Friday, November 21, 2008

ಸೂರ್ಯ ಮತ್ತು ಪಾನ


ಸೂರ್ಯಪಾನ ಹೆಸರು ಏನೋ ಒಂಥರಾ ಹಿತವಾಗಿದೆ. ಈಗ ನಾಲ್ಕೈದು ತಿಂಗಳಿನ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಸೂರ್ಯಪಾನದ ಕುರಿತು ಒಂದು ವಿಸ್ತೃತವಾದ ಲೇಖನ ಬಂದಿತ್ತು. ಸೂರ್ಯನ ಬೇಳಕನ್ನು ಹೀರಿಕೊಂಡೇ ಬದುಕಬಹುದು , ಆಹಾರದ ಅಗತ್ಯವೇ ಇಲ್ಲ ನಳನಳಿಸುವ ಆರೋಗ್ಯ ನಿತ್ಯ, ಎಂಬುದು ಆ ಲೇಖನದ ಒಟ್ಟಾರೆ ಸಾರಾಂಶ. ಸಿಕ್ಕಿದಾಗೆಲ್ಲ ಸಿಕ್ಕಷ್ಟು ತಿನ್ನುವ ನನ್ನಂತ ಜಾಯಮಾನದವರಿಗೆ ಆಹಾರ ಬಿಟ್ಟು ಸೂರ್ಯನ ಕಿರಣ ಕುಡಿದು ಬದುಕುವುದು ಎನ್ನುವ ವಿಚಾರವೇ ಹೆದರಿಕೆ ಹುಟ್ಟಿಸಿಬಿಡುತ್ತದೆ. ಆದರೆ ಈ ಪ್ರಪಂಚದಲ್ಲಿ ಇದ್ದಾರೆ ಅಂತಹವರು ಎಂತವರೂ ಎಂತೆಂತವರೂ. ಅವರುಗಳು ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಇರಲಿ ಅವರವರ ಜೀವನ ಅವರವರಿಗೆ. ಉಳ್ಳವರ ಆರೋಗ್ಯ ಕಾಪಾಡಲು ಹೀಗೆ ನೂರಾರು ವಿಧಿವಿಧಾನಗಳಿವೆ. ಧ್ಯಾನವಂತೆ, ಪ್ರಾರ್ಥನೆಯಂತೆ, ಹ ಹ ಹ ಎನ್ನುವ ನಗೆಕೂಟವಂತೆ. ತಿಂಗಳೂ ತಿಂಗಳು ಅಕಸ್ಮಾತ್ ಆರೋಗ್ಯ ಏರುಪೇರಾದರೆ ಎಂದು ಮಂತ್ಲಿ ಚೆಕ್ ಅಪ್ ಅಂತೆ ಹೀಗೆ ಹತ್ತು ಹಲವು. ಆದರೂ ಅವರಿಗೆ ಟೆನ್ಷನ್ ತಲೆಬಿಸಿ ತನ್ನ ನಂತರ ಆರನೇ ತಲೆಮಾರಿನವರ ಬಗ್ಗೆ ಕಾಡುವ ಚಿಂತೆ. ಇರಲಿ ಇದು ಉಳ್ಳವರ ಕಥೆಯಾಯಿತು. ಪಾಮರರ ಕಥೆ ನೋಡೋಣ.
ನಮ್ಮ ಊರಲ್ಲಿ ಗೋಪಾಲ ಎಂಬ ಕೂಲಿಕಾರ್ಮಿಕನಿದ್ದಾನೆ. ಆತನಿಗೆ ಎಪ್ಪತ್ತೈದರ ಹರೆಯ. ಈಗಲೂ ಆತನ ಖರ್ಚನ್ನು ಆತನೇ ಸಂಪಾದಿಸುತ್ತಾನೆ. ಅವನಿಗೊಬ್ಬ ತಮ್ಮ ಆತನ ಹೆಸರು ಮಾರಿ. ಈತನದೂ ಅಣ್ಣನಷ್ಟೆ ಸಿದ್ಧಾಂತ. ಇಬ್ಬರೂ ಬೆಳಿಗ್ಗೆ ಸೂರ್ಯ ಇನ್ನೇನು ಹುಟ್ಟುತ್ತಾನೆ ಎನ್ನುವಷ್ಟರಲ್ಲಿ ಬಿರಬಿರನೆ ಮನಮನೆಯೆಂಬ ಊರಿನತ್ತ ಹೆಜ್ಜೆಹಾಕುತ್ತಾರೆ. ಅಲ್ಲಿ ಹೋಗಿ ಒಂದೇ ಒಂದು ಕ್ವಾಟರ್ ಕಳ್ಳಬಟ್ಟಿ ನೇಟುತ್ತಾರೆ. ನಂತರ ಅಣ್ಣ ಬೀಡಿ ಹಚ್ಚುತ್ತಾನೆ ತಮ್ಮ ಹೊಗೆಸೊಪ್ಪಿನ ದಂಟು ಮುರಿದು ಕವಳ ಹಾಕುತ್ತಾನೆ. ಅದಾದ ನಂತರ ಅವರ ದಿನದ ಕಾಯಕ ಶುರು .ಮಧ್ಯಾಹ್ನ ಕೂಲಿ ಕೆಲಸ ಮುಗಿದನಂತರ ಮೂರುಗಂಟೆಗೆ ಒಂದು ಊಟಮಾಡಿ ಮತ್ತೆ ಮನಮನೆಗೆ ರೈಟ್. ಸಂಜೆ ಸೀದಾ ಹಾಸಿಗೆಗೆ. ಈ ಕಾಯಕ ಸುಮಾರು ಐವತ್ತು ವರ್ಷದಿಂದ ನಿತ್ಯ ನಡೆದು ಬಂದಿದೆ. ಅವರಿಬ್ಬರು ಈ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸಗಾರರು ಪ್ರಾಮಾಣಿಕರು ಹಾಗೂ ನಯವಿನಯ ಹೊಂದಿದವರು ಮತ್ತು ಒಳ್ಳೆಯ ಆರೋಗ್ಯ ಹೊಂದಿದವರು. ಎಪ್ಪತ್ತರ ದಶಕ ದಾಟಿರುವ ಅವರುಗಳು ಅವರ ಜೀವಮಾನದಲ್ಲಿ ಒಂದೇ ಒಂದು ದಿನ ಆಸ್ಪತ್ರೆ ಯತ್ತ ಮುಖ ಹಾಕಿಲ್ಲವಂತೆ. ದಿನಕ್ಕೆ ಒಂದೇ ಊಟ ಹಾಗೂ ಎರಡು ಬಾರಿ ಸರಾಯಿ. ಬೆಳಿಗ್ಗೆ ಮನಮನೆಗೆ ಹೋಗುವಾಗ ಅರ್ದ ಗಂಟೆ ಅವರು ಏರು ಸೂರ್ಯನನ್ನೇ ನೋಡುತ್ತಾ ಸಾಗುತ್ತಾರೆ, ಮತ್ತೆ ಸಂಜೆ ಮನಮನೆಯಿಂದ ವಾಪಾಸುಬರುವಾಗ ಇಳಿ ಸೂರ್ಯನನ್ನೇ ನೆನೆಯುತ್ತಾ ಮನೆ ಸೇರುತ್ತಾರೆ. ಇವರೀರ್ವರ ಜೀವನಪದ್ದತಿಯನ್ನು ನೋಡಿದ ನನಗೆ ಈಗ ಸೂರ್ಯಪಾನದಲ್ಲಿ ನಂಬಿಕೆ ಬರತೊಡಗಿದೆ. ಅದೂ ಸೂರ್ಯ ಮತ್ತು ಪಾನ ಬೇರೆಬೇರೆಯಾಗಿ...!
ಧ್ಯಾನ,ವನ್ನು ಬೆನ್ನು ಹತ್ತಿ ಆರೋಗ್ಯದಿಂದ ನಳನಳಿಸುತ್ತಾ ಇರುವವರೇನು ಸಾವಿರ ವರ್ಷ ಬದುಕಿಲ್ಲ. ಅವನ್ನೆಲ್ಲಾ ಬದಿಗಿಟ್ಟವರೂ ಹತ್ತೇ ವರ್ಷಕ್ಕೆ ಸತ್ತಿಲ್ಲ. ಇರಲಿ ಎಲ್ಲವೂ ಬೇಕು ಇಲ್ಲಿ. ನಮಗೆ ಸಿಕ್ಕಿದ್ದು ನಮಗೆ ದಕ್ಕಿದ್ದು ನಮಗೆ. ನಿಮಗೆ ಸಿಕ್ಕಿದ್ದು ನಿಮಗೆ ದಕ್ಕಿದ್ದು ನಿಮಗೆ. ಒಟ್ಟಿನಲ್ಲಿ ನಗುನಗುತಾ ನಲೀ ನಲೀ ಎಂದರೆ ಮುಗಿಯಿತು.

