Sunday, August 26, 2012

ಹಾಗಾದರೆ ಹುಡುಕಿ ನೀವು

ತಪ್ಪುಗಳನ್ನು ಮಾಡದ ಮನುಷ್ಯರಿಲ್ಲ. ಒಪ್ಪಿಕೊಳ್ಳದವರು ಇದ್ದಾರೆ ಬಿಡಿ. ಅದು ಕಾಲದಿಂದಲೂ ನಡೆದುಕೊಂಡು ಬಂದಿದ್ದು. ಈಗ ನಾವು ಅದೇ ಏಕತಾನತೆಯಿಂದ ಆಚೆ ನಿಂತು ನೋಡಲು ಸಾಧ್ಯವೇ ಅಂತ ಯೋಚಿಸೋಣ. ತಪ್ಪುಗಳ ಅರ್ಥ ಅಷ್ಟೆ ನಮ್ಮ ವರ್ತನೆ ನಡೆ ನುಡಿ ಮತ್ತೊಬ್ಬರ ದೃಷ್ಟಿಯಲ್ಲಿ ಇಷ್ಟವಾಗದಾಗ ಅದು ತಪ್ಪು ಅಂತ ಅರ್ಥೈಸಿಕೊಳ್ಳುತ್ತದೆ.  ಈ ತಪ್ಪುಗಳು ಕೂಡ ಲಾಗಾಯ್ತಿನಿಂದಲೂ ಏಕತಾನತೆಯಿಂದ ಕೂಡಿ ಬೇಸರ ತರಿಸುತ್ತದೆ. ಅವರು ಅಷ್ಟು ದುಡ್ಡು ತಿಂದರು, ಅವನು ಮೂರು ಮದುವೆ ಮಾಡಿಕೊಂಡು ಕೈಕೊಟ್ಟ, ಅವನು ಕೊಲೆ ಮಾಡಿದ, ಇವರು ಮೋಸ ಮಾಡಿದರು, ಬಾಲಕ ಬೀಡಿ ಸೇದಿದ, ಕ್ವಾಟರ್ ಹೆಂಡ ಕುಡಿದ, ಹುಡುಗಿಗೆ ಲೈನ್ ಹೊಡೆದ ಹೀಗೆ ಕಾಲ ಕಾಲದಿಂದಲೂ ಒಂದೇ ತರಹದ ತಪ್ಪುಗಳನ್ನು ಮಾಡುತ್ತಾ ಸಾಗುತ್ತಲಿದ್ದಾರೆ ಮನುಜರು. ಅದಕ್ಕೆ ಕೊಂಚ ರೂಪಾಂತರ ಇರಬಹುದು ಬಿಟ್ಟರೆ ಹೊಸತನವಿಲ್ಲ.  ಅದೇ ಇಲ್ಲಿಯವರೆಗೆ ಯಾರೂ ಮಾಡಿರದ ತಪ್ಪುಗಳನ್ನು ಮಾಡಲು ಸಾದ್ಯವೇ ನಾವು?  ನಾವೇನಾದರೂ ಹೊಸ ತಪ್ಪುಗಳನ್ನು ಮಾಡಲು ಸಾದ್ಯವೇ ಅಂತ ಹುಡಕಬೇಕಿದೆ.
            ಅಭ್ಭಾ ಬಹಳ ಕಷ್ಟ ಕಣ್ರೀ./.. ಯಾರೂ ಮಾಡಿರದ ಹೊಸದೊಂದು ತಪ್ಪು ಹುಡುಕಲು. ಎಲ್ಲಾ ತಪ್ಪುಗಳು ಮುಗಿದುಹೋಗಿವೆಯೇನೋ ಅಂತ ಅನ್ನಿಸಲು ಶುರುವಾಗಿದೆ ಹೀಗೆ ಒಂದು ಯಡವಟ್ಟು ವಿಚಾರವನ್ನು ಯೋಚಿಸಲು ಕುಂತಾಗ. ಆದರೂ ಕೊಂಚ ತಲೆಕೆಡಿಸಿಕೊಂಡಾಗ ಎಲ್ಲಾದರೂ ಸಿಗಬಹುದಾ..? ಎಂಬ ಸಂಶಯ ಕಾಡುತ್ತದೆ.
            ಸ್ವಂತದ್ದೇ ಕಣ್ಣು ಕಿತ್ತುಕೊಳ್ಳುವುದರಿಂದ ಹಿಡಿದು ಸ್ವಮೂತ್ರ ಪಾನದ ವರೆಗೂ, ಹೆತ್ತ ಮಗಳ ಅತ್ಯಾಚಾರದಿಂದ ಹಿಡಿದು ಅಣ್ಣ ತಂಗಿಯ ವಿವಾಹದ ವರೆಗೂ, ಪ್ರಿತಿಸಿದವಳಿಗೆ ಕೈಕೊಟ್ಟವರಿಂದ ಹಿಡಿದು ಮದುವೆಯಾಗಿ ಕೈಬಿಟ್ಟವರವರೆಗೂ, ದೈವಕ್ಕೆ ಮೋಸ ಮಾಡುವುದರಿಂದ ಹಿಡಿದು ಮೋಸಕ್ಕೇ ದೈವದ ಸೃಷ್ಟಿಯವರೆಗೂ, ಹೆತ್ತವರನ್ನೇ ಹೊರ ಹಾಕುವುದರಿಂದ ಹಿಡಿದು