Saturday, May 24, 2008

ಜೇನು ಮತ್ತು ನಾನುಜೇನು ಅದು ಹ್ಯಾಗೋ ನನ್ನನ್ನು ಸೆಳೆದುಬಿಡ್ತು. ವಾವ್ ಏನ್ ಮಜ ಇದೆ ಗೊತ್ತಾ ಅದ್ರಲ್ಲಿ. ಜೀವನ ಇದೆ ನೋವು ಇದೆ ನಲಿವು ಇದೆ. ಬೆಳಿಗ್ಗೆ ಮುಂಚೆ ಎದ್ದು ಡೈರಿಗೆ ಹಾಲು ಕೊಟ್ಟು ಬಂದು ಒಂದು ಬಿಸಿ ಬಿಸಿ ಕಾಫಿ ಕುಡಿದು ಇವತ್ತು ಜೇನು ತುಪ್ಪ ತೆಗಿಬೇಕು ಅಂತ ಅನ್ಕೊಳ್ಳೋದ್ರಿಂದ ಅದರ ಮಜ ಶುರುವಾಗುತ್ತೆ. ನಿಧಾನ ಪೆಟ್ಟಿಗೆ ಮುಚ್ಚಳ ತೆಗೆದಾಗ ಒಂದ್ಸಾರಿ ಪಾಪ ಅನ್ಸುತ್ತೆ ಒಂದೊಂದು ಗ್ರಾಂ ಕೆಂಪನೆಯ ತುಪ್ಪಕ್ಕೂ ಹತ್ತಾರು ಕಿಲೋಮೀಟರ್ ಓಡಾಡಿ ಸಂಗ್ರಹ ಮಾಡಿರೋ ಅವುಗಳ ಶ್ರಮವನ್ನ ಒಂದು ಕ್ಷಣದಲ್ಲಿ ತತ್ತಿ ಸಮೇತ ಮಷೀನಿನಲ್ಲಿಟ್ಟು ತುಪ್ಪ ತೆಗೆದು ಬಾಟ್ಲಿ ತುಂಬಿ ನಾನು ನೆಮ್ಮದಿ ಕಾಣ್ತೀನಲ್ಲ ಇದು ಸರೀನಾ ? ಅಂತ ಒಳಮನಸ್ಸು ಕೇಳುತ್ತೆ. ಮತ್ತೆ ಅಯ್ಯೋ ಬೆಪ್ಪು ಮುಂಡೇದೆ ಪ್ರಪಂಚ ಅನ್ನೋದು ಕಳ್ಳ ತನದ ಮೇಲೆ ನಿಂತಿದೆ. ಕಳ್ಳತನ ಅನ್ನೋದು ಪ್ರಕೃತಿ ಸಹಜ, ಮನುಷ್ಯ ನಿತ್ಯ ಕದೀತಾನೆ ಇರ್ತಾನೆ ಬೇರೆ ಬೇರೆ ವೇಷ ಹಾಕ್ಕೋತಾನೆ ಬೇರೆ ಬೇರೆ ಹೆಸರು ಇಟ್ಕೋತಾನೆ ನೀ ಮುಂದುವರಿ ಅಂತ ಹೊರಮನಸ್ಸು ಕದಿಯುವ ಕೆಲಸಕ್ಕೆ ಮಣೆ ಹಾಕುತ್ತೆ. ಹೀಗೆ ತುಪ್ಪ ತೆಗೆಯೋ ಕೆಲಸದ ನಡುವೆ ಎಲ್ಲೋ ಓಡಿದ ತಲೆಯಲ್ಲಿ ಜೇನು ತತ್ತಿ ಅಲ್ಲೆಲ್ಲಿಯೋ ತಾಕಿ ಒಂದೆರಡು ಹುಳುಗಳಿಗೆ ಪೆಟ್ಟು ಆಗುತ್ತೆ. ಎಷ್ಟೆಂದರೂ ಅವು ಜೇನು, ಅವುಕ್ಕೆ ಸಾಕಿದವರು ಆತ್ಮೀಯರು ಮುಂತಾದ(ನಾಯಿ ಜಾನುವಾರುಗಳಿಗೆ ಇದ್ದ ಹಾಗೆ) ಭಾವನೆಯ ವಿಷಯ ಗೊತ್ತಿಲ್ಲ. ಹಾಗಾಗಿ ಕುಂಡೆಯಲ್ಲಿರುವ ಅಂಬನ್ನು ನನ್ನ ದೇಹಕ್ಕೆ ಚುಚ್ಚುತ್ತೆ. ಒಮ್ಮೆ ಆ ಅಂಬಿನ ವಿಚಿತ್ರ ವಾಸನೆಗೆ ನಖಶಿಕಾಂತ ಸಿಟ್ಟು ಕಣ್ಣೀರು ಬಂದರೂ ಅನಿವಾರ್ಯವಾಗಿ ತಡಕೊಂಡು ಮುನ್ನುಗ್ಗುತ್ತೇನೆ. ಕಾರಣ ನನ್ನ ಸಿಟ್ಟು ತೀರಿಸಿಕೊಳ್ಳಲು ಹೋದರೆ ನೂರಾರು ಹುಳಗಳಿಗೆ ಸಿಟ್ಟು ಬಂದು ನಾನು ಕೊನೆಗೆ ಆಸ್ಪತ್ರೆ ಸೇರಬೇಕಾಗಬಹುದು ಎಂಬ ಭಯ. ಹುಳಗಳನ್ನು ಬೇರ್ಪಡಿಸಿದ ತತ್ತಿಯನ್ನು ಮಿಷನ್ನಿನಲ್ಲಿ ಇಟ್ಟು ಗರಗರ ತಿರುಗಿಸಲು ಪ್ರಾರಂಭಿಸಿದಾಗ ತುಪ್ಪ ಜೊರ್‍ರ್ ಅಂತ ಬೀಳಲು ಶುರು. ಹೀಗೆ ೧೦ ತತ್ತಿಗಳನ್ನು ಪೆಟ್ಟಿಗೆಯಲ್ಲಿಟ್ಟು ತಿರುಗಿಸಿ ನಂತರ ತುಪ್ಪ ಫಿಲ್ಟರ್ ಮಾಡಿ ಬಾಟಲಿ ತುಂಬಿ ಎರಡೂ ಕೈಯಲ್ಲಿ ಹಿಡಿದು ನೋಡಿದಾಗ ಅದೆಷ್ಟು ಮಜ ಸಿಗುತ್ತೆ ಗೊತ್ತಾಅ.. ಅಬ್ಬ. ಕದ್ದ ತುಪ್ಪಕ್ಕೆ ಇಷ್ಟು ಮಜ ಇನ್ನು ನಾನೇ ಹೂವು ಕೊಯ್ದು ಮಾಡಿದ್ದರೆ. ಇರಲಿ ಅಷ್ಟರಲ್ಲಿ ಕಳ್ಳ ಮನಸ್ಸು ಇಂದು ಬೆಳಿಗ್ಗೆ ೩೦೦ ರೂಪಾಯಿ ದುಡಿದೆಯಲ್ಲೋ ಅಂತ ದುಡ್ಡಿನ ಲೆಕ್ಕಾಚಾರಕ್ಕೆ ಇಳಿಯುತ್ತದೆ. ಬೇವರ್ಸಿ ಮುಂಡೇದು ದುಡ್ಡಿನ ಹಿಂದೆ ಬೀಳಬೇಡ ಅಂತ ಎಷ್ಟು ಸಲ ಹೇಳೋದು ನಿಂಗೆ ಅಂತ ಒಳಮನಸ್ಸು ಗದರಿದ ಮೇಲೆ ಕಪಾಟಲ್ಲಿ ತುಪ್ಪ ಇಟ್ಟು ತೋಟಕ್ಕೆ ರೈಟ್. ಕಪಾಟಲ್ಲಿಟ್ಟ ಕದ್ದ ತುಪ್ಪ ಚೆನ್ನಾಗಿ ಕೆಂಪಗೆ ಸ್ವೀಟಾಗಿ ಇದೆ. ನನ್ನ ಕಳ್ಳತನದಲ್ಲಿ ನಿಮಗೂ ಪಾಲು ಬೇಕಾ, ಊರಿಗೆ ಬಂದಾಗ ಬನ್ನಿ ತಿಂದು ಪಾಪಿಗಳಾಗಿ................

No comments: