Monday, June 2, 2008

ಮೇಲ್ಮಾತು .......ಹೀಗೆ ಸುಮ್ಮನೆ


ನಾನಂತೂ ವಾಚಾಳಿ, . ಎಷ್ಟರಮಟ್ಟಿಗೆ ಎಂದರೆ ನಿದ್ರೆಯಲ್ಲಿಯೂ ದೊಡ್ಡದಾಗಿ ಮಾತನಾಡುತ್ತೇನೆ. ಯಾರೂ ಸಿಗದಿದ್ದರೆ ಮನಸ್ಸಿನಲ್ಲೇ ಮಾತಾಡುತ್ತಿರುತ್ತೇನೆ. ಎಲ್ಲರೂ ಹಾಗೆ ಮಾತನಾಡುವುದಿಲ್ಲ. ಕೆಲವರು ಹೆಚ್ಚು ಮಾತನಾಡುತ್ತಾರೆ. ಅದೆಲ್ಲಾ ಮಾತಿನ ಮಾತಾಯಿತು. ಈಗ ನಾನು ಹೇಳ ಹೊರಟಿರುವುದು ಮಾತಿನ ಮೇಲಿರದಿದ್ದರೂ ಅಂತಹ ಹೆಸರನ್ನು ಗಳಿಸಿಕೊಂಡ ಮೇಲ್ಮಾತಿನ ಕುರಿತು. ನಮ್ಮ ಹಳ್ಳಿಯ ಜನರಲ್ಲಿ ಬಹಳಷ್ಟು ಜನರದ್ದು ಈ ಹವ್ಯಾಸ, ಪೇಟೆಯಲ್ಲಿಯೂ ಇಲ್ಲವೆಂದಲ್ಲ ನನಗೆ ಗೊತ್ತಿಲ್ಲ. ಶಿವಾಯಿ, ಶಿವ, ಏನಪಾ ಅಂದ್ರೆ ಗೊತ್ತಾಯ್ತ ಇಲ್ಯ, ಏನ್ ಹೇಳು?, ಮತ್ತೆ, ಸರ್ವೇ ಸಾಮಾನ್ಯವಾಗಿ, ಬೇಜಾರು ಮಾಡ್ಕೋಬೇಡಿ, ಹೀಗೆ ನೂರಾರು ತರಹದ ಮೇಲ್ಮಾತುಗಳಿವೆ. ಅವು ಒಮ್ಮೊಮ್ಮೆ ಹಾಸ್ಯ ಸನ್ನಿವೇಷವನ್ನು ಸೃಷ್ಟಿಸಿಬಿಡುತ್ತವೆ. ಕೆಲವೊಮ್ಮೆ ಸಿಟ್ಟಿನ ರಂಪಾಟಕ್ಕೂ ಕಾರಣವಾಗುತ್ತದೆ.

ಸಾಗರದ ಸಮೀಪದ ಕುಂಟಗೋಡಿನಲ್ಲಿ ಯಜಮಾನರೊಬ್ಬರಿದ್ದರು. ಅವರಿಗೆ ಮಾತಿನ ಆರಂಭಕ್ಕೊಂದು "ಶಿವ" ಅಂತ್ಯಕ್ಕೊಂದು ಶಿವ ಸೇರಿಸದಿದ್ದರೆ ಮಾತನಾಡಲೇ ಬರುತ್ತಿರಲಿಲ್ಲ. ಒಮ್ಮೆ ಅವರಿಗೆ ತಹಶೀಲ್ದಾರರನ್ನು ಕಾಣುವ ಕೆಲಸವಿತ್ತು. ಸರಿ ತಲೆಯಮೇಲೊಂದು ಟೋಪಿ ಬಗಲಲ್ಲೊಂದು ಚೀಲ ತೂಗಿಸಿಕೊಂಡು ಆಫೀಸಿನ ಒಳಗೆ ಯಾರನ್ನೂ ಕೇಳದೆ ನುಗ್ಗಿದರು. ತಹಶೀಲ್ದಾರರೋ ಹಮ್ಮಿನ ಗಿರಾಕಿ. ಆದರೆ ನುಗ್ಗಿದವರು ವಯಸ್ಸಾದ ಜನರಾದ್ದರಿಂದ ಸ್ವಲ್ಪ ಸಿಟ್ಟು ನುಂಗಿಕೊಂಡು "ಯಜಮಾನ್ರೆ ಏನಾಗ್ಬೇಕು?" ಅಂತ ಕೇಳಿದರು. ಇವರು" ಶಿವ, ನಮ್ಮ ತೋಟದ ಪಹಣಿಯಲ್ಲಿ ಸರ್ವೆ ನಂಬರ್ರು ತಪ್ಪಾಗಿ ಎಂಟ್ರಿ ಆಗಿದೆ ಶಿವ". ಈಗ ತಹಶೀಲ್ದಾರರು ಸ್ವಲ್ಪ ಗರಂ ಆದಂತೆ ಕಂಡುಬಂದರು. ಇವರ ಪ್ರಶ್ನೆಗೆ ಉತ್ತರಿಸಲಿಲ್ಲ. ಮತ್ತೆ ಯಜಮಾನರು, "ಅಲ್ಲಾ ಶಿವ, ಶ್ಯಾನುಬೋಗಂಗೆ ಹೇಳಿದರೆ ದುಡ್ಡು ಕೊಡಿ ಸರಿ ಮಾಡ್ತೀನಿ ಅಂತಾನೆ, ಇದು ಸರೀನಾ ಶಿವ" ಎಂದು ರಾಗ ಎಳೆದರು. ತಹಶೀಲ್ದಾರರಿಗೆ ಅದೆಲ್ಲಿತ್ತೊ ಸಿಟ್ಟು" ಎನ್ರೀ ಯಜಮಾನ್ರೆ ಏನೋ ವಯಸ್ಸಾಗಿದೆ ಅಂತ ಗೌರವ ಕೊಟ್ರೆ ತಲೆ ಹರಟೆ ಮಾಡ್ತೀರಾ?" ಅಂತ ಗರಂ ಆದರು. " ಅಯ್ಯ ಶಿವ ಅದ್ಯಾಕೆ ಹಂಗೆ ರೇಗ್ತೀರಿ ಶಿವ ನಾನೇನು ತಪ್ಪು ಮಾಡ್ದೆ..? " ಅಂತ ತಹಶೀಲ್ದಾರರ ಸಿಟ್ಟು ಅರ್ಥವಾಗದೆ ಯಜಮಾನರು ಅಲವತ್ತುಕೊಡರು. ಈಗ ಅದೆಲ್ಲಿತ್ತೋ ತಹಶೀಲ್ದಾರರಿಗೆ " ಮುಚ್ಚಯ್ಯಾ ಮುದುಕಾ.. ಸುಮ್ನೆ ನಡಿಯಾಚೆ" ಅಂತ ರೇಗಾಡಿ ಅಕ್ಷರಶಃ ಯಜಮಾನರನ್ನು ಹೊರದಬ್ಬಿದರು. ತಹಶೀಲ್ದಾರರ ಮಂಗಾಟ ಅರ್ಥವಾಗದ ಯಜಮಾನರು ಜವಾನನ ಬಳಿ ಬಂದು ಸವಿವರವಾಗಿ ಹೇಳಿ "ಶಿವ ಅವರು ಯಾಕೆ ಹಿಂಗಾಡ್ತಾರೆ ಶಿವ ?" ಅಂತ ಕೇಳಿದಾಗ ಗುಟ್ಟು ರಟ್ಟಾದದ್ದು. ತಹಶೀಲ್ದಾರರ ಜೆಸರು ಶಿವಪ್ಪ ಅಂತ. ಯಜಮಾನರು ಮಾತು ಮಾತಿಗೆ ಮೆಲ್ಮಾತಾಗಿ ಶಿವ ಶಿವ ಅಂತ ಹೇಳಿದ್ದನ್ನು ಅವರು ತಮ್ಮನ್ನು ಏಕವಚನದಿಂದ ಹೆಸರು ಹೇಳಿ ಕೂಗುತ್ತಿದ್ದಾರೆ ಯಜಮಾನರು ಅಂತ ಅಂದುಕೊಂಡಿದ್ದರು. ಕೊನೆಗೂ ಯಜಮಾನರು " ಶಿವಾ ಎಂತ ಕಾಲ ಬಂತು ಶಿವಾ ನಿನ್ನ ಹೆಸರನ್ನೂ ಹೆಳುವಂತಿಲ್ಲ ಶಿವಾ" ಎನ್ನುತ್ತಾ ಜಾಗ ಖಾಲಿ ಮಾಡಿದರು.

(-ಮುಂದುವರೆಯುತ್ತದೆ)

No comments: