Wednesday, July 9, 2008

ಕಾಡುಕೋಣ ಓಡಿ ಬಂದಿತ್ತಾ


ಅದ್ಯಾವುದೋ ಕೆಲಸದ ಮೇಲೆ ಹಿರೇಮನೆಗೆ ಹೊರಟಿದ್ದೆ. ನಮ್ಮ ಮನೆಯಿಂದ ಹಿರೇಮನೆಗೆ ಹೋಗಬೇಕೆಂದರೆ ಕಾಲು ದಾರಿ ಗುಡ್ಡದ ಮೂಲಕ ಸಾಗುತ್ತದೆ. ಬೈಕ್ ಒಯ್ಯಲು ಬಳಸುದಾರಿಯನ್ನೇ ಬಳಸಬೇಕು. ನಮ್ಮ ಮನೆಯ ಹಿಂದಿನ ಸಣ್ಣ ಗುಡ್ಡ ಏರಿ ನಂತರ ಒಂದು ಫರ್ಲಾಂಗ್ ಇಳಿದರೆ ಹಿರೇಮನೆ. ಮನೆಯಿಂದ ಅದ್ಯಾವುದೋ ಆಲೋಚನೆ ಮಾಡುತ್ತಾ ಸಣ್ಣ ಗುಡ್ದ ಏರಿ ಇಳಿಯಲು ಆರಂಬಿಸಿದ್ದ. ರಸ್ತೆ ಪಕ್ಕದ ಅಗಳ(ಕಾಲುವೆ) ದಿಂದ ಒಮ್ಮೆಲೆ ಸುಟಿಲ್ ಎಂಬ ಶಬ್ಧದೊಡನೆ ಏನೋ ಕಪ್ಪಗೆ ನನ್ನೆಡೆ ನುಗ್ಗಿದಂತಾಯಿತು. ತಲೆ ಎತ್ತಿ ನೋಡಿದರೆ ಬೃಹತ್ ಗಾತ್ರದ ಕಾಡುಕೋಣ ಅಗಳದ ಒಳಗಿನಿಂದ ಬುಸ್ ಎನ್ನುತ್ತಾ ನನ್ನತ್ತ ಬರುತ್ತಿತ್ತು. ತಡಬಡ ಮಾಡಲಿಲ್ಲ ಹತ್ತಿರದಲ್ಲಿದ್ದ ಒಂದು ಗೇರುಮರವನ್ನು ಅದ್ಯಾಯ ಮಾಯೆಯಲ್ಲಿಯೋ ಛಂಗನೆ ಏರಿ ಕುಳಿತೆ. ಗಡಿಬಿಡಿಯಲ್ಲಿ ನಾನು ಗೇರುಮರದ ಅತ್ಯಂತ ಸಪೂರ ಹೆರೆಯನ್ನು ಏರಿದ್ದೆ. ಹಾಗಾಗಿ ಏರಿದ ಮರುಕ್ಷಣದಲ್ಲಿಯೇ ಗಾಡ್ಸ್ ಮಸ್ಟ್ ಬಿ ಕ್ರೇಝಿ ಸಿನೆಮಾದ ಹೀರೋವಿನಂತೆ ಗೇರುಮರದ ಹೆರೆ ಸಮೇತ ಮತ್ತೆ ಭೂಮಿಯ ಮೆಲೆ ಬಂದು ನಿಂತಿದ್ದೆ. ನನ್ನಿಂದ ಐದು ಅಡಿ ದೂರದಲ್ಲಿ ಕಾಡುಕೋಣ ಮಾಡುವುದೇನು ಅಂತ ಅರ್ಥ ಆಗಲಿಲ್ಲ. ಹಿಂದೆ ಬಚ್ಚಗಾರು ದೇವಸ್ಥಾನದ ಭಟ್ಟರನ್ನು ಹಾಯ್ದು ನುಜ್ಜುಗುಜ್ಜು ಮಾಡಿದ್ದು ಆ ಕ್ಷಣದಲ್ಲಿಯೂ ನೆನಪಾಯಿತು. ತಕ್ಷಣ ಗುಡ್ಡ ಹತ್ತಿ ಓಡ ತೊಡಗಿದೆ. ಸುಮಾರು ನೂರು ಅಡಿ ದೂರ ನಿಂತು ಕೋಣನತ್ತ ತಿರುಗಿ ನೋಡಿದೆ. ಕೋಣ ಅಲ್ಲಿಯೇ ಇದೆ. ಆದರೆ ಬುಸುಗುಟ್ಟುವುದು ಮಾತ್ರಾ ನಿಂತಿಲ್ಲ. ಈಗ ಸ್ವಲ್ಪ ಧೈರ್ಯ ಬಂತು. ನಿದಾನ ಹೆಜ್ಜೆಯ ಮೇಲೆ ಹೆಜ್ಜೆಯ ನಿಡುತ್ತಾ ಹತ್ತಿರ ಹೋದೆ. ಇಲ್ಲ ಕಾಡು ಕೋಣ ಬುಸುಗುಡುತ್ತದೆ ಹೊರತು ಮುಂದೆ ಬರುವುದಿಲ್ಲ. ಅಲ್ಲಿಗೆ ಅದು ನನ್ನಮೇಲೆ ಧಾಳಿ ಮಾಡಲು ಬರುತ್ತಿಲ್ಲ ಅಂತ ಮನವರಿಕೆಯಾಯಿತು. ಹುಯ್ ಹುಯ್ ಎಂದೆ . ಆದರೂ ಮುಂದೆ ಬರುತ್ತಿಲ್ಲ. ಇನ್ನೂ ಹತ್ತಿರ ಹೋಗಿನೋಡಿದಾಗ ಕೋಣ ಕಂದಕದಲ್ಲಿ ಸಿಕ್ಕು ಮೇಲೆಬರಲಾರದೆ ಬುಸ್ ಗುಡುತ್ತಿತ್ತು. ನಾನು ಅದು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ತಪ್ಪು ತಿಳಿದುಕೊಂಡಿದ್ದೆ. ಈಗ ನೂರಕ್ಕೆ ನೂರು ಧೈರ್ಯ ಬಂತಾದರೂ ಕೋಣವನ್ನು ಕಂದಕದಿಂದ ಮೇಲೆತ್ತುವ ಕಾರ್ಯಾಚರಣೆಗೆ ಮನಸ್ಸು ಮಾಡಲಿಲ್ಲ ಕಾರಣ ಮುಂದಿನ ಎರಡನೆ ಕ್ಲಾಸಿನ ಪಾಠದಲ್ಲಿ ಹುಲಿಯನ್ನು ಬೋನಿನಿಂದ ಬಿಡಿಸಿದ ಬ್ರಾಹ್ಮಣನ ಕತೆಯ ಬದಲು ಕಾಡುಕೋಣನನ್ನು ಬಿಡಿಸಿದ ಬ್ರಾಹ್ಮಣ ಎಂದು ಒಂದು ಪಾಠವನ್ನಿಡಲು ಣಾನು ಕಾರಣನಾಗುತ್ತೇನೆ ಆಂತ ಅನ್ನಿಸಿತು. ಆ ಬ್ರಾಹ್ಮಣನ ಸಹಾಯಕ್ಕೆ ನರಿ ಇತ್ತು ಈ ಬ್ರಾಹ್ಮಣನಿಗೆ ನರಿ ಬರುವುದಿರಲಿ ನರಿ ಬುದ್ದಿಯ ಜನರನ್ನು ಹುಡುಕಲೂ ಊರಿಗೆ ಹೋಗಬೇಕಲ್ಲ. ಎಂದು ಆಲೋಚಿಸುತ್ತಾ ಹಿರೇಮನೆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ. ವಾಪಾಸು ಮನೆಗೆ ನಡೆದೆ.
ಈ ಘಟನೆ ನಡೆದು ಇಪ್ಪತ್ತು ವರ್ಷಗಳು ಸಂದವು. ಇವತ್ತು ಕಂಪ್ಯೂಟರ್ ನಲ್ಲಿ ಯಾವಾಗಲೋ ತೆಗೆದ ಕಾಡುಕೋಣನ ಫೊಟೋ ಕಾಣಿಸಿತು ಮತ್ತು ವೃಥಾ ಹೆದರಿದ್ದು ನೆನಪಾಯಿತು. ಜೀವನವೆಂದರೆ ಹಾಗೆ ನಾವು ಸುಮ್ಮನೆ ಹಲವಾರು ಕಾರಣಗಳಿಗೆ ಹೆದರುತ್ತೇವೆ. ಅವರು ಬದುಕಲು ಹೋರಾಟ ನಡೆಸುತ್ತಿರುತ್ತಾರೆ ಅಷ್ಟೆ ಅದು ನಮಗೆ ಹೆದರಿಕೆಯಾದರೆ ಕಷ್ಟ, ನೋಡಲು ನಿಂತರೆ ಸುಖ.
(ಮುಕ್ತಾಯ: ಸಂಜೆ ಹೋಗಿ ನೋಡಿದಾಗ ಕಾಡುಕೋಣ ತನ್ನಷ್ಟಕ್ಕೆ ಹೊರಟುಹೋಗಿತ್ತು.)

3 comments:

prasca said...

ಶರ್ಮ ಸಾರ್,
ಆಮೇಲೆ ಆ ಕೋಣನ ಕಥೆ ಎನಾಯ್ತು? ಬದುಕಿತೋ ಇಲ್ಲ?????

Unknown said...

sanje hogi nododaga kona alliralilla. avu kadu pranigalu takattu jasti. horatuhogittirabeku

ಮನಸ್ವಿ said...

ಹೊಯ್ ರಾಗಣ್ಣ ಎಂತದೊ ಕಾಡು ಕೋಣನ ಹಂಗೆ ಬಿಟ್ಟಿದ್ಯಲಾ.. ನಿಮ್ಮೂರು ಹುಡ್ರೆಲ್ಲ ಸೇರಿ ಎತ್ತದಲ್ದ... ಎತ್ತಿದ ಫೋಟಾನು ಹಾಕ್ಲಗಿತ್ತು... ಅಂತು ಇವತ್ತು ನಿನ್ನ ಬ್ಲಾಗ್ ಸಿಕ್ತ್ಯು...
ನಾನು ನಿಮ್ಮ ಕಟ್ಟೆ ಪತ್ರಿಕೆಯ ಅಭಿಮಾನಿ ಕೂಡ ಹೌದು...
ಕಟ್ಟೆ ಪತ್ರಿಕೆ ತುಂಬಾ ಚನ್ನಾಗಿ ಮೂಡಿಬರುತ್ತಿದೆ...


ಆದಿತ್ಯ ಬೇದೂರು