Saturday, July 26, 2008

ಹೀಗೊಂದು ಮೌನ ಸಾದ್ಯವಾದರೆ ಪ್ರಪಂಚ ಗೆದ್ದಂತೆ


ನಾನು ಮೌನದ ಬಗ್ಗೆ ಮಾತನಾಡಲು ಅನರ್ಹ ಅಂತ ನನ್ನ ಪರಿಚಿತರಿಗೂ ಗೊತ್ತು ಸ್ವತಃ ನನಗೂ ಗೊತ್ತು. ಕಾರಣ ನಾನು ವಾಚಾಳಿ, ನನ್ನ ಆ ತಿಕ್ಕಲು ವಾಚಾಳಿತನ ಹಲವಾರು ಅನಾಹುತಕ್ಕೆ ಕಾರಣವಾಗಿದ್ದಿದೆ. ನಾನು ಎಷ್ಟರಮಟ್ಟಿಗೆ ವಾಚಾಳಿ ಎಂದರೆ ನಿದ್ರೆಹೋದಾಗಲೂ ಏನಾದರೂ ಹಲುಬುತ್ತಿರುತ್ತೇನೆ. ಅಷ್ಟರಮಟ್ಟಿಗಿನ ವಾಚಾಳಿತನವಿದ್ದರೆ ಬಹಳ ಕಷ್ಟ ಎಂಬುದು ನನ್ನ ಸ್ವಂತ ಅನುಭವ. ನನಗೆ ಮಾತನಾಡಲು ಅವರಿವರೇ ಆಗಬೇಕಂತಿಲ್ಲ. ಯಾರಾದರೂ ಸೈ. ಸರಿ ಇರಲಿ ಇಂತಹ ಸ್ವಭಾವದ ಹಲವಾರು ಜನ ಇದ್ದಾರೆ ಅವರಲ್ಲಿ ನಾನೂ ಒಬ್ಬ. ಒಮ್ಮೆ ತಾಳಗುಪ್ಪದಲ್ಲಿ ಡಾಕ್ಟರ್ರೊಬ್ಬರು ಹೊಸದಾಗಿ ಶಾಪ್ ತೆಗೆದಿದ್ದರು. ಆ ಷಾಪ್ ನ ಉದ್ಘಾಟನೆಗೆ ನಾನೂ ಹೋಗಿದ್ದೆ. ಎಲ್ಲಾ ಕಾರ್ಯಕ್ರಮ ಮುಗಿಯುವವರೆಗೆ ಅದುಮಿಕೊಂಡು ಕುಳಿತಿದ್ದೆ. ಹೊರಡುವ ಸಮಯದಲ್ಲಿ ಡಾಕ್ಟ್ರರ್ ಮಹಾಶಯರಿಗೆ ಒಂದು ವಿಷ್ ಮಾಡಬೇಕಲ್ಲ ಎಂದು ಹೋಗಿ ಕೈ ಕೊಟ್ಟೆ. ಅವರು ಮುಗುಳ್ನಕ್ಕರು ನಾನು ಅಷ್ಟು ಮಾಡಿದ್ದರೆ ಒಳ್ಳೆಯದಿತ್ತು. ಆದರೆ ನನ್ನೊಳಗಿನ ತಿಕ್ಕಲು ವಾಚಾಳಿ ನನ್ನ ಅರಿವಿಗೆ ಬಾರದಂತೆ "ಸಾರ್ ನಾನು ನಿಮಗೆ ಒಳ್ಳೆಯ ಬ್ಯುಸಿನೆಸ್ ಆಗಲಿ ಅಂತ ಹರಸಲಾರೆ" ಎಂದೆ. ಪಾಪ ಅವರು ಕಕ್ಕಾಬಿಕ್ಕಿ ಏಕೆ? ಎಂದು ಕಾರಣ ಕೇಳಿದರು. "ನಿಮಗೆ ಒಳ್ಳೆಯ ದಂದೆಯಾಗಲಿ ಎಂದು ಹಾರೈಸಿದರೆ ಜನರಿಗೆ ರೋಗ ಬರಲಿ ಎಂದು ಪರೋಕ್ಷವಾಗಿ ಹೇಳಿದಂತಾಗುತ್ತದೆ. ಅದು ನನಗೆ ಇಷ್ಟವಿಲ್ಲ" ಎಂದು ನಗುತ್ತಾ ಹೇಳಿದೆ. ಐದು ವರ್ಷ ಎದ್ದೂಬಿದ್ದು ಎಂಬಿಬಿಎಸ್ ಓದಿ ಎರಡು ವರ್ಷ ಅಪ್ರೆಂಟಿಷಿಪ್ ಮುಗಿಸಿ ದಾವಾಕಾನೆ ಓಪನ್ ಮಾಡಿ ಬಾ ಒಂದು ಒಳ್ಳೆಯ ಆಶೀರ್ವಾದ ಮಾಡಿ ಹೋಗು ಎಂದು ಗೌರವವಾಗಿ ಕರೆದರೆ ಸೆಕೆಂಡ್ ಇಯರ್ ಪಿಯುಸಿ ಮುಗಿಸಿ ಮನೆಯಲ್ಲಿ ಮಣ್ಣು ಹೊರುತ್ತಿರುವ ನನ್ನಂತವನಿಂದ ಇಂಥಹ ಮಾತು ಬಂದರೆ ಯಾರಿಗೆ ಪಿತ್ತ ನೆತ್ತಿಗೇರುವುದಿಲ್ಲ, ಪಾಪ ಆದರೂ ಅವರಿಗೆ ಹಾಗೆ ಅನ್ನಿಸಲಿಲ್ಲ ನನ್ನ ಜತೆಗಿದ್ದ ಜನ " ಅಲ್ಲಯ್ಯಾ ರೋಗ ಬಂದವರಾದರೂ ಇಲ್ಲಿಗೆ ಬರಲಿ ಎಂದು ಹಾರೈಸಬಹುದಲ್ಲ" ಎಂದು ತಿಪ್ಪೆಸಾರಿಸಿ ವೈದ್ಯರನ್ನು ಮುಜುಗರದಿಂದ ಪಾರುಮಾಡಿದರು ಅನ್ನಿ. ಇದು ನನ್ನ ವಾಚಾಳಿತನಕ್ಕೆ ಉದಾಹರಣೆ. ಇದು ನನಗೆ ಬೇಕಿತ್ತಾ ಅಂತ ಬಹಳ ಸಾರಿ ಅನ್ನಿಸುತ್ತದೆ. ಆಗಲೆ ಗರಿಗೆದರಿದ್ದು ಈ ಮೌನವೆಂಬ ಶಕ್ತಿಯ ಯೋಚನೆಗಳು.

