Wednesday, January 21, 2009

ಬೀ ಮತ್ತು ಈಟರ್


ನಮ್ಮಲ್ಲಿ ಈಗ ಪತರಗುಟ್ಟುವ ಛಳಿಗಾಲ.ಬಾಯಿಂದ ಬೆಳಗಿನ ಹೊತ್ತು ತನ್ನಷ್ಟಕ್ಕೆ ಪುಸ್ ಪುಸ್ ಅಂತ ಹೊಗೆ ಬರುತ್ತಿರುತ್ತದೆ. ಮಕ್ಕಳಿಗೆ ಅದೊಂದು ಆಟ. ಗುಟ್ಟಾಗಿ ಅದನ್ನು ಸಿಗರೇಟು ಸೇದುವ ಆಟವನ್ನಾಗಿಸಿಕೊಳ್ಳುತ್ತಾರೆ ಅವರು. ಇರಲಿಬಿಡಿ ಹಾನಿಯೇನಿಲ್ಲ ಅದು ದೇಹದ ಒಳಗಿಂದ ಬರುವ ಆವಿ ನೋಡಲಷ್ಟೇ ಖುಷಿ. ನಾವು ನೀವೆಲ್ಲ ಮಕ್ಕಳಾಗಿದ್ದಾಗ ಹಲವರು ಸಿಗರೇಟು ಸೇದುವ ಹಾಗು ಪುಸ್ ಅಂತ ಹೊಗೆಬಿಡುವ ಗತ್ತಿಗೆ ಮಾರುಹೋಗಿ ಹೀಗೆ ಮಾಡಿದ್ದಿದೆ. ನಂತರ ತುಸು ಮುಂದೆ ಹೋಗಿ ಚಳಿಗಾಲ ಮುಗಿದು ಹಾಗೆ ಬಾಯಿಂದ ಹೊಗೆಬರದಾದಾಗ ತಾವೆರೆಗಿಡದ ದಂಟಿಗೆ ಬೆಂಕಿ ಹಚ್ಚಿ ಪುಸುಪುಸು ಹೊಗೆ ಬಿಟ್ಟಿದ್ದಿದೆ ಆನಂತರ ಇನ್ನೂ ಕೆಲ ಧೈರ್ಯಸ್ಥರು...! ಅಪ್ಪನ ಜೇಬಿನಿಂದ ಒಂದೆರಡು ಬೀಡಿ ಎಗರಿಸಿ ಕದ್ದು ಸೇದಿದಿದ್ದರೂ ಇರಬಹುದು ಅವೆಲ್ಲಾ ಕಳೆದು ಈಗ ಹಾಗೆ ಮಾಡುವವರಿಗೆ ಗದರಿಸುವ ಹಂತಕ್ಕೆ ನಾವು ಬಂದು ನಿಂತಾಗಿದೆ ಹಾಗಾಗಿ ಅವೆಲ್ಲಾ ಕೆಲವೊಮ್ಮೆ ಕಂಡೂಕಾಣದಂತೆಯೂ ಮತ್ತೊಮ್ಮೆ ಕಂಡತಕ್ಷಣ ನಾವೇ ಮರೆಯಾಗುವಂತೆಯೂ ಇರಬೇಕಾಗುತ್ತದೆ ಇಲ್ಲದಿದ್ದಲ್ಲಿ ಮರ್ಯಾದೆಗೆ ಕುತ್ತು. ಇರಲಿ ಅವೆಲ್ಲಾ ಅಂದಿನ ಕಥೆಯಾಯಿತು ಈಗ ನಾನು ಅಲವತ್ತುಕೊಳ್ಳುವ ಕತೆಗೆ ಬರೋಣ.
ಈ ಚಳಿಗಾಲವೆಂಬ ಚಳಿಗಾಲದ ಬೆಳಗಿನಲ್ಲಿ ಹಕ್ಕಿಗಳ ಚಿಂವ್ ಚಿಂವ್ ಎಂಬ ಕಲರವ ಕೇಳಿದ ತಕ್ಷಣ ನನ್ನ ದುಗುಡ ಹೆಚ್ಚಾಗುತ್ತದೆ.ಹಾಗೆ ಆಗಲು ಮುಖ್ಯಕಾರಣ ಕವಿಗಳ ದೃಷ್ಟಿಯಲ್ಲಿ ಆ ಮಧುರವಾದ ಕಲರವದ ನಡುವೆ ನನ್ನ ಜೇನುಹುಳುಗಳನ್ನು ತಿನ್ನುವ ಬೀ ಈಟರ್ ಎಂಬ ಹಕ್ಕಿಯ ಕೂಗೂ ಇರುತ್ತದೆ. ಬೀ ಈಟರ್ ಎಂಬ ನನ್ನ ಹಾಗೂ ನಾನು ಸಾಕಿದ ಜೇನು ಹುಳುಗಳ ಪಾಲಿಗೆ ಯಮಕಿಂಕರರ ಅರ್ತನಾದದಂತೆ. ಜೇನುಸಾಕದವರು ನೋಡಿದರೆ ಮೆಚ್ಚಲೇಬೇಕಾದ ಬಣ್ಣ ಆಕಾರ ದಲ್ಲಿರುವ ಬೀ ಈಟರ್ ಗಳು ನಾನುಜೇನು ಸಾಕದಿದ್ದರೆ ಅಥವಾ ಅವು ಜೇನು ಹುಳುಗಳನ್ನು ಅಟ್ಟಾಡಿಸಿಕೊಂಡು ತಿನ್ನದಿದ್ದರೆ ನೋಡಲು ಸುಂದರ ಹಕ್ಕಿಗಳು. ಹಸಿರು ಬಣ್ಣದ ರಾಮಗಿಣಿಯನ್ನು ಹೋಲುವಒಂದು ಜಾತಿಯ ಬೀ ಈಟರ್ ನೋಡುವುದರ ಜತೆಗೆ ಅದರಕೂಗು ಕೇಳಲೂ ಚಂದ. ಉದ್ದನೆಯ ಬಾಲದ ಕಪ್ಪುಬಣ್ಣದ ಇನ್ನೊಂದು ಬೀ ಈಟರ್ ಹಕ್ಕಿ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಪುಟ್ಟ ಆಕಾರದ ಮಗದೊಂದು ಬೀ ಈಟರ್ ನ ಹಾರಾಟ ಎಂತಹವರನ್ನೂ ಮನಸೆಳೆಯುತ್ತದೆ.
ಆದರೆ ಮಾಡುವುದೇನು ಪ್ರಕೃತಿ ಆಹಾರ ಸರಪಣಿಯಡಿಯಲ್ಲಿ ನಾನು ಸಾಕಿದ ಜೇನು ಹುಳುಗಳನ್ನು ಆ ಹಕ್ಕಿಗಳಿಗೆ ಜೋಡಿಸಿಬಿಟ್ಟಿದ್ದಾನೆ. ಅವಾದರೋ ಒಂದೆರಡು ಹುಳುಗಳನ್ನು ತಿಂದಿದ್ದರೆ ಬಿಡಬಹುದಿತ್ತು ಆದರೆ ಅವುಸೀದಾ ಪೆಟ್ಟಿಗೆಯ ಬಳಿ ಕುಳಿತುಕೊಂಡು ಲೊಚ ಲೊಚ ಎಂದು ನೂರಾರು ಜೇನುಹುಳುಗಳನ್ನು ಲಬಕ್ಕನೆ ಸ್ವಾಹಾ ಮಾಡಿ ಬಿಡುತ್ತವೆ.ಹಾಗಾಗಿ ಈಗ ನನಗೆ ಬೆಳಗಿನ ಅತಿದೊಡ್ಡ ಕೆಲಸವೆಂದರೆ ಕಲ್ಲು ಕವಣೆಯೊಡನೆ ಜೇನು ಪೆಟ್ಟಿಗೆಯ ಬಳಿ ಹಕ್ಕಿಗಳು ಬರದಂತೆ ಕಾಯುವುದು. ಆವಾಗ ಅವುಗಳ ಕಲರವ ಕರ್ಕಶವಾಗಿಬಿಡುತ್ತವೆ. ಅವುಗಳ ಆಕಾರ ವಿಕಾರವಾಗಿ ಕಾಣುತ್ತವೆ. ಪಾಪ ಅವುಗಳು ಏನು ಮಾಡ್ಯಾವು ಅವುಗಳ ಮನೆಯಲ್ಲಿ ಬಾಯಿ ಕಳೆದು ಮರಿಗಳು ಕೂತಿವೆ ಹಸಿವೆಯಾಗಿ ತೀರಿಸಬೇಕಲ್ಲ. ಅದಕ್ಕಾಗಿ ಅವು ನನ್ನನ್ನು ನಿತ್ಯ ಶಪಿಸುತ್ತಿರಬಹುದು. ಅವರ ಪ್ರಪಂಚದಲ್ಲಿ ಬ್ಲಾಗ್ ಇದ್ದಿದ್ದರೆ ಬಹುಶಃ ಈ ಸಮಯದಲ್ಲಿ "ರಕ್ಕೆ ಬಡಿಯಲಾಗದಷ್ಟು ಚಳಿ. ಇಬ್ಬನಿ ಯ ಹನಿ ಹನಿ. ಎಲ್ಲೆಲ್ಲೂ ಮನುಷ್ಯರ ಓಡಾಟ ಆದರೆ ಕೆಲವೇ ಕೆಲವರು ಮಾತ್ರ ಕೆಟ್ಟ ಮನುಷ್ಯರು ದರಿದ್ರದವು ಕಲ್ಲು ಹೊಡೆಯುತ್ತವೆ" ಎಂದೆಲ್ಲಾ ಬರೆಯುತ್ತಿದ್ದವೇನೋ.
ಇರಲಿ ಇದು ನನ್ನ ಪ್ರಪಂಚ ನಾನು ಜೇನುಹುಳುಗಳ ಶ್ರಮವಾದ ಜೇನುತುಪ್ಪ ಕದಿಯಲುಈ ಹರಸಾಹಸ ಪಡುತ್ತಿದ್ದೇನೆ ಅವು ಕೂಡ ಹಾಗೆ. ಒಟ್ಟಿನಲ್ಲಿ ಬಲಸ್ಯ ಪೃಥ್ವಿ.

2 comments:

Ashok Uchangi said...

ಬೀ ಈಟರ್ ಕಾಡು ನೊಣವನ್ನೋ,ಜೇನನ್ನೋ ತಿನ್ನುತ್ತದೆ ಎಂದುಕೊಂಡಿದ್ದೆ.ಹೀಗೆ ನೂರಾರು ಸಾಕುಜೇನುಗಳನ್ನು ಸ್ವಾಹಾ ಮಾಡುತ್ತದೆ ಎಂದಾಗ ಆಶ್ಚರ್ಯವಾಯ್ತು.ಬೀ ಈಟರ್ ಗಳನ್ನು ನಿಮ್ಮ ದೃಷ್ಟಿಯಲ್ಲಿ ಅವಲೋಕಿಸಿ ಸಂಕಟ ಸಂತಸಗಳನ್ನು ಚೆಂದ ಬರೆದಿದ್ದೀರಿ.
ಧನ್ಯವಾದಗಳು
ಅಶೊಕ ಉಚ್ಚಂಗಿ
http://mysoremallige01.blogspot.com/

Pejathaya said...

ಶರ್ಮರೇ!

ಆ ಹಕ್ಕಿಗಳು ಬೀ ಈಟರ್ಸ್, ತಾವು ಹನಿ ಈಟರ್!

ಹಾಗಂತ ನಾವು ಉತ್ತಮರೇ?

ನಾವೆಲ್ಲರೂ ಹಸುವಿನ ಕರುವಿಗೆ ನಿಸರ್ಗ ಇತ್ತ ಹಾಲನ್ನು ಕದ್ದುಣ್ಣುವವರೇ!

ನಿಸರ್ಗದ ಸರಪಳಿಯ ಕೊಂಡಿಯಲ್ಲಿ ಬೀ ಈಟರ್ ಪಕ್ಷಿಗೆ ಜೇನು ನೊಣವೇ ಆಹಾರ.

ನಮಗೆ ಜೇನು ಮತ್ತು ಹಾಲುಗಳು ಈ ರೀತಿ ನಿಸರ್ಗ ಸರಪಳಿಯು ನಿರ್ಮಿಸಿದ ಅಗತ್ಯ ಆಹಾರವೇ?

ಈ ಪ್ರಶ್ನ ತಮ್ಮ ಬ್ಲಾಗ್ ಓದಿದಾಗ ನನ್ನನ್ನು ಕಾಡಿತು.

ಉತ್ತಮ ಬ್ಲಾಗ್.

ವಂದನೆ
ಪೆಜತ್ತಾಯ ಎಸ್. ಎಮ್.