Monday, March 30, 2009

ಗುಲ್ಲು

ಬುಡಾನ್‌ಸಾಬಿ ದುಗುಡ ತುಂಬಿದ ಮುಖದಿಂದ ತಾಮ್ರದ ಹಂಡೆಯನ್ನು ಡಣ ಡಣ ಬಡಿಯುತ್ತಿದ್ದ. ಕೆಲಸ ಮುಗಿಸುವ ಭರಾಟೆಯಲ್ಲಿ ಎಂದಿಗಿಂತ ತುಸು ಹೆಚ್ಚಿನ ಶಬ್ದ ಕುಲುಮೆಯ ಸುತ್ತಲಿನ ಪರಿಸರಕ್ಕೆ ರವಾನೆಯಾಗುತ್ತಿತ್ತು. ನಿತ್ಯ ಬುಡಾನ್ ಹಂಡೆಗೆ ಹೊಡೆಯುವ ಸದ್ದಿಗೆ ರಾಮ್‌ಗಿಳಿ, ಪಾರಿವಾಳ,ಕೋಗಿಲೆ ಮುಂತಾದ ಸಾತ್ವಿಕ ಪಕ್ಷಿಗಳು ಕುಲುಮೆಯ ಆಜುಬಾಜು ಸುಳಿಯುತ್ತಿರಲಿಲ್ಲ ಆದರೆ ಇಂದಿನ ಸದ್ದಿಗೆ ಕಾಗೆ, ಅರಸನ ಹಕ್ಕಿ, ಕುಂಡೆ ಕುಣುಕನ ಹಕ್ಕಿಗಳೂ ಕೂಡ ದೂರವೇ ಉಳಿದಿದ್ದವು. ಅಷ್ಟರಮಟ್ಟಿಗಿನ ಏರುಶೃತಿ ಕುಲುಮೆಯಿಂದ ಹೊರಹೊಮ್ಮುತ್ತಿತ್ತು. ಈ ಏರು ಶೃತಿಗೆ ಮುಖ್ಯ ಕಾರಣ ಬುಡಾನ್ ಸಾಬಿಗೆ ಮಧ್ಯಾಹ್ನದ ನಮಾಜಿಗೆ ತಡವಾಗುತ್ತಿದ್ದುದಾಗಿತ್ತು.
ಬುಡಾನ್, ಪ್ರತೀ ವರ್ಷ ಮಳೆಗಾಲ ಮುಗಿದ ತಕ್ಷಣ ಘಟ್ಟದ ಕೆಳಗಿನ ತನ್ನ ಹುಟ್ಟಿದ ಊರಾದ ಕುಂದಾಪುರದ ಪೇಟೆಯಿಂದ ಪಾತ್ರೆಗೆ ಕಲಾಯಿ ಹಾಕುವ ಸಾಮಾನು ಹೊತ್ತುಕೊಂಡು ಕಾಲುಮನೆ ಎಂಬ ಘಟ್ಟದ ಮೇಲಿನ ಸಣ್ಣ ಹಳ್ಳಿಗೆ ಬರುವುದು ಅಪ್ಪನ ಕಾಲದಿಂದಲೂ ನಡೆದುಕೊಂಡು ಬಂದ ರಿವಾಜು. ಹಾಗೆ ಘಟ್ಟದ ಮೇಲೆ ಬಂದ ಬುಡಾನ್‌ಗೆ ತಾಮ್ರ ಹಾಗೂ ಹಿತ್ತಾಳೆ ಪಾತ್ರೆಗಗೆ ಕಲಾಯಿ ಹಾಕುವುದು ಕೆಲಸ. ಕಾಲ ಕಳೆದಂತೆ ಸ್ಟೀಲ್ ಪಾತ್ರೆಗಳ ದಾಂಗುಡಿಯಿಂದ ಬುಡಾನ್‌ಗೆ ಕೆಲಸ ಕಡಿಮೆಯಾಗಿತ್ತು. ಆದರೆ ಕಾಲುಮನೆ ಹಳ್ಳಿಯ ಜನರು ಸ್ನಾನದ ಹಂಡೆ ಹಾಗೂ ಅಡಿಕೆ ಬೇಯಿಸುವ ಹಂಡೆಗೆ ಇನ್ನೂ ತಾಮ್ರವನ್ನೇ ಉಪಯೋಗಿಸುತ್ತಿದ್ದುದರಿಂದ ಮೊದಲಿನಂತೆ ಆರು ತಿಂಗಳು ಕೆಲಸ ಸಿಗದಿದ್ದರೂ ಮೂರು ತಿಂಗಳ ಕೆಲಸಕ್ಕೆ ತೊಂದರೆ ಇರಲಿಲ್ಲ. ಈ ಮೂರು ತಿಂಗಳ ಸಂಪಾದನೆಯಿಂದ ಊರಲ್ಲಿರುವ ಅವನ ಹೆಂಡತಿ ಮಕ್ಕಳ ಒಂಬತ್ತು ತಿಂಗಳ ಜೀವನಕ್ಕೆ ತೊಂದರೆ ಇರಲಿಲ್ಲ. ಇನ್ನುಳಿದ ಮೂರು ತಿಂಗಳು ಊರಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸ ಸಿಗುತ್ತಿತ್ತು. ಹಾಗಾಗಿ ಬುಡಾನ್ ಹಾಗೆ ಘಟ್ಟದ ಮೇಲೆ ಬರುವುದನ್ನು ತಪ್ಪಿಸುತ್ತಿರಲಿಲ್ಲ. ಘಟ್ಟದ ಮೇಲಿನ ಕಾಲುಮನೆ ಗೆ ಬಂದಾಗ ಅವನಿಗೆ ಒಂದೇ ಒಂದು ಸಮಸ್ಯೆ ಎಂದರೆ ನಮಾಜಿನದು. ಬುಡಾನ್ ಶುಕ್ರವಾರದ ನಮಾಜಿಗೋಸ್ಕರ ತಾಳಗುಪ್ಪದ ಮಸೀದಿ ಗೆ ಐದು ಕಿಲೋಮೀಟರ್ ನಡೆದುಕೊಂಡು ಹೋಗಿ ನಮಾಜು ಮುಗಿಸಿ ವಾಪಾಸು ಬರಬೇಕಿತ್ತು. ವಾರಕ್ಕೊಂದು ದಿವಸವಾದರೂ ಮಸೀದಿಗೆ ತೆರಳಿ ನಮಾಜ್ ಮಾಡದಿದ್ದರೆ ಸೈತಾನ ಆವರಿಸಿಕೊಳ್ಳುತ್ತಾನೆ ಹಾಗಾಗಿ ಸೈತಾನನಿದ್ದ ಜಾಗದಲ್ಲಿ ಸುಖ ಇರುವುದಿಲ್ಲಎಂದು ಅವನ ಅಪ್ಪ ಬಾಲ್ಯದಿಂದಲೇ ಬುಡಾನ್ ಗೆ ಕಲಿಸಿದ್ದರಿಂದ ಅದೊಂದು ಕಟ್ಟಳೆಯನ್ನು ತಪ್ಪದೇ ಪಾಲಿಸುತ್ತಿದ್ದ. ವಾರದ ಮಿಕ್ಕೆಲ್ಲ ದಿವಸ ಮನೆಯಲ್ಲಿಯೇ ಮೆಕ್ಕಾದ ದಿಕ್ಕಿನಲ್ಲಿ ನಮಾಜ್ ಮಾಡಿ ಶುಕ್ರವಾರ ಮಾತ್ರಾ ಮಸೀದಿಗೆ ಹೋಗುತ್ತಿದ್ದ. ಆ ಕಾರಣಕ್ಕಾಗಿ ಬುಡಾನ್ ಶುಕ್ರವಾರ ಕುಲುಮೆಗೆ ರಜಾ ಘೋಷಿಸಿಬಿಡುತ್ತಿದ್ದ. ಆದರೆ ಇವತ್ತು ಪುಟ್ಟೆ ಗೌಡರ ಮನೆಯ ಬಚ್ಚಲು ಹಂಡೆ ಅನಿರೀಕ್ಷಿತವಾಗಿ ಸೋರಲು ಶುರುವಾಗಿದ್ದರಿಂದ ಮತ್ತು ಅದನ್ನು ಗೌಡ್ತಿಯ ಮಧ್ಯಾಹ್ನದ ಸ್ನಾನದೊಳಗೆ ದುರಸ್ತಿ ಮಾಡಿಕೊಡಬೇಕು ಎಂದು ತಾಮ್ರದ ಹಂಡೆ ಹೊತ್ತು ತಂದ ಆಳಿನ ಮೂಲಕ ಗೌಡರು ಕಟ್ಟಪ್ಪಣೆ ಮಾಡಿದ್ದರಿಂದ ಅನಿವಾರ್ಯವಾಗಿ ಕೆಲಸಮಾಡುವಂತಾಗಿತ್ತು. ಬುಡಾನ್ ಸಾಬಿ ಗೌಡರ ಅಣತಿಯನ್ನು ಮೀರುವಂತಿರಲಿಲ್ಲ ಕಾರಣ ಅಪ್ಪನ ಕಾಲದಿಂದ ಪ್ರತೀ ವರ್ಷ ಘಟ್ಟದ ಮೇಲಿನ ಮಳೆಗಾಲ ಮುಗಿದ ತಕ್ಷಣ ಕಾಲುಮನೆಗೆ ಬರುವ ಬುಡಾನ್ ಗೆ ಕುಲುಮೆ ಹಾಕಲು ಪುಟ್ಟೇ ಗೌಡರು ರಸ್ತೆ ಪಕ್ಕದಲ್ಲಿದ್ದ ತಮ್ಮ ಬಿಡಾರದ ಒಂದು ಅಂಕಣದಲ್ಲಿ ಕಿಣಿಯ ಕಿರಾಣಿ ಅಂಗಡಿಗೂ ಹಾಗೂ ಇನ್ನೊಂದನ್ನು ವಾರಕ್ಕೊಮ್ಮೆ ಬರುವ ಕ್ಷೌರದ ಗೋಪಿಗೂ ಮತ್ತು ಅದರ ಪಕ್ಕದಲ್ಲಿ ಬಿಡಾರವನ್ನು ಬುಡಾನ್ ನ ಕುಲುಮೆಗೂ ಕೊಟ್ಟಿದ್ದರು. ಎರಡು ಬಿಡಾರಕ್ಕೂ ಗೌಡರು ಬಾಡಿಗೆ ಅಂತ ನಗದು ರೂಪದಲ್ಲಿ ಅಷ್ಟಿಷ್ಟು ತೆಗೆದುಕೊಳ್ಳುತ್ತಿದರು. ಆದರೆ ಬುಡಾನ್ ಗೆ ಮಾತ್ರಾ ಕುಲೆಯ ಜಾಗ ಸಂಪೂರ್ಣ ಪುಕ್ಕಟೆ, ಆ ಮುಲಾಜಿಗೆ ಬುಡಾನ್ ಗೌಡರ ಮನೆಯ ಪಾತ್ರೆಪಗಡವನ್ನು ದುರಸ್ತಿ ಮಾಡಿಕೊಡಬೇಕಾಗುತ್ತಿತ್ತು. ಅದಕ್ಕೆ ಗೌಡರು ಇಷ್ಟೇ ಅಂತ ಅಲ್ಲದಿದ್ದರೂ ಅಲ್ಪಸ್ವಲ್ಪ ಹಣ ಕೊಡುತ್ತಿದ್ದರು. ಹಾಗಾಗಿ ಅವರ ತುರ್ತು ಕೆಲಸವನ್ನು ನಿರ್ಲಕ್ಷಿಸಿ ನಮಾಜಿಗೆ ಹೋಗುವಂತಿರಲಿಲ್ಲ. ಹಾಗಂತ ನಮಾಜನ್ನೂ ಬಿಟ್ಟುಬಿಡುವಷ್ಟು ಧೈರ್ಯ ಬುಡಾನ್ ಸಾಬಿಗೂ ಇರಲಿಲ್ಲ. ಆ ಕಾರಣದಿಂದ ಕೊಟ ಕೊಟ ಸದ್ದಿನೊಂದಿಗೆ ಹೊಸದಾದ ತಾಮ್ರದ ಪಟ್ಟಿ ಯನ್ನು ತವರದ ಮುಖಾಂತರ ಬೆಸುಗೆ ಹಾಕುವ ಕೆಲಸವನ್ನು ಧಾವಂತದಲ್ಲಿ ಮುಗಿಸಲು ಹವಣಿಸುತ್ತಿದ್ದ. ಬುಡಾನ್ ಗೆ ಒಂದೆಡೆ ನಮಾಜಿನ ಚಿಂತೆ ಮತ್ತೊಂದೆಡೆ ನಮಾಜು ಮಾಡಲು ಮಸೀದಿಗೆ ಮೂರು ಕಿಲೋಮೀಟರ್ ನಡೆದುಹೋಗುವ ಚಿಂತೆ ಎಲ್ಲಾ ಒಟ್ಟಿಗೆ ಆವರಿಸಿಕೊಂಡು ಮುಖದಲ್ಲಿ ದುಗುಡ ತುಂಬಿತ್ತು.
