Monday, February 6, 2012

ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ

ತರ್ಕಕ್ಕೆ ನಿಲುಕದ ವಿಷಯಗಳು ಒಮ್ಮೊಮ್ಮೆ ಜೀವನದಲ್ಲಿ ಘಟಿಸಿಬಿಡುತ್ತವೆ. ಅದು ಆ ಕ್ಷಣದ ಅನುಭವ ಅಂತ ಸುಮ್ಮನೆ ತಳ್ಳಿಹಾಕಲೂ ಆಗದು ಹಾಗಂತ ಅದಕ್ಕೆ ಜೋತುಬಿದ್ದು ಹಗಲಿರುಳೂ ಅದೇ ಜಪ ಮಾಡುತ್ತ ಕುಳಿತಿರಲೂ ಆಗದು ಅಂತ ಒಂದು ಮಜದ ಘಟನೆ ಕೇಳಿ ಅಲ್ಲಲ್ಲ ಓದಿ.


ಭಾನುವಾರ, ಕಟ್ಟಿಸುತ್ತಿರುವ ಮನೆಯೆದುರು ಕುಳಿತಿದ್ದೆ. ಕಾನ್ಲೆ ವೆಂಕಟಾಚಲ ಹಿಟಾಚಿ ಕೆಲಸ ನೋಡಿ ಹೋಗಲು ಬಂದಿದ್ದ. ನಾನೂ ಅವನು ಕೆಲಸದ ಕುರಿತು ಮಾತನಾಡುತ್ತಾ ಕುಳಿತಿದ್ದಾಗ ರಸ್ತೆಯಲ್ಲಿ ಹಳದಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ನಡೆದು ಹೋದ. ಆತ ಬಹುಷ: ಭಿಕ್ಷುಕ ಅಂತ ನನಗೆ ಅನಿಸಿತು. ಆತ ಮುಂದೆ ಹೋಗಿ ನಮ್ಮ ಹೊಸಮನೆಯ ಮೈನ್ ಗೇಟಿನೊಳಕ್ಕೆ ನುಸುಳಿ ಒಳಗೆ ಬರತೊಡಗಿದ. ಅದನ್ನು ಗಮನಿಸಿದ ವೆಂಕಟಾಚಲ ದೊಡ್ಡ ದನಿಯಲ್ಲಿ " ಏಯ್ ಇಲ್ಲಿ ಯಾರೂ ಒಕ್ಕಲು ಇಲ್ಲ, ಮುಂದೆ ಹೋಗು" ಎಂದ. ಅದಕ್ಕೆ ಆತ "ಯಾರೂ ಬರಬಾರದು ಅಂತ ಮನೆ ಕಟ್ಟಿಸಿದ್ದೀರಾ..?" ಎಂದು ಗಢಸು ದನಿಯಲ್ಲಿ ಕೇಳುತ್ತಾ ಮುಂದೆ ಬರತೊಡಗಿದ. ಆತನ ಆ ದನಿ ನನಗೆ ಅದೇಕೋ ಭಿಕ್ಷುಕನ ದನಿ ಅಲ್ಲ ಅನಿಸಿತು. ಜಂಗಮ ಇರಬಹುದಾ ಅಂತಲೂ ಅನಿಸಿತು, ಆದರೂ ನಾನು ಆತನ ಬಗ್ಗೆ ಗಮನ ಕೊಡದೆ ಬೇರೇನೋ ಯೋಚಿಸುತ್ತಿದ್ದೆ. ಆದರೆ ವೆಂಕಟಾಚಲ ಅವನ ಬೆನ್ನು ಹತ್ತತೊಡಗಿದ. ಅದೂ ಇದೂ ಹಾಗೇ ಹೀಗೆ ಅಂತಿದ್ದ. ಆತ ವೆಂಕಟಾಚಲನ ಮಾತಿಗೆ ಆತ ಉತ್ತರ ಕೊಡುವ ಗೋಜಿಗೆ ಹೋಗದೆ ಸೀದಾ ನನ್ನ ಬಳಿ ಬರತೊಡಗಿದ . ಆತ ತೀರಾ ಹತ್ತಿರವಾದಾಗ ವೆಂಕಟಾಚಲ " ಏಯ್ ನನಗೆ ಮದುವೆಯಾಗಬೇಕು, ಹೆಣ್ಣು ಸಿಗುತ್ತಾ..? ಯಾವಾಗ ಸಿಗುತ್ತೆ?" ಹೇಳು ಅಂತ ಕಿಚಾಯಿಸಿದ. ಅದಕ್ಕೆ ಆತ " ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಹೆಂಡಿರು, ನಿನಗೆ ಎಷ್ಟು ಬೇಕು..?" ಅಂತ ಕೇಳಿ ನನ್ನೆದುರು ಬಂದು ನಿಂತು