ದೊಡ್ದದಾಗಿ ಮಾತನಾಡುವುದನ್ನು ನಿಲ್ಲಿಸಿದರೆ ಅದು ಮೌನವಲ್ಲ.ಸುಮ್ಮನಿದ್ದರೆ ಅದು ಮೌನವಲ್ಲ, ತುಟಿಯನ್ನು ದಿವಸಗಟ್ಟಲೆ ಬಿಚ್ಚದಿದ್ದರೂ ಅದು ಮೌನವಲ್ಲ ಹಾಗಾದರೆ ಮೌನವೆಂದರೆ ಯಾವುದು ಎಂಬ ಪ್ರಶ್ನೆ ಏಳುವುದು ಸಹಜ. ತುಟಿಮುಚ್ಚಿ ಕಣ್ಮುಚ್ಚಿ ಎಲ್ಲಾ ಯೋಚನೆಗಳೂ ಮುಚ್ಚಿದರೆ ಅದು ಮೌನ. ಹೀಗೆ ಹೇಳಿದರೆ ಸ್ವಲ್ಪ ಸುಲಭ: ಸಂಧ್ಯಾವಂದನೆಗೆ ಕುಳಿತ ವಟು ಆರಂಭದಲ್ಲಿ ದೊಡ್ಡದಾಗಿ ಗಾಯಿತ್ರಿ ಮಂತ್ರ ಹೇಳುತ್ತಾನೆ. ಅದು ಮೊದಲನೆ ಹಂತ. ನಂತರ ಪಿಸುಧ್ವನಿಯಲ್ಲಿ ಹೇಳುತ್ತಾನೆ ಅದು ಎರಡನೇ ಹಂತ. ನಂತರ ತುಟಿ ಮುಚ್ಚಿ ಜಪ ಮಾಡುತ್ತಾನೆ ಅಲ್ಲಿ ಆತ ನೋಡುಗರಿಗೆ ಮೌನವಾಗಿದ್ದಾನೆ ಅನ್ನಿಸಿದರೂ ಅದು ಮೌನವಲ್ಲ. ಆತನ ನಾಲಿಗೆ ಹಾಗೂ ತುಟಿಗಳು ಮಂತ್ರದ ಪ್ರತೀ ಅಕ್ಷರಕ್ಕೂ ಸಂವೇದಿಸುತ್ತಿರುತ್ತದೆ. ಅದು ಮೂರನೆ ಹಂತ. ನಂತರದ್ದು ಆಧ್ಯಾತ್ಮಿಕ ಸಾಧನೆ ಮಾಡುವ ಜನರ ಹಂತ. ಗಾಯಿತ್ರಿ ಮಂತ್ರ ಮಿದುಳಿನ ಎಡಭಾಗದಲ್ಲಿ ಮೊಳಗಲು ಆರಂಬಿಸುತ್ತದೆ. ಅಲ್ಲಿಂದ ಮೌನದ ನಿಜವಾದ ಹಂತ ಶುರು. ಅಲ್ಲಿಗೂ ಅದು ಸಂಪೂರ್ಣ ಮೌನವಲ್ಲ. ನಂತರದ ಹಂತ ಮೌನದ್ದು. ಮನಸ್ಸು ನಾಭಿಗೆ ಹರಿಯಬೇಕು ಮತ್ತು ಅಲ್ಲಿ ಗಾಯುತ್ರಿ ಮಂತ್ರ ಮೊಳಗಬೇಕು. ಹಾಗೆಯೇ ನಿಧಾನ ಗಾಢವಾದ ಮೌನಕ್ಕೆ ಜಾರುತ್ತದೆ. ಸಾಮಾನ್ಯ ಜನರು ತಿಂಗಳುಗಟ್ಟಲೆ ಬೆನ್ನುಹತ್ತಿದರೆ ಹೆಚ್ಚೆಂದರೆ ಮೂವತ್ತರಿಂದ ನಲವತ್ತು ಸೆಕೆಂಡು ಈ ಕ್ಷಣವನ್ನು ಅನುಭವಿಸಬಹುದು. ಅದು ಮೌನ. ಆನಂತರದ ಹಂತ ನನಗೆ ಗೊತ್ತಿಲ್ಲ. ಆದರೆ ದಿನಕ್ಕೊಮ್ಮೆ ಇಷ್ಟು ಅನುಭವಿಸುವಷ್ಟು ಸಮಯ ಇದ್ದರೆ ಎಲ್ಲಾ ಜಂಜಡದಿಂದ ಮುಕ್ತಿಪಡೆದು ನಿರಾಳ ಮನಸ್ಸು ಹೊಂದಬಹುದು. ತಿಳಿನೀಲಿ ಆಕಾಶದಷ್ಟು ಶುಭ್ರ ಮನಸ್ಸು ಹೊಂದಬಹುದು. ಆದರೆ ತಿಕ್ಕಲು ಬುದ್ದಿ ಅದಕ್ಕೆ ಬಿಡಗೊಡುವುದಿಲ್ಲ. ಸಾಕು ಕಂಡಿದೀನಿ ಜಾಸ್ತಿ ತಲೆ ತಿನ್ನಬೇಡ ಮಾತಾಡು ಮಾತಾಡು ಅನ್ನುತ್ತೆ. ಮತ್ತೆ ಮಾತಿಗೆ ಜಾರುತ್ತೇನೆ. ಮೌನ ದ ಆಸೆ ಮೌನವಾಗಿಯೇ ಜಾರುತ್ತದೆ.