ಕೆಲಸದ ಒತ್ತಡದಿಂದ ಕಪ್ಪನೆಯ ಮಸಿ ಹಿಡಿದ ತಾಮ್ರದ ಹಂಡೆಯನ್ನು ಡಣ ಡಣ ಎಂದು ಹೊಡೆಯುತ್ತಿದ್ದ ಬುಡಾನ್ ಗೆ ಕುಲುಮೆಯೆದುರು ಹೊಚ್ಚ ಹೊಸ ಕಾರೊಂದು ಬಂದು ನಿಂತಿದ್ದು ಹಾಗೂ ಅದರಿಂದ ನಾಲ್ಕಾರು ಜನ ಇಳಿದು ಒಳಗೆ ಬಂದಿದ್ದು ಅರಿವಿಗೆ ಬರಲಿಲ್ಲ. ಕಾರಿನಿಂದ ಇಳಿದು ಬಂದ ಯುವಕರಲ್ಲೊಬ್ಬಾತ ಸಲಾಂ ಅಲೇಕುಂ ಬುಡಾನ್ ಚಾಚಾ ಎಂದು ಎರಡನೇ ಸಾರಿ ಹೇಳಿದಾಗ ಬುಡಾನ್ ಗೆ ಕುಲುಮೆಯ ಬಾಗಿಲಿನಲ್ಲಿ ಶ್ರೀಮಂತರ ಮಕ್ಕಳು ಎಂದು ನೋಡಿದಕೂಡಲೇ ಹೇಳಬಹುದಾದ ಈ ನಾಲ್ಕು ಯುವಕರು ಕಂಡಿದ್ದು. ಬುಡಾನ್ ಸಾಬಿಯ ಕುಲುಮೆಯ ಎದುರು ನಿತ್ಯ ಹತ್ತಾರು ದೊಡ್ಡ ಕಿಮ್ಮತ್ತಿನ ಕಾರುಗಳು ಲಿಂಗನಮಕ್ಕಿ ಜಲಾಶಯದ ಹಿನ್ನೀರಿಗೆ ಹೋಗುತ್ತಿದ್ದವು . ಅಲ್ಲಿಗೆ ಹೋಗುವವರು ಕಿಣಿಯ ಅಂಗಡಿಯಲ್ಲಿ ರಸ್ತೆ ವಿಚಾರಿಸಲು ನಿಲ್ಲಿಸುತ್ತಿದ್ದರು. ಕಿಣಿ ಅಂಗಡಿ ಬಾಗಿಲು ಹಾಕಿದ ಸಂದರ್ಭದಲ್ಲಿ ಒಮ್ಮೊಮ್ಮೆ ಕುಲುಮೆಯ ಮುಂದೆ ಕಾರು ನಿಲ್ಲಿಸಿ ಹೊನ್ನೆಮರಡು ಗೆ ದಾರಿ ಕೇಳುತ್ತಿದ್ದರೇ ಹೊರತು ಇಳಿದು ಕುಲುಮೆಯ ಒಳಗೆ ಯಾರೂ ಬರುತ್ತಿರಲಿಲ್ಲ. ಆದರೆ ಇವತ್ತು ಈ ಹುಡುಗರು ಒಳಗೆ ಬಂದಿದ್ದಾರೆ ಎಂದರೆ ಯಾರೋ ಪರಿಚಿತರೇ ಇರಬೇಕು, ಆದರೆ ಗುರುತು ಸಿಕ್ಕುತ್ತಿಲ್ಲ, ಏನಾದರಾಗಲೀ ವಿಚಾರಿಸಿದರೆ ಹೇಳುತ್ತಾರಲ್ಲ ಎಂದು ಬುಡಾನ್ ಅರೆ. ಮೆರೋಕೊ ಜಾನ್ಪೆಚಾನ್ ನಹಿ ಹುವಾ... ಕೌನ್ ಹೊ ತುಮ್ ಲೋಗ್ ಎಂದು ಅಚ್ಚರಿಯ ನೋಟದ ಜತೆಗೆ ಮರುಪಶ್ನಿಸಿದ. ಕುಂದಾಪುರದ ರಫೀಕ್ ರ ಅಣ್ಣನ ಮಗ ನಾನು, ಜಾವೇದ್ ಅಂತ ನನ್ನ ಹೆಸರು. ನಾವು ಬೆಂಗಳೂರಿನಲ್ಲಿ ಸಾಪ್ಟವೇರ್ ಕಂಪನಿಯಲ್ಲಿ ಕೆಲ್ಸ ಮಾಡೊದು. ಹೊನ್ನೆಮರಡು ವಾಟರ್ ಫಾಲ್ಸ್ ದೇಕ್ನೇಕೋ ಇದರ್ ಆಯಾತ, ಎಂದು ಅರ್ದ ಕನ್ನಡ ಬೆರಸಿ ಯುವಕನೊಬ್ಬ ಹೇಳಿ ನಂತರ ತಾನು ಕಂಪನಿ೦iiಲ್ಲಿ ಕೆಲಸ ಮಾಡುತ್ತಿದ್ದ ಜತೆಗಾರರೊಡನೆ ಜಲಾಶಯದ ಹಿನ್ನೀರಿನಲ್ಲಿ ವೀಕೆಂಡ್ ಕಳೆಯಲು ಬಂದಿದ್ದು ಹಾಗೂ ಇನ್ನೂ ಒಂದು ದಿವಸ ಇಲ್ಲೇ ಟೆಂಟ್ ಹಾಕಿ ಉಳಿದು ನೇಚರ್ ಬಗ್ಗೆ ಸ್ಟಡಿ ಮಾಡುವುದು, ನೀರಿನಲ್ಲಿ ಕಯಾಕಿಂಗ್ ಮಾಡುವುದು ಮುಂತಾವುದರ ಬಗ್ಗೆ ಹಾಗೂ ತಾನು ಎರಡು ದಿನ ಇಲ್ಲಿಯೇ ಉಳಿಯುವುದರ ಬಗ್ಗೆ ವಿವರಿಸಿದ.
ಬುಡಾನ್ ಗೆ ಕಯಾಕಿಂಗ್. ನೇಚರ್ ಮುಂತಾದವುಗಳು ಅರ್ಥವಾಗದಿದ್ದರೂ ನೆಂಟರ ಹುಡುಗ ಎರಡು ದಿನ ಇಲ್ಲಿಯೇ ಉಳಿಯುತ್ತಿದ್ದಾನೆ ಎಂಬುದು ಮನವರಿಕೆಯಾಯಿತು. ಅರೆ ಬೇಟಾ ಇದು ಗರೀಬ್ ಕಾ ಮಖಾನ್, ಇಲ್ಲಿ ನಿಮ್ಮಂತೋರು ಉಳಿಯೋದು ಹೆಂಗೆ? ಎಂದು ಮಿಕ್ಕ ಹುಡುಗರತ್ತ ನೋಡಿ ಬುಡಾನ್ ಹೇಳಿದ.
ಇಲ್ಲ ನಾವು ಕಾಡಲ್ಲಿ ಟೆಂಟ್‌ನಲ್ಲಿ ಉಳಿತೀವಿ, ನೇಚರ್ ಸಂಸ್ಥೇಲಿ ಬುಕ್ ಮಾಡಿದೀವಿ ಹಾಗಾಗಿ ಊಟ ಎಲ್ಲಾ ಅವ್ರೇ ನೋಡ್ಕೋತಾರೆ, ಈ ಕಾರು ವಾಪಾಸ್ ಹೋಗಿಬಿಡುತ್ತೆ ಈಗ, ನಮ್ಮ ಲಗೇಜ್ ಇಟ್ಕೋಳ್ಳಾಕೆ ಕಾಡಲ್ಲಿ ಕಷ್ಟ ಹಾಗಾಗಿ ನಮ್ದೊಂದಿಷ್ಟು ಲಗ್ಗೇಜ್ ಇಲ್ಲಿ ಇಡಬೇಕಿತ್ತು. ಎಂದ
ಓ ಅದಕ್ಕೇನು ತೊಂದ್ರೆ ಬೇಟೆ ಅಲ್ಲಿ ಇಡಿ ಎಂದು ಹೇಳಿ ಕುಲುಮೆಯ ಮೂಲೆಯಲ್ಲಿ ಜಾಗ ತೋರಿಸಿ ಬುಡಾನ್ ತನ್ನ ಕೆಲಸದಲ್ಲಿ ಮಗ್ನನಾದ.
ಹುಡುಗರು ಒಂದು ಸೂಟ್‌ಕೇಸ್ ಕಾರಿನಿಂದ ಇಳಿಸಿ ತಂದು ಒಳಗಿಟ್ಟು ನಾಡಿದ್ದು ವಾಪಾಸು ಬರುವುದಾಗಿ ಹೇ ಹೋದರು. ಬುಡಾನ್ ಲಗುಬಗೆಯಿಂದ ಹಂಡೆಗೆ ಕೊನೆಯ ಬೆಸಿಗೆ ಹಾಕಿ, ನಮಾಜಿಗೆ ಮೈಶುದ್ಧ ಮಾಡಿಕೊಂಡು ಹೊಸ ಬಟ್ಟೆ ಟವೆಲ್ ಧರಿಸಿ ಪುಟ್ಟೆಗೌಡರ ಹಂಡೆಯನ್ನು ಒಯ್ಯಲು ಬಂದಿದ್ದ ಅವರ ಮನೆಯಾಳು ಶೀನನಿಗೆ ಕೊಟ್ಟು ಬಿಡಾರಕ್ಕೆ ಬೀಗ ಹಾಕಿಕೊಂಡು ತಾಳಗುಪ್ಪದತ್ತ ಹೆಜ್ಜೆ ಹಾಕಿದ.
*******
ತಲೆಯ ಮೇಲೆ ದುರಸ್ತಿಯಾದ ಹಂಡೆ ಹೊತ್ತು ಹೊರಟ ಶೀನನಿಗೆ ಆ ನಾಲ್ಕು ಯುವಕರ ಐಷಾರಾಮಿನ ವರ್ತನೆ ಕಾಡತೊಡಗಿತು. ತಾನೂ ಓದಿದ್ದರೆ ಅವರಂತೆ ಜುಂ ಅಂತ ಕಾರಲ್ಲಿ ಹೋಗಬಹುದಿತ್ತು, ಇಪ್ಪತ್ತೈದು ವರ್ಷದಿಂದ ಗೌಡರ ಮನೆಗೆ ಮಣ್ಣು ಹೊತ್ತರೂ ಇನ್ನು ಒಂದೇ ಒಂದು ಸಾರಿ ಅಂತಹ ಕಾರಿನ ಒಳಗೆ ಕೂರಲಾಗಲಿಲ್ಲ. ತಥ್ ಈ ಜನ್ಮಕ್ಕಿಷ್ಟು ಬೆಂಕಿ ಹಾಕ ಎಂದು ತನ್ನ ಜೀವನವನ್ನು ತನ್ನಷ್ಟಕ್ಕೆ ತಾನು ಶಪಿಸಿಕೊಂಡು ಸಿಟ್ಟಿನಿಂದ ಕೆಂಬಣ್ಣದ ಎಲೆ ಅಡಿಕೆಯನ್ನು ಪಿಚಕ್ಕನೆ ರಸ್ತೆಗೆ ಉಗಿದ. ಅಷ್ಟರಲ್ಲಿ ಎದುರಿನಿಂದ ಸೇರುಗಾರ ಕೊಗ್ಗ ಶೆಟ್ಟಿ ತೋಟದ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೆ ಹೊರಟವನು ಎದುರಾಗಿ ಅದ್ಯಾರಿಗೋ ಬೈತಾ ಹೊಂಟಿದ್ಯಲೋ ಶೀನಾ,, ಯಾರಿಗಾ? ಎಂದು ಪ್ರಶ್ನಿಸಿದ.