ನೀನು ಕರೆದಲ್ಲಿಗೆ ಗಂಗೆ ಬಂದಿದ್ದಾಳೆ-ಈ ಜಾಗಕ್ಕೆ ಇಲ್ಲಿನ ಕೆಲಸಕ್ಕೆ ತೊಂದರೆ ಕೊಡಬೇಕು ಅಂತ ಎಂಟು ಜನ ಕೋರ್ಟು ಕಛೇರಿ ಅಂತ ಗಂಟು ಬಿದಿದ್ದಾರೆ ಆದರೆ ನಿನ್ನ ಪ್ರಾಮಾಣಿಕತೆಯಿಂದ ಸತ್ಯ ಧರ್ಮ ದಿಂದ ನಿನ್ನ ರೋಮವನ್ನೂ ಅಲುಗಾಡಿಸಲಾಗಲಿಲ್ಲ". ನಾನು ಇವೆಲ್ಲಾ ಒಗಟಿನ ತರಹದ ಮಾಮೂಲು ಮಾತು ಅಂತ ಸುಮ್ಮನುಳಿದೆ, ಆದರೆ ವೆಂಕಟಾಚಲ " ಏಯ್ ಇವ ಈ ತರಹ ನೂರಕ್ಕೆ ನೂರು ಹೇಳ್ತಾನಲ್ಲ ಮಾರಾಯ, ನಾನು ಕಿಚಾಯಿಸಿದ್ದು ತಪ್ಪಾಯ್ತಾ..?" ಅಂತ ನನ್ನ ಬಳಿ ಕೇಳಿದ. ಅದಕ್ಕೆ ಆತ " ನಾನು ಉಕ್ಕಡಗಾತ್ರಿಯಿಂದ ಬಂದ ಜಂಗಮ, ದಾರಿಯಲ್ಲಿ ಹೋಗುತ್ತಾ ಇದ್ದೆ. ಬರಬೇಕು ಅಂತ ಅನಿಸಿತು ಬಂದೆ, ಹೇಳು ಅಂತ ಅಪ್ಪಣೆಯಾಯಿತು ಹೇಳುತ್ತಾ ಇದ್ದೇನೆ " ಎಂದು ಹೇಳಿ ನನ್ನತ್ತ ಕೈಮಾಡಿ " ಇಂಥವರ ಮುಕಾಂತರ ಜಮೀನು ವ್ಯವಹಾರ ಮಾಡಿದ್ದೀಯ, ಸಮಾಧಾನವಾಗಿ ಬಗೆ ಹರಿಸಿಕೋ" ಎಂದು ವೆಂಕಟಾಚಲನ ಬಳಿ ಹೇಳಿದ. ಈ ಬಾರಿ ವೆಂಕಟಾಚಲ ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ, ಕಾರಣ ವೆಂಕಟಾಚಲ ನನ್ನ ಮೂಲಕ ಒಂದು ಜಮೀನು ಖರೀದಿಸಿ ಅದು ಸ್ವಲ್ಪ ಜಡಕಾಗಿತ್ತು. ನಂತರ ಮುಂದುವರೆದ ಜಂಗಮ ನನ್ನ ಬಳಿ " ಪೂರ್ವ ದಿಕ್ಕಿನಲ್ಲಿ ಒಂದು ಜಮೀನಿದೆ, ಅದು ಪಾಳು ಬಿದ್ದಿದೆ, ಪ್ರಯತ್ನಿಸು ನಿನ್ನವರಿಗೆ ಆಗುತ್ತೆ- ಒಳ್ಳೆಯವರೊಡನೆ ಸೇರಿ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀಯ ಒಳ್ಳೆಯದೇ ಆಗುತ್ತೆ- ನಿನ್ನ ಏಳ್ಗತಿಯ ಮೇಲೆ ಜನರ ಕಣ್ಣಿನ ದೃಷ್ಟಿ ಇದೆ, ನೀನು ಅವನ್ನೆಲ್ಲಾ ನಂಬಲ್ಲ, ಆದರೆ ಹೊಟ್ಟೆಕಿಚ್ಚಿನ ಕಣ್ಣಿಗೆ ಕಲ್ಲು ತುಂಡು ಮಾಡುವ ಶಕ್ತಿಯಿದೆ ಹಾಗಾಗಿ ಕೇವಲ ಮಾಡಬೇಡ, ಒಂದು ಶಾಂತಿ ಮಾಡಿಸು" ಎಂದ. ಹಾಗಂದ ಕೂಡಲೇ ವೆಂಕಟಾಚಲ " ನಾನು ಮೊದಲೇ ಹೇಳಲಿಲ್ಲವಾ, ಇವರದ್ದು ಶುರು ಆಯಿತು ನೋಡು ಶಾಂತಿ ಗೀಂತಿ ಅಂತ ದುಡ್ದು ಹೊಡೆಯುವ ತಂತ್ರ" ಎಂದು ಮತ್ತೆ ಕಿಚಾಯಿಸಿದ. ಅದಕೆ ಜಂಗಮ "ಇಲ್ಲ ಇದು ಹಣ ಖರ್ಚುಮಾಡಿ ಮಾಡುವ ಶಾಂತಿಯಲ್ಲ ಗೋಮೂತ್ರ ಮನೆಯ ಸುತ್ತ ಸಿಂಪಡಿಸು ಅಷ್ಟೆ ಎಂದು ಹೇಳಿ ಉಕ್ಕಡಗಾತ್ರಿಯಲ್ಲಿ ನನ್ನದೊಂದು ಪುಟ್ಟ ಗೋ ಶಾಲೆಯಿದೆ ಧನ ಸಹಾಯ ಮಾಡುವುದಾದರೆ ಮಾಡಿ ಎಂದು ಫೋಟೋ ತೋರಿಸಿದ, ನಾನಷ್ಟು ಕೊಟ್ಟೆ ವೆಂಕಟಾಚಲನೂ ಅಷ್ಟು ಕೊಟ್ಟ. ತಕ್ಷಣ ಹೊರಟು ನಿಂತ ಜಂಗಮ " ಮುಂದಿನ ವರ್ಷ ಇದೇ ಸಮಯಕ್ಕೆ ಬರುತ್ತೇನೆ ನಾನು ಹೇಳಿದ್ದು ಸತ್ಯವಾದರೆ ಧರ್ಮ ಮಾಡು, ಸುಳ್ಳಾದರೆ ಅಟ್ಟು ಎನ್ನುತ್ತಾ ಹೊರಟ. ಆಗ ವೆಂಕಟಾಚಲ ಮತ್ತೆ " ನನಗೆ ಹೆಣ್ಣು ಸಿಗುತ್ತೇನೋ..?" ಎಂದು ಕೇಳಿದ. ಅದಕ್ಕೆ ಆತ " ಸರಿಯಪ್ಪಾ ನಿನಗೆ ನಾನು ಹದಿನಾರು ದಿವಸದಲ್ಲಿ ಹೆಣ್ಣು ಕೊಡಿಸುತ್ತೇನೆ, ಆದರೆ ಇರುವ ಹೆಂಡತಿಯನ್ನು ಏನು ಮಾಡುತ್ತೀಯಾ?, ಸುಮ್ಮನೆ ಬೇಡದ್ದನ್ನೆಲ್ಲಾ ಕೇಳಬೇಡ " ಎನ್ನುತ್ತಾ ಬಿರಬಿರನೆ ನಡೆದ. ವೆಂಕಟಾಚಲ ಅಡ್ಡಬೀಳುವುದೊಂದು ಬಾಕಿ.


