Monday, December 8, 2008

ಚಮಕ್

ಜನ ಜನ ಜನ, ಎಲ್ಲಿನೋಡಿದರಲ್ಲಿ ಜನ , ಊರಿಗೆ ಹೊರಟವರು, ಊರಿಂದ ಬಂದವರು, ಹೊರಟವರನ್ನು ಕಳುಹಿಸುವವರು, ಬಂದವರನ್ನು ಸ್ವಾಗತಿಸುವವರು, ಬಸ್ಸಿಳಿದವರು, ರೈಲಿನಿಂದ ಬಂದವರು, ರೈಲಿಗೆ ಹೋಗುವವರು. ಅದು ಬೇರೆಲ್ಲೂ ಸಾಧ್ಯವಿಲ್ಲ ಮೆಜೆಸ್ಟಿಕ್ ಎಂದು ನಿಮಗೀಗಲೆ ಅರಿವಾಗಿರಬೇಕು. ಹೌದು ಅದು ಮೆಜೆಸ್ಟಿಕ್. ನಾನೂ ಆ ಜನರ ಸಂತೆಯಲ್ಲಿ ಒಂಟಿಯಾಗಿದ್ದೆ. ಹಸಿ ಹಸಿ ಬೆವರಿನ ವಾಸನೆಯಲ್ಲಿ ಕಳೆದುಹೋಗಿದ್ದೆ. ಸಾವಿರಾರು ಮುಖಗಳ ನಡುವೆ ಹುದುಗಿ ಹೋಗಿದ್ದೆ. ಕೆಂಪನೆಯ ಮುಖ ದುಂಡನೆಯ ಮುಖ ಕಪ್ಪನೆಯ ಮುಖ ಬಿಳಿಚಿಕೊಂಡ ಮುಖ ಹೀಗೆ ಎಷ್ಟೋ ಮುಖಗಳು ಏನನ್ನೋ ಅರಸುವ ಭಾವನೆಯೊಂದಿಗೆ ಅಲೆದಾಡುತ್ತಿದ್ದವು. ಆ ಅಲೆದಾಟದಲ್ಲಿ ನಾನೂ ಸೇರಿಹೋಗಿದ್ದೆ. ಆದರೆ ನನಗೆ ನನ್ನ ಮುಖ ಕಾಣುತ್ತಿರಲಿಲ್ಲ. ಬೇರೆ ಮುಖದಲ್ಲಿ ನನ್ನ ಮುಖ ನೊಡಿಕೊಳ್ಳುವ ಆಸೆ ಇತ್ತು. ಆದರೆ ಅಲ್ಲಿರುವ ಮುಖಗಳಿಗೆ ನನ್ನ ಮುಖದ ಪರಿಚಯವೇ ಇರಲಿಲ್ಲ. ಹಾಗಾಗಿ ನನ್ನ ಆಸೆಯನ್ನು ಅದುಮಿಕೊಳ್ಳುವುದು ಅನಿವಾರ್ಯವಾಗಿತ್ತು. ಇವರೆಲ್ಲಾ ಎಲ್ಲಿಗೆ ಹೊರಟಿದ್ದಾರೆ ಯಾಕೆ ಹೊರಟಿದ್ದಾರೆ ಎಲ್ಲಿಗೆ ತಲುಪುತ್ತಾರೆ ಎಂಬ ಉತ್ತರ ಇಲ್ಲದ ಪ್ರಶ್ನೆ ನನ್ನ ಬಳಿ ಪದೆಪದೆ ಮೊಳಗುತ್ತಿತ್ತು. ಪ್ರಶ್ನೆಗೆ ಉತ್ತರ ಸಿಗದು ಎಂದು ತಿಳಿದಮೇಲೆ ಸುಮ್ಮನಾದೆ. ಒಂದು ಸ್ವಲ್ಪವೇ ಸ್ವಲ್ಪ ಕುಡಿದು ಹೀಗೆ ಪರಿಚಯ ಇಲ್ಲದ ಜನರ ಮಧ್ಯೆ ಓಡಾಡುವಾಗೆಲ್ಲ ಸಾವಿರ ಪ್ರಶ್ನೆಗಳು.