ಅಲ್ಲ ಬುಡಾನ್ ಸಾಬ್ರ ಕುಲಿಮಿಗೆ ಬೆಂಗ್ಳೂರಿಂದ ನಾಲ್ಕು ಹುಡುಗ್ರು ಬಂದಿದ್ರು, ಅವ್ರ ಹಂಗೆ ದೊಡ್ಡ ಕಿಮ್ಮತ್ತಿನ ಕಾರ್ನಲ್ಲಿ ಬುಲೆಟ್ ಹೋದಂಗೆ ..ನಾವೆಲ್ಲಾ ಹೋಪುದ್ಯಾವಾಗ? ಎಂದೆ ಎಂದು ಹೇಳಿ ತಲೆಯ ಮೇಲೆ ಹಂಡೆಯ ಭಾರ ಇರುವುದರಿಂದ ನಿಲ್ಲದೆ ಬಿರಬಿರನೆ ಮುನ್ನೆಡದ.
ಕೊಗ್ಗ ಶೆಟ್ಟಿಗೆ ಶೀನ ಹೇಳಿದ್ದು ಸಂಪೂರ್ಣ ಅರ್ಥವಾಗಲಿಲ್ಲ, ಮತ್ತೆ ಬಿಡಿಸಿ ಕೇಳಲು ಶೀನ ನಿಲ್ಲಲಿಲ್ಲ. ಹಾಗಾಗಿ ಕಿಣಿ ಅಂಗಡಿಯಲ್ಲಿ ಮಿಕ್ಕ ವಿಷಯ ಸಿಗಬಹುದೆಂದು ಅಲ್ಲಿಗೆ ಹೋಗಿ ಹೋಯ್ ಬುಡಾನ್ ಸಾಬ್ರ ಕುಲುಮೆಯಿಂದ ಯಾರೋ ಕಾರಲ್ಲಿ ಬುಲೆಟ್ ತಕಂಡು ಹೋದ್ರು ಅಂತ ಶೀನ ಹೇಳ್ದ ಎಂತ ಅದು? ಎಂದು ಕೇಳಿದ.
ಅಂಗಡಿಯಲ್ಲಿ ಮಧ್ಯಾಹ್ನ ದ ಸಮಯ ಕಳೆಯಲು ಬಂದಿದ್ದ ನಾಲ್ಕಾರು ಜನಕ್ಕೆ ಕಿವಿ ನೆಟ್ಟಗಾಯಿತು. ಚರ್ಚೆ ಕುಚರ್ಚೆಗಳು ನಡೆಯಿತು. ಒಬ್ಬಾತ ಓ ಹೌದು ನಾನು ಕಾರಿಂದ ಎಂತದೋ ಭಾರವಾದ ಸೂಟ್ ಕೇಸ್ ಇಳಿಸ್ತಾ ಇದ್ದಿದ್ದ ಕಂಡೆ, ನಾಲ್ಕು ಜನ ಇದ್ರು, ಒಬ್ಬ ಗಡ್ಡ ಬಿಟ್ಟಿದ್ದ ಎಂದು ವಿವರಿಸಿದ. ಮತ್ತೊಬ್ಬಾತ ಓ ಅದಾ ನಾನು ಎಂತಪಾ ಅನ್ಕಂಡೆ, ಕಾರು ಆಚೆ ಹೋದ ತಕ್ಷಣ ಬುಡಾನ್ ಸಾಬ್ರು ಗಡಿಬಿಡಿಲಿ ಬಾಗ್ಲು ಹಾಕ್ಕಂಡು ಪೇಟೆ ಕಡೆ ಹೋದ್ರಪಾ ಎಂದ.
ನಾನು ಅಂಗಡಿಯೊಳಗೆ ಅದೇನೋ ಸಾಮಾನು ಕಟ್ತಾ ಇದ್ದಿದ್ದೆ, ಹೊನ್ನೇಮರಡುವಿಗೆ ಹೋಗೋರಾಗಿದ್ರೆ ನನ್ನತ್ರ ದಾರಿ ಕೇಳ್ತಿದ್ರು, ಕುಲುಮೆ ಒಳಗೆ ಹೋಗಿ ಸೂಟ್‌ಕೇಸ್ ಇಟ್ರೂ ಅಂದ್ರೆ ನಂಗ್ಯಾಕೋ ಉಗ್ರಗಾಮಿಗಳಾ ಅಂತ ಅನುಮಾನ, .॒.ಬುಡಾನ್ ಸಾಬಿ ಕುಲುಮೆಯಲ್ಲಿ ಬಾಂಬ್ ಗೀಂಬ್ ಇಟ್ಟು ಹೋಗಿದಾರಾ..ಅಂತ, ನಾವು ಸ್ವಲ್ಪ ಹುಷಾರಾಗಿರ್ಬೇಕು, ಅವರೆಲ್ಲಾ ಒಂದೆ ಹೋಯ್.. ಎಂದು ಕಿಣಿ ಅತ್ತ ನಿರ್ಧಾರವನ್ನೂ ಹೇಳದೆ ಇತ್ತ ಅಲ್ಲಗಳೆಯದೇ ಅನುಮಾನದ ಮಾತುಗಳನ್ನಾಡಿದ. ಹೊನ್ನೇಮರಡುವಿಗೆ ಟೂರಿಸ್ಟ್‌ಗಳಿಗೆ ಅಲೋ ಮಾಡ್ಬೇಡಿ ಅಂತ ನಾನು ಬಡ್ಕಂಡೆ, ಈಗ ನೋಡಿ ಬಾಂಬ್ ನಮ್ಮೂರಿಗೆ ಬಂದಂಗಾತು ಮಗದೊಬ್ಬ ತನ್ನದೇ ಆದ ತರ್ಕದ ಮೂಲಕ ಹೊಸ ವಿಷಯ ಸೇರಿಸಿದ. ನಾಲ್ಕು ಜನರ ಚರ್ಚೆಗೆ ಅಲ್ಲಿಯೇ ಇದ್ದ ಹತ್ತಾರು ಕಿವಿಯ ಮುಖಾಂತರ ಒಳ ಸೇರಿ ಸ್ವಲ್ಪ ಮಾರ್ಪಾಡಿನೊಂದಿಗೆ ಬಿತ್ತರವಾಗತೊಡಗಿತು. .
