Thursday, December 4, 2008

ಹಹಹ...ಅಂತಿಮ ಭಾಗ

ಇನ್ನು ಹೆಚ್ಚು ಹೊತ್ತು ಅಲ್ಲಿದ್ದರೆ ಬಾಯಿ ತಪ್ಪಿ ಅಕ್ಕಪಕ್ಕದವರ ಬಳಿ ಏನಾದರೂ ಹೇಳಿ ಅದು ಅವರ ಲೆಕ್ಕದಲ್ಲಿ ಉದ್ಧಟತನದ ಮಾತಾಗಿ ಲಾತಾ ತಿನ್ನಬೇಕಾದಿತೆಂದು ಹೊರಹೊರಟೆ. ಹೊರಗೆ ಬಾಗಿಲಬಳಿ ಬರುವಷ್ಟರಲ್ಲಿ ಶನಿದೇವನ ಅವತಾರ ಅಂದಿನ ಮಟ್ಟಿಗೆ ಪೂರೈಸಿತು. ಆದರೆ ದರಿದ್ರ ಕುತೂಹಲ ಹಳೇ ಪಾತ್ರಧಾರಿಯನ್ನು ಮಾತನಾಡಿಸಿದರೆ ಹೇಗೆ ಎಂಬ ಆಲೋಚನೆ ಸುಳಿದಾಡಿತು. ಅದು ಸ್ವಲ್ಪಮಟ್ಟಿಗೆ ಅಪಾಯದ ಕೆಲಸವೂ ಆಗಿತ್ತು. ಕಾರಣ ಅಲ್ಲಿದ್ದವರಿಗೆಲ್ಲ ಹಳೆಯಪಾತ್ರಿಯ ಮೇಲೆ ಎಲ್ಲಿಲ್ಲದ ಕೋಪ, ಆತ ಕುಡಿದಿದ್ದಾನೆ ಅದಕ್ಕಾಗಿ ಏನೆಲ್ಲಾ ಒದರುತ್ತಾನೆ ಅಂದುಕೊಂಡಿದ್ದರು. ಆತ ಕುಡಿದದ್ದು ನಿಜ ಆದರೆ ಸತ್ಯವನ್ನೇ ಹೇಳುತ್ತಿದ್ದ. (ಸತ್ಯ ಎಂಬುದು ಈ ಪ್ರಪಂಚಕ್ಕೆ ಯಾವಾಗಲೂ ಬೇಡ. ಸುಳ್ಳು ಹೆಚ್ಚು ಹೆಚ್ಚು ಹೇಳಿದರೆ ಎತ್ತರ ಎತ್ತರಕ್ಕೆ ಸಾಗಬಹುದು ಇಲ್ಲಿ.) ಪಾಪ ನನಗೂ ಕೂಡ ಆಂತರ್ಯದಲ್ಲಿ ಹಳೇಪಾತ್ರಿಯಬಗ್ಗೆ ಅನುಕಂಪ ಇತ್ತು ಆದರೆ ಬೀಳುವ ಲಾತಾದ ಭಯದಿಂದ ತೋರಿಸಿಕೊಳ್ಳಲಾಗುತ್ತಿರಲಿಲ್ಲ(ನೋಡಿ ನಾವೆಲ್ಲರೂ ಹೇಗೆ ಸುಳ್ಳಿಗೆ ಬೆಂಬಲಿಸುತ್ತೇವೆ..!). ಆದರೂ ಏನಾದರಾಘಲಿ ಎಂದು ಹಳೇ ಪಾತ್ರಿಯ ಬಳೈಗೆ ಹೋದೆ. ಅಷ್ಟರಲ್ಲಿ ಆತನ ಕೂಗಾಟ ಗೊಣಗಾಟವಾಗಿ ಪರಿವರ್ತನೆಗೊಂಡಿತ್ತು. "ಕಳ್ಳ ಬಡ್ಡಿ ಮಕ್ಕಳು ದುಡ್ಡಿಗಾಗಿ ಏನೇನೋ ಮಾಡ್ತವೆ( ಈತ ಹಿಂದೆ ಮಾಡಿದ್ದೂ.. ಅದನ್ನೆ. ಈಗ ತನಗೆ ಅವಕಾಶ ತಪ್ಪಿದ್ದಕ್ಕೆ ಸಿದ್ದಾಂತ) ಒಂದು ನೀತಿ ರಿವಾಜೂ ಎಂತೂ ಇಲ್ಲ, ಬರ್ಲಿ ಬರ್ಲಿ ಧರ್ಮಸ್ಥಳದಲ್ಲಿ ಬುದ್ದೀ ಕಲ್ಸತ್ತೀನಿ ಇವುಕ್ಕೆ ಹ್ಯಾ... ಪುಸ್" ಹೀಗೆ ಮುಂದುವರೆಯುತ್ತಿತ್ತು. "ಹೋಯ್ ಅವನ ಮೈಮೇಲೆ ಶನಿ ಬರುವುದು ಸುಳ್ಳಾ..?" ಮೆಲ್ಲಗೆ ಕೇಳಿದೆ. "ಸುಳ್ಳಲ್ದೆ ಸತ್ಯನಾ...? ನಿಮ್ಗೂ ಅನುಮಾನವಾ?. ಒಂದಿಷ್ಟು ಹೇಳ್ತಾನೆ ಸತ್ಯ ಆದ್ರೆ ಅವಂದು ಸುಳ್ಳಾದ್ರೆ ಅವ್ರಿದ್ದು. ಇವೆಲ್ಲಾ ನಾನು ಮಾಡಿಬಿಟ್ಟಿದ್ದೇಯಾ. ದೊಡ್ಡೋರಿಗೆ ಸೊಪ್ಪು ಹಾಕ್ಲಿಲ್ಲ ಹಂಗಾಗಿ ನನ್ನ ಹೊರಗೆ ಹಾಕಿದ್ರು..." ಮತ್ತೆ ನಿಧಾನ ಸ್ವರ ಏರತೊಡಗಿತು. ಇನ್ನು ನಾನು ಅಲ್ಲಿದ್ದರೆ ಕುಂಟುತ್ತಾ ಮನೆಸೇರಬೇಕಾದೀತೆಂದು ಹೊರಗೆ ಬಂದು ಶನಿದೇವಾಯ ನಮೋ ನಮಃ ಎಂದು ಮನೆಗೆ ಹೋಗಲು ಬೈಕನ್ನೇರಿದೆ.

ಇವೆಲ್ಲಾ ನಡೆದು ಈಗ ಹದಿನೈದು ವರ್ಷಗಳೇ ಸಂದಿವೆ. ಮತ್ತೆ ನಾನು ನನ್ನ ಜಂಜಡಗಳಲ್ಲಿ ಶನಿದೇವನ ಕತೆ ಮರೆತಿದ್ದೆ. ಈಗ ಮೂರು ವರ್ಷದ ಹಿಂದೆ ಅದ್ಯಾವುದೋ ಕೆಲಸದ ಮೇಲೆ ಅಲ್ಲಿ ಹೋಗುತ್ತಿದ್ದಾಗ ಅಚ್ಚರಿ ಮೂಡುವಷ್ಟು ಬದಲಾವಣೆ ಅಲ್ಲಿತ್ತು.ಸಣ್ಣ ಕುಟೀರ ಮಾಯವಾಗಿ ದೊಡ್ದ ದೇವಸ್ಥಾನ ತಲೆ ಎತ್ತಿತ್ತು. ಭಕ್ತರು ಹೊಸ ಹೊಸ ಸಮ್ಸ್ಯೆಯಲ್ಲಿ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಅಬ್ಭಾ ಎಂದುಕೊಂಡೆ.

ಯಾವುದು ಏನೇ ಇರಲಿ ಶನಿದೇವ ಮೈಮೇಲೆ ಬರುತ್ತಾನೋ ಇಲ್ಲವೋ ಎನ್ನುವುದು ಟಿವಿ ೯ ನ "ಹೀಗೂ ಉಂಟೇ" ಟಿವಿ ಪ್ರೋಗ್ರಾಂ ನಡೆಸಿಕೊಡುವವ ಹೇಳುವಂತೆ ತರ್ಕಕ್ಕೆ ನಿಲುಕದ್ದು. ಆದರೆ ಅದೊಂದು ಬಹಳ ಜನರಿಗೆ ನೆಮ್ಮದಿಕೊಡುತ್ತಿದೆ ಅಂತ ಅನ್ನುವುದಂತೂ ಸತ್ಯವಾಯಿತಲ್ಲ. ಜನರಿಗೆ ಏನು ಬೇಕೋ ಅದು ನೀಡುವುದು ಪ್ರಜಾಪ್ರಭುತ್ವ...! ರಾಷ್ಟ್ರದ ಕರ್ತವ್ಯ ಅಲ್ಲವೇ.? ಆ ಕಾರಣಕ್ಕಾಗಿ ಇರಬೇಕು ನಮ್ಮ ಮಲೆನಾಡಿನಲ್ಲಿ ಜ್ಯೋತಿಷ್ಯರೂ, ಮಾತನಾಡುವ ದೇವರುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿವೆ. ಪ್ರಪಂಚ ಕಷ್ಟಕ್ಕೆ ಬಿದ್ದಂತೆಲ್ಲಾ ಇಲ್ಲಿ ಹಣದ ಹೊಳೆ ಹರಿಯುತ್ತದೆ. ಗೇರುಸೊಪ್ಪದ ಮಂಗನಂತೆ ಹಾರಿಹಾರಿ ಬೀಳುವ ಮಾರುತಿ ಭಟ್ಟರನ್ನು ಆಡಿಕೊಳ್ಳುವ ಮುಂದುವರೆದವರು ಇದ್ದಂತೆ ಅವರ ಭಂಡಾರಕ್ಕೆ ಹಣ ಸೇರಿಸುವ ನೂರಾರು ಜನ ಇದ್ದಾರೆ. ಎಸ್.