Tuesday, July 8, 2008

ಪಂಚಕುತಂತ್ರದ ಅನೀತಿ ಕತೆಗಳು

ಅಡಿಕೆ ಚೀಲ
ಒಂದಾನೊಂದು ಊರಿನಲ್ಲಿ ಶ್ಯಾಮಯ್ಯ ಎನ್ನುವ ಗ್ರಹಸ್ಥನಿದ್ದನು. ಆತ ಊರಿನ ದೇವಸ್ಥಾನದ ಪಕ್ಕದಲ್ಲಿಯೇ ಮನೆ ಮಾಡಿಕೊಂಡು ಹೆಂಡತಿ ಮಕ್ಕಳೊಡನೆ ಸುಖವಾಗಿ ಕಾಲ ಕಳೆಯುತ್ತಿದ್ದನು. ಒಂದು ದಿವಸ ಅವನಿಗೆ ಎರಡು ಸಾವಿರ ರೂಪಾಯಿಯ ಅಗತ್ಯ ಬಿತ್ತು. ಊರಿನವರ್ಯಾರು ಅವನಿಗೆ ಹಣಕೊಡಲು ಮುಂದೆಬರಲಿಲ್ಲ. ಆ ಸಂದರ್ಭದಲ್ಲಿ ಭಕ್ತರೊಬ್ಬರು ದೇವರ ಹರಕೆ ತೀರಿಸಲು ದೇವಸ್ಥಾನಕ್ಕೆ ಬಂದರು, ಅವರ ಬಳಿ ಶ್ಯಾಮಯ್ಯ ಬಣ್ಣ ಬಣ್ಣದ ಮಾತನಾಡಿ ಎರಡುಸಾವಿರ ರೂಪಾಯಿ ದೇವರಿಗೆ ಅರ್ಪಿಸಿದರೆ ಸುಖವಾಗಿ ಬಾಳಬಹುದು ಎಂದು ನಂಬಿಸಿದನು. ಅವರು ಒಪ್ಪಿ ಹುಂಡಿಗೆ ಹಣ ಹಾಕಲು ಹೋದಾಗ ನಾನೇ ದೇವರಿಗೆ ಅರ್ಪಿಸುತ್ತೇನೆ ಎಂದು ಹಣ ಇಸಿದುಕೊಂಡು ಗುಳುಂ ಸ್ವಾಹಾ ಮಾಡಿಬಿಟ್ಟನು.
ಒಂದು ವಾರದ ನಂತರ ಶ್ಯಾಮಯ್ಯನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಅಲ್ಲಿಯವರೆಗೆ ಕಂಡದ್ದನ್ನೆಲ್ಲಾ ತಿಂದು ದಕ್ಕಿಸಿಕೊಂಡದ್ದ ಶ್ಯಾಮಯ್ಯನಿಗೆ ಹೆದರಿಕೆ ಪ್ರಾರಂಭವಾಯಿತು. ಈ ಎದೆ ನೋವು ಹೀಗೆ ದಿಡೀರನೆ ಬರಲು ತಾನು ಎರಡು ಸಾವಿರ ದೇವರ ಹಣ ತಿಂದದ್ದೇ ಕಾರಣವಿರಬಹುದೇ ಎಂಬ ಭಯ ಹೆಜ್ಜೆಹೆಜ್ಜೆಗೂ ಕಾಡಿ ಅಂತಿಮವಾಗಿ ದೇವರ ಶಕ್ತಿಗೆ ಮನಸೋತು "ಅಯ್ಯಾ ಭಗವಂತ ನಿನ್ನ ದುಡ್ಡು ತಿಂದು ತಪ್ಪು ಮಾಡಿಬಿಟ್ಟೆ, ಪ್ರಾಯಶ್ಚಿತ್ತವಾಗಿ ಒಂದು ಚೀಲ ಅಡಿಕೆಯನ್ನು ಅರ್ಪಿಸುತ್ತೇನೆ ನನ್ನ ತಪ್ಪು ಮನ್ನಿಸು" ಎಂತ ಬೋರಲಿಟ್ಟನು. ಅದ್ಯಾವ ಮಾಯವೋ ಮಂತ್ರವೋ ಮಹಿಮೆಯೋ ಅಂತೂ ಕ್ಷಣಮಾತ್ರದಲ್ಲಿ ಶ್ಯಾಮಯ್ಯನ ಎದೆನೋವು ಮಾಯವಾಯಿತು.
