Monday, March 2, 2009

ಪೇಪರ್ ಪಾರಾಯಣ ಅಲ್ಲ ಪುರಾಣ

ಬೆಳಿಗ್ಗೆ ಮುಂಚೆ ಸೊರ್ ಸೊರ್ ಶಬ್ದ ಮಾಡುತ್ತಾ ಕಾಫಿಯ ಜತೆಯಲ್ಲಿ ದಿನಪತ್ರಿಕೆಗಳನ್ನು ಓದುವ ಮಜ ಅನುಭವಿಸಿದವರಿಗೆ ಗೊತ್ತು. ಅದೇರೀತಿ ತದೇಕಚಿತ್ತದಿಂದ ಪೇಪರ್ ಓದುತ್ತಿರುವವರನ್ನು,ಅವರು ಮಾಡುವ ಹಾವಭಾವಗಳಾನ್ನು ನೋಡುವುದೂ ಇನ್ನೊಂದು ಮಜ. ಒಂದೊಂದು ಗುಟುಕು ಕಾಫಿ ಒಳ ಸೇರುವಾಗಲೂ ಓದುವವರ ಮುಖದಲ್ಲಿನ ಭಾವನೆಗಳು ಬದಲಾಗುತ್ತಿರುತ್ತವೆ.ಭೀಕರ ಅಪಘಾತದ ಸುದ್ದಿ ಓದುವಾಗ ಅಯ್ಯೋ... ಛೆ..ಛೆ..ಛೇ ಎಂದು ತಮ್ಮಷ್ಟಕ್ಕೆ ಲೊಚಗುಟ್ಟಿ ಅಕಸ್ಮಾತ್ ಮತ್ಯಾರಾದರೂ ಪಕ್ಕದಲ್ಲಿದ್ದರೆ ಅವರ ಮಂಡೆಗೂ ತಮ್ಮ ಕಾಲಕೆಟ್ಟುಹೋಯಿತು ಎಂಬ ಅಭಿಪ್ರಾಯವನ್ನು ತಳ್ಳಿ, ಕೊನೆಯ ಪುಟದಲ್ಲಿ ಸೋತ ಕ್ರಿಕೇಟಿಗರ ಬಗ್ಗೆ ನಮ್ಮವರ ಹಣೆ ಬರಹವೇ ಇಷ್ಟು ಎಂದು ತಲೆಕೆಡಿಸಿಕೊಂಡು, ಅಕಸ್ಮಾತ್ ಗೆದ್ದ ಸುದ್ದಿಯಿದ್ದರೆ ನಾನು ಮೊದಲೇ ಹೇಳಿದ್ದೆ ಎಂದು ಇವರು ಹೇಳಿದ್ದಕ್ಕೆ ಅವರು ಗೆದ್ದರೇನೋ ಎನ್ನುವ ಮುಖಭಾವ ಪ್ರಕಟಪಡಿಸಿ, ನಂತರ ಮಧ್ಯ ಪುಟಕ್ಕೆ ಬಂದಾಗ ಇದಪ್ಪಾ ಸಂಪಾದಕೀಯ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿ, ವ್ಯಂಗ್ಯಚಿತ್ರ ನೋಡಿ ತಮ್ಮಷ್ಟಕ್ಕೆ ಒಂದು ಮುಗುಳ್ನಕ್ಕು, ಹೀಗೆ ಚಿತ್ರವಿಚಿತ್ರವಾಗಿ ಅಭಿನಯಿಸುತ್ತಾ ಮಡಚಿ ಬದಿಗಿಟ್ಟು "ಇತ್ತೀಚೆಗೆ ಪೇಪರ್ರಿನಲ್ಲಿ ಏನೂ ಇರೋದೇ ಇಲ್ಲ,ಬರೀ ಜಾಹಿರಾತು" ಎಂದೋ ಅಥವಾ "ಪೇಪರ್ ಓದುತ್ತಾ ಕುಳಿತರೆ ನಮ್ಮ ಕೆಲಸ ಮಾಡೋರ್‍ಯಾರೂ ಇಲ್ಲ" ಎಂದು ನಿತ್ಯದ ಮಾತು ಹೇಳಿ ಏಳುವಷ್ಟರಲ್ಲಿ ಕೆಲವರಿಗೆ ಕಾಫಿ ಕುಡಿದದ್ದೇ ನೆನಪಿರುವುದಿಲ್ಲ. ಇನ್ನು ಕೆಲವರ ಕಾಫಿ ಆರಿ ತಣ್ಣಗಾಗಿಬಿಡುತ್ತದೆ.