ಎಸ್.ಎಲ್.ಸಿ ಪಾಸ್ ಆಗುವುದೂ ಬೇಡ ಇಂತಹದ್ದೊಂದು ಕೆಲಸಕ್ಕೆ. ಆದಾಯ ಮಾತ್ರಾ ಯಾವ ಸಾಪ್ಟ್ ವೇರ್ ನ ಜನಕ್ಕೂ ಇಲ್ಲ. ಅನಂತಣ್ಣ ಈ ಮಂದಿಯ ಹಣೆಬರಹ ಹೇಳುವ ಕೆಲಸ ಶುರುವಿಟ್ಟುಕೊಂಡಾಗ ಆತನ ಆಸ್ತಿ ಎರಡು ಎಕರೆ ಭಾಗಾಯ್ತು ಇತ್ತು. ಈಗ ಅದು ಹತ್ತು ಎಕರೆಗೆ ಏರಿದೆ ಇವತ್ತು ಆತ ಕೋಟ್ಯಾಧೀಶ ಮನೆ ಅರ್ದ ಕೋಟಿ ಬೆಲೆ ಬಾಳುತ್ತದೆ. ಶಾನುಭೋಗರಿಂದ ಹಿಡಿದು ಡಿಸಿ ವರೆಗಿನ ಸರ್ಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು ಈಗ ಅವನ ಜೇಬಿನಲ್ಲಿ. ಬಂಗಾರುಮಕ್ಕಿಯ ಮಾರುತಿ ಭಟ್ಟರೂ ಇದಕ್ಕೆ ಹೊರತಲ್ಲ. ತುಮ್ರಿಯ ಸಮೀಪ ಸಿಗಂಧೂರು ಮೆರೆಯುತ್ತಿದ್ದಂತೆ ಅಲ್ಲಿಯೇ ಹತ್ತಿರದ ಗುಮಗೊಡು ಗಣಪತಿ ಎಂಬಾತ ಈಗ ಜನರ ಸಮಸ್ಯೆ ಪರಿಹರಿಸಲು ನಿಂತಿದ್ದಾನೆ. ಇನ್ನು ಕೆಲವರ್ಷದಲ್ಲಿ ಆತ ಹತ್ತಿರದ ಜಮೀನುಗಳನ್ನೆಲ್ಲಾ ಖರಿದಿಸುತ್ತಾನೆ. ಇದೊಂದು ವೃತ್ತಿಗೆ ಓದಿನ ಅಗತ್ಯ ಇಲ್ಲ. ಧೈರ್ಯದ ಅಗತ್ಯ ಇದೆ. ಪಾಪ ನಮ್ಮ ಸಾಪ್ಟ್ವೇರ್ ಹುಡುಗರು, ಸಿ.ಎ ಹುಡುಗರು ವರ್ಷಪೂರ್ತಿ ಕಷ್ಟಪಟ್ಟು ದುಡಿಮೆಗಾಗಿ ಒದ್ದಾಡುತ್ತಾರೆ. ಆದರೂ ಹೀಗೆ ಹತ್ತು ವರ್ಷದಲ್ಲಿ ಶ್ರೀಮಂತರಾಗಿಲ್ಲ. ನಾವೆಲ್ಲಾ ಬಿಡಿ ಅಬ್ಬೆಪಾರಿಗಳು..

