Monday, October 24, 2011

ಕರುಳು ಚುರುಕ್ ಎನ್ನುತ್ತದೆ



ನಮ್ಮ ಮಲೆನಾಡು ಈಗ ಅತ್ಯಂತ ಸುಂದರ. ಮಳೆಗಾಲ ಮುಗಿದಿದೆ ಚಳಿಗಾಲ ಶುರುವಾಗಿಲ್ಲ. ಬೆಳಿಗ್ಗೆ ಎಂಟರತನಕ ಇಬ್ಬನಿಯ ರಂಗು, ಅದರ ನಡುವೆ ಸೂರ್ಯನ ಇಣುಕು. ಎಲ್ಲೆಲ್ಲಿಯೂ ಹಸಿರು ಹಸಿರು ಹಸಿರು. ಕೆರೆಕಟ್ಟೆಗಳು ತುಂಬಿ ತುಳುಕಾಡುತ್ತಲಿರುತ್ತವೆ. ಶುದ್ಧ ನೀರಿನ ಜುಳುಜುಳು ಸದ್ದು, ವಲಸೆ ಹಕ್ಕಿಗಳ ಹಾರಾಟ, ಕಾಡುಕೋಳಿಗಳ, ಕೆರೆಬಾತುಕೋಳಿಗಳ, ಚೀರಾಟ. ಸರಿ ಸರಿ ಇಲ್ಲಿಯವರೆಗೆ ಒಂಥರಾ ಒಳ್ಳೆಯ ಪದಗಳಿತ್ತು ಈಗ ಇದ್ದಕ್ಕಿದ್ದಂತೆ ಚೀರಾಟ ಎಂಬ ಪದ ಬಂದು ಒಂಥರಾ ಇರಿಸುಮುರಿಸಾಯಿತಿರಬೇಕು ನಿಮಗೆ, ಅದಕ್ಕೆ ಕಾರಣಗಳಿವೆ ಹೇಳುತ್ತೇನೆ ಕೇಳಿ.

ಮಳೆಗಾಲ ಮುಗಿಯುತ್ತಿದ್ದಂತೆ ಬಯಲುಸೀಮೆಯಿಂದ ಅದ್ಯಾವುದೋ ತಂಡ ಪ್ರತೀ ವರ್ಷ ಈ ಸಮಯಕ್ಕೆ ಸರಿಯಾಗಿ ಊರಮುಂದೆ ಬಂದು ಟೆಂಟ್ ಹಾಕುತ್ತದೆ. ಹತ್ತೆಂಟು ಜನರ ಆ ತಂಡದಲ್ಲಿ ಹಿರಿಯರು ಮೂರ್ನಾಲ್ಕು, ಯುವಕರು ಮತ್ತೆ ಮೂರ್ನಾಲ್ಕು ಚಿಳ್ಳೆಪಿಳ್ಳೆ ಮೂರ್ನಾಲ್ಕು ಹಾಗೂ ಒಂದಿಬ್ಬರು ಹೆಂಗಸರು. ಅವರ ತಂಡ ಬಂತೆಂದರೆ ನನಗೆ ಮಾತ್ರಾ ಕರುಳು ಚುರುಕ್ ಎನ್ನುತ್ತದೆ. ಕಾರಣ ಅವರು ನಮ್ಮ ಹಳ್ಳಿಯ ಸುತ್ತಮುತ್ತ ಕಾಡಿನಲ್ಲಿರುವ ಕೋಳಿ ಹಾಗೂ ಕೆರೆಯಲ್ಲಿರುವ ಬಾತುಕೋಳಿಯನ್ನು ಬೆನ್ನೆತ್ತಿ ಬೇಟೆಯಾಡುತ್ತಾರೆ. ಅವರು ಬೇಟೆಯಲ್ಲಿ ನಿಸ್ಸೀಮರು. ಬಗಲಲ್ಲಿ ಕವಣೆ ಕೈಯಲ್ಲಿ ಚೀಲ ಹಿಡಿದು ಹೊರಟರೆಂದರೆ ವಾಪಾಸು ಚೀಲ ಫುಲ್ ಕೋಳಿ ಗ್ಯಾರಂಟಿ. ಅವುಕ್ಕೆ ಕೋಳಿಯೇ ಆಗಬೇಕೆಂದಿಲ್ಲ ಏನಾದರೂ ಆದಿತು. ಮೊನ್ನೆ ನಮ್ಮ ಗ್ರಾಮಪಂಚಾಯಿತಿಯ ಗಿಡ್ಡ ಗೊಣಗುತ್ತಿದ್ದ. ನಮ್ಮ ಪಂಚಾಯ್ತಿಗೆ ಬರುತ್ತಿದ್ದ ಬೆಕ್ಕು ಪತ್ತೆಯೇ ಇಲ್ಲ ಮಾರಾಯರೇ", ಎಂಬಲ್ಲಿಗೆ ವಿಶೇಷ ಅಡುಗೆಯಾಗಿ ಅಲ್ಲಿಯೇ ಪಕ್ಕದಲ್ಲಿ ಡರ್ ತೇಗಿನ ಮುಖಾಂತರ ಹೊರಡುತ್ತಿದೆ ಬೆಕ್ಕು.

ಕೊಂದ ಪಾಪ ತಿಂದು ಪರಿಹಾರವಂತೆ ನಾವು ಅದನ್ನೆಲ್ಲಾ ಕಂಡೂ ಕಾಣದಂತೆ ಇರುವುದು ಕ್ಷೇಮ, ಹೇಳಲು ಹೋದರೆ ವಿವಾದವಾದರೂ ಆದೀತೆ. ಹಾಗಾಘಿ ನಾವು ನೀವೆಲ್ಲ ಯಥಾಪ್ರಕಾರ " ಆಹಾ ಎಂತಹ ಹಸಿರು, ಎಂಥಹಾ ಇಬ್ಬನಿ" ಎನ್ನುತ್ತಾ ಇದ್ದುಬಿಡೋಣ, ಏನಂತೀರಿ?.

1 comment:

ದೀಪಸ್ಮಿತಾ said...

ನಿಜ, ಎಷ್ಟೋ ಸಲ ಕಂಡರೂ ಏನೂ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಹಕ್ಕಿ ಪಿಕ್ಕಿ ಜನಾಂಗ ಕೂಡ ಇದೇ ರೀತಿ ಹಕ್ಕಿಗಳು, ಬೆಕ್ಕು ನಾಯಿಗಳನ್ನು ಬೇಟೆಯಾಡಿ ತಿನ್ನುವರು