Friday, September 18, 2009

ಕಾಪ್ಯಾಂತು ಮರಣಾನ್ ಮುಕ್ತಿಃ



ಬೆಳಿಗ್ಗೆ ಮೊದಲ ಭೇಟಿಯ ಹಲೋ ನಂತರ "ಕಾಫಿ ಆಯ್ತಾ?" ಎಂಬ ಪ್ರಶ್ನೆಯೊಂದಿಗೆ ನಾವು ಮತ್ತೊಬ್ಬರನ್ನು ಮಾತನಾಡಿಸುತ್ತೇವೆ. ಅದೊಂದು ಡೈಲಾಗ್ ನೊಂದಿಗೆ ಕಾಫಿಗೆ ಮರ್ಯಾದೆ ಆರಂಭ. ಹುಡುಕು ಎನ್ನುವುದಕ್ಕೆ ಗೂಗಲ್ ಪರ್ಯಾಯವಾದ ಹಾಗೆ "ಹಲೋ" ಎನ್ನುವುದಕ್ಕೆ ಕಾಫ್ಹಿ ಆಯ್ತಾ ಎಂದು ಬೆಳಗಿನ ಸಮಯದಲ್ಲಿ ಬದಲಾಗಿದ್ದು ನಿಜ.

ಇರಲಿ ಈ ಕಾಪಿ ಎಂದು ನಮ್ಮ ಹಳ್ಳಿಗರ ಮುಖಾಂತರ ಕರೆಯಿಸಿಕೊಂಡಿರುವ ಕಾಫಿ ಅದ್ಯಾವುದೋ ರಾಜರ ಕಾಲದಲ್ಲಿ ವಿದೇಶದಿಂದ ಬಂದು ನಮ್ಮ ಭಾರತದಲ್ಲಿ ಮನೆಮಾತಾಯಿತಂತೆ. ಅವೆಲ್ಲ ಅಂತೆಕಂತೆಗಳ ಸಂತೆಯಾಯಿತು ಈಗ ವಾಸ್ತವಕ್ಕೆ ಬರೋಣ.

ಬೆಳಿಗ್ಗೆ ಎದ್ದಕೂಡಲೆ ಒಂದು ಲೋಟ ಕಾಪಿ..! ಕುಡಿಯದಿದ್ದರೆ ಬಹಳಷ್ಟು ಜನರಿಗೆ ದಿನವೇ ಆರಂಭವಾಗುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಮಲಗುವ ಮುಂಚೆಯೂ ಕಾಫಿ ಬೇಕು. ದಿನಕೆ ಹತ್ತೆಂಟು ಲೋಟ ಕಾಫಿ ಕುಡಿಯುವವರೂ ಇದ್ದಾರೆ ಒಂದೇ ಲೋಟ ಕುಡಿದು " ಅಯ್ಯೋ ಹೀಟ್ ಆಗಿ ಬಾಯೆಲ್ಲಾ ಹುಣ್ಣಾಗೋಗ್ತ ಬ್ಯಾಡ" ಎನ್ನುವವರೂ ಇದ್ದಾರೆ. ಹಾಲಿಗೆ ಡಿಕಾಕ್ಷನ್ ಬೆರೆಸಿ ಲೈಟ್ ಕಾಫ್ಹಿ ಕುಡಿಯುವವರಿಂದ ಹಿಡಿದು ಡಿಕಾಕ್ಷನ್ ಗೆ ಹಾಲು ಬೆರೆಸಿ ಸ್ಟ್ರಾಂಗ್ ಕಾಫಿ ಕುಡಿಯುವ ಜನರ ವರೆಗೆ ಹತ್ತಾರು ಬಗೆ ಜನ ಈ ಕಾಪ್ಯಾಭಿಮಾನಿಗಳಿದ್ದಾರೆ. ಬೆಡ್ ಕಾಫಿ, ಬ್ರೆಡ್ ಕಾಫಿ, ಮುಂತಾದ ಬಗೆಯ ಜತೆ ಕಾಪಿ ತಿಂಡಿ ಆತನ ಎಂದು ಕರೆಯಿಸಿಕೊಳ್ಳುವ ರಾಜಾತಿಥ್ಯ ಕಾಫಿಗೆ.

