Wednesday, March 25, 2009

ಅಡಿಕೆ ಚೂರು

ಬಸ್ಸು ಹತ್ತಿ ಕುಳಿತಾಗಿದೆ, ಬಸ್ಸು ಹೊರಟೂ ಆಗಿದೆ. ಶಿವಮೊಗ್ಗ ತಲುಪಲು ಇನ್ನು ಒಂದೂವರೆ ಗಂಟೆ ಪ್ರಯಾಣ, ಅದು ನಾನ್ ಸ್ಟಾಪ್ ಬಸ್ಸು, ಸಾಗರ ಬಿಟ್ಟರೆ ಮತ್ತೆ ನಿಲ್ಲಿಸುವುದು ಶಿವಮೊಗ್ಗವೆ. ಅಲ್ಲಿಯವರೆಗಿನ ಸಂಪೂರ್ಣ ಸ್ವಾತಂತ್ರ್ಯದ ಕೆಲಸ ಕಷ್ಟಕರ . ಹೊರಗಿನವರಿಗೆ ಅಂತಹ ದೊಡ್ಡ ವಿಚಾರವೇನಲ್ಲ, ಹಲ್ಲಿನ ಸಂದಿನಲ್ಲಿ ಮನೆಯಿಂದ ಹೊರಡುವಾಗ ಹಾಕಿದ ರಸಗವಳದಲ್ಲಿದ್ದ ಅಡಿಕೆಯ ಚೂರೊಂದು ಸಿಕ್ಕಿಕೊಂಡಿದೆ. ಇದೆಂತಾ ಘನಂದಾರಿ ವಿಷಯ ಅಂತ ಕೇವಲ ಮಾಡೋಣ ಎಂದು ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರೆ ಮನಸ್ಸು ಮೊದಲು ಹಲ್ಲಿನ ಸಂದಿಯಲ್ಲಿದ್ದ ಅಡಿಕೆಚೂರನ್ನು ಕಿತ್ತು ಬಿಸಾಕು ಎಂದು ಹೇಳುತ್ತಿದೆ, ಹಲ್ಲಿನ ಸಂದಿನಲ್ಲಿ ಬೃಹದಾಕಾರದ ಬಂಡೆಯಿದೆಯೇನೋ ಎಂಬ ಅನುಭವ. ನಾಲಿಗೆಯಂತೂ ಹಲ್ಲಿನ ಸುತ್ತಲೇ ಸುತ್ತುತ್ತಿದೆ. ಹಾಗಂತ ನೋವಿಲ್ಲ ಉರಿಯಿಲ್ಲ ಆದರೆ ಅಡಿಕೆ ಚೂರು ಈಚೆ ಬರಬೇಕು ಅಲ್ಲಿಯವರೆಗೂ ಮನಸ್ಸಿಗೆ ಸಮಾಧಾನ ಇಲ್ಲ. ಅಲ್ಲೆಲ್ಲೋ ಸಂದಿಯಲ್ಲಿ ಕಡ್ಡಿ ಇರಬಹುದು ನೋಡು ಎನ್ನುತ್ತಿದೆ ಮನಸ್ಸು ಅದಕ್ಕಾಗಿ ಹುಡುಕಾಟವೂ ನಡೆಯುತ್ತಿದೆ. ಊಹ್ಞು ಅಲ್ಲೆಲ್ಲಿದೆ ಕಡ್ಡಿ?. ಯಾವಾಗಲೂ ಅಂಗಿಯ ಮೇಲೆ ಇರುತ್ತಿದ್ದ ಗುಂಡುಪಿನ್ ಬಟ್ಟೆ ತೊಳೆಯುವಾಗ "ಸೊಂಯಕ್" ಅಂತ ಕೈಗೆ ಚುಚ್ಚಿ "ಬುಳ್" ಎಂದು ರಕ್ತ ಬರುತ್ತದೆ ಎಂಬ ಕಾರಣದಿಂದ ಅಂಗಿಯಲ್ಲಿ ಚುಚ್ಚಿ ಇಟ್ಟುಕೊಳ್ಳುವುದನ್ನು ಬಿಟ್ಟಾಗಿದೆ. ಮಗ ಸಂಧ್ಯಾವಂದನೆ ಮಾಡಿ ಉದ್ಧಾರವಾಗಲಿ ಎಂದು ಅಪ್ಪ ಸಾಲ ಸೋಲ ಮಾಡಿ ಉಪನಯನದ ಮೂಲಕ ಹಾಕಿದ ಜನಿವಾರಕ್ಕೆ ಜೋಲಾಡುತ್ತಾ ಸೇಫ್ಟಿ ಪಿನ್ ಇರುತ್ತಿತ್ತು ಆದರೆ ಜನಿವಾರ ಎಂಬುದು ಕರ್ಮಠರ ಸಂಕೇತ ಎಂದು ಬುದ್ದಿಜೀವಿಗಳು ಹೇಳಿದ ಮಾತನ್ನು ನಂಬಿ ಅದನ್ನು ಕಿತ್ತು ಬಿಸಾಕಿಯಾಗಿದೆ ಹಾಗಾಗಿ ಜನಿವಾರವೇ ಇಲ್ಲದಮೇಲೆ ಸೇಫ್ಟಿ ಪಿನ್ ಎಲ್ಲಿ?. ಅನುಭವಸ್ಥ ಬುದ್ದಿವಂತರು ಹೇಳುವಂತೆ ಬಚ್ಚಲು ಮನೆಯಲ್ಲಿ ಸ್ನಾನಕ್ಕೆ ಇಳಿದಾಗ ಬೆನ್ನುತಿಕ್ಕಲು ಮತ್ತು ಆಪತ್ಕಾಲದಲ್ಲಿ ಹಲ್ಲುಕುಕ್ಕುವ ಪಿನ್ ಇಟ್ಟುಕೊಳ್ಳಲು ಜನಿವಾರ ಇರಲೇಬೇಕು ಎನ್ನುವ ಮಾತನ್ನಾದರೂ ಪಾಲಿಸಿದ್ದರೆ ಇವತ್ತು ಆರಾಮಾಗಿ ಹಲ್ಲಿನ ಕುಳಿಯಲ್ಲಿದ್ದ ಅಡಿಕೆ ಚೂರು ಆಚೆಬರುತ್ತಿತ್ತು. ಅದೊಂದು ಕಿರಿಕಿರಿ ಇಲ್ಲದಿದ್ದರೆ ಕಿಟಕಿಯಿಂದ ಆಚೆ ಕಾಣುವ ಹಸಿರು ಮರಗಳು ದನಕಾಯುವ ಹುಡುಗರು ಹಿಂದೆ ಹಿಂದೆ ಓಡುವ ಸಾಲು ಮರಗಳು ಮುಂತಾದವುಗಳನ್ನೆಲ್ಲಾ ಮನಸಾರೆ ಸವಿದು ಮನೆಗೆ ಹೋದನಂತರ ಸ್ವಂತಕ್ಕೆ ಓದಲಾದರೂ ಒಂದು ಸುಂದರ ಕವನವನ್ನಾದರೂ ಬರೆಯಬಹುದಿತ್ತು. ಆದರೆ ಆ ಮಾತನ್ನೂ ಕೇಳದೆ ಈಗ ಒಂದು ಸಣ್ಣ ಅಡಿಕೆ ಚೂರಿನಿಂದ ಅದ್ಭುತ ಅವಕಾಶ ಕಳೆದುಕೊಂಡ ಭಾವನೆ ಬೆಳೆಯುತ್ತಿದೆ. ತತ್ ಇನ್ನು ಈ ಅಡಿಕೆ ತಿನ್ನುವ ದರಿದ್ರ ಚಟವನ್ನು ಬಿಟ್ಟು ಬಿಡಬೇಕು ಅನ್ನಿಸುತ್ತಿದೆ, ನಿತ್ಯ ಮನೆಯಲ್ಲಿ ಇದೇ ವಿಚಾರದಲ್ಲಿ ಹೆಂಡತಿಯೊಡನೆ ಕಾದಾಟ ಜಗ್ಗಾಟ, ಅವಳು "ಅಡಿಕೆ ತಂಬಾಕು ತಿನ್ನಬೇಡಿ ಅದು ಗಲೀಜು,ಕೆಟ್ಟ ವಾಸನೆ ಬೇರೆ, ಹತ್ತಿರ ಬಂದರೆ ವಾಂತಿ ಬಂದಹಾಗೆ ಆಗುತ್ತದೆ, ಆರೋಗ್ಯವೂ ಹಾಳು ಸಭ್ಯರ ಮುಂದೆ ಬೆಲೆ ಇರುವುದಿಲ್ಲ" ಎಂದು ಹೇಳಿದರೆ, "ಇಲ್ಲ ಎಂಟನೆ ಕ್ಲಾಸಿನಲ್ಲಿ ಸ್ಕೂಲಿಗೆ ಚಕ್ಕರ್ ಹೊಡೆದು ಬುಡಾನ್ ಸಾಬಿಯ ಅಂಗಡಿಗೆ ಮನೆಯಿಂದ ಕದ್ದು ತಂದ ಅಡಿಕೆಬೆಟ್ಟೆ ಕೊಟ್ಟು ಬೀಡಿ ಇಸಕೊಂಡು ಸೇದಿ ಚಟ ಕಲಿತೆ, ನಂತರ ಅದು ಬಿಡಬೇಕು ಎಂದು ಅಡಿಕೆ ಜತೆ ತಂಬಾಕು ತಿನ್ನುವುದನ್ನು ಕಲಿತೆ ಈಗ ಅದು ನನ್ನನ್ನು ಬಿಡಲಾರದ ಹಂತ ತಲುಪಿದೆ ಎಂದರೆ ಅವಳ ಮುಂದೆ ಮರ್ಯಾದೆಗೆ ಕಡಿಮೆ ಅಲ್ಲವೆ? ಎಷ್ಟೆಂದರೂ ಗಂಡನೆಂಬ ಗಂಡು ಸೋಲುವುದು ಹೇಗೆ? ಅದಕ್ಕಾಗಿ "ನಾವು ಅಡಿಕೆ ಬೆಳೆಗಾರರು ನಾವೇ ಅಡಿಕೆ ತಿನ್ನದಿದ್ದರೆ ಮತ್ಯಾರು ತಿಂದಾರು? ಅಡಿಕೆ ಬೆಳೆಯಬೇಕು ಆದರೆ ತಿನ್ನಬಾರದು ಎಂಬ ಮಾತು ನನಗೆ ಹಿಡಿಸದು" ಎಂಬ ತತ್ವಭರಿತ ಪೊಳ್ಳು ವಾಗ್ಬಾಣಗಳಿಂದ ಹೆಂಡತಿಯ ಬಾಯಿಯನ್ನು ಮುಚ್ಚಿಸುವಲ್ಲಿ ಯಶಸ್ಸು ಸಿಕ್ಕಿ ಮುಕ್ತಾಯಮಾಡುತ್ತಿದ್ದೆ. ಒಮ್ಮೊಮ್ಮೆ " ಸರಿ ನಾವು ಅಡಿಕೆ ಬೆಳೆಗಾರರು ತಾನೆ ಅಡಿಕೆ ಮಾತ್ರ ತಿನ್ನಿ, ಅದರ ಜತೆ ಉಂಡೆ ಉಂಡೆ ತಂಬಾಕು ಯಾಕೆ?" ಎಂಬ ವಾದಕ್ಕೆ "ಅಯ್ಯೋ ಮಂಕೆ ಯಾರಾದರೂ ಕಾಲಿಗೆ ಕೇವಲ ಸಾಕ್ಸ್ ಹಾಕಿ ಹೋಗುವುದನ್ನು ನೊಡಿದ್ದೀಯಾ? ಇಲ್ಲ ತಾನೆ, ಶೂ ಬೇಕೇ ಬೇಕು, ಕಾಲಿಗೆ ಸಾಕ್ಸ್ ಶೂ ಜತೆಯಾಗಿ ಇದ್ದಂತೆ ಕವಳಕ್ಕೆ ಅಡಿಕೆ ತಂಬಾಕು, ತಂಬಾಕು ಇಲ್ಲದಿದ್ದರೆ ನಿನ್ನ ಅಡಿಕೆ ಯಾರು ಕೇಳುತ್ತಿದ್ದರು? ನಿನ್ನ ಕೊರಳಲ್ಲಿ ಬಂಗಾರದ ಎರಡೆಳೆ ಅವಲಕ್ಕಿಬೀಜದ ಸರ ಎಲ್ಲಿ ತೊನೆದಾಡುತ್ತಿತ್ತು?" ಎಂದು ಹೆಂಗಸರ ಹೃದಯಕ್ಕೆ ನಾಟುವಂತಹ ಬಂಗಾರದ ಮಾತು . ಆಕೆ "ಏನಾದರೂ ಮಾಡಿಕೊಳ್ಳಿ ನನಗೆ ತಿಳಿದದ್ದನ್ನು ಹೇಳಿದೆ ನಿಮ್ಮಂತೆ ಮಾತಿನ ಚಾಲಾಕು ನನ್ನಲ್ಲಿಲ್ಲ" ಅಂತಿಮವಾಗಿ ಸೋಲುವುದು ಹೆಂಡತಿಯೇ. ಆದರೆ ಈಗ ಅದೇ ಅಡಿಕೆ ಚೂರು ಕಾಡುತ್ತಿದೆ, ಇನ್ನು ಮುಂದೆ ಅಡಿಕೆ ತಿನ್ನಬಾರದು ದರಿದ್ರದ್ದು ಹಲ್ಲಿನ ಸಂದಿಯಲ್ಲಿ ಕುಳಿತ ಸಾಸಿವೆಕಾಳಿನ ಗಾತ್ರದ ಅಡಿಕೆ ದೆಸೆಯಿಂದ ಬೇರೆ ಯೋಚನೆಯನ್ನೇ ಮಾಡಲಾಗದು, ಇಲ್ಲ ಅದು ದೊಡ್ಡ ಬೆಟ್ಟದಷ್ಟಿದೆ ಸಾಸಿವೆ ಕಾಳಿನಷ್ಟಿದ್ದರೆ ನಾನೇಕೆ ಅದರ ಹಿಂದೆ ಬೀಳುತ್ತಿದ್ದೆ ಎಂದು ಭ್ರಮಿಸುವ ನಾಲಿಗೆ ಅಡಿಕೆ ಚೂರನ್ನು ಈಚೆ ಬಾ ಈಚೆ ಬಾ ಎಂದು ಒಂದೇ ಸವನೆ ಬೆನ್ನುಹತ್ತಿದೆ, ವಿಚಿತ್ರಹಿಂಸೆ ಕುಳಿತಲ್ಲಿ ಕುಳಿತುಕೊಳ್ಳಲಾಗದು ಎದ್ದು ನಡೆಯುವಂತಿಲ್ಲ ಎಲ್ಲಿಂದ ತರಲಿ ಚೂಪನೆಯ ಮುಳ್ಳನ್ನ?. ನಿಧಾನವಾಗಿ ನಾನು ಬಾಯಿಗೆ ಕೈ ಹಾಕುವುದನ್ನು ಯಾರೂ ನೊಡುತ್ತಿಲ್ಲವೆಂದು ಖಚಿತಪಡಿಸಿಕೊಂಡು ತೋರ್‍ಬೆರಳನ್ನು ಬಾಯಿಯೊಳಗೆ ಹಾಕಿ ಅಡಿಕೆಯನ್ನು ಆಚೆ ಎಳೆಯಲು ಯತ್ನಿಸಿದೆ ಊಹ್ಞೂ ಅದು ಗಟ್ಟಿಪಿಂಡ ಆಚೆ ಬರಲೊಲ್ಲೆ ಎನ್ನುತ್ತಿದೆ, ಚೂಪನೆಯ ಪಿನ್ನು ಆಹಾ ಅದೊಂದು ಸಿಕ್ಕಿದ್ದರೆ ಮತ್ಯಾವುದೂ ಬೇಡ ಈಗ ಎನ್ನುತ್ತಿದೆ ಮನಸ್ಸು. ದೊಡ್ಡ ಗುಡ್ಡದಷ್ಟು ಇದೆಯೇನೋ ಅಂತ ಭ್ರಮಿಸುವ ಕಿಟ್ಟವನ್ನು ಮೂಗಿನೊಳಗೆ ಬೆರಳು ತೂರಿ ಆಚೆ ಈಚೆ ಯಾರಾದರೂ ಗಮನಿಸುತ್ತಿರಬಹುದಾ ಎಂದು ಕದ್ದು ನೋಡಿ ಹಗೂರ ಆಚೆ ಎಳೆದು ಉಂಡೆಕಟ್ಟಿ ಸ್ವಲ್ಪ ಹೊತ್ತು ಅದೇನೋ ಕಾಣದ ಹಿತವನ್ನು ಅನುಭವಿಸಿ ಬಿಸಾಕಿ ಬಿಡಬಹುದು. ಅಥವಾ ಕುಳಿತಲ್ಲಿಯೇ ಕೈಬಿಡಬಹುದು. ಆದರೆ ಹಲ್ಲಿನ ಸಂದಿಯಲ್ಲಿರುವ ಈ ಅಡಿಕೆ ಚೂರುಹಾಗಲ್ಲ. ಅದಕ್ಕೆ ಚೂಪಾದ ಕಡ್ಡಿಯೇ ಬೇಕು. ಬೀಡಿಯ ಹಿಂಬದಿಯೇ ಬೇಕು, ಬೆಂಕಿ ಕಡ್ಡಿಯೇ ಬೇಕು. ಯಾವ್ಯಾವುದು ಬೇಕು ಎಂದು ಗೊತ್ತು ಆದರೆ ಶರವೇಗದಿಂದ ಡರ್ರ್.... ಎಂದು ಮುನ್ನುಗ್ಗುತ್ತಿರುವ ಬಸ್ಸಿನಲ್ಲಿ ಅದನ್ನು ಹೊಂದಿಸುವ ಬಗೆ ಹೇಗೆ?, ರಸ್ತೆ ಬದಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹುಲ್ಲು ಕಡ್ಡಿ ಬೆಳೆದು ನಿಂತಿದೆ, ಅವುಗಳಲ್ಲಿ ಒಂದಿಂಚು ಉದ್ದದ ಒಂದೇ ಒಂದು ಕಡ್ಡಿ ನನ್ನ ಬೃಹದಾಕಾರದ ಸಮಸ್ಯೆಯನ್ನು ನೀಗಿಸಬಲ್ಲದು ಆದರೆ ಕಣ್ಣಿಗೆ ಕಾಣಿಸುತ್ತದೆ ಕೈಗೆ ಸಿಗುವುದಿಲ್ಲ, ಹೆಂಡತಿಯೊಡನೆ ಸಣ್ಣಪುಟ್ಟ ವಿಷಯಕ್ಕೆ ಜಗಳಮಾಡಿಕೊಂಡು ನಡೆದುಹೊರಟಾಗ ಎದುರು ಸಿಗುವ ಕಾಲೇಜು ಕನ್ಯೆಯ ಹಾಗೆ, ಪಕ್ಕದ ಸೀಟಿನಲ್ಲಿ ಕುಳಿತಿರುವ ಹೆಂಗಸಿನ ಕೈಯ ಬಳೆಯಲ್ಲಿರುವ ಪಿನ್ನು ಕಾಣಿಸುತ್ತಿದೆ, ಆದರೆ ಕೇಳಲು ಅದೇನೋ ಮುಜುಗರ. ಪಕ್ಕದಲ್ಲೋ ಮುಂದಿನ ಅಥವಾ ಹಿಂದಿನ ಸೀಟಿನಲ್ಲೋ ೨-೩ ರೂಪಾಯಿ ಬೆಲೆಯ ದಿನಪತ್ರಿಕೆ ಓದುತ್ತಿರುವವರ ಬಳಿ ಒಳಪುಟ ಕೇಳಬಹುದು, ಅಥವಾ ಅವರು ಮಡಚಿ ತೊಡೆಯ ಮೇಲೆ ಇಟ್ಟು ನಿದ್ರೆಗೆ ಹೋಗುವುದನ್ನೇ ಕಾದು ಹಗೂರ ಎಗರಿಸಿ ಓದಬಹುದು, ಅಕಸ್ಮಾತ್ ಅವರು ಎಚ್ಚರಗೊಂಡರೆ ಹೆ ಹೆ ಹೆ ಎಂದು ಹಲ್ಕಿರಿಯಬಹುದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಂಚೂರು ಪೇಪರ್ ಕೊಡ್ತೀರಾ ಅಂತ ಹಲ್ಕಿಸಿದು ಇಸಕೊಂಡು ಓದಿ ಯಡ್ಡಾದಿಡ್ಡಿ ಮಡಚಿ ವಾಪಾಸು ಕೊಟ್ಟು ಬಿಡಬಹುದು. ಆದರೆ ಇದು ಹತ್ತು ಪೈಸೆಯ ಬೆಲೆಯ ಪಿನ್ನು, ಪೇಪರ್‌ನಂತೆ ಹಗೂರ ಕೈಹಾಕಿ ತೆಗೆದುಕೊಳ್ಳುವಂತಿಲ್ಲ, ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿಬಿಡಬಹುದು. ಆದರೆ ನಾಲಿಗೆ ಸುಮ್ಮನೆ ಒಂದೆಡೆ ನಿಲ್ಲುತ್ತಿಲ್ಲ, ಅಡಿಕೆ ಚೂರನ್ನು ಮೀಟಿ ಮೀಟಿ ನಾಲಿಗೆ ತುದಿ ಉರಿಯಲು ಶುರುವಾಗಿದೆ, ಆದರೂ ಮನಸ್ಸು ಅಡಿಕೆ ಚೂರು ಹೊರಗೆ ಹಾಕು ಆಮೆಲೆ ಏನು ಬೇಕಾದರೂ ಮಾಡಿಕೋ ಎನ್ನುತ್ತಿದೆ. ಬಾಯಿಯನ್ನು ಬಲಬಾಗಕ್ಕೆ ಒತ್ತಿ ಪುಸ್ ಅಂತ ಗಾಳಿ ಎಲೆದುಕೊಂದಾಯಿತು, ಅಕ್ಕಪಕ್ಕದವರು ಕೆಕ್ಕರಿಸಿ ನೋಡುವಂತಹ ವಿಚಿತ್ರ ಶಬ್ದ ಬಂತೇ ಹೊರತು ಚೂರು ಜಗ್ಗಲಿಲ್ಲ. ಆಕೆಯ ಬಳಿ ಪಿನ್ನು ಇದೆ ಹೇಗೆ ಕೇಳುವುದು ಅಪಾರ್ಥ ಮಾಡಿಕೊಂಡರೆ? ಥೂ ದರಿದ್ರದವನೆ ಹೋಗಯ್ಯಾ ಅಂದರೆ?. ಪಿನ್ನು ಎಂಬುದು ಮಾತನಾಡಿಸಲು ಒಂದು ನೆಪ ಅಂತ ಅಂದುಕೊಂಡರೆ, ಆದರೆ ಆಕೆ ನಿಜವಾಗಿಯೂ ಮಾತನಾಡಿಸುವಷ್ಟರ ಮಟ್ಟಿಗೆ ಚಂದ ಇಲ್ಲ, ಈ ಚಂದ ಇಲ್ಲದವರದ್ದೇ ಸ್ವಲ್ಪ ಸೋಗು, ಅವರಿಗೆ ಒಳಗೊಳಗೆ ತಮ್ಮನ್ನು ಯಾರೂ ಮಾತನಾಡಿಸುವುದಿಲ್ಲ ಎಂಬ ಅಸಮಾಧಾನವಿರುತ್ತದೆ, ಅದು ಹೀಗೆ ಏನಾದರೂ ಮಾತನಾಡಿಸಿದಾಗ ಸ್ಫೋಟಗೊಳ್ಳಲು ಕಾಯುತ್ತಿರುತ್ತದೆ. ಅಕಸ್ಮಾತ್ ೪೮ ಜನರು ಪಯಣಿಸುತ್ತಿರುವ ಈ ಬಸ್ಸಿನಲ್ಲಿ ಸ್ಪೋಟಗೊಂಡು ಅಂತಹ ಗಲಾಟೆಗಳಿಗಾಗಿಯೇ ಕಾಯುತ್ತಿರುವ ಕ್ಷುದ್ರ ಮನಸ್ಸಿನ ಜನರ ದಾಹಕ್ಕೆ ನನ್ನ ದೇಹ ಈಡಾದರೆ, ಆ ಸುದ್ದಿಗೆ ಕಾಯುತ್ತಿರುವ ನನ್ನ ಪರಿಚಯಸ್ಥರು ಈ ಬಸ್ಸಿನಲ್ಲಿದ್ದು ಅವರು ಊರೆಲ್ಲಾ ಇದೇ ಸುದ್ದಿ ಹೇಳಿ ತಿರುಗಾಡಿದರೆ, ರಗಳೆಯೇ ಬೇಡ ಎನ್ನುತ್ತಿದೆ ಬುದ್ಧಿ ಆದರೆ ಮನಸ್ಸು ಮುಳ್ಳನ್ನು ಬಯಸುತ್ತಿದೆ, ಅಡಿಕೆ ಚೂರು ಎತ್ತಲು. ಇಷ್ಟು ಆಲೋಚನೆಯ ನಡುವೆಯೂ ನಾಲಿಗೆ ತನ್ನ ಕೆಲಸ ಮಾಡುತ್ತಲೇ ಇದೆ. ಈಗ ಪಳಕ್ ಅಂತ ಅಡಿಕೆ ಚೂರು ಹೊರ ಬಂದು ಬಿಡಬೇಕು ಆ ಒಂದು ಕ್ಷಣದ ಆನಂದ ವರ್ಣಿಸಲಸದಳ. ಆದರೆ ಬರುವುದಿಲ್ಲ. ಯಾವಾಗಲೂ ಪಿನ್ನು ಇಟ್ಟುಕೊಳ್ಳುವ ಜಾಗವನ್ನೆಲ್ಲಾ ತಡಕಾಡಿಸುತ್ತದೆ ಮನಸ್ಸು, ಇಲ್ಲ ಎಲ್ಲೂ ಇಲ್ಲ. ಅಂತೂ ಬಸ್ಸು ಇಳಿಯುವ ಜಾಗ ಬರುವವರೆಗೂ ಕಳೆಯುವುದು ಎಂದರೆ ಆಗದ ಮಾತು. ಹೊಟ್ಟೆಯಲ್ಲಿ ಗುಡಗುಡ ಆದರೆ ಡ್ರೈವರ್ ಬಳಿ ಕೆಳಿ ಬಸ್ಸು ನಿಲ್ಲಿಸಯ್ಯಾ ದೊರೆ ಅಂತ ಅಲವತ್ತುಕೊಳ್ಳಬಹುದು, ಇದು ಹೇಳಿ ಕೇಳಿ ಸಾಸಿವೆ ಕಾಳಿನಷ್ಟು ಅಡಿಕೆ ಚೂರು. ಯಾವ ಬಾಯಿಂದ ಹಾದಿಬದಿಯಲ್ಲಿದ್ದ ಮುಳ್ಳನ್ನು ಕಿತ್ತು ತರಬೇಕು ಹಲ್ಲಿನ ಸಂದಿಯಲ್ಲಿ ಅಡಿಕೆ ಚೂರು ಸಿಕ್ಕಿಕೊಂಡಿದೆ ಎಂದು ಡ್ರೈವರ್ ಬಳಿ ಕೇಳುವುದು. ಆತ ಕೇವಲವಾಗಿ ನೋಡಿಯಾನು, ತತ್ ಎಂದಾನು, ಇಲ್ಲ ಅದು ಆಗದ ಮಾತು, ಅಯ್ಯೋ ದೇವರೆ ನೀನೇ ಸೃಷ್ಟಿಸಿದ ಅಡಿಕೆ ನೀನೇ ಸೃಷ್ಟಿಸಿದ ಹಲ್ಲು ಮತ್ತು ನೀನೆ ಅದ್ಯಾವ ಮಾಯದಲ್ಲೋ ಕಣ್ಣಿಗೆ ಕಾಣಿಸದಷ್ಟು ಸಣ್ಣನೆಯ ಕ್ರಿಮಿ ಹಲ್ಲಿನೊಳಗೆ ಕಳಿಸಿ ಕೊರೆಸಿ ಮಾಡಿಸಿದ ಗುಳಿ, ಹ್ಞಾ ಗುಳಿ ಎಂದ ಕೂಡಲೆ ನೆನಪಾಯಿತು ಇಲ್ಲ ಈ ಸಾರಿ ಹಲ್ಲಿನ ಡಾಕ್ಟರ್ ಬಳಿ ಹೋಗಿ ಆ.... ಎಂದು ಬಾಯಿ ಕಳೆದು ಗುಳಿಬಿದ್ದ ಆ ಹಲ್ಲನ್ನು ಕೀಳಿಸಬೇಕು ಮತ್ತು ಇನ್ನುಮುಂದೆ ಕವಳ ಹಾಕಬಾರದು, ಇಡೀ ಬಸ್ಸಿನಲ್ಲಿ ಎಲ್ಲರೂ ಆರಾಮವಾಗಿದ್ದಾರೆ, ಕೆಲವರು ನಿದ್ರೆ, ಕೆಲವರು ಹೊರಗಡೆ ದೃಷ್ಟಿ ಹಾಯಲು ಬಿಟ್ಟು ಒಳ್ಳೆಯ ಕನಸು, ಮತ್ತೂ ಕೆಲವರು ಮುಂದೆ ಕುಳಿತ ಹುಡುಗಿ ನನಗೆ ಸಿಗಬಹುದಾ ಎಂದು ಎವೆಯಿಕ್ಕದೆ ಆಸೆಯ ನೋಟ, ಆದರೆ ನನಗೆ ಮಾತ್ರಾ ಗುಳಿ , ಚೂರು. ಛೆ ಇನ್ನು ಅಡಿಕೆ ತಿನ್ನಬಾರದು. ಇಂತಹ ದರಿದ್ರ ಚಟ ಮಾನಮರ್ಯಾದೆಯನ್ನು ಹರಾಜು ಹಾಕಿಬಿಡುತ್ತದೆ. ಹೌದು, ಬಿಟ್ಟು ಬಿಡಬೇಕು ಅಂತ ನೂರಾರು ಬಾರಿ ಪ್ರತಿಜ್ಞೆ ಮಾಡಿಯಾಗಿದೆ, ಊರಲ್ಲಿ ಯಾರಿಗಾದರೂ ಗಂಟಲು ಕ್ಯಾನ್ಸರ್ ಎಂದಾಕ್ಷಣ ಎದೆಯಲ್ಲಿ ಅದೇನೋ ಕುಟ್ಟಿ ಪುಡಿಮಾಡಿದ ಅನುಭವವಾಗಿ ಇಲ್ಲ ಇನ್ನು ಮುಂದೆ ಅಡಿಕೆ ತಿನ್ನಬಾರದು ಎಂದು ಧೀರ ಪ್ರತಿಜ್ಞೆ ಮಾಡಿದ್ದಿದೆ, ಆದರೆ ಅದು ಮೂರ್ನಾಲ್ಕು ತಾಸು ಅಷ್ಟೆ, ಕೊನೆಗೆ ಕಳ್ಳ ಮನಸ್ಸು ಅಯ್ಯೋ ಖಾಯಿಲೆ ಹೇಳಿ ಕೇಳಿ ಬರುತ್ತಾ ಅವೆಲ್ಲಾ ಡಾಕ್ಟರ್ ಸೃಷ್ಟಿಸುವ ಸುಳ್ಳು ಅಂತ ತನ್ನದೇ ತೀರ್ಮಾನ ತೆಗೆದುಕೊಂಡು ಗೊತ್ತಿಲ್ಲದಂತೆ ಕವಳ ಹಾಕಿಸಿಬಿಡುತ್ತೆ. ಆದರೆ ಇಷ್ಟೊಂದು ಅಸಾಹಾಯಕ ಹಿಂಸೆ ಹಿಂದೆಂದೂ ಆಗಿರಲಿಲ್ಲ. ಇನ್ನು ಸಾಕು ಇದೊಂದು ಚೂರು ಅಡಿಕೆ ಹಲ್ಲಿನ ಗುಳಿಯಿಂದ ಆಚೆ ಬಂದಮೇಲೆ ಅಡಿಕೆ ಗುಟ್ಕಾ ತಂಬಾಕು ಮುಟ್ಟಬಾರದು, ಇದು ಸತ್ಯದ ಪ್ರತಿಜ್ಞೆ. ಕ್ಷಣ ಕ್ಷಣಕ್ಕೂ ಅಡಿಕೆ ಹಲ್ಲಿನ ಸಂದಿಯಲ್ಲಿ ಭಾರವಾಗುತ್ತಿದೆ, ಹೇ ಭಗವಂತಾ ಮೂಗಿನದ್ದೋ ಕಿವಿಯದ್ದೋ ಗಲೀಜು ಹೊರಹಾಕಲು ಸಣ್ಣ ಸಣ್ಣ ಬೆರಳನ್ನು ಕೊಟ್ಟೆ, ಅದೇ ರೀತಿ ಒಂದೇ ಒಂದು ಚೂಪನೆಯ ಪಿನ್ನು ನೀನು ಮನಸ್ಸು ಮಾಡಿದ್ದರೆ ಎಲ್ಲಾದರೂ ಇಡುವುದು ಕಷ್ಟವಾಗಿರಲಿಲ್ಲ ಗಟ್ಟಿಯಾದ ಒಂದೇ ಒಂದು ಬೆರಳಿನ ಉಗುರು ಚೂಪಾಗಿ ಪಿನ್ನಿನಂತೆ ಇಟ್ಟುಬಿಡಬಹುದಿತ್ತು ಅದೇಕೆ ಇಡಲಿಲ್ಲ ನೀನು ತಪ್ಪಿದೆಯಲ್ಲವೇ ಮುಂದಿನ ಪೀಳಿಗೆಯಲ್ಲಾದರೂ ತಿದ್ದಿಕೋ ಎಂದು ಕಾಣದ ದೇವರಿಗೆ ಉಪಾಯ ಹೇಳಿಕೊಟ್ಟಾದರೂ ನಾಲಿಗೆ ಮಾತ್ರಾ ಕದಲದು, ಇಲ್ಲ ಖಂಡಿತಾ ದೇವರು ಇದ್ದಾನೆ, ಇಲ್ಲದಿದ್ದರೆ ನನಗೆ ಈ ಸಹಾಯ ಸಿಗುತ್ತಿರಲಿಲ್ಲ. , ಅಯ್ಯೋ ಮಂಕೆ ನಾನಿದ್ದೇನೆ ತಲೆ ಎತ್ತು ಅಲ್ಲಿದೆ ನಿನಗೆ ಬೇಕಾದ ಕಡ್ಡಿ ಅಂತ ಆಶರೀರವಾಣಿ ಖುದ್ದಾಗಿ ಬಂದು ಹೇಳದಿದ್ದರೂ ದೇವರ ವಿಚಾರ ನೆನಪಾದಾಗ , ಬಸ್ಸಿನ ಪೋಟೋಕ್ಕೆ ಹಚ್ಚಿದ್ದ ಊದುಕಡ್ಡಿ ಕಾಣಿಸಿತು. ಬತ್ತಿ ಉರಿದು ಹಲ್ಲುಚುಚ್ಚಲೆಂದೇ ಸೃಷ್ಟಿ ಮಾಡಿದ್ದಾರೇನೋ ಎನ್ನುವಂತಹ ಕಡ್ಡಿ, ಸಧ್ಯ ಅದಕ್ಕೆ ಏನೋ ಆ ಭಗವಂತ ಡ್ರೈವರ್ ಹಿಂದಿನ ಸೀಟಿನಲ್ಲಿ ಕೂರಿಸಿದ್ದ. ಹಗೂರ ಎದ್ದು ಆಚೆ ಈಚೆ ನೋಡಿ ಲಗ್ಗೇಜ್ ಬಾಕ್ಸನಲ್ಲಿ ಏನೋ ಹುಡುಕುವಂತೆ ನಾಟಕವಾಡಿ ಪೋಟೋದಲ್ಲಿ ಉರಿದು ಉಳಿದಿದ್ದ ಊದಿನ ಕಡ್ಡಿ ತೆಗೆದು ಹಲ್ಲಿನ ಸಂದಿಯಲ್ಲಿ ಅಡಗಿ ಕುಳಿತಿದ್ದ ಅಡಿಕೆಯನ್ನು ಮೀಟಲು ಅಣಿಯಾದೆ ಅಷ್ಟರಲ್ಲಿ ನಾಲಿಗೆಯೇ ಪಳಕ್ಕೆಂದು ಅಡಿಕೆಯ ಚೂರನ್ನು ಹೊರ ಹಾಕಿತು. ಅಮ್ಮಾ ನಿರಾಳವಾಯಿತು. ಚೂರು ಹೊರ ಬಂದಾಗ " ಆಹಾ ಅಯ್ಯೋ ದೇವರೆ ಒಂದೂವರೆ ಗಂಟೆಗಳ ಕಾಲ ಒಂದು ಸಣ್ಣ ಅಡಿಕೆ ಚೂರು ಹಲ್ಲಿನ ಸಂದಿಯಲ್ಲಿಟ್ಟು ಅದೆಷ್ಟು ತೊಂದರೆ ಕೊಟ್ಟೆಯಪ್ಪಾ" ಅಂತ ಅನ್ನಿಸಿದ್ದು ಸುಳ್ಳಲ್ಲ. ಅಂತೂ ಶಿವಮೊಗ್ಗ ಬಂತು. ಈ ದರಿದ್ರ ಹಲ್ಲುಗುಳಿಯ ಕಾಲದಲ್ಲಿ ಅಡಿಕೆ ಬಾಯಿಗೆ ಹಾಕುವಂತಿಲ್ಲ, ನಾಳೆ ಇಡೀ ಹಲ್ಲನ್ನು ಕೀಳಿಸಿ ಎಸೆಯಬೇಕು,ಇನ್ನು ಮೇಲೆ ಅಡಿಕೆ ತಿನ್ನಬಾರದು. ಇದೇ ಕೊನೆ ಅಂತ ಆಲೋಚಿಸುವಷ್ಟರಲ್ಲಿ ಸರಿ ನಾಳೆ ಹೇಗೂ ಹಲ್ಲು ಕೀಳಿಸುತ್ತೇನಲ್ಲ ಅಷ್ಟರತನಕ ತಿನ್ನಬಹುದಲ್ಲ, ಹೇಗೂ ನಾಡಿದ್ದಿಂದ ಇಲ್ಲವೇ ಇಲ್ಲ ಎಂದು ಒಳಮನಸ್ಸು ಚುಚ್ಚತೊಡಗಿತು, ಅರೆ ಹೌದು ಅಡಿಕೆ ತಿನ್ನದೆ ಎರಡು ತಾಸು ಕಳೆಯಿತು ನಾಳೆಯಿಂದ ಖಂಡಿತಾ ಅಡಿಕೆ ತಿನ್ನಬಾರದು ಎಂಬ ಗಟ್ಟಿ ನಿರ್ಧಾರದೊಂದಿಗೆ ಅಂಗಡಿಯವನ ಬಳಿ ಹೋಗಿ "ಒಂದು ಪ್ಯಾಕೇಟ್ ಗುಟ್ಕಾ ಒಂದು ಜನಿವಾರ ಮತ್ತು ಎರಡು ಸೇಫ್ಟಿ ಪಿನ್ ಕೊಡಿ" ಎಂದು ಹೇಳಿದೆ.

2 comments:

PARAANJAPE K.N. said...

ಶರ್ಮರೆ,
ನಿಮ್ಮ ಅಡಿಕೆಚೂರು ಓದಿ ಮಜಾಬ೦ತು, ಬಹಳ ಚೆನ್ನಾಗಿ ಬರೆದಿದ್ದೀರಿ

Keshav.Kulkarni said...

ಸೂಪರ್,

ನಿಮ್ಮ ಈ ಬರಹ ತುಂಬ ಖುಷಿಯಾಯಿತು.

ಕೇಶವ (www.kannada-nudi.blogspot.com)