ದಿನಪತ್ರಿಕೆಯ ಓದುವ ವಿಚಾರದಲ್ಲಿ ಒಬ್ಬೊಬ್ಬರದು ಒಂದೊಂದು ಸಮಯ, ಕಾಫಿ ಜತೆ ಓದುವ ಅಭ್ಯಾಸ ಕೆಲವರದಾದರೆ, ದೇಹಬಾಧೆ ತೀರಿಸಿಕೊಳ್ಳುವ ಜಾಗಕ್ಕೆ ಪೇಪರ್ ಒಯ್ದು ಓದುತ್ತಾ ಕೆಲಸ ಮುಗಿಸುವ ಹಲವರೂ ಇದ್ದಾರೆ. ಆಫೀಸಿಗೆ ಹೋಗುವ ದಾರಿಯಲ್ಲಿ ಮುಖಪುಟ ಓದುತ್ತಾ ಸಾಗುವವರಿಗೇನು ಕೊರತೆಯಿಲ್ಲ. ಬಸ್ಸಿನ ಮೇಲೆ ಕುಳಿತು ಪ್ರಯಾಣದ ತ್ರಾಸು ಕಳೆಯಲು ಪೇಪರ್ ಓದುವ ಸಮಯವನ್ನು ಕೆಲವರು ಮೀಸಲಿಟ್ಟರೆ, ಮತ್ತೆಕೆಲವರು ಪಕ್ಕದವರು ಪೇಪರ್ ಮಡಚುವುದನ್ನೇ ಕಾಯುತ್ತಾ ಸ್ವಲ್ಪ ಹೆಚ್ಚು ಕಮ್ಮಿ ಕಸಿದುಕೊಳ್ಳಲು ತಯಾರಾಗಿರುತ್ತಾರೆ. ಇನ್ನು ಕೆಲವರು ಆಫೀಸಿನಲ್ಲಿ ಆರಂಭದ ಒಂದೂವರೆ ತಾಸು ಪೇಪರ್ ಓದುವ ಅಭ್ಯಾಸಕ್ಕಾಗಿ ಮೀಸಲಿಡುತ್ತಾರೆ.ಹಣಕೊಟ್ಟು ಓದುವವರು,ಬಿಟ್ಟಿ ಓದುವವರು,ಗ್ರಂಥಾಲಯದ ಮೊರೆಹೋಗುವವರು,ಅಂಗಡಿಯಲ್ಲಿ ಮಾರಾಟಕ್ಕಿಟ್ಟ ಪತ್ರಿಕೆಯನ್ನು ಕೊಳ್ಳುವವರಂತೆ ನಟಿಸಿ ಹಿಂದೆಮುಂದೆ ತಿರುವಿ ಕಂಡಷ್ಟ್ಟು ಓದಿ ನಂತರ "ಬಸ್ಸು ಬಂತು" ಎಂದು ಯಾರೂ ಕೇಳದಿದ್ದರೂ ತಮ್ಮಷ್ಟಕ್ಕೆ ಗೊಣಗಿಕೊಂಡು ಹೋಗುವವರಿಗೇನೂ ಬರವಿಲ್ಲ. ಅವರು ಪತ್ರಿಕೆ ಖರೀದಿಸದೇ ಸಿಕ್ಕಷ್ಟೇ ಓದಿ ಅಷ್ಟಕ್ಕೆ ಸಮಾಧಾನ ಹೊಂದುವವರು, ಇಂಥವರ ಹೊರತಾಗಿ ಅಂಗಡಿಯಲ್ಲಿಯೇ ಎಲ್ಲಾ ಪತ್ರಿಕೆಗಳನ್ನು ಸಂಪೂರ್ಣ ಓದುವವರು ಹಾಗೂ ಇತ್ತೀಚೆಗೆ ಹೊಸತಾಗಿ ಸೇರ್ಪಡೆಯಾದ ಇಂಟರ್‌ನೆಟ್ ಓದುಗರು ಹೀಗೆ ಓದುಗರ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.
ಪತ್ರಿಕೆಯನ್ನು ಓದುವ ಪರಿ ಇದಾದರೆ,ಪತ್ರಿಕೆಯಲ್ಲಿನ ವಿಷಯಗಳನ್ನು ಓದುವ ವಿಧಾನ ಇನ್ನೊಂದಿದೆ. ಬಹಳಷ್ಟು ಜನ ಮುಖಪುಟ ಮೊದಲು,ನಂತರ ಹಿಂದಿನ ಪುಟ ಇವಿಷ್ಟೆ ಸಾಕು ಅವರಿಗೆ. ಇನ್ನು ಕೆಲವರಿಗೆ ಕೊನೆಯ ಪುಟ ಮಾತ್ರ ಸಾಕು.ಮತ್ತಿಷ್ಟು ಜನರಿಗೆ ಸ್ಥಳೀಯ ಸುದ್ದಿಯಿರುವ ೨ ಹಾಗು ೩ನೇ ಪುಟವೂ ಬೇಕು. ಹಾಗೂ ಅಪರೂಕ್ಕೊಬ್ಬರಿಗೆ ಇಡೀ ಪತ್ರಿಕೆಯನ್ನೂ,ಪ್ರಿಂಟೆಡ್ ಎಂಡ ಪಬ್ಲಿಷರ್ಸ್ ತನಕವೂ ನಿತ್ಯ ಓದಲೇಬೇಕು. ಈ ರೀತಿ ಪೇಪರ್ ಓದುವ ಹುಚ್ಚು ಕೆಲವೊಮ್ಮೆ ಸ್ವಾರಸ್ಯಕರ ಪ್ರಸಂಗ ನಿರ್ಮಾಣಗೊಂಡು ಚರ್ಚೆಗೆ ಗ್ರಾಸವಾಗುತ್ತದೆ. ಅಂಥಹವರೊಬ್ಬರು ನಮ್ಮೂರಿನಲ್ಲಿದ್ದರು.
ಯಕ್ಷಗಾನ ಅವರ ಆಸಕ್ತಿದಾಯಕ ಕ್ಷೇತ್ರ,ಅಪರೂಪಕ್ಕೊಮ್ಮೆ ಜನರ ಒತ್ತಾಯದ ಮೇರೆಗೆ ಶ್ರಾದ್ಧದೂಟಕ್ಕೆ ಹೋಗುತ್ತಿದ್ದುದು ಉಂಟು. ಒಮ್ಮೆ ಆಪ್ತರೊಬ್ಬರು ಅವರನ್ನು ಶ್ರಾದ್ಧದೂಟದ ಭಟ್ಟರಾಗಿ ಆಹ್ವಾನಿಸಿದ್ದರು. ಶ್ರಾದ್ಧದೂಟದ ಪುರೋಹಿತರಾಗಿ ಹೋಗುವ ದಿನ ಪೇಪರ್ ಭಟ್ಟರ ಕೈಗೆ ಸಿಗುವಷ್ಟರಲ್ಲಿ ಮಧ್ಯಾಹ್ನ ೧ ಗಂಟೆಯಾಗಿತ್ತು. ಪೇಪರ್ ಸಿಗದೆ ಹಪಹಪಿಸುತ್ತಿದ್ದ ಭಟ್ಟರು ಕೈಗೆ ಪೇಪರ್ ಸಿಕ್ಕೊಡನೆ ಅದರಲ್ಲಿ ಮಗ್ನರಾಗಿ ಇಹವನ್ನೇ ಮರೆತರು. ಅತ್ತ ತಿಥಿ ಮನೆಯಲ್ಲಿ ಭಟ್ಟರ ಬರುವಿಕೆಗಾಗಿ ಎರಡುವರೆವರೆಗೂ ಕಾದು ನಂತರ ಇವರನ್ನು ಹುಡುಕುತ್ತಾಬಂದರು. ಭಟ್ಟರು ನಿರುಂಬಳವಾಗಿ ದೇವಸ್ಥಾನದ ಕಟ್ಟೆಯ ಮೇಲೆ ಪೇಪರಿನಲ್ಲಿ ಮಗ್ನರಾಗಿದ್ದು ಕಂಡು ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಭಟ್ಟರಿಗೆ ವಾಸ್ತವದ ಅರಿವಾಗಿದ್ದು ಆವಾಗಲೆ. ಅಷ್ಟರಮೇಲೆ ಸ್ನಾನಮಾಡಿ ಶ್ರಾಧ್ದ ಮಾಡಿಸಿ ಊಟ ಮಾಡುವಷ್ಟರಲ್ಲಿ ಸಂಜೆ ೬ ಗಂಟೆಯಾಗಿತ್ತು. ಹೀಗೆ ದಿನಪತ್ರಿಕೆ ಕೈಗೆ ಸಿಕ್ಕಾಗ ಪ್ರಪಂಚ ಮರೆಯುವವರೂ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?.