ಕಾಫಿಯಲ್ಲಿ ಕೆಫಿನ್ ಎಂಬ ರಾಸಾಯನಿಕ ಇರುತ್ತದೆ ಅದು ಸಣ್ಣ ಪ್ರಮಾಣದ ಮಜ ಕೊಡುತ್ತದೆ ಎನ್ನುವ ಕಾರಣಕ್ಕೆ ಅದು ನಮ್ಮನಿಮ್ಮೆಲ್ಲರಿಗೆ ಅಡಿಕ್ಟ್ ಆಗಿದೆ. ( ಕಾಫಿಯಲ್ಲಿ ಕೆಫಿನ್ ಇದೆ ಹಾಗಾದರೆ ಟಿ ಯಲ್ಲಿ ಏನಿದೆ ? ಎಂದು ಮೇಷ್ಟು ಕೇಳಿದಾಗ ಟಿ ಯಲ್ಲಿ ಟಿಫಿನ್ ಇದೆ ಎಂದು ಗುಂಡ ಹೇಳಿದ ಎಂಬ ಒಂದು ಜೋಕ್ ಚಾಲ್ತಿಯಲ್ಲಿತ್ತು) ಆದರೆ ವಾಸ್ತವವಾಗಿ ಕಾಫಿಯಲ್ಲಿ ಡ್ರೌಜೀನೆಸ್ ತರಿಸಲು ಅದಕ್ಕೆ ಚಿಕೋರಿ ( ಚಕೋರಿ...!) ಎಂಬ ಗಡ್ಡೆಯ ಪುಡಿಯನ್ನು ಬೆರೆಸುತ್ತಾರೆ. ಆ ಗಡ್ಡೆ ನಮ್ಮನ್ನು ಕಾಫಿಗೆ ಅಡಿಕ್ಟ್ ಮಾಡಿಬಿಡುತ್ತದೆ . ಚಿಕೋರಿ (ಆ ಶಬ್ಧವೇ ಹಲವರಿಗೆ ಒಂಥರಾ ಅಮಲು ತರಿಸುತ್ತದೆ ಎನ್ನುವುದು ಗುಟ್ಟಿನ ವಿಚಾರ) ರಹಿತ ಕೇವಲ ಕಾಫಿಬೀಜವನ್ನು ಹುರಿದು ಪುಡಿ ಮಾಡಿಸಿ ಅದಕ್ಕೆ ಏನೂ ಮಿಶ್ರ ಮಾಡದೇ ಹಾಗೆಯೇ ಹಾಲು ಸಕ್ಕರೆ ಬೆರೆಸಿ ಕುಡಿದರೆ ಕಾಫಿಯ ಮಜ ಬೇರೆಯೇ ಇದೆ.

ಅವಕಾಶ ಸಿಕ್ಕರೆ ಚಿಕೋರಿ ರಹಿತ ಕಾಫಿ ಕುಡಿಯಿರಿ ಮತ್ತು ಅನುಭವ ಹೇಳಿರಿ. ಹ್ಯಾಪಿ ಕಾಫಿಡೆ...

3 comments:

g.mruthyunjaya said...

ಕಾಫಿ ಎಂಬುದು ನನಗೂ ಪ್ರಿಯವಾದ ಶಬ್ದವೇ.ಒಳ್ಳೆಯ ಪರಿಮಳಭರಿತ ಕಾಫಿ ಪುಡಿಯ ಕಡುವಾದ ಡಿಕಾಕ್ಷನ್ನಿಗೆ ಕೆನೆ ತೆಗೆಯದ ಎಮ್ಮೆ ಹಾಲು ಸೇರಿಸಿ, ಸ್ವಲ್ಪ ಸಕ್ಕರೆ ಹಾಕಿ ಒಂದೆರಡು ಬಾರಿ ಮೇಲೆ ಕೆಳಗೆ ನೊರೆಬರುವಂತೆ ತೊಳಸಿ ಬೆಳಿಗ್ಗೆ ಮುಂದಿಟ್ಟ ಬಿಸಿಬಿಸಿ ಕಾಫಿ ಆಹಾ! ಎಂಥ ಸೊಗಸು!( ಗಮನಿಸಿ: ಡಿಕಾಕ್ಷನ್, ಹಾಲು, ಸಕ್ಕರೆ ಅದರ ಮೂರು ಅಂಗಗಳಾದರೆ ಬಿಸಿ ಅಷ್ಟೇ ಮುಖ್ಯವಾದ ಅದರ ನಾಲ್ಕನೇ ಅಂಗ!)
ಅದಕ್ಕೇ ಸಂಸ್ಕೃತ ಸುಭಾಷಿತಕಾರ ಹೇಳಿದ್ದು:
ಕಾಲಕೂಟಂತು ದೈತ್ಯಾನಾಮ್| ಪೀಯೂಷಂತು ದಿವೌಕಸಾಮ್|| ತದಾದ್ಯಕ್ಷರ ಸಂಯೋಗಾತ್|
ಕಾಪೀ ಭೂಲೋಕ ವಾಸಿನಾಮ್||
ಕೆಳಗಿನ ಪಾತಾಳ ವಾಸಿಗಳಾದ ರಾಕ್ಷಸರಿಗೆ ಕರ್ರಗಿನ, ಕಹಿಯಾದ, ಕಾಲಕೂಟ. ಮೇಲಿನ ನಾಕದಲ್ಲಿರುವ ದೇವತೆಗಳಿಗೆ ಬೆಳ್ಳಗಿನ ಸಿಹಿಯಾದ ಪೀಯೂಷ.
( ಸಮುದ್ರ ಮಥನದ ಕಥೆ ನೆನಪಿಸಿಕೊಳ್ಳಿ ) ಇವೆರಡರ ಮಧ್ಯದ ಭೂಲೋಕ ವಾಸಿಗಳಾದ ಮಾನವರಿಗೆ ಕಾಲಕೂಟ ಹಾಗೂ ಪೀಯೂಷಗಳ ಮೊದಲ ಅಕ್ಷರಗಳ ಸಂಯೋಗವಾದ ಕಾಪೀ! ವಿಷ ಅಮೃತಗಳ ಮಿಶ್ರಣ-ಕಪ್ಪು ಬಿಳುಪು ಕಹಿಸಿಹಿಗಳ ಸಮ್ಮಿಳನ!

shivu.k said...

ಸರ್.

ಕಾಫಿಯ ಬಗ್ಗೆ ಚಿಕ್ಕದಾದ ಚೊಕ್ಕ ಮಾಹಿತಿಯುಕ್ತ ಲೇಖನ...

Anonymous said...

ಟಿಫಿನ್ ಜೋಕ್ ಮತ್ತು ಚಕೋರಿ ಪಂಚ್ ಇಷ್ಟವಾಯ್ತು..