Friday, June 29, 2012

ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ

ಹೊಸ್ಮನೆ ಮುತ್ತು   ಎಲ್ಲರಿಗೂ ಹೆಸರು ಗೊತ್ತಿರುವಷ್ಟು ದೊಡ್ದ ಮಟ್ಟದ ಬರಹಗಾರ ಅಲ್ಲ ನಿಜ, ಆದರೆ ತೀರಾ ಗಮನಿಸಿ ಓದುವ ಕನ್ನಡದ ಓದುಗರಿಗೆ ಪರಿಚಯ ಇರುವ ಲೇಖಕ. ದಿನಪತ್ರಿಕೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಚುಟುಕಾಗಿ ಹೇಳಬೇಕಾದ್ದಷ್ಟನ್ನೇ ಹೇಳುವ ಆತ ನನಗೆ ಪರಿಚಯ ಇಲ್ಲಿಯವರೆಗೆ ಫೋನ್ ಮುಖಾಂತರವಷ್ಟೆ. ಆದರೆ ಸ್ನೇಹ ಒಂಥರಾ ಗಾಢವಾಗಿದೆ. ಬರೆಯುವ ಪ್ರತೀ ಬರಹದಲ್ಲಿಯೂ ಶ್ರದ್ಧೆ ಪ್ರೀತಿ ಎದ್ದು ಕಾಣುವಂತೆ ಬರೆಯಬಲ್ಲ ಮುತ್ತು ಭಾವ ಜೀವಿ. ಒಂದು ಫೋನ್ ಮಾಡಿದರೆ "ಅಣ್ಣಯ್ಯಾ,  ಧನ್ಯೊಸ್ಮಿ" ಅನ್ನುವಷ್ಟು. ಆತ ಒಮ್ಮೊಮ್ಮೆ ಮೈಲ್ ಮಾಡುವುದು ಇದೆ. ಅದು ತುಂಬಾ ಆಳವಾದ ಭಾವನೆಯಲ್ಲಿರುತ್ತದೆ. ತಿರುಗಿ ಮೈಲ್ ಮಾಡಲಿ ಎಂಬುದು ಆತನ ಆಸೆ, ಆದರೆ ನನಗೆ ಆ ಮೈಲ್ ಗೆ ಉತ್ತರಿಸುವಷ್ಟು ಭಾಷೆಯ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಬರೆಯಲಾಗದೆ ಹೇಳಲಾರದ ಸಂಕಟದಲ್ಲಿ ಸುಮ್ಮನಿದ್ದುಬಿಡುತ್ತೇನೆ. ಬಹಳ ಸಾರಿ ಮೌನ ಲೇಸು, ಕಾರಣ ಅದು ನಮ್ಮ ಬುದ್ದಿವಂತಿಕೆಯನ್ನು ಹೊರಹಾಕದಿದ್ದರೂ ದಡ್ದತನವನ್ನು ಪ್ರದರ್ಶಿಸುವುದಿಲ್ಲ.
ರಾಧಾಕೃಷ್ಣ ಭಡ್ತಿ ಹಲವರಿಗೆ ಪರಿಚಿತ ಹೆಸರು. ನೀರಿನ ಕುರಿತು ಇನ್ನು ಯಾರೂ ಬರೆಯಲಾಗದಷ್ಟು ಬರೆದ ಬರಹಗಾರ ಆತ. ಕನ್ನಡದ ದಿನಪತ್ರಿಕೆ ಕನ್ನಡಪ್ರಭದ ಅಂಕಣಕಾರ. ಸ್ವಲ್ಪ ಬಿಡುವಿಲ್ಲದ ಮನುಷ್ಯ. ಆತನಿಗೂ ಒಮ್ಮೊಮ್ಮೆ ಫೋನ್ ಮಾಡುವುದಿದೆ. ಆತ್ಮೀಯವಾಗಿ ಮಾತನಾಡುವ ಭಡ್ತಿ ಊರಲ್ಲಿ ಸಾಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ವಿಚಾರಿಸುತ್ತಾನೆ. ಮತ್ತು ಒಂದಿಷ್ಟು ಬರಿಯಬೇಕು ನೀನು ಅನ್ನುತ್ತಾನೆ. ಹಿಂದೆ ವಿಕ ದ ಲವಲವಿಕೆ ಯನ್ನು ಕಟ್ಟಿ ಬೆಳಸಿದ ಮನುಷ್ಯ. ನನಗೆ ಆತನ ಜತೆಯೂ ಒಂದು ಸ್ನೇಹದ ಎಳೆ ಇದೆ.
ಚಂದ್ರಶೇಖರ್ ನೀವು ಹೆಸರನ್ನೇ ಕೇಳಿಲ್ಲ ಬಿಡಿ. ಶಿವಮೊಗ್ಗದ "ಜನ ಹೋರಾಟದ"  ಬೆನ್ನೆಲುಬು. ಶೃಂಗೇಶ್ (ಓಹ್ ಈ ಹೆಸರು ಗೊತ್ತು ಅಂದಿರಾ...) ರ ಸಹೋದರ. ಆದರೆ ಪತ್ರಿಕಾ ಪ್ರಪಂಚದ ಒಳಹೊರ ಹೂರಣ ಗೊತ್ತಿದ್ದು ತಮ್ಮ ಹೆಸರನ್ನು ಎಲ್ಲಿಯೂ ಕಾಣಿಸದೆ ಪತ್ರಿಕೆ ನಡೆಸುವ ಜನ. ಅವರಿಗೂ ನಾನು ಒಮ್ಮೊಮ್ಮೆ ಫೋನಾಯಿಸುವುದು ಇದೆ. ಕಷ್ಟನಷ್ಟಗಳನ್ನು ಹಂಚಿಕೊಳ್ಳುವುದು ಇದೆ. ಪತ್ರಿಕೆಗಲ ಬಗ್ಗೆ ಅಲ್ಲಿರುವ ಎಲ್ಲಾತರಹದ ಜನರ ಬಗ್ಗೆ ಕರಾರುವಕ್ಕಾಗಿ ಗೊತ್ತಿರುವ ಚಂದ್ರಶೇಖರ್ ಬರಹಗಳ ಬಗ್ಗೆ ಚೆನ್ನಾಗಿ ಮಾತನಾಡಬಲ್ಲರು. ಪತ್ರಿಕೋದ್ಯಮದ ಬಗ್ಗೆ ಕಾಳಜಿಯ ಜನ.
ಹೀಗೆ ನೂರಾರು ಜನರ ದಂಡೇ ಇದೆ, ಬರಹಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳವರು, ಅದಕ್ಕಾಗಿ ದುಡಿಯುವವರು, ಅಲ್ಲೇ ಮುಳುಗಿ ಹೋದವರು, ಮತ್ತು ಮೇಲೆ ಬಂದವರು. ಮಜ ಗೊತ್ತಾ...? ಹೀಗೆಲ್ಲಾ ತಮ್ಮಪಾಡಿಗೆ ತಾವು ಅಕ್ಷರ ಸೇವೆ ಮಾಡುವವರ ಹೆಸರು ಅಷ್ಟೊಂದು ಜನಜನಿತವಲ್ಲ. ಜನಜನಿತವಾದರ ಹಿಂದೆ ಇವರ ಸೇವೆ ಇದೆ. ಈಗ ನಿಚ್ಚಳವಾಗುತ್ತದೆ, ಪತ್ರಿಕೋದ್ಯಮಕ್ಕೆ ಬೇಕಾಗಿರುವುದು ಶ್ರದ್ಧೆಯೊ, ಕಾಳಜಿಯೋ, ಅಥವಾ ಮತ್ತಿನ್ನೇನೋ..
ಇವೆಲ್ಲಾ ಯಾಕೆ ಬರೆದೆನೆಂದರೆ, ನಮ್ಮ ಮಾಜಿ ರಾಷ್ಟ್ರಪತಿ ಒಮ್ಮೆ ಇಸ್ರೇಲ್ ಗೆ ಹೋಗಿದ್ದರಂತೆ. ಅಲ್ಲಿಯ ಪತ್ರಿಕೆಗಳನ್ನು ನೋಡಿ ಅವರು ತುಂಬಾ ಖುಷಿ ಪಟ್ಟರಂತೆ. ಕಾರಣ ಅಂದು ಅಲ್ಲಿ ಬ್ಲಾಸ್ಟ್ ಆದ ಬಾಂಬ್ ನ ವರದಿ ೮ ನೇ ಪುಟದ ಮೂಲೆಯಲ್ಲಿತ್ತಂತೆ, ಹಾಗೂ ಮುಖ್ಯ ಪುಟದಲ್ಲಿ ದೇಶದ ಅಂದಿನ ತಾಂತ್ರಿಕತೆಯ ಬೆಳವಣಿಗೆಯ ಕುರಿತು ವರದಿ ಇತ್ತಂತೆ. ಹಾಗಾಗಿ ಪುಟ್ಟ ದೇಶವಾದರೂ ಇಸ್ರೇಲ್ ಇಂದು ಜಗತ್ತಿನ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ ಪ್ರಪಂಚದಲ್ಲಿ. ಮಾದ್ಯಮಗಳು ಇಲ್ಲಿಯೂ ಇದೆ, ಜನ ಮುಖ್ಯಪುಟದಲ್ಲಿ ಬೇಡದ್ದನ್ನು ಓದುತ್ತಾರೆ. ಒಳಪುಟಕ್ಕೆ ಹೋಗುವ ಪುರುಸೊತ್ತು ಇಲ್ಲದೆ ರದ್ದಿ ಅಂಗಡಿಗೆ ಪತ್ರಿಕೆ ಸೇರಿಸುತ್ತಾರೆ. ಆದರೆ ಅಲ್ಲಿರುತ್ತಿತ್ತು ಮಾಹಿತಿ ಬರಪ್ಪೂರ. ಜನರಿಂದ ಹಾಗೆಯೋ ಹಾಗಾಗಿ ಜನರೋ ತಿಳಿಯದಾಗಿದೆ


1 comment:

ವಿ.ರಾ.ಹೆ. said...

ಜನರೂ ಹಾಗೆ, ಹಾಗಾಗಿಯೇ ಜನರೂ ಹೀಗೆ...

ಅಬ್ಬರ ಎಬ್ಬಿಸಿದವರಷ್ಟೇ ಕಾಣುವುದು ಇಲ್ಲಿ !