ದಿನಪತ್ರಿಕೆಗಳನ್ನು ಕೇವಲ ಸುದ್ದಿಗಾಗಿಯೇ ಖರೀದಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು.ನಾನಾ ಉದ್ದೇಶಗಳಿಗೆ ಪತ್ರಿಕೆ ಮೊರೆಹೋಗುವವರಿದ್ದಾರೆ. ಅದರಲ್ಲಿ ಬರುವ ಕಾರ್ಟೂನ್‌ನಲ್ಲಿ ಸಂಖ್ಯೆಯನ್ನು ಹುಡುಕಿ ತೆಗೆದು ಬಾಗಿಸಿ ಗುಣಿಸಿ ನಂತರ ಒಂದು ಒಮ್ಮತದ ತೀರ್ಮಾನಕ್ಕೆ ಬಂದು ಮಟ್ಕಾ ಅಂಗಡಿಗೆ ಓಡುವವರಿಂದ ಹಿಡಿದು ನಿತ್ಯ ಭವಿಷ್ಯದಲ್ಲಿ ಇರುವ ಧನಲಾಭವನ್ನು ನಂಬಿ ಲಾಟರಿ ಕೊಳ್ಳುವವರ ತನಕ ವಿವಿದೊದ್ಧೇಶಗಳಿಗೆ ಪತ್ರಿಕೆ ಬಳಕೆಯಾಗುತ್ತದೆ. ಲಾಟರಿ ಫಲಿತಾಂಶಕ್ಕಾಗಿಯೇ ಕೆಲಪತ್ರಿಕೆಗಳನ್ನು ತರಿಸುವ ಭೂಪರಿಗೇನು ಕೊರತೆ ಇಲ್ಲ.
ನನ್ನ ಸ್ನೇಹಿತರ ಪರಿಚಯಸ್ತರೊಬ್ಬರು ಇದೆಕ್ಕೆಲ್ಲಾ ಹೊರತಾದ ಒಂದು ಉದ್ದೇಶಕ್ಕೆ ಪತ್ರಿಕೆ ತರಿಸುತ್ತಿದ್ದರಂತೆ.ಅದನ್ನು ಕೇಳಿದರೆ ಅಚ್ಚರಿಯಾಗುತ್ತದೆ.ಬೆಳಿಗ್ಗೆ ದಿನಪತ್ರಿಕೆ ಕೈಗೆ ಸಿಕ್ಕಾಕ್ಷಣ ಅದರಲ್ಲಿ ಕಪ್ಪು ಇಂಕು ದಟ್ಟವಾಗಿದ್ದ ಭಾಗವನ್ನು ಚೌಕಾಕಾರಕ್ಕೆ ಕತ್ತರಿಸಿ ಅದರಲ್ಲಿ ತಂಬಾಕಿನಪುಡಿ ತುಂಬಿ ಸೇದುವುದು ಅವರ ರೂಢಿ. ಅವರ ಆ ಅಭ್ಯಾಸ(!)ಕ್ಕೆ ಆಗಷ್ಟೇ ಮುದ್ರಣಗೊಂಡ ಹೊಸ ಪತ್ರಿಕೆಯೇ ಆಗಬೇಕಾಗಿದ್ದರಿಂದ ಅದಷ್ಟಕ್ಕಾಗಿಯೇ ಅವರು ಪತ್ರಿಕೆ ತರಿಸುತ್ತಿದ್ದರಂತೆ, ಇದು ನಂಬಲು ಅಸಾಧ್ಯವಾದರೂ ಸತ್ಯವಂತೆ. ಒಮ್ಮೆಲೆ ಗಟಗಟನೆ ಬಾಟಲಿಗಟ್ಟಲೆ ಕೆಮ್ಮಿನ ಔಷಧಿಯನ್ನು ಕುಡಿದು ತೇಲಾಡುವ ಜನರಿರುವ ನಮ್ಮ ದೇಶದಲ್ಲಿ ಇದೇನು ಅಂತಾ ಹೊಸತಲ್ಲ ಬಿಡಿ.
ದಿನಪತ್ರಿಕೆಗಳು ಪ್ರತಿಷ್ಠೆಯ ಸಂಕೇತವಾದ ಕಾಲವೊಂದಿತ್ತು. ಪತ್ರಿಕೆ ತರಿಸುತ್ತಾರೆಂದರೆ ಅವರು ಮುಂದುವರೆದವರು ಎಂಬ ಭಾವನೆ ಇತ್ತು.ಈಗ ನಮ್ಮ ಹಳ್ಳಿಗಳಲ್ಲಿ ಎಲ್ಲರ ಮನೆಗೂ ಪತ್ರಿಕೆಗಳು ಬರುತ್ತವೆ. ಹಿಂದೆ ಹಾಗಿರಲಿಲ್ಲ. ಅದರಲ್ಲಿನ ವಿಷಯಗಳ ಬಗ್ಗೆ ನಾಲ್ಕಾರು ಜನ ಸೇರಿದಲ್ಲಿ ಘನಗಂಭೀರವಾದ ಮುಖಭಾವದಮೂಲಕ ವಿಷದಪಡಿಸುವುದು ಪ್ರತಿಷ್ಠೆಯ ಸಂಕೇತವಾಗಿತ್ತು.ಅದು ಕೆಲವೊಮ್ಮೆ ಅಪಹಾಸ್ಯಕ್ಕೀಡಾಗುವ ಸಂಭವವೂ ಇರುತ್ತಿತ್ತು. ಒಮ್ಮೆ ಹಾಗೆಯೇ ಆಯಿತು.
