Tuesday, August 26, 2008

ಹಸಿವು ಹಸಿವೆಂದು ..........


ಒಂದೂರಿನಲ್ಲಿ ಒಬ್ಬ ರಾಜ. ಅವನಿಗೆ ಒಬ್ಬ ಮುದ್ದು ಕುವರ. ಏಕಮಾತ್ರ ಮಗನಾದ್ದರಿಂದ ಮುದ್ದಿನಿಂದ ಬೆಳಸಿದ್ದರು. ಒಂದು ದಿನ ಬೆಳಿಗ್ಗೆ ರಾಜಕುಮಾರ ಹೊಟ್ಟೆಯನ್ನು ಹಿಡಿದುಕೊಂಡು ಬೊಬ್ಬಿಡತೊಡಗಿದ. "ಅಯ್ಯೋ ಹೊಟ್ಟೆಯಲ್ಲಿ ಏನೋ ಆಗುತ್ತಿದೆ" ಎಂದು ಕೂಗ ತೊಡಗಿದ. ಎಷ್ಟೆಂದರೂ ರಾಜಕುಮಾರ ತಾನೆ. ತತ್ ಕ್ಷಣ ರಾಜವೈದ್ಯರಿಗೆ ಬುಲಾವ್ ಹೋಯಿತು. ಗಡಿಬಿಡಿಯ ಮುಖಾರವಿಂದದೊಡನೆ ವೈದ್ಯರ ಪಡೆ ಆಗಮಿಸಿ ನಖಶಿಕಾಂತ ಪರೀಕ್ಷೆ ನಡೆಸತೊಡಗಿತು. ಎಷ್ಟೇ ತಲೆಕೆಡಿಸಿಕೊಂಡರೂ ರೋಗದ ಲಕ್ಷಣ ಕಾಣಿಸಲಿಲ್ಲ. ಆದರೆ ರಾಜಕುವರನ ಏನೋ ಆಗುತ್ತಿದೆ ಎನ್ನುವ ವರಾತ ನಿಲ್ಲಲಿಲ್ಲ. ರಾಜನೆಂದ ಮೇಲೆ ಕೇಳಬೇಕೆ ನಾನಾತರಹದ ಪರೀಕ್ಷೆ ಜ್ಯೋತಿಷ್ಯ ಗಳೆಲ್ಲಾ ಕ್ಷಣಮಾತ್ರದಲ್ಲಿ ಆರಂಭಿಸಿದರೂ ಪ್ರತಿಫಲ ಮಾತ್ರಾ ಶೂನ್ಯ. ರಾಣಿಯರು ಸಖಿಯರು ಪರಿವಾರದವರು ಹೀಗೆ ಎಲ್ಲರೂ ದುಗುಡದ ಮುಖ ಹೊತ್ತು ಅಸಾಹಾಯಕರಾಗಿ ಆಚೆ ಈಚೆ ತಿರುಗಾಡತೊಡಗಿದರು. ಊಹ್ಞೂ ಪರಿಹಾರ ಮಾತ್ರಾ ಶೂನ್ಯ. ತಕ್ಷಣ ರಾಜ ತನ್ನ ಮಗನ ಖಾಯಿಲೆಯನ್ನು ಗುಣಪಡಿಸಿದವರಿಗೆ ನಗನಾಣ್ಯ ನೀಡುವುದಾಗಿ ಘೋಷಿಸಿದ. ಈ ಗಡಿಬಿಡಿಯ ನಡುವೆ ಒಬ್ಬೇವಕನಿಗೆ ತಾನು ರಾಜಕುಮಾರನಿಗೆ ಬೆಳೆಗಿನ ಉಪಹಾರ ತರುವುದನ್ನು ಮರೆತಿದ್ದು ನೆನಪಾಯಿತು. ತಕ್ಷಣ ಆತ ರಾಜನ ಬಳಿ ತಾನು