3 comments:

prajavani said...

nija nija nija

ಮೂರ್ತಿ ಹೊಸಬಾಳೆ. said...

ಹಾಂ ರಾಘುಮಾವ,
ನಿಮ್ಮ ಬರಹ ಓದುವಾಗ ನನಗೆ ಮಲಯಾಳಂನ ಒಂದು ಸಾಲು ನೆನಪಾಗುತ್ತದೆ.
ಗಂಜಿ ಕಾಮಾಲೆ,ಚೋರು ಪಿತ್ತಂ ಕಳ್ಳು ಕುಡಿಚ್ಯ ತಡಿಕ್ಕೆ ನಲ್ಲದು
(ಗಂಜಿ ಕುಡಿದರೆ ಕಾಮಾಲೆ ರೋಗವಂತೆ,ಅನ್ನ ತಿಂದರೆ ಪಿಪ್ಪ ಕೆಣಕುತ್ತದಂತೆ ಹೆಂಡ ಕುಡಿದರೆ ದೇಹಕ್ಕೆ ಒಳ್ಳೆಯದಂತೆ)

ಮನಸ್ವಿ said...

ಹ್ಮ್ ರಾಘಣ್ಣ.. ನಿಜ... ಅದ್ರೆ ಈಗ ಅವ್ರಿಬ್ರು ಯಾವ ಬ್ರ್ಯಾಂಡ್ ಕುಡಿತ್ವಡ ಕಳ್ಬಟ್ಟಿ ಸಿಗದಿದ್ರೆ.. ! ತಮಾಷೆಗೆ ಕೇಳಿದಿ, ಇಷ್ಟ ಆತು ನಿನ್ನ ಲೇಖನ..