವೃಕ್ಷ ಅಂತಲೇ ಬೇರೆ ಇದೆಯಂತೆ. ಒಟ್ಟಿನಲ್ಲಿ ಅದರ ಬಗೆಗಿನ ಕೆಲ ಗೊಂದಲಗಳ ನಡುವೆ ಏನೋ ಒಂದು ಇದೆ. ಇದೆಲ್ಲದರ ಮಾಹಿತಿ ಪುರೋಹಿತರ ಬಳಿ ಸಿಗಬಹುದೆಂದು ಅವರೊಬ್ಬರನ್ನು ಕೇಳಿದೆ. "ಯಾರಿಗೂ ಬ್ಯಾಡ ಅಂದಿದ್ದು ನಿನಗೆ ಬೇಕು ಮಾರಾಯ, ಸುಮ್ನಿರ ಸಾಕು" ಎಂದು ತಮಗೆ ಗೊತ್ತಿಲ್ಲ ಎಂಬುದನ್ನು ನೇರವಾಗಿ ಹೇಳದೇ ನನ್ನ ಮೇಲೆ ತಿರುಗಿಸಿದರು.

ಅಂತೂ ಎನೋ ಎಂತೋ ಇದೆ ಸಂಪೂರ್ಣ ಸಿಕ್ಕಮೇಲೆ ಮತ್ತೆ ಕೊರೆಯುತ್ತೇನೆ ಅಲ್ಲಲ್ಲ ಬರೆಯುತ್ತೇನೆ. ಅಲ್ಲಿಯವರೆಗೆ ಸಿಕ್ಕ ಗಾಳಿಯನ್ನೇ ಮೆಲ್ಲಗೆ ಉಸಿರಾಡುತ್ತಿರಿ. ಓಕೆನಾ..?

4 comments:

ಮನದಾಳದಿಂದ............ said...

ಹ್ಹ ಹ್ಹ ಹ್ಹಾ..........
ಅಲ್ಲ ಮಾರಾಯ್ರೇ, ದೇವಸ್ಥಾನದ ಪೂಜಾರಿಗಳಿಗೆ ಪೂರ್ತಿ ನೆಮ್ಮದಿಯೇ ಹಾಗಾದರೆ!

ಸಾಗರದಾಚೆಯ ಇಂಚರ said...

sakat marayre

enta lekhana nimdu :)

Ramya said...

AAkaaradi 5 vrikshagallu idru ninna anta vobninda Bhatrige nemdille nodu!!!

kaala ketothu!!!


anyways waiting for your Updates on AAkaaradi Pancha vrikshagallu!

ಮಹೇಶ ಪ್ರಸಾದ ನೀರ್ಕಜೆ said...

ಅಶ್ವಥ್ಥ ಅರಳಿ ಒಂದೇ ಅಂತ ತಿಳಿದಿದ್ದೆ ಈ ತನಕ... ಈಗ ಕನ್ ಫ್ಯೂಸ್ ಆಗಿದೆ. ಇರಲಿ. ಅಶೋಕ ಎಂದರೆ ಪೇಟೆಯಲ್ಲಿ ಉದ್ದಕ್ಕೆ ಬೆಳೆಯುವ ಮರ ಅಲ್ಲ. ಅಶೋಕಾರಿಷ್ಟ ಎಂಬ ಆಯುರ್ವೇದ ಮದ್ದು ಅಶೋಕ ಮರದ ಕೆತ್ತೆಯಿಂದ ಆಗುತ್ತದೆ. ಇದು ಮಾವಿನ ಎಲೆಯಷ್ಟು ದೊಡ್ಡದಿರುವ ತಗಡಿನಂಥಾ ಎಲೆ, ಕಿಸ್ಕಾರ ಹೂವಿನಂಥಾ ಹೂವು ಹೊಂದಿರುವ ದೊಡ್ಡ ಮರ.