Thursday, March 19, 2009

ಜೀವನವೆಂಬ....ನಾಟಕ ರಂಗ

"ಅಪ್ಪಾ ಥಿಯೇಟರ್ರಿನಲ್ಲಿ ಸಂಜೆ ೫ ಗಂಟಿಗೆ ನಾಟ್ಕ ಇತ್ತಂಬ್ರು ಡಿ.ಸಿ ಸಾಹೇಬ್ರು ನಾಟ್ಕಕ್ಕೆ ಬರ್‍ತಂಬ್ರು, ಅಲ್ಲಿಗೆ ಹೋಗ್ಬಾ.. ಒಂದು ಅರ್ಜಿ ಬರ್‍ದು ಕೊಡ್ತೆ, ಕೆಲ್ಸ ಆದ್ರೂ ಅಯ್ತೇ"
ಎಂದು ಕಲ್ಯಾಣಿ ಚಾವಡಿಯ ಮೇಲೆ ಬೋರಲು ಮಲಗಿದ್ದ ಕೋಣ್ಕಿಮಂಜನಿಗೆ ಹೇಳಿದಳು. ಕೋಣ್ಕಿಮಂಜ ಮಗಳ ಮಾತು ಕೇಳಿದರೂ ಕೇಳದಂತೆ ಮಲಗಿಯೇ ಇದ್ದ. ಅಪ್ಪನಿಗೆ ನಿದ್ರೆ ಬಂದಿರಬೇಕೆಂದು ತಿಳಿದ ಕಲ್ಯಾಣಿ "ಅಪ್ಪಾ ಓಯ್ ಅಪ್ಪ" ಎಂದು ಮತ್ತೆ ಪುನರುಚ್ಚರಿಸಿದಳು. "ಹೆಣ್ಣೆ ನಂಗೆ ಕಿವಿ ಕೇಳತ್ತ್, ಪದೆ ಪದೆ ಎಂತ ಹೇಳ್ತೆ, ಪುಟಗೋಸಿ ನಾಟ್ಕಕ್ಕೆ ಶಿಮೊಗ್ಗೆ ಯಿಂದ ಸಾಹೇಬ್ರು ಬರ್‍ತ್ರಾ ಮಣ್ಣಾ" ಎಂದು ಮಗ್ಗಲು ಬದಲಿಸಿದ ಮಂಜ.
"ನಿಂಗೆ ಸ್ವಂತ ತಿಳಿಯೂದಿಲ್ಲೆ ನನ್ನ ಮಾತಲ್ಲಿ ನಂಬ್ಕೆ ಇಲ್ಲೆ.. ಇವತ್ತು ಸಂಜೆ ನೇಗಿಲಯೋಗಿ ನಾಟ್ಕ ಇತ್ತಂಬ್ರು, ನಾಟ್ಕ ಬರೆದ ಸುಬ್ಬಣ್ಣನವ್ರಿಗೆ ಸನ್ಮಾನ ಮಾಡ್ತಂಬ್ರು ಹೋಗ್ಬಾ..ಅದ್ಕೆ ಡಿ.ಸಿ ಬಪ್ಪದು ತಿಳಿತಾ' ಎಂದು ಕಲ್ಯಾಣಿ ಹೇಳಿದ ಮಾತಿಗೆ ಅಡಿಗೆಮನೆಯಲ್ಲಿ ಕುಸುಬಲಕ್ಕಿ ಗಂಜಿ ಬಸಿಯುತ್ತಿದ್ದ ಚಂದು
"ಮಗಳೇ ನೀ ಅವ್ರಿಗೆ ಹೇಳೂಕೆ ಹೋಗ್ಬೇಡಾ..ಅವ್ರು ಮೊದ್ಲಿಂದ ಮಾಡಿದ್ದು ಅದೇಯಾ.. ನನ್ನ ಒಂದು ಮಾತು ಕೇಳಿದ್ರೆ ನಮ್ಗೆ ಈ ಪರಿಸ್ಥಿತಿ ಬರೂದಿಲ್ಯಾಗಿತ್ತು.ಇರೋ ಏಳೆಕ್ರೆ ಗದ್ದೀಗೆ ಒಂದು ಎಕ್ರೆ ಅಡಿಕೆ ತೋಟ ಹಾಕಿದ್ರೆ ಮಹಾರಾಜ್ರಂಗೆ ಇರ್ಲಕ್ಕಿತ್,ಬ್ಯಾಡ ಬಸ್ ಸ್ಟ್ಯಾಂಡ್ ಹತ್ರ ಒಂದು ಗೂಡಂಗಡಿ ಹಾಕಿನಿ ಅಂತ ಬಡ್ಕಂಡೆ, ಪದೆ ಪದೆ ಹೇಳಿರೆ ಕೋಣ್ಕಿ ಮನೆತನ ಅಂದ್ರೆ ಕಮ್ಮಿಯಾ ನೋಡು ನೋಡ್ತಾ ಇರು, ಕಡದು ಉರುಳಿಸ್ತೇ ಅಂತ್ರು, ಭತ್ತ ಬೆಳ್ಯುದ್ ಅಂದ್ರೆ ಪುಣ್ಯದ ಕೆಲ್ಸ ಅಂದ್ರು, ಈಗ ಕಂಡ್ಯಲೆ , ಹೊಟ್ಟಿಗಿದ್ರೆ ಬಟ್ಟಿಗಿಲ್ಲೆ, ಬಟ್ಟೆ ಇದ್ರೆ ಬಾಚ್ಕಂಬುಕಿಲ್ಲೆ, ಕೂಲಿ ಮಾಡಾದ್ರು ಹೊಟ್ಟೀ ಹೊರ್ಕಂಬ ಅಂದ್ರೆ ಏಳ್ ಎಕ್ರೆ ಜಮೀನ್ದಾರ್ರು ಆಳ್ ಕೆಲ್ಸಕ್ಕೆ ಹೋಗುಕಾಗುತ್ತಾ?, ಈ ಮಳಿ ನಂಬಿ ಆಪು ಬತ್ತ ನೋಡ್ರೆ ವರ್ಸಕ್ಕೆ ೩ ಚೀಲ, ಆ ಘೋರ್ಕಲ್ ಮೇಲೆ ನೀರು ಹೊಯ್ಯೋ ಹ್ವಾರ್‍ಯ ಬಿಟ್ಟು ನಿ ನಿನ್ನ ಕೆಲ್ಸ ಕಾಣ್" ಎಂದು ಮಗಳಿಗೆ ಹೇಳಿದಳು.
ಮಲಗಿದ್ದಲ್ಲಿಂದ ಹೆಂಡತಿ ಹಾಗೂ ಮಗಳ ಮಾತು ಕೇಳುತ್ತಿದ್ದ ಕೋಣ್ಕಿಮಂಜನಿಗೆ ಆಂತರ್ಯದಲ್ಲಿ ಚಂದು ಹೇಳಿದ ಮಾತು ಸತ್ಯ ಅಂತ ಅನ್ನಿಸಿತು. ಒಂದೇ ಒಂದು ಎಕರೆ ಅಡಿಕೆ ಹಾಕಿದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಊರಿಗೆ ಉಪಕಾರ ಮಾಡುವ ಭತ್ತದ ಬೆಳೆ ವರ್ಷಪೂರ್ತಿ ದುಡಿದರೂ ಇನ್ನೇನು ಬೆಳೆ ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ಮಳೆ ಬಂದು ಸರ್ವನಾಶವಾಗಿಬಿಡುತ್ತದೆ.ಅಥವಾ ಮಳೆ ಇಲ್ದೆ ಸಸಿಯೆ ಹುಟ್ಟುವುದಿಲ್ಲ, ಜಗತ್ತಿಗೆ ಊಟ ಬಡಿಸುವವ ಉನ್ಮಾದದಲ್ಲಿ ಬೆಳೆದವನಿಗೆ ಅರೆಹೊಟ್ಟೆ. ಭತ್ತದಿಂದ ಕಾಲು ಬುಡದವರೆಗೂ ಕೆಸರು ಬಿಟ್ರೆ ಮೊಸರು ಗಾದೆ ಮಾತಲ್ಲಷ್ಟೇ. ಅಂದು ಹೆಂಡತಿಯ ಮಾತು ಕೇಳಿ ಒಂದೆಕೆರೆಯಷ್ಟು ಅಡಿಕೆ ತೋಟ ಮಾಡಿದ್ದರೆ ಊರ ಗೌಡ್ರ ತರಹ ಅರಾಮಾಗಿ ಇರಬಹುದಿತ್ತು, ಆದರೆ ಅದ್ಯಾರೋ ತಿಳಿದವರು ಭತ್ತ ಮನುಷ್ಯನ ಆಹಾರ ಬೆಳೆ ಹಾಗಾಗಿ ಅದಕ್ಕೆ ಶಾಶ್ವತ ಬೆಲೆ, ಅದೇ ಅಡಿಕೆಯಾದರೆ ಈಗಾಗಲೇ ಬಯಲು ಸೀಮೆಯಲ್ಲೆಲ್ಲಾ ಸಾವಿರಾರು ಎಕರೆ ಹಾಕಿದ್ದಾರೆ ಹಾಗಾಗಿ ಸಧ್ಯದಲ್ಲಿ ಅಡಿಕೆ ದರ ನೆಲ ಕಚ್ಚಿಹೋಗುತ್ತದೆ ಜತೆಯಲ್ಲಿ ಅಡಿಕೆಯಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ, ಭತ್ತಬೆಳೆದರೆ ಅನ್ನದಾತನ ಪಟ್ಟದ ಜತೆ ದೇಶಕ್ಕೆ ಉಪಕಾರ ಮಾಡಿದ ಗೌರವ ಸಿಗುತ್ತದೆ ಎಂದು ಹೇಳಿದ್ದನ್ನೇ ಸತ್ಯ ಎಂದು ತಿಳಿದ ಮಂಜ ಅಡಿಕೆತೋಟ ಹಾಕಿರಲಿಲ್ಲ. ಆದರೆ ಭತ್ತದ ಕೃಷಿಯಿಂದ ವರ್ಷದಿಂದ ವರ್ಷಕ್ಕೆ ಆರ್ಥಿಕ ಪರಿಸ್ಥಿತಿ ನೆಲ ಕಚ್ಚುವುದನ್ನು ನೆನಸಿಕೊಂಡರೆ ಹೆಂಡತಿ ಅಂದು ಹೇಳಿದ ಅಡಿಕೆ ಬೆಳೆದರೆ ಚೆನ್ನಾಗಿರಬಹುದು ಎಂಬುದೇ ಸತ್ಯ ಎಂದು ಮಂಜನಿಗೆ ಅರಿವಾಗಿತ್ತು. ಆದರೆ ಅದನ್ನು ಹೆಂಡತಿಯೆದುರು ಒಪ್ಪಿಕೊಳ್ಳಲು ಗಂಡಸೆಂಬ ಅಹಂಕಾರ ಬಿಡದೆ,
"ನೀ ಬಾಯಿ ಮುಚ್ಚಿ ಕೂರ್‍ತ್ಯ ಇಲ್ಲಾ ನಾಕು ಕಡಬು ಕೊಡ್ಕ, ನಾ ಗಂಡಸಲ್ದಾ.. ನಂಗೆ ಸರ್ಕಾರದಿಂದ ಪರಿಹಾರ ಹ್ಯಾಗೆ ತಕಂಬ್ದು ಅಂತ ನೀವ್ ತಾಯಿ ಮಗಳು ಕಲ್ಸಿಕೊಡ್ಕ" ಎಂದು ಹೆಂಡತಿಯ ಗದರಿದ. ಮೇಲ್ನೋಟಕ್ಕೆ ಹಾಗೆ ಗದರಿದರೂ ಸಂಜೆ ಕಲ್ಕೊಡು ನಾಟಕ ಥಿಯೇಟರ್ರಿಗೆ ಹೋಗಿ ಡಿ.ಸಿ ಸಾಹೇಬ್ರನ್ನ ಬೇಟಿ ಮಾಡಿ ಮಾರ್ಚಿ ತಿಂಗಳ ಅಕಾಲಿಕ ಮಳೆಯಿಂದ ನಷ್ಟವಾದ ಭತ್ತದಬೆಳೆ ಪರಿಹಾರವನ್ನು ತಹಶೀಲ್ದಾರರು, ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ, ಅತಿವೃಷ್ಟಿಯಾದರೆ ಅಥವಾ ಅನಾವೃಷ್ಟಿಯಾದರೆ ಮಾತ್ರಾ ಪರಿಹಾರ ಕೊಡಬಹುದು ಎಂದು ಮಳೆಯಲ್ಲಿ ಕೊಚ್ಚಿಹೋದ ಬೆಳೆಗೆ ಪರಿಹಾರ ನೀಡದೇ ಸತಾಯಿಸುತ್ತಿರುವುದನ್ನು ಹೇಳಿ ದೊಡ್ಡಸಾಹೇಬರಿಂದಲೇ ಪರಿಹಾರ ಪಡೆದುಕೊಳ್ಳಬೇಕೆಂದು ತೀರ್ಮಾನಿಸಿದ. ಆದರೆ ಸೀದಾ ಕಲ್ಕೋಡಿಗೆ ಹೋದರೆ ಮಗಳು ಹೆಂಡತಿಯ ಮಾತಿನಂತೆ ನಡೆದುಕೊಂಡಂತಾಗುತ್ತದೆ ಅದರ ಹೊರತಾಗಿ ಸಾಗರಕ್ಕೆ ಹೋಗುವ ನೆಪ ಮನೆಯಲ್ಲಿ ಹೇಳಿ ಸಾಹೇಬರ ಭೇಟಿ ಮಾಡುವುದೇ ಸೂಕ್ತವೆಂದು ತೀರ್ಮಾನಿಸಿ ಬಿಳಿ ಪಂಚೆ ಉಟ್ಟು ಇದ್ದುದರಲ್ಲಿಯೇ ಒಂದು ಒಳ್ಳೆಯ ಅಂಗಿ ತೊಟ್ಟು ಮೇಲಿಂದ ಒಂದು ಟವೆಲ್ ಹೆಗಲಮೇಲಿರಿಸಿ ಹೊರಟ.