ಆವಾಗ ಆಕೆ ದುತ್ತನೆ "ಹಲೋ" ಎನ್ನುತ್ತಾ ಎದುರಿಗೆ ಬಂದು ನಿಂತಳು. ಒಮ್ಮೆಲೆ ಬೆಚ್ಚಿಬಿದ್ದೆ. " ನೀನು ನೀನು ಇಲ್ಲಿ ಇಲ್ಲಿ" ತೊದಲು ಮಾತನ್ನಾಡಿದೆ. ಕುಡಿದ ಕ್ವಾಟರ್ ವಿಸ್ಕಿ ಜರ್ರನೆ ಇಳಿದುಹೋಯಿತು. ಆಕೆಗೇನಾದರೂ ವಿಸ್ಕಿಯ ಕಮಟು ವಾಸನೆ ಬರಬಹುದಾ ಎಂಬ ಅನುಮಾನ ಕಾಡತೊಡಗಿತು. ಕೈಗಳು ತನ್ನಿಂದ ತಾನೆ ಪ್ಯಾಂಟಿನ ಜೇಬಿನೊಳಗೆ ತೂರಿಕೊಂಡವು. ನಾನು ಸರಿಯಾಗಿದ್ದೇನೆ ಕುಡಿದಿಲ್ಲ ಎಂದು ತೋರಿಸಿಕೊಳ್ಳಲು ದೇಹ ನುಲಿಯತೊಡಗಿತು. "ಅಯ್ಯ ಅದೇಕೆ ಅಷ್ಟು ಆಶ್ಚರ್ಯ, ನಾನು ಈಗ ಬೆಂಗಳೂರಿನಲ್ಲಿಯೇ ಇರುವುದು, ಊರಿಗೆ ಹೊರಟಿದ್ದೇನೆ, ನೀನು ಸಂಗಂ ಟಾಕಿಸಿನ ಬಳಿ ನಡೆದು ಬರುತ್ತಾ ಇರುವುದನ್ನು ಬಿಟಿಎಸ್ ಬಸ್ಸಿನಿಂದ ನೋಡಿದೆ ಊರಿಗೆ ಹೊರಟೇಯಾ? ಲಗ್ಗೇಜ್ ಎಲ್ಲಿ? " ಆಕೆ ಮುಂದುವರೆಸುತ್ತಿದ್ದಳು. ಅಯ್ಯೋ ಬಾರ್ ನಿಂದ ಇಳಿಯುತ್ತಿದ್ದುದನ್ನು ನೋಡಿರಬಹುದೇ? ಸಿಕ್ಕಿಕೊಂಡು ಬಿದ್ದೆಯಾ ಒಳಮನಸ್ಸು ಹೆದರಿಸತೊಡಗಿತು. "ಹೋ ಹೌದಾ, ನಾನು ಊರಿಗೆ ಅಲ್ಲ ಊರಿಂದ ಯಾರೋ ಬರುವವರು ಇದ್ದಾರೆ ಹಾಗೆ ಸುಮ್ಮನೆ ಇಲ್ಲಿ ಬಂದೆ" ಮಾತುಗಳು ತೊದಲುತ್ತಿದ್ದಂತೆ ನನಗನಿಸಿತು "ಬಾಯಿಹುಣ್ಣು ಬೆಂಗಳೂರು ಇತ್ತೀಚೆಗೆ ಹೀಟ್" ತೊದಲಿಕೆಗೆ ಕಾರಣ ಹೇಳಿದೆ. "ಓ ಹೋ ಹೌದಾ ಗ್ಲಿಸರಿನ್ ಹಚ್ಚು ಊರಲ್ಲಾದರೆ ಅಮ್ಮ ಬಸಳೆ ಸೊಪ್ಪು ಕೊಡುತ್ತಿದ್ದಳು ಅಲ್ವಾ..? " ಆಕೆ ನಗುನಗುತ್ತಾ ಕೇಳಿದಳು. ಸ್ವಲ್ಪ ಧೈರ್ಯ ಬಂತು ನನಗೆ , ಆಕೆಗೆ ನನ್ನ ಕುಡಿತ ಗೊತ್ತಾಗಿಲ್ಲ ಸಾವಿರ ಸಾವಿರ ಬೆವರಿನ ವಾಸನೆಯ ನಡುವೆ ಎಲ್ಲಿಯದೂ ಅಂತ ಆಕೆಗೇನು ತಿಳಿಯುತ್ತೇ ಆದರೂ ಒಂದೇ ಒಂದು ಮಿಂಟ್ ತಿನ್ನಬೇಕಾಗಿತ್ತು ಅಂತ ಅನ್ನಿಸಿತು. ಕಾಲೇಜು ಮುಗಿದನಂತರ ಆಕೆಯನ್ನು ನೋಡಿರಲಿಲ್ಲ, ಒಮ್ಮೆ ಅಡಿಯಿಂದ ಮುಡಿಯವರೆಗೂ ಗಮನಿಸಿದೆ ಸಿಕ್ಕಾಪಟ್ಟೆ ಮಾಡ್ರನ್ ಆಗಿದ್ದಂತೆ ಅನ್ನಿಸಿತು. ಊರಿನಲ್ಲಿ ಶಾಸ್ತ್ರ ಸಂಪ್ರದಾಯ ಅಂತ ಬೀಗುತ್ತಿದ್ದ ಅಪ್ಪ ಅಮ್ಮನ ಮಗಳು ಇವಳೇನಾ ಅಂತ ಅನ್ನಿಸುವಷ್ಟು ಬದಲಾಗಿದ್ದಳು. "ಏನೋ ಹೊಸ ಹುಡುಗಿ ನೋಡುವ ಹಾಗೆ ನೋಡುತ್ತೀ" ಕಣ್ಣನ್ನು ಮಿಟುಕಿಸಿ ಚಮಕ್ ಕೊಟ್ಟಳು. ಇಲ್ಲ ಇಲ್ಲ ಹಾಗೇನಿಲ್ಲ, ಸುಮ್ಮನೆ ಸುಮ್ಮನೆ ಮತ್ತೆ ತೊದಲಿದೆ, ಈ ವಿಸ್ಕಿಯ ಹಣೇ ಬರಹವೇ ಹಾಗೆ ಒಂದೆಡೆ ಯೋಚನೆಗಳನ್ನು ಎಳೆದುಕೊಂಡು ಬಿಡುತ್ತದೆ. ಇನ್ನುಮೇಲೆ ಕುಡಿದು ಹೀಗೆ ಬಸ್ ಸ್ಟ್ಯಾಂಡ್ ತಿರುಗುವ ಚಟಕ್ಕೆ ತಿಲಾಂಜಲಿ ಇಡಬೇಕೆಂದೆನಿಸಿತು. ಸರಿ ಅದು ಮುಂದಿನ ಕತೆ ಈಗ ಸದ್ಯ ಇವಳಿಂದ ಬಚಾವಾಗಿ ಹೋದರೆ ಸಾಕು, ಅಕಸ್ಮಾತ್ ಇವಳಿಗೆ ನಾನು ಕುಡಿದದ್ದು ಗೊತ್ತಾಗಿ ಊರಿಗೆ ಹೋಗಿ ಟಾಂ ಟಾಂ ಮಾಡಿದರೆ ಮಾನಮರ್ಯಾದೆ ಹರಾಜಾಗುತ್ತದೆ ಎಂದು ಒಕೆ ಬರ್ಲಾ ಎಂದು ಹೇಳಿದೆ. "ಒಂದು ನಿಮಿಷ ಇರೋ ನಾನು ಒಭ್ಳೆ ಬಸ್ ಎಷ್ಟೊತ್ತಿಗೆ ಅಂತ ಕೇಳಿಬರ್ತೀನಿ" ಎಂದು ಉತ್ತರಕ್ಕೂ ಕಾಯದೆ ಓಡಿದಳು. ಹೀಗೆ ಹೋಗಿ ಹಾಗೆ ಬಂದು 'ಅಯ್ಯೋ ರಾಮ ಇವತ್ತು ಬಸ್ಸು ಇನ್ನೂ ಒಂದೂವರೆ ಗಂಟೆ ತಡವಂತೆ ನನಗೂ ಬೋರ್ ಪ್ಲೀಸ್ ಇರೋ" ರಾಗ ಎಳೆದಳು. ಅನಿವಾರ್ಯ ಇಲ್ಲ ಎನ್ನಲಾಗಲಿಲ್ಲ. ವಿಸ್ಕಿ ಕುಡಿಯದಿದ್ದರೆ ಖುಷಿಯಿಂದ ಇರಬಹುದಿತ್ತು. ಛೆ ಎಂತ ಯಡವಟ್ಟಾಯಿತಲ್ಲ ಎಂದು ಆದಷ್ಟು ಡಿಸ್ಟೆನ್ಸ್ ಕಾಪಾಡಿಕೊಳ್ಳುತ್ತಾ ನಿಂತೆ. "ಇಲ್ಲಿ ಮಾಡುವುದೇನು ಒಂದು ರೌಂಡ್ ಹೋಗಿಬರೋಣವಾ?. ಬೊಗಸೆ ಕಂಗಳನ್ನು ಅಗಲಿಸಿ ಕೇಳಿದಳು. ಇಲ್ಲ ಎನ್ನಲಾಗಲಿಲ್ಲ. ಅವಳ ಬ್ಯಾಗ್ ಗಳನ್ನು ಲಗ್ಗೇಜ್ ರೂಂನಲ್ಲಿ ಇಟ್ಟು ರೌಂಡ್ ಗೆ ಹೊರಟಾಯಿತು.
ಮತ್ತದೆ ಗಿಜಿ ಗಿಜಿ ಜನ , ಸೊಂಯ್ ಸೊಂಯ್ ಹಾಡು ಹೋಗುವ ವಾಹನ ಅವುಗಳನ್ನು ತಪ್ಪಿಸಿಕೊಳ್ಳುವ ಆಟ ಆಡುತ್ತಾ ಮೈನ್ ರೋಡ್ ಗೆ ಬಂದಾಯಿತು. ಏನಾದರೂ ತಿನ್ನೋಣವಾ? ಆಕೆ ಕೇಳಿದಳು. ಇಲ್ಲ ಎನ್ನಲಿಲ್ಲ. " ಅಯ್ಯೋ ಖಂಜೂಸು ಬುದ್ಧಿ ನೀನು ಇನ್ನೂ ಬಿಟ್ಟಿಲ್ಲವಾ? ನಾನೆ ಕೊಡಿಸುತ್ತೇನೆ ಬಾ " ಎಂದು ನನ್ನ ಉತ್ತರಕ್ಕೂ ಕಾಯದೆ ಹತ್ತಿರದ ಹೋಟೆಲ್ಲಿಗೆ ಎಳೆದುಕೊಂಡೇ ಹೋದಳು. ವಿಸ್ಕಿ ಕುಡಿಯದೇ ಇದ್ದಿದ್ದರೆ ಕೈ ಹಿಡಿದಾಗ ಅಪ್ಯಾಯಮಾನವಾಗುತ್ತಿತ್ತು , ಆದರೆ ಈಗ ಹಿಂಸೆಯಾಗುತ್ತಿತ್ತು.
ಟೇಬಲ್ ಮುಂದೆ ಕುಳಿತಾಗ ನನಗೆ ಅರಿವಾಗಿದ್ದು ಇದು ಎಲ್ಲರೂ ಹೋಗುವ ಹೋಟೆಲ್ ಅಲ್ಲ " ಏಯ್ ಇದು ನಾನ್ ವೆಜ್ ಹೋಟೆಲ್ ಕಣೇ" ಮೊದಲಬಾರಿಗೆ ಧೈರ್ಯವಾಗಿ ಹೇಳಿದೆ." ಸರಿ ಅದಕ್ಕೇನು ವಿಶೇಷ?" ಹುಬ್ಬು ಹಾರಿಸದಳು. ಅಷ್ಟರಲ್ಲಿ ವೈಟರ್ ಬಂದ.
"ನೀನು ಹಾಟೋ ಕೊಲ್ಡೋ?" ಆಕೆ ಕೇಳಿದಳು.
"..........." ನಾನು ಕೋಲ್ಡಾದೆ.
(ಚುಟುಕೊಂದರಿಂದ ಪ್ರೇರಿತ ಕತೆ)

