Saturday, December 15, 2012

ಕಲ್ಲು ಭೂಮಿಯಲ್ಲಿ ಕೈ ಹಿಡಿದ ಅನಾನಸ್


ಕೃಷಿ ಯಶಸ್ವಿಯಾಗಲು ಭೂಮಿಯ ಫಲವತ್ತತೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಲ್ಯಾಟ್ರೇಟ್ ಕಲ್ಲಿನ ಮೇಲ್ಪದರವುಳ್ಳ ಭೂಮಿಯನ್ನು ಖರೀದಿ ಮಾಡಿ ಕೃಷಿ ಮಾಡುತ್ತೇನೆಂದು ಹೊರಟರೆ ಅಲ್ಲಿ ಫಲ ಸಿಗುವುದು ದುಸ್ತರ ಎಂಬುದು ಎಲ್ಲರ ಭಾವನೆ. ಅದರ ಜತೆ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದೆ ಎಂದರೆ ಆ ಭೂಮಿಯ ಗತಿ ಕೇಳುವವರೇ ಇಲ್ಲ. ಕೃಷಿಗಂತೂ ಕಷ್ಟ, ವಿದ್ಯುತ್ ಕಂಬಗಳು ಹಾದುಹೋಗಿರುವುದರಿಂದ ಕೆಂಪು ಕಲ್ಲು ಗಣಿಗಾರಿಕೆಗೂ ಅನುಪಯುಕ್ತ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಅದು ಆದರೆ ತಾಳಗುಪ್ಪ ಸಮೀಪದ ಹಿರೇಮನೆಯ ಎಂ ಆರ್ ಅಣ್ಣಪ್ಪ ಎಂಬ ರೈತ ವಿಶೇಷ ಧೈರ್ಯ ದಿಂದ ಇಂಥಹ ಅಭಿಪ್ರಾಯದ ಗೊಡ್ಡು ಭೂಮಿ ಖರೀದಿ ಮಾಡಿ ಆರು ವರ್ಷಗಳ ನಿರಂತರ ಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ.
೨೦೦೬ ನೇ ಇಸವಿಯಲ್ಲಿ ಲೋಕೋಪಯೋಗಿ ಇಲಾಖೆಯ ಕ್ಲಾಸ್ ೩ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪರಿಗೆ ಕೃಷಿ ಮಾಡಬೇಕೆಂಬ ಹುಚ್ಚು ತಲೆಗೆ ಹತ್ತಿತ್ತು. ವಂಶಪಾರಂಪರಿಕವಾಗಿ ಕೃಷಿಕರಾಗಿದ್ದರೂ ಹೊಸತನ್ನು ಸಾಧಿಸಬೇಕೆಂಬ ಹಂಬಲದೊಂದಿಗೆ ಕೃಷಿ ಯೋಗ್ಯ ಭೂಮಿ ಅರಸಲು ಆರಂಭಿಸಿದರು. ಕೃಷಿಯೋಗ್ಯ ಫಲವತ್ತಾದ ಭೂಮಿ ಖರೀದಿ ಅಣ್ಣಪ್ಪನವರ ಜೇಬಿಗೆ ಎಟುಕುವಂತೆ ದೊರಕಲಿಲ್ಲ. ಆಗ ಕಂಡಿದ್ದು ಬಹುಪಾಲು ಕಲ್ಲುತುಂಬಿದ್ದ ಗೊಡ್ಡು ಖುಷ್ಕಿ ಭೂಮಿ. ಮೇಲ್ಗಡೆ ಹಾಯ್ದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿ. ಹೀಗಿರುವ ಆರೂವರೆ ಎಕರೆ ಖುಷ್ಕಿ ಖರೀದಿ ಮಾಡ ಹೊರಟ ಅಣ್ಣಪ್ಪನವರ ಕೆಲಸಕ್ಕೆ ಹುಚ್ಚು ಎಂದವರು ಬಹಳ ಮಂದಿ. ಆದರೆ ಇಂದು ಅವರತ್ತ ಬೆರಗುಗಣ್ಣಿನಿಂದ ಎಲ್ಲ ನೋಡುವಂತಾಗಿದೆ.
ಲ್ಯಾಟ್ರೇಟ್ ಕಲ್ಲಿನ ಖುಷ್ಕಿ ಖರೀದಿಸಿದ ಅಣ್ಣಪ್ಪ ಗುಡ್ಡದಂಚಿನಲ್ಲಿ ತೆರೆದ ಬಾವಿ ತೆಗೆಯಿಸಿದರು. ಅವರ ಆರಂಭದ ಯತ್ನವೇ ಸಫಲವಾಯಿತು. ೨೫ ಅಡಿ ಆಳದಲ್ಲಿ ೬ ಎಕರೆಗೆ ಬೇಕಾಗುವಷ್ಟು ನೀರು ಸಿಕ್ಕಿತು. ಆವಾಗ ಅವರು ಆಯ್ಕೆ ಮಾಡಿಕೊಂಡಿದ್ದು ಬಾಳೆ ಹಾಗೂ ಅಡಿಕೆ. ಖುಷ್ಕಿ ಭೂಮಿಯಲ್ಲಿ ಬಾಳೆ ಸಾಧಾರಣ ಬೆಳೆ ಬಂದಿತಾದರೂ ಅಡಿಕೆಗೆ ಅಷ್ಟು ಪ್ರಯೋಜನ ಅಲ್ಲ ಜತೆಯಲ್ಲಿ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಇರುವ ಕಾರಣ ಎತ್ತರದ ಸಮಸ್ಯೆಯಿಂದಾಗಿ ಅಡಿಕೆಗೆ ಒಗ್ಗದು ಎಂಬುದು ಪ್ರಯೋಗದಿಂದ ಮನದಟ್ಟಾಯಿತು. ಜತೆಯಲ್ಲಿ ಭೂಮಿಯ ಬಹು ಭಾಗ ವಿದ್ಯುತ್ ತಂತಿ ಕಂಬಗಳು ಹಾದು ಹೋಗಿರುವ ಕಾರಣ ಮತ್ತು ಭೂಮಿಯ ಹೆಚ್ಚು ಭಾಗ ಲ್ಯಾಟ್ರೇಟ್ ಕಲ್ಲಿನದಾದ್ದರಿಂದ ಅದಕ್ಕೆ ತಕ್ಕುದಾದ ಬೆಳೆ ಅರಸುವ ಕೆಲಸಕ್ಕೆ ಅಣ್ಣಪ್ಪ ಇಳಿದರು. ಆವಾಗ ಸಿಕ್ಕಿದ್ದು ಅನಾನಸ್.