ಮಂಜ ಕಲ್ಕೋಡಿನ ಹಳ್ಳಿ ಥಿಯೇಟರ್ರಿಗೆ ಬರುವಷ್ಟರಲ್ಲಿ ನಾಟಕ ನೋಡಲು ಆಗಲೆ ಬಣ್ಣ ಬಣ್ಣದ ಕಾರುಗಳಲ್ಲಿ ಜನ ಸೇರುತ್ತಿದ್ದರು. ಮಂಜನಿಗೆ ನಾಟಕ ನೋಡುವ ತಲುಬು ಇರಲಿಲ್ಲವೆಂದಲ್ಲ ಆದರೆ ವರ್ಷದ ಕೂಳಿಗೆ ನಾಟಕಕ್ಕಿಂತ ಹೆಚ್ಚಿನ ಆದ್ಯತೆ ಇರುವುದರಿಂದ ಸಾಹೆಬರನ್ನು ಭೇಟಿ ಮಾಡುವ ತರಾತುರಿ ಮಂಜನಲ್ಲಿತ್ತು. ಆದರೆ ಸಾಹೆಬರು ಆಗಲೇ ಶುರುವಾಗಿದ್ದ ನಾಟಕದಲ್ಲಿ ತಲ್ಲೀನರಾದ್ದರಿಂದ, ಹಾಗೂ ನಾಟಕದ ನಂತರ ವೇದಿಕೆ ಕಾರ್ಯಕ್ರಮ ಇದ್ದುದರಿಂದ ಅವರ ಭೇಟಿ ಮಂಜನಿಗೆ ಇನ್ನೂ ಕನಿಷ್ಠವೆಂದರೆ ಎರಡು ತಾಸಿನ ನಂತರವೇ ಎಂದು ತಿಳಿದು ಮಂಜನೂ ಅನಿವಾರ್ಯವಾಗಿ ನಾಟಕನೋಡಲು ಕುಳಿತ.
ಮಬ್ಬು ಬೆಳಕಿನಲ್ಲಿ ನಾಟಕ ಗಜಮುಖನೇ..ಹೇರಂಭ.... ನಮ್ಮ ಕಾಯೋ ಕರುಣಾಮಯಿಯೇ॒ ಎಂಬ ಗೀತೆಯೊಂದಿಗೆ ಆರಂಭವಾಯಿತು. ಸುಬ್ಬಣ್ಣ ನವರ ನೂತನ ಪರಿಕಲ್ಪನೆಯ ನೆಗಿಲಯೋಗಿ ನಾಟಕ ಅದು. ವೇದಿಕೆಯ ನಡುವಿನಲ್ಲಿ ಒಂದು ಪರದೆ ಇಳಿಬಿಟ್ಟು ರಂಗವನ್ನು ಎರಡನ್ನಾಗಿಸಿ ಪರಿವರ್ತಿಸಿದ್ದರು. ಅದು ಪ್ರೇಕ್ಷಕರಿಗೆ ಎರಡು ನಾಟಕ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.
ಸೂತ್ರಧಾರ ನಡು ಪರದೆಯ ಮುಂದೆ ನಿಂತು ನಾಟಕಕ್ಕೆ ಚಾಲನೆಕೊಟ್ಟ. ರಂಗದ ಎಡಬದಿಯಲ್ಲಿ ಶ್ರೀಮಂತರ ಡೈನಿಂಗ್ ಹಾಲ್ ನ ಸೆಟ್ಟಿಂಗ್, ಶ್ರೀಮಂತ ಅವನ ಹೆಂಡತಿ ಹಾಗೂ ಮಗಳು ಲಂಚ್‌ಗೆ ಕುಳಿತಿರುವ ದೃಶ್ಯ. ಬಲಭಾಗದಲ್ಲಿ ರೈತನ ಹೊಲ, ಹೊಲದ ಮೇಲ್ಗಡೆ ಒಂದು ಮರ, ಮರದ ಬುಡದಲ್ಲಿ ರೈತ ಅವನ ಹೆಂಡತಿ ಹಾಗೂ ಮಗಳು ಊಟ ಮಾಡುತ್ತಿರುವ ದೃಶ್ಯ.
"ಸೀ.. ನಮ್ಮ ಗವರ್ನ್‌ಮೆಂಟಿಗೆ ತಲೆ ಇಲ್ಲ, ರೈತರಿಗೆ ಎಲ್ಲಾ ಸಾಲ ಮನ್ನ ಮಾಡುತ್ತಂತೆ, ಅವ್ರಿಗೆ ಸೋಮಾರಿತನ ಕಲ್ಸೊದೆ ಇವ್ರು, ಎಲ್ಲಾ ಓಟಿಗಾಗಿ ಗಿಮಿಕ್, ಟ್ಯಾಕ್ಸ್ ಕಟ್ಟೊರು ನಾವೋ ದಾನ ಮಾಡೋರು ಅವ್ರು" ಶ್ರೀಮಂತ ಊಟ ಮಾಡುತ್ತಾ ಹೆಂಡತಿಯ ಬಳಿ ಹೇಳಿದ.
ಬೆಳಕು ಬಲಬದಿಯತ್ತ ಸಾಗಿತು
"ನೋಡು ಸರ್ಕಾರ ಸಾಲ ಮನ್ನಾ ಮಾಡಿದೆ ಅಂತ ಎಲ್ರೂ ಹೇಳ್ತಾರೆ, ಹೋದ್ವರ್ಷ ಚಾಲ್ತಿ ಸಾಲ ಮನ್ನಾ ಮಾಡಿದ್ರು, ನಮ್ದು ಆವಾಗ ಸುಸ್ತಿ ಇತ್ತು. ಮುಂದಿನ ವರ್ಷವಾದರೂ ಮನ್ನಾ ಆಗುತ್ತೇ ಅಂತ ಸಾಹುಕಾರಿ ಸಾಲ ಮಾಡಿ ಬ್ಯಾಂಕ್ ಸಾಲ ಚುಕ್ತಾ ಮಾಡಿದೆ, ಆದರೆ ಈ ವರ್ಷ ಸುಸ್ತಿ ಸಾಲ ಮನ್ನಾ ಮಾಡಿದ್ರು, ಒಟ್ನಲ್ಲಿ ನಮ್ಮ ಭಾಗ್ಯಕ್ಕೆ ಸಾಲದಿಂದ ಮುಕ್ತಿ ಇಲ್ಲ ರೈತ" ಹೊಲದ ತಟದಲ್ಲಿ ಊಟ ಮಾಡುತ್ತಾ ಹೇಳಿದ.
ಬೆಳಕು ಎಡಬದಿಯತ್ತ ಸಾಗಿತು.
"ಊಟ ಮಾಡುವಾಗ ಡೆಟ್ಟಾಲ್ ಹಾಕಿ ಕೈ ತೊಳದುಕೊಂಡೇ ಊಟ ಮಾಡ್ಬೇಕು, ಇಲ್ಲಾಂದ್ರೆ ಬ್ಯಾಕ್ಟೀರಿಯಾ ಎಲ್ಲಾ ಹೊಟ್ಟೆಯೊಳಗೆ ಸೇರಿ ಖಾಯಿಲೆ ಬರುತ್ತೆ"
ಶ್ರೀಮಂತ ತಾಯಿ ಪಳಪಳ ಹೊಳೆಯುವ ಟೇಬಲ್ ಮೇಲೆ ನ್ಯಾಪ್‌ಕಿನ್ ಹಾಕಿ ಪ್ಲೇಟ್ ಇಡುತ್ತಾ ಮಗಳಿಗೆ ಹೇಳಿದಳು
"ಎ ಬಡ್ದೈತ್ತದೆ ದೊಡ್ಡ ಸೂರ ಇವ್ನು ಕೈ ತೊಳಿಯಾಕೆ ಹೊಂಟ, ಊಟ ಮಾಡಿ ಕೈ ತೊಳಿಯುವಂತೆ ಬಾ ರೈತನ" ಹೆಂಡತಿ ಹೊಲದಲ್ಲಿ ಚುಚ್ಚುವ ಕಸಕಡ್ಡಿಗಳ ನಡುವೆ ಬುತ್ತಿಗಂಟನ್ನು ಬಿಚ್ಚುತ್ತಾ ಹೇಳಿದಳು.
ಈಗ ಬೆಳಕು ಶ್ರೀಮಂತರತ್ತ
"ಈ ಫುಡ್ ಕ್ವಾಲೀಟೀ ನೋಡು, ಸರ್ಕಾರ ಸಬ್ಸಿಡಿಲಿ ಫರ್ಟಿಲೈಸರ್,ಕೆಮಿಕಲ್ ಸಪ್ಲೆ ಮಾಡುತ್ತೆ, ಫಾರ್ಮರ್ಸ್ ಬೇಕಾಬಿಟ್ಟಿ ಸುರಿತಾರೆ, ನಾವು ತಿಂದು ಹೆಲ್ತ್ ಹಾಳುಮಾಡ್ಕೋಬೇಕು, ಅದರ ಬದಲು ಕೆಮಿಕಲ್ ಫ್ರೀ ಫುಡ್‌ಗ್ರೈನ್ಸ್ ಸಪ್ಲೈ ಮಾಡಿದ್ರೆ ನಾವೂ ಪ್ರೀಮಿಯಮ್ ಕೊಟ್ಟು ತಗೋಬಹುದು" ವಾಷ್ ಬೇಸಿನ್ನಿನಲ್ಲಿ ಕೈತೊಳೆಯುತ್ತಾ ಹೇಳುತ್ತಾನೆ ಶ್ರೀಮಂತ
"ನಾವು ಹಾಳಾಗಿದ್ದು ಈ ಸರ್ಕಾರಿ ಗೊಬ್ರ ಔಷಧಿಯಿಂದಾನೆ, ವರ್ಷ ವರ್ಷಕ್ಕೂ ಬೆಳೆಯ ಮುಕ್ಕಾಲು ದುಡ್ಡು ಅವುಕ್ಕೆ ದಂಡ. ಹಟ್ಟಿ ಗೊಬ್ರದಿಂದ ಕಡಿಮೆ ಫಸಲಾಗ್ತಿತ್ತು ನಿಜ ಆದರೆ ಬೆಳೆಗೆ ಜಾಸ್ತಿ ಹಣ ಕೊಟ್ಟಿದ್ರೆ ಅದೇ ಭಾಗ್ಯ ಆಕ್ತಿತ್ತು" ರೈತ ಹರಿವ ನೀರಿನಲ್ಲಿ ಕೈ ತೊಳೆಯುತ್ತಾ ಹೇಳುತ್ತಾನೆ.
ಹೀಗೆ ಹೂವು ಮತ್ತು ಬೇರುಗಳ ಸುದೀರ್ಘ ಸಂವಾದದ ನಂತರ ಸೂತ್ರಧಾರ ವ್ಯವಸ್ಥೆ ಎಂಬುದು ಈ ಪರದೆಯಂತೆ, ಅದು ಗ್ರಾಹಕ, ಉತ್ಪಾದಕನ ನಡುವೆ ಅಡ್ದಗೋಡೆಯಾಗಿದೆ, ಸರ್ಕಾರ ಪರದೆ ಸರಿಸಿದರೆ ಎಲ್ಲರ ಬಾಳು ಸುಖ ಎಂಬ ಮಾತಿನೊಂದಿಗೆ ನಾಟಕಕ್ಕೆ ತೆರೆಬಿತ್ತು.
ನಾಟಕ ನೋಡುತ್ತಾ ಕುಳಿತ ಕೋಣ್ಕಿಮಂಜನಿಗೆ ನಾಟಕ ಸಂಪೂರ್ಣ ಅರ್ಥವಾಗದಿದ್ದರೂ ಕಳೆದುಕೊಂಡ ಬೆಳೆಯ ನಡುವೆಯೂ ಅದೇನೋ ತನ್ನಪರವಾದ ಕೆಲಸ ನಡೆಯುತ್ತಿದೆ ಎಂಬ ಸಮಾಧಾನ ಸಿಕ್ಕಿತು. ನಂತರದ್ದು ನಾಟಕ ಕತೃ ಸುಬ್ಬಣ್ಣರಿಗೆ ಸನ್ಮಾನ. ಸನ್ಮಾನದ ಅಧ್ಯಕ್ಷತೆಯನ್ನು ಡಿ.ಸಿ. ಸಾಹೇಬರು ವಹಿಸಿದ್ದರಿಂದ ಕಾರ್ಯಕ್ರಮ ಮುಗಿಯುವವರೆಗೂ ಕಾಯುವುದು ಮಂಜನಿಗೆ ಅನಿವಾರ್ಯವಾಯಿತು.
ನೇಗಿಲಯೋಗಿ ನಾಟಕ ಇವತ್ತಿನ ಸ್ಥಿತಿಯನ್ನು ಅದ್ಭುತವಾಗಿ ಮನನ ಮಾಡಿಕೊಡುತ್ತದೆ. ಕೃಷಿಕರ ಬಾಳು ಹಸನಾಗಲು ಇಂತಹ ನಾಟಕಗಳ ಅವಶ್ಯಕತೆಯಿದೆ. ಸುಬ್ಬಣ್ಣ ಆಳವಾಗಿ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡು ರಾಸಾಯನಿಕದಿಂದ ಮುಕ್ತಿ ಉಳುವವನಿಗೆ ಶಕ್ತಿ ಯ ಸಂದೇಶ ನೀಡುವ ಈ ನಾಟಕ ರಚನೆಯಿಂದ ರಂಗಕರ್ಮಿಗಳಲ್ಲಿ ವಿಶಿಷ್ಠವಾಗಿ ನಿಲ್ಲುತ್ತಾರೆ. ಮರದಲ್ಲಿ ಎಲೆಗಳು ಬೆಳೆದು ಹೂವು ಅರಳಬೇಕೆಂದರೆ ಬೇರಿನ ಕೆಲಸ ಅತಿ ಮುಖ್ಯ, ಬೇರು ಯಾರಿಗೂ ಕಾಣಿಸದೇ ತನ್ನ ಕೆಲಸವನ್ನು ನಿರ್ವಹಿಸುತ್ತದೆ, ರೈತ ಬೇರಿದ್ದಂತೆ ,ಅವನ ಪರವಾಗಿ ನಾವು ಇಷ್ಟಾದರೂ ಮಾಡಬೇಕು, ಇವತ್ತಿನ ಕಾಲದಲ್ಲಿ ಎಲ್ಲರೂ ರೈತನನ್ನು ಉಪಯೋಗಿಸಿಕೊಳ್ಳುತ್ತಾರೆ, ಆದರೆ ಸುಬ್ಬಣ್ಣ ರೈತರಿಗಾಗಿ ಹೋರಾಡುತ್ತಾರೆ, ರಂಗದಲ್ಲಿ ನೇಗಿಲ ಯೋಗಿಯ ದೈನ್ಯ ಸ್ಥಿತಿ ಮನಸ್ಸನ್ನು ಕಲಕಿಬಿಡುತ್ತದೆ. ನಾನು ಸರ್ಕಾರದ ಪರವಾಗಿ ರೈತರ ಹಿತದೃಷ್ಟಿಯಿಂದ ಈ ನಾಟಕಕ್ಕೆ ಒಂದು ಲಕ್ಷರೂಪಾಯಿಯ ಸಹಾಯಧನ ನೀಡುವ ವ್ಯವಸ್ಥೆ ಮಾಡುತ್ತೇನೆ, . ಕಾರ್ಯಕ್ರಮದ ಅಧ್ಯಕ್ಷರಾದ ಡಿ.ಸಿ.ಸಾಹೇಬರ ಮಾತಿಗೆ ಕಿವಿಗಡಚಿಕ್ಕುವ ಚಪ್ಪಾಳೆಯೋ ಚಪ್ಪಾಳೆ. ಜನರ ನಡುವೆಯಿದ್ದ ಮಂಜನೂ ಚಪ್ಪಾಳೆ ತಟ್ಟುವುದರೊಂದಿಗೆ ಅಭಿನಂದನಾ ಕಾರ್ಯಕ್ರಮ ಮುಗಿಯಿತು.
ಸಮಾರಂಭ ಮುಗಿಯುತ್ತಿದ್ದಂತೆ ಪ್ರೇಕ್ಷಕರು, ಅತಿಥಿಗಳು, ಅಭ್ಯಾಗತರೂ ಎಂಬ ಬೇಧಭಾವವಿಲ್ಲದೆ ಹೊರಗೆ ಹೋಗಲು ಬಾಗಿಲಿನತ್ತ ನುಗ್ಗತೊಡಗಿದರು. ಕೋಣ್ಕಿ ಮಂಜನಿಗೆ ತನ್ನ ವರ್ಷದಕೂಳು ಅಕಾಲಮಳೆಯಿಂದ ನಾಶವಾಗಿದ್ದು, ಪರಿಹಾರ ಸಿಗದಿದ್ದುದು, ಬೆಳೆ ಇಲ್ಲದೆ ಜೀವನ ದೈನ್ಯ ಸ್ಥಿತಿಗೆ ತಲುಪಿರುವುದು, ಮುಂತಾದವುಗಳನ್ನು ಡಿ.ಸಿ ಯವರ ಬಳಿ ಹೇಳಿ ಅರ್ಜಿ ನೀಡುವುದು ಅನಿವಾರ್ಯವಾಗಿತ್ತು. ಜನರನ್ನು ತಳ್ಳುತ್ತಾ ಅವರುಗಳ ಬೈಯ್ಗುಳ ಕೇಳಿಯೂ ಕೇಳದಂತೆ ಮುನ್ನುಗ್ಗಿದ.
ಅಷ್ಟರಲ್ಲಿ ಸಾಹೇಬರು ಕಾರಿನ ಬಳಿ ಹೋಗಿದ್ದರು. ಹಲವಾರು ಗಣ್ಯರು ಅವರನ್ನು ಬೀಳ್ಕೊಡಲು ಜತೆ ಇದ್ದರು. ಅವರನ್ನೆಲ್ಲಾ ಬದಿ ಸರಿಸಿದ ಮಂಜ ಮಗಳು ಬರೆದಕೊಟ್ಟ ಅರ್ಜಿಯನ್ನು ಡಿ.ಸಿ.ಸಾಹೆಬರ ಮುಂದೆ ಹಿಡಿದ.
ಸಾಹೇಬರು ಒಮ್ಮೆ ಅರ್ಜಿಯನ್ನು ಮತ್ತೊಮ್ಮೆ ಕೋಣ್ಕಿಮಂಜನನ್ನು ಕೆಂಗಣ್ಣಿನಿಂದ ಅಪಾದಮಸ್ತಕ ನೋಡಿ ನಂತರ ಗಣ್ಯರತ್ತ ನೋಡಿ ಮುಗುಳನಕ್ಕು ಕೈಬೀಸಿ ಕಾರೊಳಗೆ ಕುಳಿತರು. ಕಾರು ಡರ್ ಎಂದು ಹೊರಟು ಹೋಯಿತು.