ನಮ್ಮ ದೊಡ್ಡಮ್ಮ ಅನಕ್ಷರಸ್ತೆ. ದೊಡ್ಡಪ್ಪ ಅವರಿಗೆ ಅಕ್ಷರ ಕಲಿಸಲು ಹಲವಾರು ತರಹದ ಪ್ರಯತ್ನ ಮಾಡಿ ಕೈ ಸೋತಿದ್ದರು. ಅಂತೂ ಇಂತು ಕೆಲವಾರು ಅಕ್ಷರಗಳನ್ನು ಅವರು ಗುರುತಿಸುತ್ತಿದ್ದರು. ಅಕ್ಷರಗಳನ್ನು ಬಿಡಿ ಬಿಡಿಯಾಗಿ ಓದುತ್ತಿದ್ದ ಆವರು, ಕೂಡಿಸಿ ಹೇಳುವಾಗ ಅನರ್ಥಮಾಡಿಬಿಡುತ್ತಿದ್ದರು.ಕೆಂಪು ಎಂಬ ಶಬ್ಧವನ್ನು ಕೆ ಸೊನ್ನೆ ಪು ಎಂದು ಸರಿಯಾಗಿ ಓದಿ ನಂತರ ಕಾಗೆ ಎಂದುಬಿಡುತ್ತಿದ್ದರು.ನಮಗೆ ಬಾಳೆಹಣ್ಣು ಸುಲಿದಷ್ಟು ಸುಲಭವಾಗಿ ತೋರುವ ಶಬ್ಧಗಳು ಅವರಿಗೆ ಕಬ್ಬಿಣದ ಕಡಲೆ. ಆಕೆಗೂ ತನಗೆ ಓದಲು ಬರುತ್ತದೆ ಎಂದು ಜನರೆದುರಿಗೆ ತೋರಿಸಿಕೊಳ್ಳಬೇಕೆಂಬ ಚಪಲ. ನಾಲ್ಕಾರು ಜನ ಸೇರಿದಲ್ಲಿ ತಾನು ತಿಳಿದವಳು ಎಂದಾಗಬೇಕು ಎಂಬ ಆಸೆ. ಆಸೆ ತಪ್ಪಲ್ಲ ಆದರೆ ಅದು ಒಮ್ಮೊಮ್ಮೆ ಎಂಥಾ ಯಡವಟ್ಟಾಗುತ್ತದೆ ಎನ್ನುವುದಕ್ಕೆ ಅವರ ಈ ಪ್ರಸಂಗವೇ ಉದಾಹರಣೆ.
ಅವರ ಎರಡನೆ ಮಗನ ಹೆಣ್ಣು ನಿಶ್ಚಯದ ಸಮಾರಂಭ. ನಿಶ್ಚಿತಾರ್ಥದ ಮಾತುಕತೆ ಮುಗಿದಾದಮೇಲೆ ಜಗುಲಿಯಲ್ಲಿ ಎಲ್ಲರೂ ಹರಟೆ ಹೊಡೆಯುತ್ತಾ ಕುಳಿತಿದ್ದರು. ಅಲ್ಲಿ ಅವತ್ತಿನ ದಿನ ಪತ್ರಿಕೆ ಇತ್ತು, ನಮ್ಮ ದೊಡ್ಡಮ್ಮನಿಗೆ ಬರುವ ಸೊಸೆಯೆದುರು ತಾನು ಬುದ್ದಿವಂತೆ ಅಂತ ತೋರಿಸಿಕೊಳ್ಳಬೇಕು ಅಂತ ಅನ್ನಿಸಿರಬೇಕು.ಅದನ್ನು ಕೈಗೆ ತೆಗೆದುಕೊಂಡು ಸ್ಟೈಲಾಗಿ ಹಿಡಿದುಕೊಂಡು "ಪ್ರಜಾವಾಣಿ" ಎಂದು ದೊಡ್ಡದಾಗಿ ಓದಿದರು. ಅದನ್ನು ಕೇಳಿದ ಕೆಲವರು ಮುಸಿಮುಸಿ ನಗತೊಡಗಿದರು. ಕಾರಣ ಅವರ ಉಪಾಯ ಸ್ವಲ್ಪ ಎಡವಟ್ಟಾಗಿತ್ತು,ದೊಡ್ಡಮ್ಮನ ಮನೆಗೆ ಬರುತ್ತಿದ್ದ ದಿನಪತ್ರಿಕೆ ಪ್ರಜಾವಾಣಿ, ಅದನ್ನೆ ಆಧಾರವಾಗಿಟ್ಟುಕೊಂಡು ಅವರು ಹಾಗೆ ಓದಿದ್ದರು ಆದರೆ ಅಲ್ಲಿದ್ದಿದ್ದ ದಿನಪತ್ರಿಕೆ ಉದಯವಾಣಿ!.
ನಮ್ಮೂರಿನಲ್ಲಿ ಪತ್ರಿಕೆಗಳನ್ನು ನಾನಾ ಉದ್ದೇಶಕ್ಕೆ ಬಳಸುವವರಿದ್ದಾರೆ. ದಿನದಲ್ಲಿ ಆರು ತಾಸು ದಿನಪತ್ರಿಕೆ ಹಿಡಿದುಕೊಂಡು ಕೂರುವವರಿಗೇನು ಬರವಿಲ್ಲ. ಹೀಗೆ ಇಲ್ಲೊಬ್ಬರು ಊರಿನಲ್ಲಿ ಹಣವಿದ್ದವರ ಸಾಲಿಗೆ ಸೇರುವ ಗೌರವಾನ್ವಿತ ಜನ, ನಾವು ನೋಡಿದಾಗಲೆಲ್ಲ ದಿನಪತ್ರಿಕೆ ಬಿಡಿಸಿಕೊಂಡು ಕುಳಿತಿರುತ್ತಿದ್ದರು. ನಾವು ಹತ್ತಿರ ಹೋದರೆ ಕೆಳಗಿದ್ದ ಪತ್ರಿಕೆ ಎರಡೂ ಕೈಯಲ್ಲಿ ಎತ್ತಿ ಹಿಡಿದು ಗಹನವಾಗಿ ಓದಲು ಶುರುವಿಟ್ಟುಕೊಳ್ಳುತ್ತಿದ್ದರು. ಹಾಗಂತ ಅಷ್ಟು ಹೊತ್ತು ಓದಿದರೂ ಅವರಿಗೆ ಯಾವ ವಿಷಯವೂ ಗೊತ್ತಿರುತ್ತಿರಲಿಲ್ಲ. ರಾಜೀವ ಗಾಂಧಿ ಸತ್ತದಿನವೂ,ದೇವೆ ಗೌಡರು ಪ್ರಧಾನಿಯಾದ ದಿನವೂ ನಾವು ವಿಷಯ ಹೇಳಿದ ಮೇಲೆ ಹೌದಾ ಎನ್ನುತ್ತಿದ್ದರು. ನಮಗೆ ಇದೊಂದು ವಿಚಿತ್ರ, ಬೆಳಿಗ್ಗೆಯಿಂದ ಸಂಜೆವರೆಗೂ ಪೇಪರ್ ಹಿಡಿದುಕೊಂಡಿರುವ ಇವರು ಏನು ಮಾಡುತ್ತಾರೆ ಎಂಬ ಗುಮಾನಿ.ನಮ್ಮ ತಂಡದಲ್ಲೊಬ್ಬನಿಗೆ ಅವರು ಪತ್ರಿಕೆಯ ಮಧ್ಯೆ ಅಶ್ಲೀಲ ಪುಸ್ತಕ ಇಟ್ಟುಕೊಂಡು ಓದುತ್ತಾರೆ ಎಂಬ ಸ್ವಾನುಭವದ ಅನುಮಾನ. ಕೊನೆಗೊಂದು ದಿನ ಗೆಳೆಯರ ತಂಡ ಇದರ ಮರ್ಮವನ್ನು ಪತ್ತೆ ಮಾಡಬೇಕೆಂದು ತೀರ್ಮಾನಿಸಿತು . ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಊರಿಗೆ ದೊಡ್ಡ ಜನ, ಸೀದಾ ಹೋಗಿ ಇಣಕುವಂತಿಲ್ಲ. ಸರಿ ಅದಕ್ಕೊಂದು ಉಪಾಯ ಸಿದ್ಧವಾಯಿತು. ಅವರು ಓದುವ ಸಮಯದಲ್ಲಿ ಹಿತ್ತಲಲ್ಲಿ ಹಾವು ಹಾವು ಎಂದು ಗಾಬರಿಯಿಂದ ಬೊಬ್ಬೆ ಹಾಕಿ ಅವರನ್ನು ಕೂಗುವುದು ಅವರು ಅತ್ತ ಹೋದಾಗ ಇತ್ತ ಒಬ್ಬ ಪತ್ತೆ ಮಾಡುವುದು ಎಂದು ಸರ್ವಾನುಮತದಿಂದ ತೀರ್ಮಾನಿಸಿ ಆಚರಣೆಗೆ ತರಲಾಯಿತು.ನಂತರ ಪತ್ತೆಯಾಗಿದ್ದಿಷ್ಟೆ ದಿನಪತ್ರಿಕೆಯ ಮಧ್ಯಪುಟದಲ್ಲಿ ಮಟ್ಕಾದ ಸಂಖ್ಯೆ ಮೂರ್ನಾಲ್ಕು ತಿಂಗಳಿನಿಂದ ಯಾವುದು ಬಂದಿದೆ ಎಂದು ವಿವರಿಸುವ ಬಣ್ಣ ಬಣ್ಣದ ಚಾರ್ಟ್ ಇತ್ತು. ಮಟ್ಕಾ ಆಡುತ್ತಾರೆ ಎಂದು ತಿಳಿದರೆ ಯೋಗ್ಯತೆಗೆ ಕುಂದು ಬರುತ್ತದೆ ಎಂದು ಅವರು ದಿನಪತ್ರಿಕೆಯ ಮೊರೆಹೋಗಿದ್ದರು.