4 comments:

Supreeth.K.S said...

ನೀವು ಮೌನದ ಬಗ್ಗೆ ‘ಮಾತಾ’ಡುತ್ತಿದ್ದೀರೋ ಇಲ್ಲವೇ ಶೂನ್ಯ ಭಾವದ ಬಗ್ಗೆಯೋ?
ಶೂನ್ಯ ಭಾವವೆಂದರೆ ಮನಸ್ಸಿನ ಎಲ್ಲಾ ಕಂಪನಗಳನ್ನು ಶಮನಗೊಳಿಸುವುದು. ಓಶೋ ರಜನೀಶ್ ಹೇಳಿದ ಹಾಗೆ ಲೈಂಗಿಕ ಕ್ರಿಯೆಯ ಅಂತಿಮ ಹಂತದಲ್ಲಿ ಮನುಷ್ಯ ಕ್ಷಣ ಮಾತ್ರಕ್ಕಾದರೂ ಆ ಸ್ಥಿತಿಯನ್ನು ತಲುಪುತ್ತಾನಂತೆ!
ಗಾಯತ್ರಿ ಮಂತ್ರದ ಪಠಣೆ ಅದು ಹೇಗೆ ಮೌನವಾದೀತು?

ಜಗದೀಶಶರ್ಮಾ said...

ಮಂತ್ರ ಅಂದ್ರೆ ಭಗವಂತನ ಶಬ್ದಮಯವಾದ ಆಕಾರ. ಭಗವಂತನೆಂದರೆ ಜೀವಿಯ ಮೂಲರೂಪ. ಮಂತ್ರ ಹೇಳ್ತಾ ಹೇಳ್ತಾ, ಮಂತ್ರ - ಹೇಳ್ತಾ ಇದ್ದ ತಾನು - ಎಲ್ಲವೂ ಮೂಲದಲ್ಲಿ ಮರ್ಜ್ ಆಗಬೇಕು. ಅದೇ ಮೌನ, ಅದೇ ಶೂನ್ಯ, ಅಥವಾ ಅದೇ ಪೂರ್ಣ.

Unknown said...

ಗೆ
ಸುಪ್ರೀತ್
ಶೂನ್ಯ ಭಾವದ ಬಗ್ಗೆ ಸರಳವಾಗಿ ಹೇಳಲು ತುಂಬಾ ತಾಕತ್ತು ಬೇಕು. ಇಲ್ಲಿ ಗಾಯಿತ್ರಿ ಮಂತ್ರ ಒಂದು ಉದಾಹರಣೆತನ್ನಾಗಿ ತೆಗೆದುಕೊಂಡೆಯಷ್ಟೆ.ಗಾಯಿತ್ರಿ ಮಂತ್ರ ಪಠಣ ನೀವು ಹೇಳಿದಂತೆ ಮೌನವಾಗಲು ಸಾದ್ಯವೇ ಇಲ್ಲ. ಆದರೆ ಹೀಗೊಂದು ಕುತೂಹಲಕ್ಕೆ ಅದು ದಾರಿಯಾಗುತ್ತದೆ. ಓಶೋ ವನ್ನು ಅರ್ಥೈಸಿಕೊಂಡ ನಿಮಗೆ ಇದು ಪೇಲವ. ಆದರೆ ಮಂಕುಕವಿದು ನಿಂತವನಿಗೆ ಆರಂಭದ ದಾರಿ ತೊರಿಸಲು ಇದು ಸರಳ ಉಪಾಯ ಅಷ್ಟೆ. ಧನ್ಯವಾದಗಳು.

ಗೆ
ಜಗದೀಶ ಶರ್ಮಾ
ಹೌದು .ಧನ್ಯವಾದಗಳು

prasca said...

superb,
ವಿಡಂಬನೆಯಿಂದ ಪ್ರಾರಂಭವಾಗುವ ನಿಮ್ಮ ಲೇಖನ ತುಂಬಾನೆ ಚೆನ್ನಾಗಿದೆ.
ಪ್ರಸನ್ನ