"ನಮ್ಮ ಜನರಿಗೆ ಯಾವಾಗ ಅರ್ಜಿ ಕೊಡಬೇಕು ಯಾವಾಗ ಕೊಡಬಾರ್‍ದು ಅನ್ನೋ ಮ್ಯಾನರ್ಸೇ ಇಲ್ಲ"
ಎಂದು ಗಣ್ಯರೊಬ್ಬರು ಹೇಳಿದರು. ಕೋಣ್ಕಿಮಂಜ, ಗಣ್ಯರು ಮ್ಯಾನರ್ಸ್ ಅಂದಿದ್ದನ್ನು ಕೇಳಿ ಅವರು ತನ್ನಪರವಾಗಿಯೇ ಏನೋ ಹೇಳಿದರೆಂದು ತಿಳಿದು "ಹೌದು ಹೌದು" ಎಂದು ತಲೆ ಅಲ್ಲಾಡಿಸಿ, ಡಿ.ಸಿ ಸಾಹೇಬರು ನೀಡುವ ಪರಿಹಾರದ ಕನಸುಕಾಣುತ್ತಾ ಜೀವನ ವೆಂಬುದು ನಾಟಕ ರಂಗ.... ಎನ್ನುವ ರಂಗಗೀತೆಯನ್ನು ಗುಣಗುಣಿಸುತ್ತಾ ಮನೆಯತ್ತ ಹೊರಟ.
ಆದರೆ ಕೋಣ್ಕಿಮಂಜನಿಗೆ ತಿಳಿಯದ ಸಂಗತಿಯೆಂದರೆ ಅವನು ಡಿ.ಸಿ ಸಾಹೇಬರಿಗೆ ಬರೆದುಕೊಟ್ಟ ಅರ್ಜಿ ಕಾರಿನ ಚಕ್ರಕ್ಕೆ ಸಿಕ್ಕು ಮೂರ್ನಾಲ್ಕು ಸುತ್ತು ಸುತ್ತಿ ಸ್ವಲ್ಪದೂರದಲ್ಲಿ ಟೈರ್‌ನ ಗುರುತಿನೊಂದಿಗೆ ಅನಾಥವಾಗಿ ಬಿದ್ದಿತ್ತು. ಅರ್ಜಿ ಬಿದ್ದ ಅನತಿ ದೂರದಲ್ಲಿ ನೇಗಿಲ ಯೋಗಿನಾಟಕದ ಪ್ರದರ್ಶನ ಫಲಕ ತೊನೆದಾಡುತ್ತಿತ್ತು.

1 comment:

ಶಾಂತಲಾ ಭಂಡಿ said...

ರಾಘಣ್ಣಾ...
ಮಾತುಗಳು ಬರೀ ಮಾತುಗಳಾಗಿ ಸೋರಿಹೋಗುತ್ತಿರುವ ಹೊತ್ತಿಗೇ ಕಲ್ಕಿ ಮಂಜನಂಥವರು ಬರೆಸಿಕೊಡುವ ಅರ್ಜಿಗಳು ಯಾರದೋ ಕಾರಿನ ಚಕ್ರದಡಿಯಾಗುತ್ತಿವೆ. ಉರುಳುವ ಚಕ್ರ ಉರುಳುತ್ತಲೇ ಇರುತ್ತವೆ, ಬದುಕಿನ ಬದಲಾವಣೆಗಾಗಿ ಬರೆದಿಟ್ಟ ಅರ್ಜಿಪತ್ರಗಳು ಹರಿಯುತ್ತಲೇ ಇರುತ್ತವೆ. ಬದಲಾವಣೆಯಾಗುವುದೇ ಇಲ್ಲ ಹಲವರ ಜೀವನದಲ್ಲಿ. ಆದರೂ ಬದಲಾವಣೆ ಜಗದ ನಿಯಮ ಎಂಬ ಮಾತನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ.
ಚೆಂದದ ಕಥೆಗೆ ಧನ್ಯವಾದ.
ಕಥೆಯಲ್ಲಿ ಬಳಸಿದ ಭಾಷೆ, ಕಥೆಯ ನಿರೂಪಣೆ ಸರ್ವವೂ ಸುಂದರ. ನಿಮ್ಮ ಬರವಣಿಗೆಯ ಬಗ್ಗೆ ಹೆಚ್ಚಿಗೇನೂ ಹೇಳಲಾರೆ, ನಿಮ್ಮ ಮಾತೊಂದನ್ನು ನಿಮಗೇ ಮರಳಿಸುತ್ತಿದ್ದೇನೆ, ನಿಮ್ಮ ಬರಹಗಳನ್ನು ಓದುತ್ತಿದ್ದರೆ ಹೊಟ್ಟೆಕಿಚ್ಚಾಗುತ್ತದೆ.