Monday, October 12, 2009

ವೈದ್ಯರು "ಎರಡು ರೂಪಾಯಿ" ಎಂದು ಹೇಳಿದರು.

ಮುನ್ನಾಭಾಯಿ ಎಂ.ಬಿ.ಬಿ.ಎಸ್ ನೀವು ನೋಡಿದ್ದೀರಿ. ಅದರಲ್ಲಿನ ಹೃದಯಹೀನ ವೈದ್ಯರು ಮಾಡಲಾಗದ್ದನ್ನು ಹೃದಯವಂತ ರೌಡಿ ಮಾಡಿ ಮುಗಿಸುತ್ತಾನೆ. ಎಲ್ಲೆಡೆ ಬೇಕುಬೇಕಂತ ರೋಗಿಗೂ ತನಗೂ ಸಿಕ್ಕಾಪಟ್ಟೆ ಗ್ಯಾಪ್ ಇಟ್ಟುಕೊಂಡು ಸ್ಟೈಲ್ ಹೊಡೆಯುವ ಡಾಕ್ಟರ್ ಗಳ ಬದಲು ಮುನ್ನಾಭಾಯಿಯ ಹೃದಯವಂತಿಕೆಯ ಚಿಂಕಿಯ ಹಾಗೂ ಅವಳಪ್ಪನ ಬುದ್ದಿವಂತಿಕೆಯ ಹೃದಯವಂತ ವೈದ್ಯರೇ ಇದ್ದುಬಿಟ್ಟಿದ್ದರೆ ಏನಾಗುತ್ತಿತ್ತು.? ಎಂಬ ಪ್ರಶ್ನೆ ನಿಮಗೆ ಒಮ್ಮೆಯಾದರೂ ಕಾಡಿರಬಹುದು. ಹಾಗಿರಲು ಸಾಧ್ಯವಿಲ್ಲ ಬಿಡಿ. ಒಮ್ಮೆ ಹಾಗಿದ್ದರೇ ಆಗುವುದು ಎಂದರೆ ಮುನ್ನಾಭಾಯಿ ಸಿನೆಮಾ ಹುಟ್ಟುತ್ತಿರಲಿಲ್ಲ ಹಾಗೂ ಅದಕ್ಕೆ ಅರ್ಥವೂ ಇರುತ್ತಿರಲಿಲ್ಲ ಏನಂತೀರಿ?. ಇರಲಿ ಬಿಟ್ಟಾಕಿ ವೈದ್ಯರ ಕುರಿತು ಬರೆಯಬೇಕು ಎಂದು ಹೊರಟ ನನಗೆ ಇದು ಹೇಗೋ ನೆನಪಾಗಿಬಿಟ್ಟಿತು ಅದನ್ನು ಸುಮ್ಮನೆ ದಾಖಲಿಸಿದ್ದೇನೆ, ಬಿಟ್ಟಾಕಿ ಬಿಟ್ಟಾಕಿ ಬಿಟ್ಟಾಕಿ.
ಈಗ ( ಸಿನೆಮಾದಲ್ಲಿ ಹೇಳುವಂತೆ....!) ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ನನ್ನ ಅಕ್ಕ ಕೊಪ್ಪ ಪೋಸ್ಟ್ ಆಪೀಸ್ ನಲ್ಲಿ ನೌಕರಿಯಲ್ಲಿದ್ದಳು . ನಾನು ಹೈಸ್ಕೂಲ್ ನವರಾತ್ರಿ ರಜಕ್ಕೆ ಅಲ್ಲಿಗೆ ಹೋಗಿ ಹದಿನೈದು ದಿನ ಜಾಂಡಾ ಹೊಡೆಯುತ್ತಿದ್ದೆ. ಅಲ್ಲಿನ ಪೋಸ್ಟ್ ಮಾಸ್ಟರ್ ಮೊಮ್ಮಗನೊಬ್ಬ ನನ್ನ ಹಾಗೆಯೇ ಸ್ಕೂಲ್ ರಜಕ್ಕೆ ಬರುತ್ತಲಿದ್ದ. ನಾನೂ ಅವನು ಸೇರಿ ಅದೂ ಇದೂ ಸಣ್ಣಪುಟ್ಟ ಆಟಗಳನ್ನು