ಅನಾನಸ್ ಬಂಪರ್ ಬೆಳೆ : ಅನಾನಸ್ ನಾಟಿ ಮಾಡಿ ಹದಿನೆಂಟು ತಿಂಗಳಿಗೆ ಉತ್ತಮ ಬೆಳೆ ಬಂದಿತು. ಭೂಮಿ ಹದ ಮಾಡಲು ಸ್ವಲ್ಪ ಅಧಿಕ ವೆಚ್ಚ ತಗುಲಿದರೂ ಎಕರೆಗೆ ೫ ರಿಂದ ೬ ಟನ್ ಅತ್ಯುತ್ತಮ ಫಸಲು ದೊರಕಲಾರಂಭಿಸಿದಾಗ ಅಣ್ಣಪ್ಪನವರ ಶ್ರಮ ಸಾರ್ಥಕವಾದಂತೆನಿಸಿತು. ಭೂಮಿ ಖರಿದಿಸಿ ಅನಾನಸ್ ಕೃಷಿ ಪ್ರಾರಂಭಿಸಿ ಆರು ವರ್ಷಗಳು ಸಂದಿವೆ. ವರ್ಷವೊಂದಕ್ಕೆ ೨ ಲಕ್ಷ ಹಣ ಅನಾನಸ್ ಮೂಲಕ ಗಳಿಸುತ್ತಿರುವ ಅಣ್ಣಪ್ಪ ಖರ್ಚು ಕಳೆದು ೧ ಲಕ್ಷ ಮಿಗಿಸುತ್ತಿದ್ದಾರೆ. ಕಳೆದ ವರ್ಷದಿಂದ ಅನಾನಸ್ ಬೆಳೆಯ ನಡುವೆ ಅತ್ತರಕ್ಕೆ ಬೆಳೆಯದ ಪೇರಲೆ ಹಲಸು ಮುಂತಾದ ಹಣ್ಣಿನ ಗಿದಗಳನ್ನು ನಾಟಿಮಾಡಿದ್ದಾರೆ. ಅನಾನಸ್ ಆರ್ಥಿಕ ಲಾಭ ತರುವ ಬೆಳೆಯಾದರೂ ನಿರಂತರ ಕೂಲಿಯಾಳುಗಳನ್ನು ಅವಲಂಬಿಸುವುದರಿಂದ ಬಂಡವಾಳ ವಾಪಾಸು ಬಂದನಂತರ ಹಣ್ಣಿನ ಬೆಳೆಗಳಿಗೆ ಹೊರಳುವುದು ಅಣ್ಣಪ್ಪನವರ ಚಿಂತನೆ.

ನಿವೃತ್ತಿಯಿಲ್ಲದ ಜೀವನ: ಕೃಷಿಕನ ಜೀವನ ಸುಂದರ ಎನ್ನುವ ಅಣ್ಣಪ್ಪ ಶಾಂತಿ ನೆಮ್ಮದಿ ಇರುವುದು ಹಾಗೂ ನಿವೃತ್ತಿಯ ಚಿಂತೆ ಕಾಡದಿರುವುದು ಕೃಷಿಕರಿಗೆ ಮಾತ್ರಾ ಎನ್ನುತ್ತಾರೆ. ಗಿಡಗಳ ನಡುವೆ ನಾವು ನಂಟು ಬೆಳೆಸಿಕೊಂಡರೆ ಅವೂ ಮಾತಾನಾಡುತ್ತವೆ ಆದರೆ ಅದನ್ನು ಗಮನಿಸುವ ಮನಸ್ಸಿರಬೇಕು ಎನ್ನುತ್ತಾರೆ. ಮೇಲೆ ತಂತಿ ಕೆಳಗೆ ಕಲ್ಲು ನಡುವೆ ಅಣ್ಣಪ್ಪ ನವರ ಶ್ರಮದಿಂದಾಗಿ ಭೂಮಿ ಇಂದು ಹಸಿರಿನಿಂದ ನಳನಳಿಸುವಂತಾಗಿದೆ. ಶ್ರಧ್ದೆ ಹಾಗೂ ತಾಳ್ಮೆ ಇದ್ದರೆ ಭೂಮಿ ಖಂಡಿತಾ ಬರಡಲ್ಲ ಹಾಗೂ ಬರಡು ಭೂಮಿ ಎಂಬುದು ನಮ್ಮ ಮಾನಸಿಕ ಅವಸ್ಥೆ, ಮನಸ್ಸನ್ನು ಹಸಿರುಗೊಳಿಸಿದರೆ ಎಲ್ಲೆಡೆ ಹಸಿರು ಕಾಣಬಹುದು ಎಂಬುದು ಅಣ್ಣಪ್ಪ ನವರ ಅನುಭವವೇದ್ಯ ಮಾತುಗಳು.

ಪೋನ್:೯೩೭೯೪೧೨೦೦೩

2 comments:

ದಿನಕರ ಮೊಗೇರ said...

ಇಂಥಹ ಜನರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರಕಾರ ಮತ್ತು ಸಂಘ ಸಂಸ್ಥೆಗಳು ಮಾಡಿದರೆ ಇತರರಿಗೆ ಮಾದರಿಯಾದಾರು... ನಿಮ್ಮ ಯತ್ನಕ್ಕೆ ಧನ್ಯವಾದ....

ಮೋಹನ್ ತಲಕಾಲುಕೊಪ್ಪ said...

Excellent. I liked the article and his words