ಅಷ್ಟರಲ್ಲಿ ಮಧ್ಯಾಹ್ನದ ಅಡುಗೆಗೆ ಅಕ್ಕಿಯನ್ನು ಒಲೆಯಮೇಲಿಟ್ಟು ಹುಣಿಸೆ ಹಣ್ಣು ಮೆಣಸಿನಕಾಯಿ ಒಯ್ಯಲು ಬಂದಿದ್ದ ಈರಕ್ಕಳಿಗೆ, ಬಾಂಬು, ಉಗ್ರಗಾಮಿಗಳು ಮತ್ತು ಬುಡಾನ್ ಸಾಬಿಯ ಕುಲುಮೆ ಎಂಬ ಮೂರು ಶಬ್ದಗಳು ಆಳವಾಗಿ ತಲೆಯೊಳಗೆ ಇಳಿಯಿತು. ಪ್ರತಿನಿತ್ಯ ಸಣ್ಣಯ್ಯ ಹೆಗಡೆಯವರ ಮನೆಯ ಟಿವಿಯಲ್ಲಿ ಇದೇ ತರಹದ ಸುದ್ದಿ ನೋಡಿ ಅಭ್ಯಾಸವಾಗಿದ್ದ ಆಕೆ ತನ್ನ ಮನೆಗೆ ಬಾಂಬುಬಿದ್ದವರಂತೆ ಭ್ರಮಿಸಿ ಮನೆ ಸೇರಿ ಲಗುಬಗೆಯಿಂದ ಅಡಿಗೆ ಮಾಡಿ ಊಟ ಮಾಡಿ ಸಣ್ಣಯ್ಯ ಹೆಗಡೆಯವರ ಮನೆ ಜಗುಲಿ ಸೇರಿ
ಒಡೆಯಾ ಬುಡಾನ್ ಸಾಬಿ ಕುಲುಮೆಗೆ ಯಾರೋ ಬಾಂಬ್ ಹಾಕೋರು ಬಂದಿದಾರಂತೆ, ಬುಡಾನ್ ಅವರ ಜತೆ ಸೇರಿದಾನಂತೆ ಎಂಬ ಬಿಸಿಬಿಸಿ ಸುದ್ದಿ ಹೇಳಿದಳು. ಎಸ್.ಎಸ್.ಎಲ್ ಸಿ ಗೋತಾ ಹೊಡೆದು ಊರಲ್ಲಿ ಠಳಾಯಿಸಿಕೊಂಡಿದ್ದ ಸಣ್ಣಯ್ಯ ಹೆಗಡೆಯವರ ಏಕಮಾತ್ರ ಪುತ್ರ ರತ್ನ ಮಹೇಶನಿಗೆ ಈ ವಿಷಯ ಕೇಳಿದತಕ್ಷಣ ದೇಶಪ್ರೇಮ ಉಕ್ಕಿಹರಿದಂತಾಗಿ ಮರುಕ್ಷಣ ತನ್ನನ್ನು ಒಂದು ಲೆವಲ್ಲಿಗೇರಿಸಲು ಭಗವಂತನೇ ಈ ಸುದ್ದಿಯನ್ನು ತನ್ನ ಕಿವಿಗೆ ಮೊದಲು ತಲುಪಿಸಿದ್ದಾನೆಂದು ಭಾವಿಸಿ ತನ್ನಂತಯೇ ಇದ್ದ ಸ್ನೇಹಿತರಿಗೆ ಲಗುಬಗೆಯಿಂದ ಬಾಂಬಿನ ಸುದ್ದಿ ಬಿತ್ತರಿಸಿದ.
ಊರಿನ, ಕೇರಿಯ, ಪಕ್ಕದೂರಿನ, ಆಜುಬಾಜು ಹಳ್ಳಿಯ ಎಲ್ಲಾ ಫೋನುಗಳು ಅರ್ದ ಘಂಟೆಗಳಲ್ಲಿ ಬಾಂಬಿನ ಸುದ್ದಿಯನ್ನು ಆಚೆ ಈಚೆ ಹರಿದಾಡಿಸಿದವು. ಅವುಗಳಲ್ಲಿ ಯಾವುದೋ ಒಂದು ಫೋನಿನ ಧ್ವನಿ ಪೋಲೀಸ್ ಸ್ಟೇಷನ್ನಿಗೂ ಸುದ್ದಿ ತಲುಪಿಸಿತು.
ಅಷ್ಟೇ ಹುಟ್ಟಿರುವ ಹಾಗೂ ನಾಳೆ ನಾಡಿದ್ದರಲ್ಲಿ ಇಲ್ಲವಾಗುವ ಎಲ್ಲರನ್ನೂ ಸೇರಿಸಿದರೂ ನೂರರ ಗಡಿದಾಟದ ಜನಸಂಖ್ಯೆಯ ಕಾಲುಮನೆಯಲ್ಲಿ ತಾಸಿನೊಳಗೆ ಐದಾರು ನೂರು ಜನರು ಆತಂಕದ ಮುಖ ಹೊತ್ತು ಓಡಾಡತೊಡಗಿದರು. ರೊಂಯ್ಯ ರೊಂಯ್ಯ ಸದ್ದು ಮಾಡುತ್ತಾ ಪೋಲೀಸ್ ಜೀಪು ಬಂತು. ಜೀಪಿನಿಂದ ಇಳಿದ ಪೋಲೀಸರು ಅಪಾಯದ ಪರಿಸ್ಥಿತಿಯಿರುವುದರಿಂದ ಮೊದಲು ಕುಲುಮೆಯ ಸಮೀಪದಿಂದ ಜನರನ್ನು ದೂರ ಸರಿಸಿ ನಂತರ ಕುಲುಮೆಯ ಬಾಗಿಲೊಡೆದು ಒಳಪ್ರವೇಶಿಸಿದರು. ಎದುರೇ ಸಿಕ್ಕಿದ ಸೂಟ್ಕೇಸ್ ಬಾಗಿಲನ್ನು ಹಾರೆ ಹಾಕಿ ಒಡೆದು ತೆಗೆದರು. ಅದರಲ್ಲಿ ಒಂದಿಷ್ಟು ಬಟ್ಟೆ ಹಾಗೂ ಬಿಸ್ಕೀಟ್‌ಪ್ಯಾಕೇಟ್ ಮುಂತಾದವುಗಳು ಮಾತ್ರಾ ಕಂಡಿತಾದರೂ ಮುಂದಿನ ತನಿಖೆಗಾU ಅವುಗಳನ್ನು ಕೆಂಪುಬಟ್ಟೆ ಸುತ್ತಿ ಸೀಝ್ ಮಾಡಿ ಒಂದಿಬ್ಬರು ಆ ನಾಲ್ಕು ಹುಡುಗರನ್ನು ಪತ್ತೆ ಮಾಡಲು ತೆರಳಿದರು ಮಿಕ್ಕವರು ಬುಡಾನ್ ಸಾಬಿಯ ಆಗಮನಕ್ಕೆ ಕಾದು ಕುಳಿತರು.