ಇದು ಘಟನೆ. ಇಲ್ಲಿ ಅತಿಶಯೋಕ್ತಿ ಇಲ್ಲ. ನಡೆದದ್ದನ್ನು ನಡೆದಂತೆ ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಜಂಗಮ ಹೇಳಿದ ಅಷ್ಟೂ ನೂರಕ್ಕೆ ನೂರು ಸತ್ಯ, ಆತ ಹೇಳಿದ ಮಾತು" ಗಂಗೆ ನೀನು ಕರೆದಲ್ಲಿಗೆ ಬಂದಿದ್ದಾಳೆ" ಎಂಬುದೂ ಕೂಡ. ನಾವು ತೆಗೆಯಿಸಿದ ಬೋರ್ ವೆಲ್ ನಿರಂತರ ನೀರಿನ ಬುಗ್ಗೆಯಾಗಿ ಚಿಮ್ಮುತ್ತಿದೆ. ಇದು ತರ್ಕಕ್ಕೆ ನಿಲುಕದ್ದು, ನಾನಾಗಿಯೇ ಹುಡುಕಿ ಹೋಗಿ ಅಂಗೈ ಕೊಟ್ಟದ್ದಲ್ಲ. ಒಂದು ಘಟನೆ ಅಷ್ಟೆ. ಸತ್ಯವೋ ಸುಳ್ಳೋ ವಿಮರ್ಶೆ ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ....?




