Wednesday, August 13, 2008

ಜೋಗದ ಸಿರಿ ಬೆಳಕಿನಲ್ಲಿಆಹಾ ಎಂತಹಾ ಚೆನ್ನಾಗಿದೆ ಆ ಕವಿತೆ. ಹಾಡುವ ಕಂಠ ಇಂಪಿದ್ದರೆ ಕೇಳಲು ಕರ್ಣಾನಂದ. ಆದರೆ ಈ ಜೋಗದ ಸಮೀಪ ಕುಳಿತು ಅನಾಮತ್ತು ನಾಲ್ಕು ತಿಂಗಳು ಮಳೆಗಾಲ ಅನುಭವಿಸುವುದಿದೆಯಲ್ಲ ಇತ್ತೀಚಿನ ವರ್ಷಗಳಲ್ಲಿ ಯಮ ಹಿಂಸೆಯಾಗುತ್ತಿದೆ. ದೀಪದ ಬುಡ ಕತ್ತಲು ಎಂಬ ಗಾದೆಯನ್ನು ಚಾಲ್ತಿಯಲ್ಲಿಡಬೇಕೆಂದು ಮೆಸ್ಕಾಂ ನವರು ಹಠ ಹೊತ್ತಿರುವಂತಿದೆ. ಸರಿ ಸುಮಾರು ಇಪ್ಪತ್ತು ದಿನಗಳಿಂದ ನಮ್ಮ ಊರಿನಲ್ಲಿ ಜೋಗದ ಸಿರಿ ಬೆಳಕು ಇಲ್ಲ. ಕರಿ ಬೆಳಕು ನಮ್ಮ ಪಾಲಿಗೆ. ಹೊರಜಗತ್ತಿಗೆ ನಾವು ಇದ್ದರೂ ಸತ್ತಂತಯೇ. ಅಡಿಕೆ ತೋಟ ಕೊಳೆ ರೋಗ ಹೊತ್ತು ಕೊಳೆಯುತ್ತಿದೆ. ಭತ್ತದ ಗದ್ದೆಗಳು ನೀರಿನಿಂದ ತಲೆಯೆತ್ತಲಾರದೆ ಬಳಲಿ ಬಾಗಿವೆ. ಆದರೂ ಬದುಕುವ ಛಲ ಇವೆಲ್ಲಾ ವರ್ಷಾನುಗಟ್ಟಲೆಯಿಂದ ನಡೆದು ಬಂದಿದೆಯಲ್ಲಾ ಎಂಬ ಸಮಾಧಾನದ ಮಾತಿನೊಂದಿಗೆ ಮುಂದುವರೆಯುತ್ತದೆ. ಹಿಂದೆಲ್ಲಾ ಈ ಕರೆಂಟು,ಟಿ.ವಿ.ಕಂಪ್ಯೂಟರ್ ಮುಂತಾದ ಹರಗಣಗಳೆಲ್ಲಾ ಇರಲಿಲ್ಲ. ಆವಾಗ ಹೊರ ಪ್ರಪಂಚದ ಅರಿವು ಕಡಿಮೆ. ಮಳೆ ಬಂದರೂ ಬಾರದಿದ್ದರೂ ಹೊಳೆ ಕಟ್ಟು ಒಡೆದರೂ ನೀರು ಹರಿದರೂ ನಮ್ಮದೇ ಜಗತ್ತು. ಆದರೆ ಈಗ ಮಂಡೆ ಬಿಸಿಯಾಗುತ್ತದೆ. ಇಲ್ಲಿ ಮಳೆ ಕೊಳೆ ಎಂದು ನಾವು ಒದ್ದಾಡುತ್ತಿದ್ದರೆ ಜುಂ ಎಂದು ಹತ್ತು ಲಕ್ಷದ ಕಾರಿನಲ್ಲಿ ಜೋಗ ನೋಡಲು ನೂರಾರು ಜನ ಭಾನುವಾರ ಬರುತ್ತಾರಲ್ಲ, ನಮಗೆ ಇಲ್ಲಿ ವರ್ಷಕ್ಕೊಮ್ಮೆಯೂ ಹೊರಜಗತ್ತು ನೋಡಲಾಗುವುದಿಲ್ಲವಲ್ಲ. ನಮಗೆ ರಗಳೆ ಶಾಶ್ವತವೇ? ಮುಂತಾದ ನೂರಾರು ಪ್ರಶ್ನೆಗಳು ಇಲ್ಲಿಯ ನಿತ್ಯ ಮಳೆಯ ಜತೆ ಗುದ್ದಾಡುತ್ತಾ ಜೀವನ ಸಾಗಿಸಲು ಯತ್ನಿಸುತ್ತಿರುವ ಕೃಷಿಕರ ಪ್ರಶ್ನೆ. ಅಯ್ಯೋ ಅವೆಲ್ಲಾ ಇದ್ದದ್ದೆ, ಅವರವರು ಪಡೆದು ಬಂದಿದ್ದು ಎಂದಿರಾ..? ಸರಿ ಬಿಡಿ ಸೀದಾ ಜೋಗದ ವೈಭವಕ್ಕೆ ಹೋಗೋಣ.
ಕಳೆದ ವರ್ಷ ಇಷ್ಟೋತ್ತಿಗೆ ಲಿಂಗನಮಕ್ಕಿಯ ಹನ್ನೊಂದು ಬಾಗಿಲು ತೆರೆದಿದ್ದರು. ಎಲ್ಲಿನೋಡಿದರಲ್ಲಿ ನೀರೇ ನೀರು. ನೀರ ನೋಡಲು ಬಂದ ನೀರೆಯರು. ಆಹಾ ಎಂತ ಮಧುರ ಯಾತನೆ ಎಂಬ ಹಾಡನ್ನೂ ಹಾಡುವಷ್ಟಿತ್ತು. ಆದರೆ ಈ ವರ್ಷ ಇನ್ನೂ ಆಣೆಕಟ್ಟು ತುಂಬಿಲ್ಲ. ಆದರೂ ಜೋಗದ ಜಲಪಾತದ ನೀರಿಗೇನು ಕೊರತೆಯಿಲ್ಲ. ಇನ್ನೊಂದು ಮಜ ಎಂದರೆ ಈ ವರ್ಷ ತಾಕತ್ತಿದ್ದರೆ ಜಲಪಾತದ ಕೆಳಗೆ ಇಳಿದು ಮೇಲೆ ನೋಡಬಹುದು. ಹಾ ಹುಷಾರಿ ಸ್ವಲ್ಪ ಎಚ್ಚರ ತಪ್ಪಿದರೂ ತೀರಾ ಮೇಲಕ್ಕೂ ಹೋಗಬಹುದು. ಇಲ್ಲಿ ನೀವು ಕೆಳಗಿನಿಂದ ಜೋಗ ನೋಡಿದರೆ ಹೇಗೆ ಕಾಣುತ್ತದೆ ಎಂಬ ಒಂದು ಫೋಟೋ ಹಾಕಿದ್ದೇನೆ. ಹೀಗೆ ಕೆಳಗಿನಿಂದ ಜೋಗ ಜಲಪಾತ ನೋಡಲು ತಾಕತ್ತಿನ ಹಾಗೂ ಧೈರ್ಯದ ಅವಶ್ಯಕತೆ ಇದೆ. ಧೈರ್ಯ ದಿಂದ ಇಳಿದರೆ ಅದರ ಮಜ ಅನುಭವಿಸಿದವರೇ ಹೇಳಬಲ್ಲರು. ಹಾಗಾಗಿ ಈಗ ಜೋಗಕ್ಕೆ ಹೋದರೆ ಕಾವಲುಗಾರರ ಕಣ್ಣುತಪ್ಪಿಸಿ ಗೋಡೆ ಹಾರಿ ಮೆಟ್ಟಿಲಿಳಿದು ತಳ ಸೇರಿ ಆನಂದ ಅನುಭವಿಸಿ. ಆಣೆಕಟ್ಟು ತುಂಬಿದರೆ ಈ ನೋಟ ಅಸಾಧ್ಯ.
ಕೊನೆಯದಾಗಿ: ಈ ಬ್ಲಾಗ್ ಬರೆದು ಮುಗಿಸಲು ತೆಗೆದುಕೊಂಡ ಅವಧಿ ಅನಾಮತ್ತು ಹದಿನೈದು ದಿವಸಗಳು ಕಾರಣ ಆರಂಭದಲ್ಲಿಯೇ ಹೇಳಿದ್ದೇನಲ್ಲ. ಜೋಗದ ಕರಿ ಬೆಳಕಿನಲ್ಲಿ.....