****************
ನಮಾಜ್ ಮುಗಿಸಿ ಆಚೆ ಬರುತ್ತಿದ್ದ ಬುಡಾನ್ ಸಾಬಿಗೆ, ಹಳ್ಳಿ ಹಳ್ಳಿ ಓಡಾಟ ಮಾಡಿ ಕೊಳೆಚಿಕಣಿ ಅಡಿಕೆ ವ್ಯಾಪಾರ ಮಾಡುವ ಅನ್ವರ್ ಎದುರು ಸಿಕ್ಕಿದ. ಅನ್ವರ್ ಬಳಿ ಬುಡಾನ್ ಅರೆ ಕ್ಯೂ ಬಯ್ಯಾ, ಆಜ್ ಲೇಟ್ ಹೋಗಯಾ.... ಎಂದು ಕೇಳಿದ. ಬುಡಾನ್ ಸಾಬಿಯನ್ನು ಕಂಡು ಗಾಬರಿಯ ಮುಖ ಹೊತ್ತ ಅನ್ವರ್
ಚಾಚಾ ನಿಮ್ದು ಮನೇಲಿ ಬೆಂಕಿ ಹತ್ತಿ ಉರಿತಾ ಇದ್ರೆ ನೀವಿಲ್ಲಿದೀರಿ ಎಂದ. ಅನ್ವರ್ ನ ಮಾತು ಅರ್ಥವಾಗದ ಬುಡಾನ್ ಏನು? ಎಂದು ಕೇಳಿದಾಗ ಅನ್ವರ್, ಪೋಲೀಸರು, ಸೂಟ್ಕೇಸ್‌ಬಾಂಬ್, ಹಾಗೂ ಕುಲೆಮೆಯೆದುರು ನೂರಾರು ಜನ ಸೇರಿದ್ದು, ಮತ್ತು ಪೋಲೀಸರ ಸಮೇತ ಅವರೆಲ್ಲಾ ಬುಡಾನ್ ಗೆ ಹುಡುಕುತ್ತಾ ಇರುವುದು ಹಾಗೂ ಆ ಗಲಾಟೆಯಲ್ಲಿ ತಾನು ನಮಾಜ್ ಗೆ ಬರುವುದು ತಡವಾಗಿದ್ದು ಎಲ್ಲವನ್ನೂ ವಿವರಿಸಿದ. ಬುಡಾನ್ ಸಾಬಿಗೆ ಒಮ್ಮೆ ನಖಶಿಕಾಂತ ಬೆವರಿತು. ಇನ್ನು ತಾನಲ್ಲಿ ಕಾಲಿಟ್ಟರೆ ಏಟು ತಿನ್ನಬೇಕಾದಿತೆಂದು ತನ್ನ ಅನ್ನಕ್ಕೆ ಕಲ್ಲಿಟ್ಟ ನೆಂಟರ ಹುಡುಗರನ್ನು ಶಪಿಸುತ್ತಾ ಲಗುಬಗೆಯಿಂದ ಉಟ್ಟಬಟ್ಟೆಯಲ್ಲಿಯೇ ಕಾಲುಮನೆಯ ಬಿಡಾರ ಹಾಗೂ ತನ್ನ ಎಲ್ಲಾ ಸಾಮಾನುಗಳ ಆಸೆ ತೊರೆದು ಬದುಕಿದ್ದರೆ ಬೇಡಿ ತಿಂದೇನು ಎನ್ನುತ್ತಾ ಕುಂದಾಪುರದ ಬಸ್ಸನ್ನೇರಿದ.
*****************
ಮುಂದಿನ ಮೂರ್ನಾಲ್ಕು ದಿವಸಗಳ ಕಾಲ ಸುದ್ದಿಗೆ ರಕ್ಕೆಪುಕ್ಕ ಬಂದು ಕುಣಿದಾಡಿತಾದರೂ ನಂತರ ಸುದ್ದಿ ಜೊಳ್ಳು ಎಂದು ತಿಳಿದು ಕಾಲುಮನೆ ತಣ್ಣಗಾಯಿತು. ನಂತರದ ದಿನಗಳಲ್ಲಿ ಡಣ ಡಣ ಶಬ್ದ ಇಲ್ಲದ ಕಾರಣ ಮುರಿದ ಬಾಗಿಲ ಕುಲುಮೆಯ ಮಾಡಿನಲ್ಲಿ ಪಾರಿವಾಳಗಳು ಗೂಡುಕಟ್ಟಿಕೊಳ್ಳತೊಡಗಿದವು. ರಾಮಗಿಣಿ, ಕೋಗಿಲೆ ಮುಂತಾದವುಗಳು ದಿನಕ್ಕೊಮ್ಮೆ ಬಂದು ಅವುಕ್ಕೆ ಸಾಥ್ ನೀಡತೊಡಗಿದವು. ಕಾಲುಮನೆಯ ಕೆಲ ಜನರು ಕುಲುಮೆ ಕೆಲಸಕ್ಕೆ ಐದು ಕಿಲೋಮೀಟರ್ ನಡೆ೦iiತೊಡಗಿದರು. ಹಲವರು ತಾಮ್ರದ ಹಂಡೆಯ ಹಂಗನ್ನೇ ತೊರೆದರು.
--------------------------------------------------