ಎರಡು ಮೂರು ದಿನದ ನಂತರ ಅಡಿಕೆಚೀಲದ ಹರಕೆ ನೆನಪಾಯಿತು. ಆದರೆ ಎದೆನೋವು ಮಾಯವಾದ್ದರಿಂದ ಈಗ ಒಂದುಚೀಲ ಅಡಿಕೆ ಕೊಡಲು ಮನಸ್ಸು ಒಪ್ಪಲಿಲ್ಲ. ಆರೋಗ್ಯವಂತ ದೇಹ ಮನಸ್ಸು ಸುಮ್ಮನೆ ಹತ್ತುಸಾವಿರ ರೂಪಾಯಿ ಗಂಟನ್ನು ದೇವರಿಗೆ ಒಪ್ಪಿಸಲು ಹೇಗೆ ಪರವಾನಿಗೆ ಕೊಡುತ್ತೆ? ಹಾಗಾಗಿ ಪ್ರಪಂಚವನ್ನೇ ನಡೆಸುವ ದೇವರಿಗೆ ಪುಟಗೋಸಿ ನನ್ನ ಅಡಿಕೆ ಯಾವ ಲೆಕ್ಕ. ಬೇಕಾದರೆ ಅವನೇ ಕ್ಷಣ ಮಾತ್ರದಲ್ಲಿ ಸೃಷ್ಟಿಸಿಕೊಳ್ಳಬಲ್ಲ ಎಂಬಂತಹ ಆಲೋಚನೆಗಳು ಮುತ್ತತೊಡಗಿದವು. ಆದರೆ ಹರಕೆ ತೀರಿಸದಿರಲು ಮನಸ್ಸು ಒಪ್ಪಲಿಲ್ಲ. ಆವಾಗ ಮತ್ತೊಂದು ಉಪಾಯ ಹೊಳೆಯಿತು. ಒಂದು ಕರವಸ್ತ್ರವನ್ನು ಎರಡು ಮಡಚಿಗೆ ಮಾಡಿ ಹೊಲಿಗೆ ಹಾಕಿದನು. ಅದಕ್ಕೊಂದು ತೊಟ್ಟನ್ನು ಇಟ್ಟು ಮಗನನ್ನು ಕರೆದು ಇದು ಏನು? ಎಂದು ಕೇಳಿದನು. ಮಗ ಇದು ಚೀಲ. ಎಂದು ಉತ್ತರಿಸಿದನು. ಮಕ್ಕಳು ದೇವರ ಸಮಾನ ಹಾಗಾಗಿ ದೇವರೆ ಇದನ್ನು ಚೀಲ ಎಂದು ಹೇಳಿದಂತಾಯಿತು ಎಂಬ ತೀರ್ಮಾನಕ್ಕೆ ಬಂದ ಶ್ಯಾಮಯ್ಯ ಅದರ ತುಂಬಾ ಒಂದು ಮುಷ್ಠಿ ಅಡಿಕೆ ತುಂಬಿ ದೇವಸ್ಥಾನಕ್ಕೆ ಹೋಗಿ ದೇವರ ಎದುರು ನಿಂತು," ಭಗವಂತಾ ನನ್ನ ಹರಕೆಯನ್ನು ಮನ್ನಿಸಿ ಎದೆನೋವು ಮಾಯಮಾಡಿದೆ, ಮಾತಿಗೆ ನಾನು ತಪ್ಪುವ ಜಾಯಮಾನ ನನ್ನದಲ್ಲ ನನ್ನ ಮನೆತನದ್ದೂ ಅಲ್ಲ ಇದೋ ಅಡಿಕೆ ತುಂಬಿದ ಚೀಲವನ್ನು ಒಪ್ಪಿಸಿಕೋ" ಎಂದು ಕೈಮುಗಿದನು.
ಮಾತಿನಂತೆ ನಡೆದ ಶ್ಯಾಮಯನನ್ನು ನೋಡಿದ ದೇವರು ಸ್ಥಂಭೀಭೂತ..! ನಾದನು. ದೇವಸ್ಥಾನದ ಗಂಟೆಗಳು ತಮಿಳು ಸಿನೆಮಾದಲ್ಲಿ ತೂಗಾಡುವಂತೆ ಡಣ ಡಣ ಎಂದು ಹೊಡೆದುಕೊಳ್ಳುತ್ತಾ ತೂಗಾಡತೊಡಗಿದವು.
ಅನೀತಿ: ಬುದ್ಧಿಯಿದ್ದರೆ ದೇವರಿಗೂ ಬುದ್ಧಿ ಕಲಿಸಬಹುದು.
ಬುಡಕ್ಕೆ ಬಂದಾಗ
ಒಂದು ಊರಿನಲ್ಲಿ ರಾಮಯ್ಯನೆಂಬ ಗೃಹಸ್ಥನಿದ್ದನು. ಅವನು ಬೆಳೆಯುತ್ತಾ ಬೆಳೆಯುತ್ತಾ ದೊಡ್ಡವನಾದನು..!. ಅವನಿಗೆ ತನ್ನನ್ನು ಊರಿನಲ್ಲಿ ಯಾರೂ ಗುರುತಿಸುತ್ತಿಲ್ಲ ಎಂಬ ಭಾವನೆ ಇತ್ತು. ಹಾಗಾಗಿ ಜನರ ನಡುವೆ ತಾನು ಗುರುತಿಸಿಕೊಳ್ಳುವ ಸಲುವಾಗಿ ತಕರಾರು ತೆಗೆಯುವ ಸ್ವಭಾವವನ್ನು ಮೈಗೂಡಿಸಿಕೊಂಡನು. ದೇವಸ್ಥಾನದಲ್ಲಿ ತಕರಾರು, ಸಂಘದಲ್ಲಿ ತಕರಾರು, ರಾಜಕೀಯದಲ್ಲಿ ತಕರಾರು ಹೀಗೆ ಯಾರು ಏನೇ ಮಾಡಿದರೂ ಅದರ ವಿರುದ್ದ ತಕರಾರೆತ್ತಿ ಗುರುತಿಸಿಕೊಳ್ಳತೊಡಗಿದನು. ಅವನ ಊರಿಗೆ ಒಮ್ಮೆ ಗುರುಗಳೊಬ್ಬರ ಆಗಮನವಾಯಿತು. ಊರವರೆಲ್ಲಾ ಸೇರಿ ಗುರುಗಳಿಗೆ ಪಾದಪೂಜೆ ಮಾಡಬೇಕೆಂದು ತೀರ್ಮಾನಿಸಿ ಯಜಮಾನನೊಬ್ಬನನ್ನು ನಿಯಮಿಸಿದರು. ಆಗ ರಾಮಯ್ಯನನ್ನು ಯಾರೂ ಕೇಳಲಿಲ್ಲ. ರಾತ್ರಿ ಪೂರ್ತಿ ಕಣ್ಣು ಕೆಂಪಗೆ ಮಾಡಿಕೊಂಡು ರಾಮಯ್ಯ ತನ್ನ ಸಹವರ್ತಿಗಳ ಜತೆ ಪ್ರತಿಭಟನೆಯಲ್ಲಿ ತೊಡಗಿದನು. ಭಕ್ತರ್ಯಾರೂ ಕ್ಯಾರೇ? ಎನ್ನದಿದ್ದ ಪರಿಣಾಮವಾಗಿ ರಾಮಯ್ಯ ಇನ್ನಷ್ಟು ಕೆರಳಿ ಕೆಂಡವಾಗಿ ಗುರುಗಳು ಜಾತಿವಾದಿಗಳು ಮನುಷ್ಯರೆಲ್ಲಾ ಒಂದೇ ಜಾತಿ ಎಲ್ಲರ ಮೈಯಲ್ಲಿ ಒಸರುವುದೂ ಕೆಂಪು ರಕ್ತವೇ ಹಾಗಾಗಿ ಗುರುಗಳನ್ನು ದೂರವಿಡಿ ಎಂದು ಪಟಾಲಂ ಜತೆಗೂಡಿ ನಿತ್ಯ ಮೀಟಿಂಗ್ ಮಾಡತೊಡಗಿದನು. ಮೀಟಿಂಗ್ ನಲ್ಲಿ ಈಟಿಂಗ್ ಹಾಗೂ ಡ್ರಿಂಕಿಂಗ್ ಖರ್ಚು ರಾಮಯ್ಯನೇ ವಹಿಸಿಕೊಳ್ಳುತ್ತಿದ್ದುರಿಂದ ಹತ್ತೆಂಟು ಜನರ ಜತೆ ರಾಮಯ್ಯನಿಗೆ ಯಾವಾಗಲೂ ಇರುತ್ತಿತ್ತು. ಈ ನಡುವೆ ರಾಮಯ್ಯನ ತಂಗಿಯ ಮದುವೆ ನಡೆಯಿತು. ಆಕೆಯ ಗಂಡ ಗುರುಗಳ ಪರಮ ಭಕ್ತ. ಇದರಿಂದ ಸಿಟಗೊಂಡ ರಾಮಯ್ಯ ತಂಗಿಯ ಬಳಿ." ನೀನು ನನ್ನ ಮನೆಯ ಹೊಸ್ತಿಲು ತುಳಿಯಬೇಡ, ತವರುಮನೆ ನಿನಗೆ ಬಾಗಿಲು ಮುಚ್ಚಿದೆ" ಎಂದನು.