6 comments:

nagarathna rajarama said...

nijavaagalu mai navireluvantaa ghatane !!!!

shivu.k said...

ಸರ್,
ಘಟನೆವನ್ನು ಓದಿದಾಗ ಒಂದುಕಡೆ ನಂಬಬೇಕೆನಿಸಿದರೂ ಮತ್ತೊಂದು ಕಡೆ ಬೇಡವೆನಿಸುತ್ತದೆ. ಸರಳ ಶಾಂತಿ ಓಕೆ. ಆದ್ರೆ ಅವರ ಗೋಶಾಲೆಗೆ ಹಣ ಏಕೆ ಬೇಡಬೇಕು? ಇದರಲ್ಲಿ ಅವರ ಸ್ವಾರ್ಥವಿದೆಯೆನಿಸುತ್ತದೆ.

Ramya said...

My god I am about to faint!

Muthu B'lore said...

Kambavo Bimbavo, nambikeindale dimbugoluvudu jeeva. idu DVG maatu.
Idu avaravara bhaavakke, avaravara Bhakutige....! bitta Vichaara.

venu said...

ಕಾರಂತರ ಮೂಕಜ್ಜಿಯ ತಮ್ಮನಿರಬೇಕು...

Prakash Narasimhaiah said...

ಆತ್ಮೀಯರೇ,
ನಿಮ್ಮ ಲೇಖನ ಓದಿ ಖುಷಿಯಾಯಿತು. ಇದು ನನ್ನ ಜೀವನದಲ್ಲಿ ಇಂತಹ ಘಟನೆಗಳು ನಡೆದಿವೆ. ನಾನು ಮೊದಲು ಇದನ್ನು ನಂಬದೆ ತಿರಸ್ಕರಿಸುತ್ತಿದ್ದೆ. ಆದರೆ ಈಗ ಇಂತಹ ಶಕ್ತಿಯನ್ನು ಗೌರವಿಸುತ್ತೇನೆ. ಇದು ಸುಮ್ಮನೆ ಬರುವುದಿಲ್ಲ. ನನ್ನ ಜೀವನದಲ್ಲಿ ಒಮ್ಮೆ ಇಂತಹುದೊಂದು ಘಟನೆ ನಡೆಯಿತು.
ನಾನು ಪೋಲಿಯೋ ರೋಗಕ್ಕೆ ತುತ್ತಾಗಿ ನನ್ನೆರಡು ಕಾಲುಗಳಲ್ಲಿ ಸ್ವಾಧಿನವಿಲ್ಲ . ನಾನು ಒಂದು ಪ್ರತಿಷ್ಟಿತ ಇಂಜನೀಯರಿಂಗ್ ಕಾಲೇಜಿನಲ್ಲಿ ಅಧೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ 12 ನೆ ವರ್ಷದಲ್ಲಿ ಮನೆ ಬಾಗಿಲಮುಂದೆ ಕುಳಿತ್ತಿದ್ದಾಗ ಒಬ್ಬ ಸಾಧು ವೇಷದಾರಿ ಬಂದು ಏನೇನೋ ಒಗಟಾಗಿ ಹೇಳುತ್ತಿದ್ದ. ನನ್ನ ತಾಯಿ ತಂದೆ ಈಚೆ ಬಂದು ಭಿಕ್ಷೆ ಹಾಕಲು ಹೋದಾಗ ಸ್ವಲ್ಪ ತಡೆಯಿರಿ ಎಂದು ನನ್ನ ಕಡೆ ನೋಡಿ " ಈತನಿಗೆ ಒಳ್ಳೆ ಯೋಗವಿದೆ, ಒಳ್ಳೆ ಉದ್ಯೋಗ ಮಾಡುತ್ತಾನೆ, ಪ್ರೀತಿಸಿ ಮದುವೆ ಮಾಡಿಕೊಳ್ಳುತ್ತಾನೆ. ಎರಡು ಗಂಡು ಮಕ್ಕಳಿಗೆ ಜನ್ಮ ಕೊಟ್ಟು ಎತ್ತರಕ್ಕೆ ಬೆಳೆಸುತ್ತಾನೆ. ಸುಂದರವಾದ ಬಂಗಲೆ ಕಟ್ಟುತ್ತಾನೆ " ಎಂದೆಲ್ಲ ಹೇಳುವಾಗ ಸಹನೆ ಕಳೆದುಕೊಂಡ ನನ್ನ ತಾಯಿ " ಆಯಿತಪ್ಪ ನಿನ್ನ ಬಾಯಿ ಹರಕೆಯಂತೆ ಆಗಲಿ, ಈಗಿನ ಪರಿಸ್ತಿಯಲ್ಲಿ ಇವೆಲ್ಲ ಸಾಧ್ಯವಿಲ್ಲ. ಆಯಿತು ನಡಿ " ಎಂದು ಭಿಕ್ಷೆ ಹಾಗಿ ಸಾಗಿಸಿ ಬಿಟ್ಟರು. ನನ್ನ ತಂದೆ ಮಾತ್ರ ಸುಮ್ಮನೆ ಇದ್ದರು.
ಈಗ ನನಗೆ ೫೫ ವರ್ಷ ವಯಸ್ಸು. ಆತ ಹೇಳಿದ್ದೆಲ್ಲವೂ ನಿಜವಾಗಿದೆ. ಇದನ್ನು ನನ್ನ ತಂದೆ ತಾಯಿ ಇಬ್ಬರು ನೋಡಿದ್ದಾರೆ. ನನ್ನ ತಾಯಿ ಆ ಸಾಧುವನ್ನು ಅಸಡ್ಡೆ ಮಾಡಿದುದಕ್ಕಾಗಿ ಅವರು ಬದುಕಿರುವರೆವಿಗು ಬೇಸರ ಮಾಡಿಕೊಳ್ಳುತ್ತಿದ್ದರು.
ನಿಮ್ಮ ಅನುಭವ ಓದಿದಾಗ ನನ್ನ ಅನುಭವವನ್ನು ಹಂಚಿಕೊಳ್ಳುವ ಮನಸಾಯಿತು. ನಿಮ್ಮ ಅನುಭವದ ಮಾತಿಗೆ ನನ್ನ ಕೃತಜ್ಞತೆಗಳು. ಸಾಧ್ಯ ಮಾಡಿಕೊಂಡು ನನ್ನ ಬ್ಲಾಗ್ ಒಮ್ಮೆ ನೋಡಿ. http://only-one-minute.blogspot.com/
ಧನ್ಯವಾದಗಳೊಂದಿಗೆ,
ಪ್ರಕಾಶ್.