4 comments:

Keshav.Kulkarni said...

ಕತೆ ತುಂಬ ಇಷ್ಟವಾಯಿತು. ಭಾಷೆ ಮತ್ತು ವಸ್ತುವಿನ ಮೇಲೆ ನಿಮ್ಮ ಹಿಡಿತ ಅದ್ಭುತವಗಿದೆ. ನಿಮ್ಮ ಬ್ಲಾಗನ್ನು ಪೂರ್ತಿ ಓದುಬೇಕು ಅನಿಸಿದೆ, ಯಾವಾಗ ಆಗುತ್ತೋ ಗೊತ್ತಿಲ್ಲ.

ನಿಮ್ಮ ಬರಹ ದೊಡ್ಡಗಾಗಿರುವುದರಿಂದ, ನಿಮ್ಮ ಬ್ಲಾಗಿನ ಆಕಾರ ಬದಲಿಸಿದರೆ ಚೆಂದ ಎಂದು ನನ್ನ ಭಾವನೆ.

- ಕೇಶವ (www.kannada-nudi.blogspot.com)

Govinda Nelyaru said...

ಕಥೆಯ ವಿಷಯ, ಅನಿರೀಕ್ಷಿತ ತಿರುವುಗಳು ಎಲ್ಲವೂ ಇಷ್ಟವಾಯಿತು. ಮೊದಲು ಪ್ರಕಟವಾದಾಗಲೇ {ಕನ್ನಡ ಪ್ರಭ ??} ನಿಮಗೆ ಪತ್ರಿಸಬೇಕೆಂದು ಯೊಚಿಸಿದ್ದು ಈಗ ನೆನಪಾಯಿತು. ನಿಜ, ನಮ್ಮಲ್ಲೂ ಕೆಲವು ಸಾರಿ ಗಾಳಿ ಸುದ್ದಿಯ ಮೇಲೆ ಆ ಜಾತಿಯವರು ಓಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ನೀವು ಹೇಳದೆ ಇದ್ದರೆ ಸಣ್ಣಯ್ಯ ಹೆಗಡೆಯವರ ಏಕಮಾತ್ರ ಪುತ್ರ ರತ್ನ ಮಹೇಶ ಈ ಸುದ್ದಿಯ ಮೂಲ ಎನ್ನುವುದು ನಮಗೂ ಗೊತ್ತಾಗುತ್ತಿರಲಿಲ್ಲ. ಅವನನ್ನು ಯಾರೂ ವಿಚಾರಿಸುವುದಿಲ್ಲ. thanks.

ಗೋವಿಂದ

ಮೃತ್ಯುಂಜಯ ಹೊಸಮನೆ said...

ನಿನ್ನ ಕತೆಗಳನ್ನು ಓದಿದೆ. ವಿವರಗಳನ್ನು ಒಗ್ಗೂಡಿಸುತ್ತ, ಕತೆ ಕಟ್ಟುವ ನಿನ್ನ ಶಕ್ತಿಯ ಬಗ್ಗೆ ಮಾತಿಲ್ಲ. ಭಾಷೆಯ ಬಳಕೆಯ ಬಗ್ಗೆಯೂ ಹೊಗಳಿಕೆ ಇದೆ.ಲವಲವಿಕೆಯ ಭಾಷೆ.ಸಬಲವಾಗಬಹುದಾದ ಕತೆಯ ಆಶಯವನ್ನು, ರೋಚಕ ತಿರುವು ಕೊಡುವ ಹುನ್ನಾರದಲ್ಲಿ ಯಾಕೆ ದುರ್ಬಲಗೊಳಿಸ್ತೀಯ?

Unknown said...

ಕೇಶವ್ ಕುಲಕರ್ಣಿ

ಧನ್ಯವಾದಗಳು. ಹೊಸ ಮಾದರಿ ಹುಡುಕುತ್ತೇನೆ.


ಗೋ.ಭಟ್ರೆ.

ಏನೋ ಹೀಗೆ. ತ್ಯಾಂಕ್ಸ್

ಮೃ.ಮಾ

ಹ ಹ ಹ . ಜನ ಕೇಳ್ತಾರೆ ಅನ್ನೋ ಭಾವ. ಮತ್ತು ನನ್ನ ಕಥೆ ಆರಂಭಿಸಿ ಹಾಗೆಯೇ ಮುಕ್ತಾಯ ಮಾಡುವ ಪರಿಪಾಠ.ಇವೆರಡೂ ಸೇರಿ ಹಾಗೆ ಫಲಿತಾಂಶ.
ಪ್ರಾಯಶ: ತಿದ್ದಿಕೊಳ್ಳಲಾಗದು.ಗಿಡ ಬಗ್ಗೀತು. ಅಂಕುಡೊಂಕು ಬೆಳೆದ ಮರ ಬಗ್ಗಲಾರದು.