ಗುಣಪಡಿಸುವುದಾಗಿ ಹೇಳಿ ರಾಜಕುಮಾರನನ್ನು ಕೋಣೆಯಲ್ಲಿ ಕೂರಿಸಿಕೊಂಡು ಉಪಹಾರ ನೀಡಿದ. ಕುವರನ ಕಿರುಚಾಟ ಕಡಿಮೆಯಾಯಿತು. ರಾಜ ರಾಣಿಯರು ಸಮಾಧಾನಗೊಂಡರು. ಮತ್ತು ಸೇವಕನಿಗೆ ಕೈತುಂಬಾ ನಾಣ್ಯಗಳು ದೊರೆತವು. ಮುಂದಿನ ದಿನಗಳಲ್ಲಿ ಎಲ್ಲರೂ ಸುಖವಾಗಿ ಇದ್ದರು. ಎಂದು ಒಂದು ಕತೆ ಹೇಳುತ್ತದೆ. ಇರಲಿ ಕತೆ ಹೇಳಲಿ ಬಿಡಲಿ ಹಸಿವಿನ ಮಹತ್ವ ಹಾಗಿದೆ. ಅದು ಅನುಭವಿಸಿವರಿಗೆ ಗೊತ್ತು. ಹುಟ್ಟಿದಂದಿನಿಂದ ರಾಜಕುಮಾರ ಒಂದು ತಾಸುಕೂಡ ಖಾಲಿಹೊಟ್ಟೆ ಬಿಟ್ಟಿರಲಿಲ್ಲ ಹಾಗಾಗಿ ಅವನಿಗೆ ಹಸಿವೆಯ ಅನುಭವ ಆಗಿರಲಿಲ್ಲ. ಆ ಕಾರಣದಿಂದ ಆತ ಏನೋ ಆಗುತ್ತಿದೆ ಎಂದು ಬೊಬ್ಬಿಡುತ್ತಿದ್ದ. ಆನಂತರ ಅವನಿಗೆ ಗೊತ್ತಾಯಿತು ಹಸಿವೆ ಎನ್ನುವುದೊಂದು ಇದೆ ಎಂಬುದು.
ಹೀಗೆ ಬಹಳ ಜನರ ಬಾಳಿನಲ್ಲಿ ಹಸಿವೆ ಎಂಬುದೊಂದು ಇದೆ ಅನ್ನುವ ವಿಚಾರವೇ ಗೊತ್ತಿಲ್ಲದಂತೆ ಬೆಳೆದುಬಿಡುತ್ತಾರೆ. ಕಾಲಕಾಲಕ್ಕೆ ಸರಿಯಾಗಿ ಪೂರೈಕೆಯಾದರೆ ಅದರ ಮಹ್ಅತ್ವ ಅರಿವಾಗುವುದಿಲ್ಲ. ನಾನು ಒಂದು ದಿನ ಹಸಿವೆಯನ್ನು ಅನುಭವಿಸಬೇಕೆಂದು ತೀರ್ಮಾನಿಸಿದೆ. ಬೆಳಿಗ್ಗೆ ತಿಂಡಿ ಸಮಯದಲ್ಲಿ ಸ್ವಲ್ಪ ಹೊಟ್ಟೆ ಚುರುಗುಟ್ಟಿತು. ನೀರು ಕುಡಿದೆ. ಮಧ್ಯಾಹ್ನ ಕೈಕಾಲೆಲ್ಲ ತರತರ , ಅಮ್ಮಾ ಹೊಟ್ಟೆಗೆ ರುಚಿಕಟ್ಟಾದ್ದೆ ಆಗಬೇಕೆಂದಿಲ್ಲ ಎನಾದರೂ ಆದೀತು ಕಳುಹಿಸು ಎಂದು ಒಳಗಿನಿಂದ ಕೂಗತೊಡಗಿತು. ನಾನು ಇಲ್ಲ ಆಗದು ಎಂದೆ. ಊಟದ ಸಮಯ ಹತ್ತಿರಬಂದಂತೆಲ್ಲಾ ಅದೇನೋ ಹಪಹಪಿಕೆ. ಆದರೆ ನಾನು ಗಟ್ಟಿ ನಿರ್ಧಾರ ಮಾಡಿದ್ದೆ. ಹಾಗಾಗಿ ಮಂಚದ ಮೇಲೆ ಸುಮ್ಮನೆ ಮಲಗಿದೆ. ಮನಸ್ಸು ಹಸಿವೆಯನ್ನು ಹೊರತಾಗಿ ಮತ್ತಿನ್ನೇನನ್ನೂ ಯೋಚಿಸದು. ಆದ್ಯಾತ್ಮ ದೇವರು ದಿಂಡಿರು ಸುಖ ದು:ಖ ಊಹ್ಞೂ ಯಾವುದೂ ಬೇಡ. ಹಾಗೆಯೇ ಸಣ್ಣದಾಗಿ ಜೊಂಪು ಹತ್ತಿತು. ಅರೆನಿದ್ರೆಯಲ್ಲಿಯೂ ಊಟದ್ದೇ ಕನಸು. ಪಟಕ್ಕನೆ ಎಚ್ಚರವಾಯಿತು. ಮತ್ತೆ ನಿದ್ರೆ ಬಂದಂತಾಯಿತು. ಈಗ ಮತ್ತೆ ಹಸಿವಿನ ಕನಸಿನ ಮುಂದುವರಿಕೆ. ಈಗ ಬರೆಯಲು ಮುಜುಗರವಾಗುತ್ತದೆ. ಅಂತಹ ಕನಸುಗಳೆಲ್ಲಾ ಬೀಳತೊಡಗಿದವು. ಚಪ್ಪಲಿಯನ್ನು ಕಚ ಕಚ ತಿಂದಂತೆ. ದಬರಿಗಟ್ಟಲೆ ಅನ್ನ ನಾನು ತಿನ್ನುತ್ತೇನೆ ಆದರೆ ಹಸಿವು ಮಾತ್ರಾ ಹಾಗೆಯೇ ಇದೆ. ಹೀಗೆ ನೂರಾರು ತರಹದ ಚಿತ್ರವಿಚಿತ್ರ ಕನಸುಗಳು. ಅಂತೂ ಸಾಯಂಕಾಲವಾಯಿತು. ನಾನೂ ಅದನ್ನೇ ಕಾಯುತ್ತಿದ್ದೆ. ಸೂರ್ಯ ಮುಳುಗಿದ ತಕ್ಷಣ ಗಬಗಬನೆ ಒಂದಷ್ಟು ತಿಂದೆ. ಕೇವಲ ೧೨ ತಾಸು ಖಾಲಿ ಹೊಟ್ಟೆ ಇತ್ತು. ಅಷ್ಟಕ್ಕೆ ಈಪಾಟಿ ಸಮಸ್ಯೆ. ಗಬಗಬನೆ ತಿಂದ ಮರುಕ್ಷಣ ಸುಸ್ತೋ ಸುಸ್ತೋ. ಅದ್ಯಾಕಾದರೂ ತಿಂದೆನೋ ಎನ್ನುವಂತಾಯಿತು ಪರಿಸ್ಥಿತಿ. ಇರಲಿ ಒಟ್ಟಿನಲ್ಲಿ ಹಸಿವೆಯೆಂಬ ಮಾಯಾವಿಯ ವಿರಾಟ ರೂಪ ದರ್ಶನವನ್ನೂ ಬೇಕಂತಲೆ ಆಹ್ವಾನಿಸಿ ಒಂಥರಾ ಸುಖರೂಪದ ಕಷ್ಟವನ್ನು ಅನುಭವಿದೆ. ಆದರೆ ಮಾರನೇ ದಿವಸ ಬೆಳಿಗ್ಗೆ ಮನಸ್ಸು ಉಲ್ಲಾಸದಾಯಕವಾಗಿತ್ತು. ಅದೇನೋ ಒಂಥರಾ ಖುಶ್ ಖುಷಿ ಹಾಗೂ ಯಡ್ಡಾದಿಡ್ಡಿ ಧೈರ್ಯ. ಮನಸ್ಸು ೧೨ ಗಂಟೆಗಳ ಕಾಲ ಒಂದೇ ವಿಷಯದ ಬಗ್ಗೆ ಯೋಚಿಸಿದ್ದರಿಂದ ಧ್ಯಾನದಂತಾಗಿರಬೇಕು. ಮುಸ್ಲಿಂ ಜನಾಂಗದ ರಾಂಜಾನ್ ಉಪವಾಸ ದ ಆಚರಣೆ ಹಾಗೂ ಅ ವರ ಯಾಡ್ಡಾದಿಡ್ಡಿ ಆತ್ಮಸ್ಥೈರ್ಯಕ್ಕೆ ನಿಜದ ಕಾರಣ ಅರಿವಾಯಿತು. ಹಾಗಾಗಿ ನಮ್ಮ ಹಿಂದಿನವರು ಹದಿನೈದು ದಿನಕ್ಕೊಂದು ಏಕಾದಶಿ ಉಪವಾಸ ಆಚರಣೆಯಲ್ಲಿಟ್ಟಿದ್ದರು. ಆದರೆ ವಿಪರ್ಯಾಸವೆಂದರೆ ಉಪವಾಸ ಎಂದರೆ ಮೂರ್ನಾಲ್ಕು ಗೋದಿ ರೊಟ್ಟಿ ತಿನ್ನುವುದು ಎಂದು ಬುದ್ದಿವಂತರು . .! ಬದಲಾವಣೆ ಮಾಡಿಕೊಂಡಿದ್ದಾರೆ. ಇ ರಲಿ ಇಲ್ಲಿಯತನಕ ನಾನೇನು ತೀರಾ ಹೊಸ ವಿಷಯ ಹೇಳಿಲ್ಲ. ಹಳೆಯದನ್ನು ನೆನಪಿಸಿದ್ದೇನೆ. ನಿಮಗೆ ಷುಗರ್ ಗ್ಯಾಸ್ ಟ್ರಬಲ್ ಹಾಗೂ ಬಿ ಪಿ ಇರದಿದ್ದಲ್ಲಿ ಒಂದು ದಿವಸ ಉಪವಾಸ ಇದ್ದು ಎಂಜಾಯ್ ಮಾಡಿ. ಮತ್ತೆ ತಿನ್ನುವುದು ಹೇಗೂ ಇ ದೆ.
ಕೊನೆಯದಾಗಿ: "ಹದಿನೈದು ದಿನಕ್ಕೊಮ್ಮೆ ಹೀಗೆ ಸಂಪೂರ್ಣ ನಿರಾಹಾರ ಒಳ್ಳೆಯದು ಅಲ್ಲವೇ?" ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ನಿತ್ಯ ಸುಗ್ರಾಸ ಭೋಜನ ಸಿಗುವ ಜನಕ್ಕೆ ಉಪವಾಸವಿರುವ ಚಿಂತೆ, ನಿತ್ಯ ಉಪವಾಸದ ಜನಕ್ಕೆ ಸುಗ್ರಾಸ ಭೋಜನದ ಚಿಂತೆ. ಹೀಗಿದೆ ಪ್ರಪಂಚ ಅಂತ ನಕ್ಕರು. ಯಾರ ಕುರಿತು ಹೇಳಿದ್ದು ಅಂತ ನಿಮಗೂ ನನಗೂ ಅ ರ್ಥವಾಯಿತಲ್ಲವೇ..? ಸಾಕು ಬಿಡಿ.

No comments: