Tuesday, May 12, 2009

ಜಾವಣಿಗೆ ಹಣ್ಣು:


"ಈಗ ರಾಸಾಯನಿಕ ಬಳಸುವುದರಿಂದ ಹಣ್ಣುಗಳಲ್ಲಿ ಮೊದಲಿನ ರುಚಿಯೇ ಇಲ್ಲ". ಎಂದು ಗೊಣಗುತ್ತಾ ಫ್ರೂಟ್ ಸ್ಟಾಲ್ ನಿಂದ ಕೊಂಡು ತಂದು ತಿನ್ನುವ ಹಣ್ಣುಗಳು ಎಲ್ಲರಿಗೂ ಗೊತ್ತು. ಹೆಚ್ಚೆಂದರೆ ಮಾರುಕಟ್ಟೆಯಲ್ಲಿ ಹತ್ತಿಪ್ಪತ್ತು ಜಾತಿಯ ಹಣ್ಣಿನ ಹೊರತುಪಡಿಸಿ ಅಂಗಡಿಯವನಬಳಿ ಹಲಗೆ ಹಣ್ಣು, ಜಾವಣಿಗೆ ಹಣ್ಣು, ಮುಳ್ಳಹಣ್ಣು, ಕುನ್ನೇರ್ಲೆ ಹಣ್ಣು ಇದೆಯಾ? ಎಂದು ಕೇಳಿ ನೋಡಿ ಆತ ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟಾನು. ಆದರೆ ಅವೇ ಪಟ್ಟಣಿಗರು ಕೇಳರಿಯದ ಈ ಹಣ್ಣಿನ ಹೆಸರು ಮತ್ತು ರುಚಿಯನ್ನು ಮಲೆನಾಡಿಗರನ್ನು ಕೇಳಿ , "ವಾವ್ ನೆನಪಿಸಬೇಡಿ ಬಾಯಲ್ಲಿ ಚೊಳ್ ಅಂತ ನೀರು ಬರುತ್ತದೆ ",ಎಂದಾರು, ಹಾಗೂ ಬಾಲ್ಯದಲ್ಲಿ ವರ್ಷಪೂರ್ತಿ ಗುಡ್ಡ ಕಾಡುಮೆಡು ಅಲೆಯುತ್ತಾ ಪುಕ್ಕಟ್ಟೆ ತರಹಾವಾರಿ ಹಣ್ಣುಗಳ ರುಚಿ ನೋಡುತ್ತಿದ್ದುದನ್ನು ನೆನಪಿಸಿಕೊಂಡಾರು. ಬೇಸಿಗೆ ರಜದಲ್ಲಿ ಮಲೆನಾಡ ಮಕ್ಕಳ ಮೊದಲ ಆಯ್ಕೆ ಕಾಡುಸುತ್ತುವುದು, ಕಾಡಿನಂಚಿನ ಗುಡ್ಡ ಹತ್ತುವುದು. ನೇರಲಹಣ್ಣು, ಹಲಗೆ ಹಣ್ಣು ಮುಂತಾದ ನೂರಾರು ಜಾತಿಯ ಹಣ್ಣನ್ನು ಹೊಟ್ಟೆಗಿಳಿಸಿ ಮನೆಗೆ ಬಂದು ಊಟ ಮಾಡದೆ ಹಿರಿಯರ ಬಳಿ ನಾಳೆಯಿಂದ ಯಾರೂ ಗುಡ್ಡಕ್ಕೆ ಹೋಗಬೇಡಿ ಎಂಬ ಕಟ್ಟಪ್ಪಣೆಯೊಂದಿಗೆ ಉಗಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಮತ್ತೆ ಮಾರನೇ ದಿನ ಯಥಾಪ್ರಕಾರ ಗುಡ್ಡ ಹತ್ತುವುದೂ ಅಷ್ಟೇ ಸಾಮಾನ್ಯವಾದ ಸಂಗತಿ. ಕಾಡು ಹಣ್ಣುಗಳ ರುಚಿಯೇ ಅಂತಾದ್ದು. ಮಕ್ಕಳ ಶಾಲೆಯ ಬಿಡುವಿಗೆ ಸರಿಯಾಗಿ ಏಪ್ರಿಲ್ ಹಾಗೂ ಮೆ ತಿಂಗಳಿನಲ್ಲಿ ಹೆಚ್ಚಾಗಿ ಹಣ್ಣಾಗುವ ಕಾಡಹಣ್ಣುಗಳು ಸ್ವಾದಿಷ್ಟ, ಹಾಗೂ ಔಷಧೀಯ ಗುಣವನ್ನು ಹೊಂದಿರುವುದು ಮಕ್ಕಳ ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಸಂಶಯವಿಲ್ಲ. ಹೌದು ಅಷ್ಟೋಂದು ರುಚಿಕಟ್ಟಾದ ಪ್ರಕೃತಿ ಸಹಜವಾಗಿ ಬೆಳೆಯುವ ನೂರಾರು ಜಾತಿಯ ಹಣ್ಣುಗಳೇಕೆ ಇನ್ನು ಮಾರುಕಟ್ಟೆ ಪ್ರವೇಶಿಸಿಲ್ಲ?.ಅದನ್ನೇಕೆ ನಮ್ಮ ರೈತರು ತಮ್ಮ ಹೊಲಗಳಲ್ಲಿ ಬೆಳೆಯುತ್ತಿಲ್ಲ, ಪಟ್ಟಣಿಗರ ಬಾಯಿರುಚಿ ತಣಿಸಲು ಕೆಲವೇ ಕೆಲವು ಜಾತಿಯ ಹಣ್ಣುಗಳಿಗೆ ಮಾತ್ರ ಯಾಕೆ ಮಣೆಹಾಕಿದ್ದಾರೆ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಮರ್ಪಕವಾಗಿ ಸಿಗದಾದರೂ ಕಾಡಿನ ಹಣ್ಣು ನಾಡಿನಲ್ಲಿ ಬೆಳೆಯುವುದು ಕಷ್ಟ ಹಾಗು ಈಗ ಸಧ್ಯ ಅವಷ್ಟಕ್ಕೆ ಬೆಳೆಯುವ ಹಣ್ಣುಗಳು ಮಾರುಕಟ್ಟೆಗೆ ಪೂರೈಸುವಷ್ಟು ದೊರಕದು ಎಂಬ ಉತ್ತರ ಕಂಡುಕೊಳ್ಳಬಹುದಾದರೂ ಅದೇ ಸತ್ಯ ಎಂದು ಹೇಳಲಾಗುವುದಿಲ್ಲ. ಮತ್ತು ಅದಕ್ಕೆ ಸರಿಯಾದ ಉತ್ತರ ದೊರಕುವುದಿಲ್ಲ.ಮತ್ತೊಂದು ದೃಷ್ಟಿಯಿಂದ ಯೋಚಿಸಿದರೆ ಅದು ಮಾರುಕಟ್ಟೆ ಪ್ರವೇಶಿಸದೆ ಇರುವುದು ಪಕ್ಷಿಗಳ ಹಿತದೃಷ್ಟಿಯಿಂದ ಒಳ್ಳೆಯದೇ ಅಂತ ಅನ್ನಿಸುತ್ತದೆ. ಆದರೆ ದುರಂತದ ವಿಷಯವೆಂದರೆ ಅತಿಯಾದ ಕಾಡುನಾಶ ದಿಂದಾಗಿ ಮಲೆನಾಡಿನ ಸಹಜ ಕಾಡುಗಳಲ್ಲಿ ಬೆಳೆಯುತ್ತಿದ್ದ ಸಾಂಪ್ರದಾಯಕ ಹಣ್ಣುಗಳು ನಿಧಾನವಾಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಂತೂ ನಿಜ. ಸರ್ಕಾರದ ಒಡೆತನದ ಅರಣ್ಯ ಇಲಾಖೆ ಇದರ ಕಾಳಜಿ ತೆಗೆದುಕೊಳ್ಳದಿದ್ದರೆ ಇನು ಕೆಲವೇ ವರ್ಷಗಳಲ್ಲಿ ಚಿತ್ರಗಳಲ್ಲಿ ಮಾತ್ರ ಕಾಣಬೇಕಾಗುತ್ತದೆ. ಸ್ಥಳೀಯ ಪರಿಸರಕ್ಕನುಗುಣವಾಗಿ ಹಾಗೂ ಋತುಚಕ್ರಗನುಗುಣವಾಗಿ ಪಕ್ಷಿಗಳ ಆಹಾರ ಪೂರೈಕೆಗಾಗಿ ಪ್ರಕೃತಿ ಸೃಷ್ಟಿಸಿದ ಹಣ್ಣುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ದೊರಕುವ ನೂರಾರು ಜಾತಿಯ ಕಾಡಹಣ್ಣುಗಳ ಉಳಿಸಬೇಕಾದ ಜವಾಬ್ದಾರಿ ಯಾರದ್ದು? ಅಂತ ಕೇಳಿಕೊಳ್ಳಬೇಕಾದ ಸಮಯದ ಜತೆ ಆಯಾ ಪರಿಸರದ ಸ್ಥಳೀಯರು ಅವರದೇ ಆದ ಹೆಸರಿನಿಂದ ಕರೆಯುವ ಕೆಲವೇ ಕೆಲವು ಹಣ್ಣುಗಳ ಕಿರುಪರಿಚಯ ಇಲ್ಲಿದೆ.

ಜಾವಣಿಗೆ ಹಣ್ಣು: ಮಧ್ಯಮಗಾತ್ರದ ಮರದಲ್ಲಿ ಬೆಳೆಯುವ ಅರಿಶಿನ ಬಣ್ಣದ ಈ ಹಣ್ಣು ನೋಡಲು ಕಿತ್ತಳೆಹಣ್ಣನ್ನು ಹೋಲುತ್ತದೆ. ಆದರೆ ತೊಳೆ ಇರುವುದಿಲ್ಲ. ಬೀಜದ ಸುತ್ತಲಿರುವ ಲೋಳೆ ರುಚಿಯಲ್ಲಿ ಹುಳಿಮಿಶ್ರಿತ ಸಿಹಿ. ಮೆ ತಿಂಗಳಿನಲ್ಲಿ ಇದು ಹಣ್ಣಾಗುತ್ತದೆ. ದಿನಕ್ಕೆ ಒಂದೆರಡು ಹಣ್ಣು ಮಾತ್ರ ಓಕೆ. ಜಾಸ್ತಿ ತಿಂದರೆ ರಕ್ತ ಬೇಧಿಯಾದೀತು ಜೋಕೆ. ಹಿಂದೆ ವ್ಯಾಪಕವಾಗಿದ್ದ ಜಾವಣಿಗೆ ಮರ ಈಗ ಉರುವಲು ಹಾಗೂ ಸೊಪ್ಪಿನ ಬಳಕೆಯಿಂದ ವಿರಳವಾಗುತ್ತಿದೆ.

No comments: