Thursday, April 16, 2009

ಅಂತರ್ಯಾತ್ರೆ

ಎಲ್ಲಾ ಅಂದುಕೊಂಡಂತಯೇ ಆಗಿದ್ದರೆ "ಕಟ್ಟು ಕಥೆಯ ಕಟ್ಟು" ಎಂಬ ಹೆಸರಿನ ನನ್ನದೆ ಕಥಾಸಂಕಲನವೊಂದು ಇದೇ ಏಪ್ರಿಲ್ ನಲ್ಲಿ ಹೊರಬರಬೇಕಾಗಿತ್ತು. ಹಿಂದೆಯೇ ಬ್ಲಾಗ್ ನಲ್ಲಿ ಹಾಗೆ ಬರೆದಿದ್ದೆ ಕೂಡ. ನಮ್ಮ ಕಥೆಯನ್ನು ನಾವೇ ಪ್ರಕಟಿಸಿಕೊಳ್ಳಬೇಕು ಹಾಗು ನಾವೇ...! ಓದಿಕೊಳ್ಳಬೇಕು ಎಂದು. ಆದರೆ ಎಲ್ಲಾ ಅಂದುಕೊಂಡಂತೆ ಆಗಲಿಲ್ಲ. ಹಾಗಾಗಿ ಕಥಾ ಸಂಕಲನ ಹೊರಬರಲಿಲ್ಲ. ಕಾರಣ..? ನೂರಾರು ಹೇಳಬಹುದು.
ಕಳೆದ ಎರಡು ತಿಂಗಳಿನಿಂದ ನನ್ನ ಬರವಣಿಗೆ ಅಪೂಟ್ ಬಂದ್ ಆಗಿದೆ. ದಿನಕ್ಕೊಂದು ಬ್ಲಾಗ್ ವಾರಕ್ಕೊಂದು ಕಥೆ ಹದಿನೈದು ದಿನಕ್ಕೊಂದು ಲೇಖನ ಅಂತೆಲ್ಲಾ ಬರೆಯುತ್ತಿದ್ದವನು ಅದೇಕೋ ಮಂಕಾಗಿಬಿಟ್ಟೆ. ಓದುವ ಹವ್ಯಾಸವನ್ನು ನಿಲ್ಲಿಸಿಬಿಟ್ಟೆ. ಯಾವಾಗಲೋ ಬರೆದ ಕಥೆಗಳನ್ನು ಬ್ಲಾಗ್ ಗೆ ಅಪ್ ಲೋಡ್ ಮಾಡುವುದನ್ನು ಬಿಟ್ಟರೆ ಮತ್ತಿನ್ನೇನೂ ಮಾಡಲಿಲ್ಲ. ಪರಿಚಯ ಇರುವ ಬರಹಗಾರರಿಗೆ ಪೋನ್ ಹಚ್ಚುವುದನ್ನೂ ಬಿಟ್ಟೆ. ಅದಕ್ಕೆ ಮುಖ್ಯ ಸಬೂಬು ಎಂದರೆ ನನ್ನೊಳಗೆ ನಾನು ಇಳಿಯುವ ಯತ್ನಕ್ಕೆ ಕೈ ಹಾಕಿದ್ದು. ವೇದ ಶಾಸ್ತ್ರಗಳ ಹಂಗಿಲ್ಲದೆ, ಪುರಾಣ ಪುಣ್ಯ ಕಥೆಗಳ ಮಾರ್ಗದರ್ಶನವಿಲ್ಲದೆ, ಇತಿಹಾಸದ ಅವಲೋಕನವಿಲ್ಲದೆ, ಪೂರ್ವಾಗ್ರಹದ ಯೋಚನೆಯಿಲ್ಲದೆ ನನ್ನೊಳಗೆ ನಾನು ಮುಳುಗಿದೆ. ಮತ್ತು ಇನ್ನು ಮುಳುಗುತ್ತಲೇ ಇದ್ದೇನೆ. ಅದೇನೋ ಸಿಕ್ಕಂತಾಗುತ್ತಿದೆ. ಮತ್ತೆ ಮರೀಚಿಕೆ. ಹಾಗೆ ಇಳಿಯುತ್ತಾ ಸಾಗುತ್ತಾ ಇರುವ ಅಂತರ್ಯಾತ್ರೆ ಅದ್ಬುತವನ್ನು ಕಲ್ಪಿಸಿದೆ. ಅದನ್ನು ಎಲ್ಲಾ ಹೇಳಬೇಕು ಅಂತ ಅನ್ನಿಸುತ್ತದೆ ಆದರೆ ಅದಕ್ಕೆ ಪಕ್ವವಾದ ಕಾಲ ಇನ್ನೂ ಬಂದಿಲ್ಲ ಅಂತಲೂ ಹೆದರಿಸುತ್ತದೆ ಒಳಮನಸ್ಸು.

ಅಷ್ಟರೊಳಗೆ ಕಥಾಸಂಕಲನ ಹೊರ ತರಬೇಕು. ಏಪ್ರಿಲ್ ತಿಂಗಳಿನಲ್ಲಿ ಕಥಾಸಂಕಲನ ಹೊರತರಲಾಗದ್ದಕ್ಕೆ ಮೇಲಿನ ಕಾರಣ ಯಾವುದೂ ಅಲ್ಲ. ಜೇಬಿನದ್ದು ಮುಖ್ಯ ಕಾರಣ. ಕನಿಷ್ಟ ಇಪ್ಪತ್ತು ಸಾವಿರ ರೂಪಾಯಿ ಬೇಡುವ ಕಥಾಸಂಕಲನದ ಕೆಲಸ ತುಸು ಕಷ್ಟಕರ ಅಂತ ಮೇಲ್ಮನಸ್ಸಿಗೆ ಅನ್ನಿಸುತ್ತಿದೆ. ಆದರೆ ಅಂತರ್ಯಾತ್ರೆಯ ಸಮಯದಲ್ಲಿ ಅದಕ್ಕೊಂದು ಖಚಿತ ಉತ್ತರ ಸಿಕ್ಕಿದೆ. ನಡಯಲೇಬೇಕಾದ್ದು ನಡದೇ ನಡೆಯುತ್ತದೆ. ಅದು ಸರಿ ಆದರೆ ಅದು ಹೇಗೆ? ಎಂಬುದು ಮೆಲ್ಮನಸ್ಸಿನ ಪ್ರಶ್ನೆ?. ಉತ್ತರ ಇಂದು ಗೊತ್ತಿಲ್ಲ. ನಾಳೆ...? ನೋಡೋಣ.

5 comments:

ವಿಕಾಸ್ ಹೆಗಡೆ said...

ಅಂತರ್ಯಾತ್ರೆ, ಹೊರಗೆ ಪುಸ್ತಕ ಯಾತ್ರೆ ಎರಡೂ ಚೆನ್ನಾಗಿ ನೆಡಿಲಿ. ಕಾಯ್ತಿರ್ತೀವಿ.

PARAANJAPE K.N. said...

ಶರ್ಮರೆ
ನಿಮ್ಮ ಅ೦ತರ್ಯಾತ್ರೆ ಓದಲು ನಾವ೦ತೂ ರೆಡಿ ಇದ್ದೇವೆ, ಯಾವಾಗ ಹೊರಡುತ್ತೆಹೇಳಿ

Anonymous said...

ನಮಸ್ತೇ.
ನನ್ನದೇ ಡೈಲಾಗ್ ಕಾಪಿ ಮಾಡಿದಂತಿದೆ.
ಇರಲಿ, ಸೆಂಸೇಷನಲ್ ವಿಚಾರಗಳ ಕಾಪಿ ಒಳ್ಳೆಯದೇ.
ನನ್ನ ಮೂಡೂ ಹಾಗೇ ಸಾಗುತ್ತಿದೆ.
ಅಂದರೆ ಅಕ್ಷರಕ್ಷರದ ಅಂತರ ದೊಡ್ಡದಾಗಿ ಕಂಡು, ಮನ ಅದರ ಅರ್ಥಕ್ಕಾಗಿ ತಡಕಾಡುತ್ತಿದೆ.
ವಾಕ್ಯಗಳ ಸರಣಿಯ ಮಧ್ಯದ ಸಂಬಂಧವೇ ಅರ್ಥವಾಗುತ್ತಿಲ್ಲ.

ನಾನು ಯಾರು ಎಂದು ನಿಮಗೆ ಗೊತ್ತು.

ಹೊಸಮನೆ said...

ಅಂತರ್ಯಾತ್ರೆ ಮಾಡು ಮಾರಾಯ.ಅದೂ ಆಗೀಗಿನ ಅಗತ್ಯ;ಅನಿವಾರ್ಯ. ನಮ್ಮ ಜೊತೆಗೆ ನಾವು 'ಇರುವುದು', ನಮ್ಮಿಂದ ನಾವು 'ಆಗುವುದು' ಒಂದು ಸಂಭ್ರಮ. ಹಾಗೆ ನೀನು ಒಬ್ಬನೇ ಹೊರಟಾಗ ಎಷ್ಟು ಜನ ಸಿಗುತ್ತಾರೆ ಗೊತ್ತಾ?

Anonymous said...

ಶರ್ಮರೇ,
ನಾನಂತೂ ನಿಮ್ಮ ಕಥೆಯ ಅಭಿಮಾನಿ. ನೀವು ಕನ್ನಡ ಪ್ರಭದಲ್ಲಿ ಜೋಗ ಕುರಿತು ಬರೆದ ಕಥೆ ನನಗಿನ್ನು ನೆನಪಿದೆ. ನೀವು ಹೇಳುವುದು ವಾಸ್ತವ. ಇಲ್ಲಿ ಜನಪ್ರಿಯರಾದ ಲೇಖಕರ ಪುಸ್ತಕಗಳು ಮಾತ್ರ ಓಡುತ್ತವೆ. ಆದರೆ, ಒಂದು ಪುಸ್ತಕದಿಂದಲೂ ಲೇಖಕ ಮೇಲೆ ಬರಬಹುದು ಎಂಬುದು ನನ್ನ ಭಾವ...ನಿಮ್ಮ ಕಥಾ ಸಂಕಲನಕ್ಕೆ ಕಾಯುತ್ತಿರುತ್ತೇನೆ...
ವಿನಾಯಕ ಕೋಡ್ಸರ