ನಮ್ಮ ಊರಿನ ಕಿರಾಣಿ ಅಂಗಡಿಮಾಲಿಕರದ್ದು ಮತ್ತೊಂದು ಕತೆ ಅವರು ಭಾಷೆಗಳ ಬೇಧವೆಣಿಸದೆ ಪ್ರಕಟವಾಗುವ ಎಲ್ಲಾ ದಿನಪತ್ರಿಕೆಗಳನ್ನು ತರಿಸುತ್ತಿದ್ದರು. ಹಾಗಂತ ಅಬ್ಬಾ...! ಎಂಥಾ ಪುಸ್ತಕ ಪ್ರೇಮಿ, ಎಂದೆಣಿಸದಿರಿ. ಅವರು ಖರೀದಿಸುತ್ತಿದ್ದುದು ಶುಕ್ರವಾರದ ಪತ್ರಿಕೆಯನ್ನು ಮಾತ್ರ. ಓ ಇವರು ಸಿನೆಮಾ ಪ್ರೇಮಿ.! ಅಂದುಕೊಂಡೀರಿ, ಅದೂ ಅಲ್ಲ ಅವರಿಗೆ ಬೇಕಾಗಿದ್ದುದು ಅಂದು ಪ್ರಕಟವಾಗುತ್ತಿದ್ದ ನಟಿಯರ ವಿಶೇಷ ಭಂಗಿಯ ಬ್ಲೋಅಪ್ ಚಿತ್ರಗಳು. ಅದನ್ನು ಚಂದವಾಗಿ ಕತ್ತರಿಸಿ ಬೆಳೆಕಾಳು ಹಾಕಿಡುವ ಡಬ್ಬಕ್ಕೆ ಅಂಟಿಸಿಟ್ಟುಕೊಳ್ಳುತ್ತಿದರು. ನಾಲ್ಕು ಮುಖವಿರುವ ತಗಡಿನ ಡಬ್ಬಕ್ಕೆ ಮೂರು ಕಡೆ ಈ ತರಹದ ಚಿತ್ರ ಒಂದು ಕಡೆ ದೇವರ ಚಿತ್ರ ಅಂಟಿಸಿಡುತ್ತಿದ್ದರು. ಗಿರಾಕಿಗಳಿಗೆ ಕಾಣಿಸುವುದು ದೇವರ ಚಿತ್ರ ಆಮೇಲೆ ತಮಗೆ ಇಷ್ಟವಾದ ಚಿತ್ರ ನೋಡಿಕೊಳ್ಳುತ್ತಿದ್ದರು.ಅವರು ಅಷ್ಟರಮಟ್ಟಿಗಿನ ಪತ್ರಿಕಾ ಪ್ರೇಮಿ.
