Wednesday, September 3, 2008

ಜೈ ಗಣೇಶ


"ಸರಿಯಪ್ಪಾ ಗಣೇಶ ನಂಬಿದವರ ಪಾಲಿನ ಕಲ್ಪತರು ನೀನೆ ಅನ್ನೋದು ಎಲ್ಲರಿಗೂ ಗೊತ್ತು ಆದರೆ ನಂಬದವರಪಾಲಿಗೂ ಕಲ್ಪತರು ನೀನು ಅಂತ ಬಹಳ ಜನಕ್ಕೆ ಗೊತ್ತಿಲ್ಲ. ಹುಲುಮನುಜರು ನಿನ್ನನ್ನು ನಂಬಲಿ ಬಿಡಲಿ ಇದೊಂದು ಸಣ್ಣ ಸಾಲಿನಿಂದ ನಿನ್ನನ್ನು ಸಣ್ಣವನನ್ನಾಗಿಸಿಬಿಟ್ಟಿದ್ದಾರೆ. ಇರಲಿ ಹೀಗಂತ ಮನುಷ್ಯರೇ ಹಾಡನ್ನು ಹಾಡಿದ್ದಾರೆ ಹೊರತು ನೀನಲ್ಲವಲ್ಲ ಅಂತ ನನಗೆ ಸಮಾಧಾನ. ಈ ಮನುಷ್ಯರು ತಾವೇ ಸೃಷ್ಟಿಸಿದ ದೇವರನ್ನು ತಮ್ಮ ಲೆವಲ್ಲಿಗೆ ಇಳಿಸಿಬಿಡುತ್ತಾರೆ. ನಂಬಿದವರು ನಂಬದವರು ಎಂದು ವಿಭಾಗ ಮಾಡಲು ಗಣೇಶನೇನು ರಾಜಕಾರಣಿಯಂತೆ ಓಟು ಹಾಕಿದವರು ಓಟು ಹಾಕದವರು ಎಂದು ವಿಭಾಗಿಸುವ ಮಟ್ಟಕ್ಕೆ ಇಳಿದು ಹೋದನಾ?. ಬಿಡಿ ಸೋಮಿ ಸ್ವಲ್ಪ ಕತ್ತೆತ್ತಿ ... ಇನ್ನೇನು ಮುಗಿದೇ ಹೋತು"
ಇದೇನು ಸ್ವಲ್ಪ ವಿಚಿತ್ರ ವಾಕ್ಯಗಳಿದೆಯಲ್ಲ ಅಂತ ಯೋಚಿಸುತ್ತಿದ್ದೀರಾ ಇದು ನಮ್ಮ ವಿಠಲನ ಡೈಲಾಗ್. ವಿಠಲ ಯಾರು ಎಂದಿರಾ?. ಅವನೊಬ್ಬ ನಾಪಿತ. ನಮ್ಮೂರ ಬಳಿಯ ಆಡುಕಟ್ಟೆಯಲ್ಲಿ ಸಂಚಾರಿ ಸಲೂನ್. ಮನೆಮನೆಗೂ ತೆರಳಿ ಅಂಗಳದಲ್ಲಿ ತುದಿಕಾಲದಲ್ಲಿ ಕುಳಿತು ತಲೆಯನ್ನು ತನ್ನೆರಡು ತೊಡೆಯ ಸಂದಿಯಲ್ಲಿ ಹಾಕಿಟ್ಟುಕೊಂಡು ಸರಿ ಸುಮಾರು ಎರಡು ತಾಸು ಇಂತಹ ವಿಚಾರಗಳನ್ನು ಅರುಹುವ ಅತಿ ಬುದ್ದಿವಂತ. ಕಳೆದ ವರ್ಷ ಆತ ಇಹಲೋಕ ತ್ಯಜಿಸಿದ. ಆದರೆ ಆತ ನನಗೆ ಚೌತಿ ಹಬ್ಬ ಬಂದಾಗಲೆಲ್ಲ ಗಣೇಶನಿಗಿಂತ ಮೊದಲು ನೆನಪಿಗೆ ಬರುತ್ತಾನೆ. ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಂತೆ ಬಾಳಿದ ವಿಠಲ ಚಿಂತಕರ ಪಾಲಿಗೆ ಒಳ್ಳೆಯ ವ್ಯಕ್ತಿ. ಆತನ ಪ್ರಶ್ನೆಗಳು ಆತನ ತರ್ಕದ ರೀತಿ ಬಹಳ ಮೇಲ್ಮಟ್ಟದ್ದಾಗಿತ್ತು.