ವರ್ಷಗಳು ಸಂದವು ಗುರುಗಳ ವಿರುದ್ಧ ಪ್ರತಿಭಟನೆಗೆ ಯಾವ ಪ್ರತಿಕ್ರಿಯೆಯೂ ಸಿಗಲಿಲ್ಲ. ದಿನ ದಿನಕ್ಕೆ ಪಟಾಲಂ ಕರಗತೊಡಗಿತು. ಈ ನಡುವೆ ರಾಮಯ್ಯನ ಮಗಳು ಬೆಳೆದು ದೊಡ್ಡವಳಾದಳು. ಪ್ರಾಯಕ್ಕೆ ಬಂದ ಹೆಣ್ಣನ್ನು ಮದುವೆಯಾಗಲು ಆಗರ್ಭ ಶ್ರೀಮಂತರೊಬ್ಬರು ಮುಂದೆ ಬಂದರು. ರಾಮಯ್ಯ ಸಂತೋಷದಿಂದ ಮದುವೆ ಮಾಡಿಕೊಟ್ಟನು. ರಾಮಯ್ಯನ ಅಳಿಯ ಮಗಳೊಡನೆ ಅದೇ ಗುರುಗಳನ್ನು ಮನೆಗೆ ಕರೆಯಿಸಿ ಪಾದಪೂಜೆ ಭಿಕ್ಷಾ ಕಾರ್ಯಕ್ರಮ ಏರ್ಪಡಿಸಿದನು. ರಾಮಯ್ಯ ನಗುನಗುತ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡನು.
"ಮತ್ತೆ ಗುರುಗಳು ಜಾತಿವಾದಿಗಳು, ಮನುಷ್ಯರಲ್ಲಿ ಜಾತಿ ಎಂಬುದಿಲ್ಲ ಎಲ್ಲರ ರಕ್ತದ ಬಣ್ಣವೂ ಕೆಂಪು ಹಾಗಾಗಿ ಎಲ್ಲಾ ಒಂದೇ ಅಂದಿದ್ದೆಯೆಲ್ಲಾ " ಎಂದು ಊರಿನವರೊಬ್ಬರು ಕೇಳಿದರು
" ಅಯ್ಯಾ ಮಂಕೇ ನಿಮ್ಮ ಕಣ್ಣಿಗೆ ರಕ್ತ ಕೆಂಪಗೆ ಕಾಣಿಸುತ್ತದೆಯಷ್ಟೆ, ಅದರಲ್ಲಿ ಎ,ಬಿ,ಒ ಮುಂತಾದ ಗುಂಪುಗಳಿವೆ. ಅವು ನಿಮ್ಮಂತಹ ಮಾಮೂಲಿ ಜನರ ಬರಿಗಣ್ಣಿಗೆ ಕಾಣದು. ಅದಕ್ಕೆ ಗುರುಗಳೆಂಬ ಲ್ಯಾಬ್ ಗೆ ಹೋದಾಗ ಗೋಚರಿಸುತ್ತದೆ. ಹಾಗಾಗಿ ಮನುಷ್ಯರಲ್ಲಿ ಖಂಡಿತಾ ಜಾತಿಗಳಿವೆ, ಅದು ಜ್ಞಾನಿಗಳಿಗೆ ಮಾತ್ರಾ ಗೋಚರಿಸುತ್ತೆ. ನಿಮ್ಮಂತಹ ಸಾಮಾನ್ಯ ಜನರಿಗಲ್ಲ." ಎಂದು ಹೇಳಿ ಮಂತ್ರಾಕ್ಷತೆ ಕಣ್ಣಿಗೊತ್ತಿಕೊಂಡನು. ಆವಾಗಲೂ ಗುರುಮಠದ ಗಂಟೆ ಡಣ ಡಣ ಎಂದು ಕನ್ನಡ ಸಿನೆಮಾದಲ್ಲಿ ಓಲಾಡಿದಂತೆ ಓಲಾಡಿ ಶಭ್ದ ಮಾಡಿತು. ಅದರ ನಡುವೆ ಕರ ಕರ ಶಬ್ಧವೂ ಕೇಳಿತು. ಬಹುಶಃ ಒಂದು ಗಂಟೆಗೆ ಮರದ ಕೋಲು ಹಾಕಿದ್ದಿರಬೇಕು.