3 comments:

Harisha - ಹರೀಶ said...

ಹಹಹಾ.. ಚೆನ್ನಾಗಿದೆ.. ಯಾವ ಚುಟುಕಿನಿಂದ ಪ್ರೇರೇಪಿತವಾಗಿದ್ದು ಎಂದು ತಿಳಿಯುವ ಕುತೂಹಲ :)

Unknown said...

ಹರೀಶ್ ಆ ಚುಟುಕು ಪೂರ್ತಿ ಸರಿಯಾಗಿ ನೆನಪಿಲ್ಲ. ಹೀಗೇನೋ ಇತ್ತು
ಆಕೆ ಸಿಕ್ಕಾಗ
ಜರ್ರನೆ ಇಳಿಯಿತು ಕುಡಿದ ಬೀರು
ಕಾರಣ ಅವಳಪ್ಪ ಧರ್ಮಭೀರು
ಆಕೆ ನಕ್ಕಾಗ
ಅಯ್ಯೋ ಸಿಕಿಬಿದ್ದೆನಲ್ಲ
ನಾನಾಗಲಾರೆ ಅವಳ ನಲ್ಲ
ಆಕೆ ಹೊಕ್ಕಾಗ
ಹಿಂಬಾಲಿಸಿದೆನಲ್ಲ
ಬಾರು ಸಿಕ್ಕಿತಲ್ಲ.
-ತ್ಯಾಂಕ್ಸ್

Harisha - ಹರೀಶ said...

ಹ್ಮ್.. ನಿಜಕ್ಕೂ ಸ್ಫೂರ್ತಿದಾಯಕ :-)

ಧನ್ಯವಾದಗಳು :-)