ಒಮ್ಮೆ ಆತ ನಮ್ಮೂರ ಪುರೋಹಿತರ ಬೋಡನ್ನು ಹೊಡೆಯುತ್ತಿದ್ದಾಗ ಓಂದು ಪ್ರಶ್ನೆ ಎಸೆದ. ಪಾಪ ಆ ಜಪ ಈ ಜಪ ಆ ಪೂಜೆ ಈ ಪೂಜೆ ಎಂದು ರೊಕ್ಕವನ್ನಷ್ಟೆ ಮಾಡುತ್ತಿದ್ದ ಹಾಗೂ ಮಂಡೆಯಿರುವುದು ಬೋಳಿಸಿಕೊಳ್ಳಲಷ್ಟೇ ಹಾಗೂ ವೃತ್ತಿ ಇರುವುದು ಹಣಮಾಡಲಷ್ಟೇ ಎಂಬಂತಿದ್ದ ಪುರೋಹಿತರಿಗೆ ಈ ವಿಠಲ ಜಿಜ್ಞಾಸೆ ತಲೆಹರಟೆಯಾಗಿ ಕಂಡು ಕೆಂಡಾಮಂಡಲವಾಗಿದ್ದರು. ಆತ ಕೇಳಿದ್ದು ಎಂದರೆ " ಅಲ್ಲಾ ಸೋಮಿ ಈ ಗಣಪತಿ ಮುಖದ ವಿಚಾರದಲ್ಲಿ ನಂಗೊಂದು ಡೌಟು, ಗೌರಿ ಸ್ನಾನ ಮಾಡಿದ್ದು ಅದರಿಂದ ಮಣ್ಣು ಉದುರಿದ್ದು ನಂತರ ಗಣಪತಿ ಮಾಡಿದ್ದು ತುಸು ಹೆಚ್ಚು ಅಂತ ಅನ್ನಿಸಿದರೂ ನಂಬಬಹುದು. ಆದರೆ ಮುಖದ ವಿಷಯದಲ್ಲಿ ಮಾತ್ರಾ ಯಡವಟ್ಟಾಗಿದೆ. ಶಿವ ಗಣೇಶನ ರುಂಡ ಕತ್ತರಿಸಿದ ಅದಕ್ಕೆ ಅಲ್ಲೆಲ್ಲೋ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆ ತಂದು ಜೋಡಿಸಿದರು ಅನ್ನೋ ಕತೆ. ಅಷ್ಟೆಲ್ಲಾ ತ್ರಾಸು ತೆಗೆದುಕೊಂಡು ಆನೆ ರುಂಡ ಜೋಡಿಸುವುದರ ಬದಲು ಅಲ್ಲೆ ಬಿದ್ದಿದ್ದ ಗಣೇಶನದೇ ರುಂಡವನ್ನು ಮುಂಡಕ್ಕೆ ಜೋಡಿಸಬಹುದಿತ್ತು. ಇರಲಿ ಬೇಡ ಬಿಡಿ ನೆಲಕ್ಕೆ ಬಿದ್ದ ಹೊಡೆತಕ್ಕೆ ರುಂಡಕ್ಕೆ ಮಣ್ಣು ಮಸಿ ಮೆತ್ತಿಕೊಂಡಿರಬಹುದು ಆದರೆ ನಾಲ್ಕು ಕಾಲಿನ ಪ್ರಾಣಿ ಆನೆಯ ತಲೆಯನ್ನು ತಂದು ಎರಡು ಕಾಲಿನ ಗಣೇಶನಿಗೆ ಜೋಡಿಸಿದಾಗ ಈಗ ಗಣೇಶ ಇದ್ದಾನಲ್ಲ ಹಾಗೆ ಮುಖ ಇರಲು ಸಾದ್ಯವೇ ಇಲ್ಲ. ಮುಖ ಆಕಾಶದತ್ತ ನೋಡುತ್ತಾ ಇರಬೇಕಿತ್ತು. ಅದು ಹೇಗೆ ನಾಲ್ಕು ಕಾಲಿನ ಪ್ರಾಣಿಯ ತಲೆ ಎರಡು ಕಾಲಿನ ಗಣೇಶನಿಗೆ ಇಟ್ಟರು.? ಒಮ್ಮೆ ಆಲೋಚಿಸಿ ಉತ್ತರ ಹೇಳ್ತೀರಾ " ಅಂದ. ಪಾಪ ಪುರೋಹಿತರಿಗೆ ಇಲ್ಲಿಯವರೆಗೆ ಮ್ರುತ್ಯುಂಜಯ ಜಪಕ್ಕೆ ಎಷ್ಟು , ರುದ್ರ ಹವನಕ್ಕೆ ಎಷ್ಟು ಖರ್ಚಾಗುತ್ತದೆ ಮುಂತಾದ ಪ್ರಶ್ನೆ ಕೇಳುತ್ತಿದ್ದರು. ಅವರು ಅದಕ್ಕೆ ತಕ್ಕುದಾದ ಉತ್ತರ ನೀಡುತ್ತಿದ್ದರು. ಈತ ಅದೂ ಯಕಶ್ಚಿತ್ ನಾಪಿತ ದರ್ಮಸೂಕ್ಷ್ಮ ವಿಚಾರ ಕೇಳಿದ್ದಾನೆ, ಉತ್ತರ ಗೊತ್ತಿಲ್ಲ ಎಂದರೆ ಮರ್ಯಾದೆ ಹರಾಜು. ಗೊತ್ತಿದೆ ಎಂದರೆ ಏನಂತ ಹೇಳುವುದು. ಗಣಪತಿ ಮುಖ ನೇರವಾಗಿ ನಮ್ಮನ್ನೆ ನೋಡುತ್ತಿದೆ. ಆನೆಯ ಮುಖ ಜೋಡಿಸಿದ್ದಾದರೆ ಆಕಾಶ ನೋಡಬೇಕಿತ್ತು, ಏನಪ್ಪಾ ಹೇಳುವುದು. ಎನ್ನುತ್ತಾ ಶಾಸ್ತ್ರಕಾರರನ್ನು ಬೈಯ್ದುಕೊಂಡರು. ಆದರೂ ಕೊನೆಗೆ ಅದೆಲ್ಲಾ ನಂಬಿಕೆ ಕಣಯ್ಯಾ ಎಂದು ಹಾರಿಕೆ ಉತ್ತರ ನೀಡಿದರು. ಆದರೆ ಬಡಪೆಟ್ಟಿಗೆ ವಿಠಲ ಬಿಡಲೊಲ್ಲ. "ಅಯ್ಯಾ ಅದೇಗೆ ನಂಬಿಕೆ ಆಗುತ್ತದೆ, ಗಣಪತಿ ವರ ಕೊಡುತ್ತಾನೆ ಎಂದರೆ ಅದು ನಂಬಿಕೆಯಾಯಿತು. ಇದು ಹಾಗಲ್ಲ, ತಪ್ಪಾಗಿದೆ". ಎಂದ. ಪುರೋಹಿತರಿಗೆ ಸಿಟ್ಟೊಂದು ಬಿಟ್ಟರೆ ಮತ್ತೇನು ಹೊಳೆಯಲಿಲ್ಲ. ನಂತರ ವಿಠಲನೇ ಮುಂದುವರೆಸಿ: ಸೋಮಿ ಆನೆ ತಲೆ ತಂದು ಗಣೇಶನಿಗೆ ಜೋಡಿಸಿದಾಗ ಮುಖ ಆಕಾಶ ನೋಡುತ್ತಿತ್ತು, ಆನಂತರ ರಾವಣನ ಆತ್ಮಲಿಂಗದ ಗಲಾಟೆಯಾಯಿತಲ್ಲ ಆವಾಗ ರಾವಣ ಸಿಟಗೊಂಡು ಗಣಪತಿಯ ತಲೆಮೇಲೆ ಗುದ್ದಿದನಲ್ಲ ಆವಾಗ ಆಕಾಶ ನೊಡುತ್ತಿದ್ದ ಮುಖ ನಮ್ಮತ್ತ ನೋಡುವಂತಾಯಿತು, ಎಂದು ಕತೆ ಸೇರಿಸಿ " ಎಂದ. ಪುರೋಹಿತರಿಗೆ ಸುಸ್ತಾಗಿತ್ತು. ಹ್ಞೂ ಎಂದರು,
ಹೀಗೆ ಅದ್ಬುತ ಪ್ರಶ್ನಾವಳಿಯ ಸಂಗ್ರಹ ಹೊಂದಿದ್ದ ವಿಠಲ ಇಂದು ಇಲ್ಲ. ಆದರೆ ಅವನ ಇಂತಹ ಹಲವಾರು ಕತೆಗಳು ಉಳಿದಿವೆ. ಇರಲಿ ಇಂದು ಗಣೇಶನ ಹಬ್ಬ ವಿಠಲ ಅಲ್ಲಿ ಸ್ವರ್ಗದಲ್ಲಿ ಇದ್ದಾನೆ ಅಲ್ಲಿದ್ದ ಗಣೇಶ ಪೂಜೆ ಮಾಡಿಸಿಕೊಂಡು ಹೋಗಲು ಇಲ್ಲಿಗೆ ಬಂದಿದ್ದಾನೆ ಗಣೇಶನ ಮುಖಾಂತರ ವಿಠಲನಿಗೆ ನಮ್ಮದೊಂದು ಜೈ ಕಾರ ಕಳುಹಿಸೋಣ.
ನಿಮಗೂ ಹ್ಯಾಪಿ ಗಣೇಶ.
ಕೊನೆಯದಾಗಿ: ಚೌತಿ ದಿವಸ ಚಿತ್ರ ವಿಚಿತ್ರ ನಾಲಿಗೆ ಹೊರಳದಂತಹ ಹೆಸರಿರುವ ಸಹಸ್ರನಾಮ ಓದುವುದು ಕಷ್ಟ . ಹಾಗಾಗಿ ಸಾವಿರ ಬೇರೆ ಬೇರೆ ಹೆಸರಿನಿಂದ ಗಣೇಶನನ್ನು ಭಜಿಸಿ ಸಹಸ್ರ ನಾಮ ಓದುವುದರ ಬದಲು ಸಾವಿರ ಬಾರಿ ಗಣೇಶ ಗಣೇಶ ಅಂತ ಹೇಳಿದರೆ ಪುಣ್ಯ ಬರುವುದಿಲ್ಲವೇ. ಎಂದು ಆನಂದರಾಮ ಶಾಶ್ತ್ರಿಗಳನ್ನು ಕೇಳಿದೆ. ಅದಕ್ಕವರು ಅಯ್ಯಾ ದೊರೆ ನೀನೆ ಸ್ವಲ್ಪ ಮೇಲು ಮೊನ್ನೆ ಮತ್ತೊಬ್ಬ ಭಕ್ತ ಸ್ವಾಮಿ ಗಣೇಶ ಹೋಲ್ ಸ್ಕ್ವೇರ್ ಅಂತ ಹತ್ತು ಸಾರಿ ಹೇಳಿದರೆ ಸಹಸ್ರ ನಾಮ ಆದಂತಲ್ಲವೇ ಅಂದಿದ್ದ. ಎಂದರು ,