Sunday, August 24, 2008

ವಿನಾ ದೈನ್ಯೇನ ಜೀವನಂ ..ಅನಾಯೇಸೇನ ಮರಣಂ


ಎಂಬ ಶ್ಲೋಕದಂತೆ ನನ್ನ ಜೀವನ ಆಗಲಿ ಭಗವಂತ ಅಂತ ಪ್ರಾರ್ಥಿಸಬಹುದಷ್ಟೆ. ಆದರೆ ಹಾಗೆಯೇ ಆಗಿಬಿಡುತ್ತದೆಯೆಂಬ ಗ್ಯಾರಂಟಿ ಇಲ್ಲ. ದೈನ್ಯದಿಂದ ಕೂಡಿದ ಜೀವನ ಅತ್ಯಂತ ಯಾತನಾಮಯ. ಅಸಾಹಾಯಕರಾದಾಗಿನ ಬದುಕು ಕಷ್ಟ. ನಮ್ಮ ರಮೇಶನ ಸ್ಥಿತಿಯೂ ಅದೇ ಆಗಿತ್ತು. ಅದೇನು ಅವನ ಪ್ರಾಮಾಣಿಕತೆಯ ಫಲವೋ ಅಥವಾ ಮತ್ತಿನ್ನೇನೋ ಗೊತ್ತಿಲ್ಲ ನಾನು ಬ್ಲಾಗ್ ನಲ್ಲಿ ಅವನ ಕಾಲು ಮತ್ತು ಅಪಘಾತದ ಕಾರಿನ ವಿಷಯಕ್ಕೆ ಸ್ಪಂದಿಸಿ ಬೆಂಗಳೂರಿನ(ಹೆಸರು ಹೇಳಲು ಇಚ್ಚಿಸದ ವ್ಯಕ್ತಿತಿಯೊಬ್ಬರು) ಎರಡು ಸಾವಿರ ರೂಪಾಯಿ ಕಳುಹಿಸಿದರು. ಅದನ್ನು ತಲುಪಿಸಲು ಅವರ ಮನೆಗೆ ಹೋಗಿದ್ದೆ. ಮಂಚದ ಮೇಲೆ ಮಲಗಿದ್ದ ರಮೇಶನಿಗೆ ಬ್ಲಾಗ್ ವಿಷಯ ತಿಳಿಸಿ ಹಣ ಸಹಾಯ ಮಾಡಿದವರ ವಿವರ ಹೇಳಿ ಹಣ ಕೊಟ್ಟೆ. ಆತನ ಕಣ್ಣಂಚಿನಲ್ಲಿ ಪಳಕ್ಕನೆ ಒಂದು ಹನಿ ಜಾರಿತು. ಅಪರಿಚಿತನಾದ ನನಗೆ ದೇವರು ಹೀಗೆ ಬಂದಿರಬೇಕು ಎಂದ .
ನಿನ್ನೆ ಮನೆಗೆ ಬಂದಾಗ ರಮೇಶನಿಗಾಗಿ ಮತ್ತೊಂದು ಮೈಲ್ ಬಂದಿತ್ತು. ನನಗೆ ಈ ಪ್ರಪಂಚದ ಬಗ್ಗೆ ಅಚ್ಚರಿಯಾಗುವುದು ಇಂತಹ ಸಂದರ್ಭದಲ್ಲಿಯೇ. ನೂರು ರೂಪಾಯಿ ದೇಣಿಗೆ ಕೊಟ್ಟು ಹೆಸರಿಗಾಗಿ ಒದ್ದಾಡುವ ಜನ ಒಂದೆಡೆ. ಏನೂ ದೇಣಿಗೆ ಕೊಡದೆ ಹೇಗಾದರೂ ಹೆಸರು ಮಾಡಬೇಕೆಂಬ ಜನ ಮತ್ತೊಂದೆಡೆ, ದೇಣಿಗೆಯ ಹಣವನ್ನು ಗುಳುಂ ಮಾಡಿ ಹೆಸರು ಹೆಚ್ಚಿಸಿಕೊಳ್ಳುವ ಜನ ಮಗದೊಂದೆಡೆ, ಹೀಗೆ ನಾನಾ ತರಹದ ಜನರ ಮಧ್ಯೆ " ನಾನು ಸಹಾಯಮಾಡುತ್ತೇನೆ But I have a request. Please not disclose my name to anybody. It has to be strictly between me and you." ಎಂಬ ಒಂದು ಸಾಲಿನ ಆರ್ಡರ್ ಮಾಡುವ ಜಾಗದಲ್ಲಿ ವಿನಂತಿ. ಇಂತಹ ಸಂದರ್ಭದಲ್ಲಿ ವಿನಾ ದೈನ್ಯೇನ ಜೀವನಂ ಅರ್ಥ ಕಳೆದುಕೊಳ್ಳುತ್ತದೆ. ಇಲ್ಲಿ ಸಹಾಯ ಪಡೆದುಕೊಳ್ಳುವವರಿಗಿಂತ ಸಹಾಯ ಮಾಡುವ ಜನರೇ ವಿನಯಪೂರ್ವಕವಾಗಿರುತ್ತಾರೆ. ಇರಲಿ ಈ ಪ್ರಪಂಚ ಹೇಗೇ ನೋಡಿದರೆ ಹಾಗೆ ಕಾಣುತ್ತದೆ. ಕುರುಡರು ಮುಟ್ಟಿದ ಆನೆಯ ಕತೆ.
ಈ ನಡುವೆ ರಮೇಶ ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆಪರೇಷನ್ ಹೊಲಿಗೆ ಬಿಚ್ಚದಿದ್ದರೂ ಎದ್ದು ನಿಲ್ಲಬಲ್ಲ. ಅಲ್ಲಿಗೆ ರಮೇಶನ್ನಿಗೆ ನಿಮ್ಮ ಹಾರೈಕೆ ತಲುಪಿದೆ. ಹಾರೈಕೆ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಅನ್ನದು.
ಒಂದು ಬ್ಲಾಗಿನ ನಾಲ್ಕಕ್ಷರ ಓದಿ ರಮೇಶನಿಗೆ ಸಹಾಯ ಮಾಡಿದವರಿಗೆ ಅನಂತ ಧನ್ಯವಾದಗಳು. ತಮ್ಮ ಅಮೂಲ್ಯ ಸಮಯದ ನಡುವೆ ಬ್ಲಾಗ್ ಓದಿ ರಮೇಶನಿಗೆ ಹಾರೈಸಿದವರಿಗೂ ವಂದನೆಗಳು.
ಕೊನೆಯದಾಗಿ: ಕಾಲ ಕೆಟ್ಟೋಗಿದೆ ಅಂತ ಅಂತಾರಲ್ಲ ಆದರೆ ಇವತ್ತೂ ಹೀಗೆ ಸಹಾಯ ಮಾಡುವವರು ಇದಾರಲ್ಲ ಅದು ಹೇಗೆ? ಅಂತ ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಆ ಮಾತು ಮಾತಿಗಷ್ಟೆ, ಕಾಲ ಯಾವತ್ತೂ ಕೆಟ್ಟಿಲ್ಲ ಕೆಡುವುದೂ ಇಲ್ಲ, ಮನುಷ್ಯರು ಕೆಡಬಹುದು ಆದರೆ ಅಂದೂ ಕೆಟ್ಟವರು ಒಳ್ಳೆಯವರು ಇದ್ದರು ಇಂದೂ ಇದ್ದಾರೆ ಮುಂದೂ ಇರುತ್ತಾರೆ. ನಾವು ಮಾತ್ರ ಭೂತದ ಅನುಭವವನ್ನು ಬಳಸಿ ವರ್ತಮಾನದಲ್ಲಿ ಬದುಕಿ ಭವಿಷ್ಯಕ್ಕೆ ಕಾತರಿಸಬೇಕು. ಎಂದರು. ಒಂಥರಾ ಕಬ್ಬಿಣದ ಕಡಲೆಯಂತೆ ಅನ್ನಿಸಿತು.
ಸೇರ್ಪಡೆ : ವಿಧಿಯಾಟದ ನಂತರ ರಮೇಶನಿಗೆ ಅದೃಷ್ಟದ ಬೆಂಬಲ ದೊರೆಯುತ್ತಿದೆ. ಪೆಜತ್ತಾಯ, ಹೆಸರು ಹೇಳಲು ಇಚ್ಚಿಸದವರು ಈಗಾಗಲೆ ಅನುಕ್ರಮವಾಗಿ ತಲಾ ಎರಡು ಸಾವಿರ ಹಾಗೂ ಹತ್ತು ಸಾವಿರ ಕಳುಹಿಸಿದ್ದಾರೆ. ಕೃಪೇಶ ಕಳುಹಿಸುತ್ತಿದ್ದಾನೆ. ರಮೇಶ ಇವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

2 comments:

ಚಿತ್ತದ ಚಿತ್ತಾರ said...

ಚನ್ನಾಗಿದೆ ಸಾರ್......
ಬ್ಲಾಗ್ ನನ್ನು ಅರ್ಥವತ್ತಾಗಿ ಬಳಸಿಕೊಂಡಿದ್ದೀರಿ...

Unknown said...

chittada chitara


Thanks. tochiddu hage