ಹೆತ್ತವರೇ ಹೊರಹಾಕಿದವರೆಗೂ, ತಪ್ಪುಗಳು ಮುಗಿದುಹೋಗಿವೆ. ಹೊಸತಿಲ್ಲ ಹೊಸತನವಿಲ್ಲ. ಹೊಚ್ಚ ಹೊಸದೊಂದು ತಪ್ಪು ಮಾಡಲು ಆಗುವುದೇ ಇಲ್ಲ ಅನ್ನುವಷ್ಟು ಮುಗಿದುಹೋಗಿವೆ ಅಂತ ನಮಗೆ ಅನ್ನಿಸಿದರೆ ನಾವು ಆ ದಿಕ್ಕಿನಲ್ಲಿ ಯತ್ನಿಸುತ್ತಿಲ್ಲ ಅಂತ ಅನ್ನಬಹುದು. ಕಾರಣ ಚಲನಚಿತ್ರದಲ್ಲಿನ ಹೊಸ ಹೊಸ ಹಾಡುಗಳನ್ನೇ ತೆಗೆದುಕೊಳ್ಳಿ, "ಪ್ಯಾರ್ ಕೆ ಆಗ್ ಬುಟ್ಟೈತಿ’ ಬರುವವರೆಗೂ ಇಂತಹದೊಂದು ರಾಗ ಇತ್ತು ಅಂತ ನಮಗೆ ಗೊತ್ತಿರಲಿಲ್ಲ, ಮತ್ತು ಅದು ಕೇಳಿದ ನಂತರ ಇನ್ನು ಹೊಸ ಹಾಡು ಹೊಸ ರಾಗ ಸಾದ್ಯವಿಲ್ಲ ಅಂತ ನಮಗೆ ಅನ್ನಿಸುತ್ತದೆ. ಆದರೆ ಅಷ್ಟರಲ್ಲಿ ಮತ್ತೆ ನಾವು ನೀವು ಬಚ್ಚಲಮನೆಯಲ್ಲಿ ಗುಣುಗುಣಿಸುವಂತಹ ಅಪರೂಪದ ಹಾಡೊಂದು ಸೃಷ್ಟಿ ಯಾಗಿಬಿಡುತ್ತವೆ. ಅಲ್ಲಿಗೆ ಇದೆ ಅಂತಾಯಿತು ನಮಗೆ ಹಿಡಿಯಲಾಗುತ್ತಿಲ್ಲ. ಅಥವಾ ಹಿಡಿಯುವ ಅವಶ್ಯಕತೆಯಿಲ್ಲ ಎಂದರೂ ಸರಿಯೇ. ಇರಲಿ ತರ್ಕ ಬಿಟ್ಟು ಮತ್ತೆ ಹೊಸ ತಪ್ಪು ಹುಡುಕುವ ಯತ್ನ ಮಾಡೋಣ.
         ಇಲ್ಲ ಇಲ್ಲ ಸಿಗುತ್ತಿಲ್ಲ ನನಗೆ ಅಂದಾಗ ಇದ್ದದ್ದರಲ್ಲಿಯೇ ಹುಡುಕುವುದು ವಾಸಿ ಎನ್ನಿಸಿ, ಈಗ ನಾನು ಹೀಗೊಂದು ಹೊಸತಪ್ಪು ಹುಡುಕುವ ಯತ್ನ ಮಾಡುತ್ತಿದ್ದೇನಲ್ಲ ಇದೇ ದೊಡ್ಡ ಹೊಸ ತಪ್ಪು ಅಂತ ಅನ್ನಿಸಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡಕಿದಂತಾಗಿ ಹುರ್ರೇ ಎಂದೆ. ಹೌದೇ ಹೌದು ಇದೇ ಹೊಸ ತಪ್ಪು.  ಅರ್ಥ ಮತ್ತು ಸಮಾಧಾನ ಆಗಲಿಲ್ಲವೇ ಹಾಗಾದರೆ ಹುಡುಕಿ ನೀವು




2 comments:

Anonymous said...

Nija

santhosh

Traffic Pulse India said...

A person essentially help to make seriously articles I might state. That is the very first time I frequented your web page and to this point? I surprised with the research you made to make this actual publish amazing. Fantastic job!
Cheap SEO Services India