5 comments:

ವಿಕಾಸ್ ಹೆಗಡೆ/Vikas Hegde said...

ದೀಪದ ಬುಡ ಕತ್ತಲು ಎಂಬುದು ಎಷ್ಟು ಖರೆ ನೋಡಿ.
ಇದು ಬರೀ ವಿದ್ಯುತ್ ಬೆಳಕಿಗೇ ಅಲ್ಲ. ಪ್ರತಿ ರೈತನ , ಹಳ್ಳಿಯ ಜೀವನದ ಪಾಲಿಗೂ ಅನ್ವಯಿಸುತ್ತದೆ.

shreeshum said...

To
vikas

Hmm. veda sulladaru gade sullagadu alda..?

ಸುಶ್ರುತ ದೊಡ್ಡೇರಿ said...

ಆದ್ರೂ ಎಂತಹ ವಿಪರ್ಯಾಸ ನೋಡಿ: ನಿಮಗೆ ಆ ಹುಚ್ಚುಮಳೆ, ಅಡಿಕೆ ಕೊಳೆ, ಬಾಗಿದ ಭತ್ತದ ಬೆಳೆ -ಎಲ್ಲಾ ಬೇಸರ ತರಿಸ್ತಾ ಇದ್ದು; ನಮಗೆ -ಇಲ್ಲಿ ನಗರಕ್ಕೆ ಓಡಿಬಂದಿರುವವರಿಗೆ- ಈ ತೊಟ್ಟಿಕ್ಕುವ ಬಿಸಿಲು, ದುಡ್ಡು ಕೊಟ್ಟರೆ ಏನು ಬೇಕಾದರೂ ಸಿಗುವ ವ್ಯವಸ್ಥೆ, ಸದಾ ಝಗಮಗಿಸುವ ನಿಯಾನ್ ದೀಪದ ಬೆಳಕು -ಬೇಸರ ಬೈಂದು. 'ಅಪ್ಪೀ, ಮಳೇಂದ್ರೆ ಮಳೆ! ಕರೆಂಟ್ ಇಲ್ದೇ ಐದು ದಿನ ಆತು. ನಮ್ಮನೆ ಫೋನ್ ಡೆಡ್ಡಾಯ್ದು; ಪಕ್ಕದ್ ಮನೆಯಿಂದ ಮಾಡ್ತಿದ್ದಿ' ಅಂತ ಅಪ್ಪ ಹೇಳಿದರೆ ಊರಿನ ಬಗ್ಗೆ ಮುದ್ದು-ಮೋಹ ಎಲ್ಲಾ ಉಕ್ಕಿಬಂದು, ವಟರುಗಪ್ಪೆಯ ಕೂಗು ನೆನಪಾಗಿ, ಇವತ್ತೇ ರಾತ್ರಿ ಊರಿಗೆ ಹೊರಡೋಣ ಅನ್ನೋಷ್ಟು ಉದ್ರೇಕ ಆಗ್ತು..

ಹೊರಡ್ತಿದ್ದಿ ನಾಳೆ ರಾತ್ರಿ.. ..

Harish - ಹರೀಶ said...

ನಿಜ.. ಊರಿಗೆ ಹೋದಾಗ ಕರೆಂಟ್ ಹೋದ್ರೆ ನಂಗೂ ಒಂಥರಾ ತಲೇನೆ ಓಡದೆ ವಿಚಿತ್ರ ವಿಚಿತ್ರವಾಗಿ ಆಡ್ತೀನಿ... ಆದರೂ ಊರು ಅಂದ್ರೆ ಸುಶ್ರುತ ಹೇಳಿದಂತೆ ಏನೋ ಒಂದು ಖುಷಿ.. ಅಲ್ಲಿ ಸಿಗುವ ಆಪ್ತತೆ ನಗರದಲ್ಲಿ ಸಿಗುವುದು ಸಾಧ್ಯವೇ ಇಲ್ಲವೇನೋ. ಅದಕ್ಕೆ ಹೇಳಿರಬೇಕು.. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಅಂತ.

ಸುಶ್ರುತ, ನಾಳೆ ನಾನೂ ಹೊಂಟಿದ್ನೋ...

shreeshum said...

ಗೆ
ಸುಶ್ರುತ ಹಾಗೂ ಹರೀಶ

ಅದು ನಿಜ ದೂರದ ಬೆಟ್ಟ ನುಣ್ಣಗೆ ಆದ್ರೂ ನಿತ್ಯ ಇದೇ ಕತೆ ಆದ್ರೆ ಎಂಥವರಿಗೂ ಊರಿನ ವ್ಯಾಮೋಹ ಹೊರಟು ಹೋಗ್ತು. ಕರೆಂಟಿಗೆ ಹೋರಾಟ, ಫೋನಿಗೆ ಹೋರಾಟ, ಪ್ರಕೃತಿ ಜತೆ ನಿತ್ಯ ಕಾದಾಟ. ಅಲ್ಲಿದ್ದು ಇಲ್ಲಿಗೆ ಬಂದು ಹೋಪದು ಸೂಪರ್.