ಅನೀತಿ: ಕು.ಬುದ್ದಿ ಸೋಲನ್ನೂ ಗೆಲುವನ್ನಾಗಿ ಪರಿವರ್ತಿಸುತ್ತದೆ.
ಮಾತೃದೇವೋ ಭವ
ಓಂದು ಊರಿನಲ್ಲಿ ಶಿವಯ್ಯ ಘನಂದಾರಿ ಪುರೋಹಿತರಿದ್ದರು. ಅವರು ನಿಯಮ ನಿಷ್ಟೆಗಳಲ್ಲಿ ಪ್ರಖ್ಯಾತರಾಗಿದ್ದರು. ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಉತ್ತಮ ಉಪನ್ಯಾಸ ನೀಡುತ್ತಿದ್ದರು. ಒಂದು ದಿನ ಊರಿನ ಗೃಹಸ್ಥನ ಮನೆಯಲ್ಲಿ ಮಾತೆಯೊಬ್ಬರ ಪತಂಗ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದರು. ಫಲಮಂತ್ರಾಕ್ಷತೆಯ ನಂತರ ಪುರೋಹಿತ ಶಿವಯ್ಯರ ಬಳಿ ಆಶೀರ್ವಾಚನ ಮಾಡಿರೆಂದು ಮನೆಯವರು ಕೇಳಿಕೊಂಡರು. ಆಗ ಶಿವಯ್ಯನವರು ಗಂಟಲು ಸರಿ ಮಾಡಿಕೊಂಡು " ನಮ್ಮ ಹಿಂದೂ ಧರ್ಮದಲ್ಲಿ ತಾಯಿ ಎಂದರೆ ದೇವರ ಸಮಾನ, ತಾಯಿಗಿಂತ ಮಿಗಿಲಾದ ದೇವರಿಲ್ಲ. ಆಕೆ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿ ಬೆಳಸುತ್ತಾಳೆ. ಆದ್ದರಿಂದಲೇ ವೇದ "ಮಾತೄ ದೇವೋ ಭವ" ಎಂದಿದೆ. ಆಕೆಯ ಮನಸ್ಸು ಮಕ್ಕಳ ಜೀವನಕ್ಕಾಗಿ ಮಿಡಿಯುತ್ತಿರುತ್ತದೆ. ಆಕೆಯನ್ನು ಮನಸಾರೆ ಪ್ರೀತಿಸಬೇಕು. ಆಕೆಗೆ ಕೆಟ್ಟ ಮಾತನ್ನು ಹೇಳಬಾರದು. ಪ್ರತ್ಯಕ್ಷ ನಡೆದಾಡುವ ದೇವತೆ ಎಂದರೆ ಮಾತೆ. ಆಕೆಯನ್ನು ಪೂಜಿಸಿದರೆ ಸಕಲ ದೇವತೆಗಳನ್ನೂ ಪೂಜಿಸಿದಂತೆ. ಹಾಗೇಯೇ ಇಂತಹ ಸಂದರ್ಭಗಳಲ್ಲಿ ದಾನ ಧರ್ಮಗಳನ್ನು ಹೆಚ್ಚು ಮಾಡಿ ಸಂತುಷ್ಟಗೊಳಿಸಿದರೆ ಅದು ತಾಯಿಗೆ ನಮಿಸಿದಂತೆ............." ಹೀಗೆ ಅರ್ದ ಗಂಟೆಯ ಶಿವಯ್ಯನವರ ಆಶೀರ್ವಚನವನ್ನು ಸೇರಿದ್ದ ಜನತೆ ಆಸ್ವಾದಿಸಿ ತಲೆದೂಗಿತು. ಎಂಥಹಾ ಪಂಡಿತರಪ್ಪಾ ನಿಜವಾಗಿಯೂ ಪೂಜ್ಯರು ಎಂದಿತು. ಕಾರ್ಯಕ್ರಮ ಮುಗಿಸಿ ಎಲ್ಲರೂ ಅವರವರ ಮನೆಗೆ ಹೊರಟರು.