ಹೀಗಿದೆ ನೋಡಿ ಪ್ರಪಂಚ. ಹಾಗಾಗಿ ನಾನೂ ಬೇರೆಯವರಿಗೆ ಭವಿಷ್ಯ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನಮ್ಮ ಭವಿಷ್ಯವಾದರೂ ಉಜ್ವಲವಾಗುತ್ತದೆ....! ನೀವೂ ಬನ್ನಿ ನಿಮ್ಮವರಿಗೂ ಹೇಳಿ " ಅಂವ ಕರೆಕ್ಟಾಗಿ ಹೇಳ್ತ ಮಾರಾಯ" ಎಂದು. ನಿಮಗೂ ಸ್ವಲ್ಪ ಪಾಲು ಕೊಡೋಣ...? ಉದರನಿಮಿತ್ತಂ ಬಹುಕೃತ ವೇಷಂ.

5 comments:

Harish - ಹರೀಶ said...

ಜ್ಯೋತಿಷ್ಯ ಸರಿಯಾಗಿ ಕಲಿತು, ಜಾತಕ ಸರಿಯಾಗಿದ್ದು, ಸರಿಯಾಗಿ ಹೇಳಿದರೆ ಅದು ನಿಜವಾಗುತ್ತದೆ. ಆದರೆ ಈಗ ಇರುವವರೆಲ್ಲ ಢೋಂಗಿಗಳೇ... ಹಾಗಾಗಿ ಬಹಳಷ್ಟು ನಿಜವಾಗುವುದಿಲ್ಲ. ಅಪ್ಪಿ ತಪ್ಪಿ ಒಂದೆರಡು ನಿಜವಾದರೆ ಬಹಳ ಪ್ರಸಿದ್ಧವಾಗಿಬಿಡುತ್ತಾರೆ.

ವಿಕಾಸ್ ಹೆಗಡೆ said...

ಇವೆಲ್ಲ ತರ್ಕಕ್ಕೆ ನಿಲುಕುವಂತದ್ದೇ ಆಗಿರಬಹುದು, ಆದರೆ ’ತರ್ಕಕ್ಕೆ ನಿಲುಕದ್ದೂ’ ಕೂಡ ಇದೆ ಎಂದು ನಿಮಗನಿಸೋದಿಲ್ವಾ?

ಢೋಂಗಿಗಳಿಂದ ಜ್ಯೋತಿಷ್ಯಕ್ಕೆ ಕೆಟ್ಟ ಹೆಸರೇ ಹೊರತು ಜ್ಯೋತಿಷ್ಯ ಢೋಂಗಿಯಲ್ಲ ಅನ್ಸುತ್ತೆ.

ಬಹುಕೃತ ವೇಷಂ, ಸಾಫ್ಟ್ ವೇರ್ ನವರದ್ದು ಒಂದ್ರೀತಿ ಆದ್ರೆ ಇನ್ನೊಬ್ರದ್ದು ಇನ್ನೊಂದು ರೀತಿ. ಎಲ್ರೂ ಕಷ್ಟಪಡೋರೆ :)

shreeshum said...

harish
yes.thank you
vikas
prapncha kurudu muttida aneryante

mruthyu said...

ನಮ್ಮ ನಮ್ಮ ಕಷ್ಟಗಳನ್ನು ನಾವೇ ಅನುಭವಿಸಬೇಕು ಎಂಬುದು ಎಲ್ಲರಿಗೂ ಗೊತ್ತು. ಆದರೆ ಈ ಕಷ್ಟ ಬರಲು ನಾವು ಕಾರಣರಲ್ಲ ಅಂತ ತಿಳಿದುಕೊಳ್ಳುವುದು ನಮಗೆ ಅಗತ್ಯ. ನನ್ನ ಕಷ್ಟಕ್ಕೆ ನಾನು ಕಾರಣ ಅಲ್ಲ ಅಂತ ನಾನೇ ಡಂಗುರ ಹೊಡೆದರೆ ಯಾರಪ್ಪಾ ಕೇಳುವವರು? ಅಂತಹ ಡಂಗುರ ಹೊಡೆಯುವ ವ್ಯವಸ್ಥೆ ಇದು. ಇದೊಂದು ರೀತಿಯ ಪ್ರಾಮಾಣಿಕ ಮೋಸ!

shreeshum said...

ಮೃ. ಮಾ
ಜ್ಯೋತಿಷ್ಯದ ಬಗೆಗೆ ಮೇಲ್ದ್ರಜೆಯ ಷರಾ ಅಥವಾ ವ್ಯಾಖ್ಯಾನ ಇಂದು ಸಿಕ್ಕಂತಾಯಿತು.
ನಾನು ಇಷ್ಟೇ ಬರೆದಿದ್ದರೆ ಸಾಕಿತ್ತು.