ಪೇಪರ್ ಎಂದರೆ ದಿನಪತ್ರಿಕೆ ಎಂದು ತಿಳಿದ ಅಜ್ಜಿಯೊಬ್ಬಳು ನಮ್ಮ ಮನೆಯಲ್ಲಿದ್ದಳು. ಯಾರೋ ಅವಳ ಕಿವಿಗೆ ಅಮೆರಿಕಾದಲ್ಲಿ ಕಕ್ಕಸಿಗೆ ಹೋದ ನಂತರ ಶುಚಿಮಾಡಿಕೊಳ್ಳಲು ನೀರನ್ನು ಬಳಸದೆ ಪೇಪರ್ ಬಳಸುತ್ತಾರೆ ಎಂಬ ಸುದ್ದಿಯನ್ನು ತಲುಪಿಸಿದ್ದರು. ಅದೊಂದೇ ಕಾರಣದಿಂದ ಅವರಿಗೆ ಆ ದೇಶದ ಮೇಲೆ ಬಹಳ ಸಿಟ್ಟು.ನನ್ನ ಮಾವನ ಮಗ ಅಮೇರಿಕಾದಿಂದ ಬಂದಿದ್ದ.ಅವನ ಕಂಡೊಡನೆಯೇ ಅಜ್ಜಿ ಹತ್ತಿರ ಹೋಗಿ "ನಿನ್ನ ಅಮೇರಿಕಾದವರು ಎಂತಾ ಜನವೋ, ಪೇಪರ್ ಎಂದರೆ ಸರಸ್ವತಿ ಅಂಥಾದ್ದನ್ನು....... ಅಯ್ಯೋ ಪರಮಾತ್ಮ ಆ ದೇಶದ ಸುದ್ದಿ ನನ್ನ ಬಳಿ ಎತ್ತಬೇಡ, ನೀನು ಮತ್ತೆ ಅಲ್ಲಿಗೆ ಕಾಲಿಡಬೇಡ ಎಂದು ಹಠ ಹಿಡಿದುಬಿಟ್ಟಿದ್ದಳು. ಅದು ಅಕ್ಷರಗಳಿರುವ ದಿನಪತ್ರಿಕೆ ಅಲ್ಲ ಟಿಶ್ಯುಪೇಪರ್ ಅಂತ ಖಾಲಿ ಕಾಗದ ಎಂದು ವಿವರವಾಗಿ ಸಮಜಾಯಿಶಿ ನೀಡಿದ ಮೇಲೆ "ಮತ್ತೆ ಮೇಲಿನಮನೆ ಮುಂಡೆಗಂಡ ನನ್ನ ಬಳಿ ಕಕ್ಕಸು ತೊಳೆಯಲು ಪೇಪರ್ ಬಳಸುತ್ತಾರೆ ಎಂದು ಸುಳ್ಳು ಹೇಳಿದನಲ್ಲೊ" ಎಂದು ತಾನು ತಿಳಿದುಕೊಂಡಿದ್ದೆ ಸರಿ ಎಂಬಂತೆ ಸಮಾಧಾನ ಪಟ್ಟುಕೊಂಡಿದ್ದಳು.
ಹೀಗೆ ಪತ್ರಿಕೆಗಳಿಂದಾಗುವ ಪುರಾಣಗಳನ್ನು ಹೇಳುತ್ತಾ ಸಾಗಿದರೆ ಅದಕ್ಕೊಂದು ಅಂತ್ಯವೇ ಇಲ್ಲ. ಜನಸಾಮಾನ್ಯರಿಗೆ ಪ್ರತಿನಿತ್ಯದ ಸುದ್ದಿಯನ್ನು ತಿಳಿಸಲಿರುವ ಪತ್ರಿಕೆಗಳಿಂದಲೇ ಸುದ್ದಿಯಾಗುವ ಅಚ್ಚರಿಗಳು ಹಲವಾರು ಸಿಗುತ್ತಲೇ ಇರುತ್ತವೆ. ಒತ್ತಡದ ಇಂದಿನ ದಿನಗಳಲ್ಲಿ ಮುಖದಲ್ಲಿ ಒಂದು ಸಣ್ಣ ನಗು ಮಿಂಚಿ ಮಾಯವಾಗಲು ಪತ್ರಿಕೆಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತವೆ. ಸುದ್ದಿಮಾಡಲು ಹೋಗಿ ಸುದ್ದಿಯಾಗುತ್ತವೆ ಎಂಬ ಪ್ರಕ್ರಿಯೆ ನಿರಂತರ . 9342253240

1 comment:

shivu.k said...

ಸರ್,

ನಾನು ದಿನಪತ್ರಿಕೆ ವಿತರಕನಾದ್ದರಿಂದ ಉಳಿದ ಎಲ್ಲ ಪತ್ರಿಕೆಗಳನ್ನು ಕೆಲಸ ಮುಗಿದ ನಂತರ ಓದಿಬಿಡುತ್ತೇನೆ....ಅದರೂ ಸಮಾಧಾನವಿಲ್ಲ.. ಮನೆಗೆ ಬಂದು ನನಗಿಷ್ಟವಾದ ಪತ್ರಿಕೆಯನ್ನು ಟಾಯ್ಲೆಟ್ಟಿನಲ್ಲಿ ಕುಳಿತು ಓದುತ್ತೇನೆ....ದೇಹಬಾದೆ ತೀರಿದ್ದು ಗೊತ್ತಾಗುವುದಿಲ್ಲ....ಅಷ್ಟೋಂದು ಅನಂದವಿದೆ ಅದರಲ್ಲಿ....

ಆಹಾಂ! ನನ್ನ್ ಬ್ಲಾಗಿನಲ್ಲಿ ಹೊಸ ನಡೆದಾಡುವ ಭೂಪಟಗಳು ಬಂದಿವೆ...ನೋಡಿ ನಗಲು ಬನ್ನಿ....