ಶಿವಯ್ಯನವರು ಅಕ್ಕಿ ಗಂಟಿನೊಂದಿಗೆ ಮನೆಗೆ ಬಂದರು. ಜಗುಲಿಯಲ್ಲೆ ಒಂದಿಷ್ಟು ಅಕ್ಕಿ ಕಾಯಿ ರಾಶಿ ಬಿದ್ದಿತ್ತು. ಅದನ್ನು ಕಂಡ ಶಿವಯ್ಯನವರು ಕೆಂಡಾಮಂಡಲರಾಗಿ ಹೆಂಡತಿಯನ್ನು ಕೂಗಿ ಕರೆದು " ಇದೇನು ನಿನಗೆ ಸ್ವಲ್ಪ ಜವಾಬ್ದಾರಿ ಇದೆಯಾ ಈ ತರ ಅಕ್ಕಿ ಕಾಯಿ ರಾಶಿ ಹಾಕಿದ್ದೀಯಲ್ಲ, ಇರುವೆ ಬಂದು ತಿಂದು ಹೋದರೆ ನಾನು ತಂದು ಹಾಕುವವ ಇದ್ದೀನೆ ಅಂತ ನಿನಗೆ ಅಸಡ್ಡೆ" ಎಂದರು. ಆಗ ಹೆಂಡತಿ " ಅದು ನಾ ಮಾಡಿದ್ದಲ್ಲ, ನನ್ನ ಮೇಲೆ ಹಾರಾಡುವುದು ಬೇಡ, ನಿಮ್ಮ ಮ್ಮ ಮುದ್ಕಿ ಇದಾಳಲ್ಲ ಅವಳ ಕೆಲಸ" ಎಂದಳು. ಹೆಂಡತಿ ಹಾಗಂದಿದ್ದೇ ಶಿವಯ್ಯ ನವರ ಧ್ವನಿ " ಅಮ್ಮಾ .. ಅಮ್ಮಾ ನಿಂಗೆ ತಲೆ ಇದೆಯಾ...? ಇವತ್ತಿನ ಕಾಲದಲ್ಲಿ ದುಡಿಯೋದು ಎಷ್ಟು ಕಷ್ಟ ಅಂತ ಕೂತು ತಿನ್ನುವ ನಿನಗೆ ಏನು ಗೊತ್ತು? . ಆ ಭಗವಂತ ನಿಮ್ಗೆಲ್ಲಾ ಆಯುಷ್ಯಾನು ಜಾಸ್ತಿ ಕೊಟ್ಟೀರ್ತಾನೆ......" ಐದು ನಿಮಿಷಗಳ ಕಾಲ ಮಾತೃದೇವೋ ಭವದ ಪೂಜೆಯನ್ನು ಶಿವಯ್ಯನವರು ಮಾಡಿದರು. ಈ ಸಂದರ್ಭದಲ್ಲಿಯೂ ಮನೆ ದೇವರ ಗಂಟೆ ತೆಲಗು ಸಿನಿಮಾದಲ್ಲಿ ಓಲಾಡುವಂತೆ ಓಲಾಡಿ ಶಬ್ದ ಮಾಡಿತು. ಆದರೆ ಗಂಟೆ ಸಣ್ಣದಾದ್ದರಿಂದ ಶಬ್ಧ ಜೋರಾಗಿ ಕೇಳಲಿಲ್ಲ.
ಅನೀತಿ: ಬುದ್ಧಿ ಉಪಯೋಗಿಸಿದರೆ ಗಂಟೆ ಗಂಟೆಗೆ ಸ್ವಭಾವ ಬದಲಿಸಬಹುದು.
ಈ ಮೇಲಿನ ಪಂಚಕುತಂತ್ರದ ಮೂರು ಕತೆಗಳನ್ನು ನೀವುಗಳು ಈಗಾಗಲೆ ಕೇಳಿದ್ದರೆ ನಾನು ಜವಾಬ್ದಾರನಲ್ಲ.......! - ಆರ್ಶ

2 comments:

Pavitra said...

ahahahhaa...mmoru aneethi kathegalu BADDA CHANAAGIDDU.....biddu biddu negi banthu.....

manjunath said...

pancha kutantrda kategalu tumba chennagittu