ಆಡುತಿದ್ದೆವು. ಹೀಗೆ ಅವನ ಬಳಿ ಸ್ಕೋಪ್ ತೆಗೆದುಕೊಳ್ಳಲು ಹಳ್ಳಿಯ ಹಲವಾರು ವಿಷಯಗಳನ್ನು ನನ್ನದೇ ಆದ ಗತ್ತಿನಲ್ಲಿ ವಿವರಿಸುತ್ತಿದ್ದೆ. ಮಜ ಎಂದರೆ ಅವನಿಗೆ ಕನ್ನಡ ಬಾರದು ಹಿಂದಿ ಹುಡುಗ ಆತ. ನನಗೆ ಹಿಂದಿ ಬಾರದು ಕನ್ನಡದ ಹುಡುಗ ನಾನು. ಆದರೂ ಇಬರ ನಡುವೆ ಅದು ಹೇಗೋ ಸಾಮರಸ್ಯ ಬೆಳೆದಿತ್ತು. ಮತ್ತು ಸಂಭಾಷಣೆ ನಡೆಯುತ್ತಿತ್ತು ಅರ್ಥವೂ ಆಗುತ್ತಿತ್ತು. ಹೀಗೆ ಅದೂ ಇದೂ ಸ್ಕೋಪಿನ ವಿಚಾರಗಳನ್ನು ಅರುಹುತ್ತಿರಬೇಕಾದರೆ ಕಳ್ಳಿಗಿಡ(ಪೋಸ್ಟ್ ಆಪೀಸ್ ಆವರಣದಲ್ಲಿತ್ತು ಅಂತ ಹೊಸತಾಗಿ ಹೇಳಬೇಕಾಗಿಲ್ಲ ತಾನೆ?) ಕಾಣಿಸಿತು. ಹಿಂದಿ ಹುಡುಗನ ಬಳಿ ಸಿಕ್ಕಾಪಟ್ಟೆ ಸ್ಕೋಪ್ ತೆಗೆದುಕೊಳ್ಳಲು ಹೊಸ ವಿಷಯ ನನಗೆ ಪಕಪಕನೆ ತಲೆಯಲ್ಲಿ ಮಿಂಚಿತು. ತಕ್ಷಣ ಕಳ್ಳಿ ಎಲೆಯೊಂದನ್ನು ಮುರಿದು ಉಪ್ ಅಂತ ಊಬಿ ಪುರುಪುರು ಗುಳ್ಳೆಗಳನ್ನು ಮಾಡಿ ಹಿಂದಿಹುಡುಗನಿಗೆ ತೋರಿಸಿದೆ. ಆತನ ಕಣ್ಣುಗಳಲ್ಲಿ ಮಹದಾಶ್ಚರ್ಯ. ಮತ್ತೆ ಮತ್ತೆ ಎಲೆಗಳನ್ನು ಕಿತ್ತು ಊಬಿದೆ, ಗುಳ್ಳೆಗಳ ರಾಶಿಯನ್ನೇ ಸೃಷ್ಟಿಸಿ ಹಿಂದಿಯವನನ್ನು ಆಶ್ಚರ್ಯಗೊಳಿಸಿದೆ. ಅವನು ವಾವ್ ವಾವ್ ಹೇಳುತ್ತಿದ್ದಂತೆ ನನ್ನ ಏರುವಿಕೆ ಹೆಚ್ಚಾಯಿತು. ಆತ ನಾನೂ ಊಬುತ್ತೇನೆ ಎಂದ " ಇಲ್ಲ ಅದರ ಹಯ ಡೇಂಜರ್ ಕಣ್ಣಿಗೆ ಹೋದರೆ ಕಣ್ಣು ಕುರುಡಾಗುತ್ತದೆ" ಎಂದೆ. ಮತ್ತಷ್ಟು ಎಲೆ ಕಿತ್ತು ಗುಡ್ಡೆ ಹಾಕಿ ಊಬತೊಡಗಿದೆ. ಆತ ಮೆಟ್ಟಿಲುಗಳ ಮೇಲೆ ಕುಳಿತು ಬೆರೆಗುಗಣ್ಣಿನಿಂದ ನೋಡುತ್ತಿದ್ದ. ನನಗೋ ನನ್ನ ಲೆವಲ್ ಹೆಚ್ಚಾಯಿತೆಂಬ ಭ್ರಮೆಯಲ್ಲಿ ಊಬಿಯೇ ಊಬಿದೆ. ಆಗಲೆ ಒಂದು ದೊಡ್ಡಗುಳ್ಳೆ ಪಟ್ ಎಂದು ಊಬುತ್ತಿದ್ದಂತೆ ಒಡೆಯಿತು. ಒಂದು ಹನಿ ಕಳ್ಳಿ ಹಂಯ ಬಲಗಣ್ಣಿಗೆ ಸೇರಿತು. ಉರಿ ಪ್ರಾರಂಭವಾಗಿ ಕಣ್ಣು ಕೆಂಪೇರತೊಡಗಿತು. ಹಿಂದಿ ಹುಡುಗ ಪೋಸ್ಟ್ ಆಪೀಸಿನ ಒಳಗೆ ಓಡಿಹೋಗಿ ಇಷ್ಟು ಹೊತಿನ ತನಕ ಮಜ ಅನುಭವಿಸುತ್ತಿದ್ದವನು ಈಗ ಕಣ್ಣಿಗೆ ಹಂಯ ಬಿದ್ದ ಕತೆ ಹೇಳಿ ಸ್ಕೋಪ್ ತೆಗೆದುಕೊಳ್ಳತೊಡಗಿದ. ಮರುಕ್ಷಣ ಅಕ್ಕನ ದುಗುಡದ ಮುಖದೊಂದಿಗೆ ಸೆಂಟ್ರಲ್ ಗವರ್ನ್ಮೆಂಟ್ ಸ್ಟ್ಪಾಪ್ ನನ್ನ ಸುತ್ತ ನೆರೆಯಿತು. ಆಳಿಗೊಂದು ಕಲ್ಲು ಬೀಳತೊಡಗಿತು. ನಾನು ತೆಪ್ಪಜ್ಜಿ ಮುಖಮಾಡಿಕೊಂಡು ಕಣ್ಣಮೇಲೆ ಕೈಯಿಟ್ಟು ನಿಂತೆ. ಒಂದಿಷ್ಟು ಚರ್ಚೆಯ ನಂತರ ಕಣ್ಣಿನ ವಿಷಯವಾದ್ದರಿಂದ ಡಾ . ಬಳಿ ಕರೆದುಕೊಂಡು ಹೋಗುವಿದೆಂದು ತೀರ್ಮಾನಿಸಿ ಹತ್ತಿರದಲ್ಲಿದ್ದ ಡಾ ಬಳಿ ಕರೆದುಕೊಂಡೂ ಹೋದರು.
ಡಾಕ್ಟರ್ ಬರಿಗಣ್ಣಿನಿಂದ ಒಮ್ಮೆ ನೋಡಿ ನಂತರ ಒಳಗೆ ಮಂಚದಮೇಲೆ ಮಲಗಿಸಿದರು. ಅದೆಂತದದೋ ಹತ್ತಾರು ಉಪಕರಣಗಳಿಂದ ಒಂದಾದ ನಂತರ ಒಂದು ಟೆಸ್ಟ್ ಮಾಡತೊಡಗಿದರು. ಪಕ್ಕದಲ್ಲಿಯೇ ಇದ್ದ ಅಕ್ಕನಿಗೆ ತಮ್ಮನ ಕಣ್ಣಿನ ಚಿಂತೆ ಒಂದೆಡೆ ಸಿಕ್ಕಾಪಟ್ಟೆ ಟೆಸ್ಟ್ ಮಾಡುತ್ತಿರುವ ಡಾಕ್ಟರ್ ಬಿಲ್ ಎಷ್ಟಾಗುತ್ತೋ ಎನ್ನುವುದು ಇನ್ನೊಂದೆಡೆ. ಒಟ್ಟಿನಲ್ಲಿ ಆತಂಕವೋ ಆತಂಕ. ಹೀಗೆ ಒಂದು ಘಂಟೆಗಳ ಕಾಲ ಪರೀಕ್ಷೆ ಮಾಡಿ ಅಂತಿಮವಾಗಿ ಒಂದು ಡ್ರಾಪ್ಸ್ ಕಣ್ಣಿಗೆ ಬಿಟ್ಟು ಏನೂ ಆಗಿಲ್ಲ ಎಂದು ವೈದ್ಯರಬಾಯಿಂದ ಬಾಂದಾಗ ಅರ್ದ ಆತಂಕ ಮಾಯ. ಇನ್ನು ಉಳಿದದ್ದು ಬಿಲ್ ಕಥೆ. ಕನಿಷ್ಟವೆಂದರೂ ಮುನ್ನೂರೋ ನಾನೂರೋ (ಆಗ ಅಕ್ಕನ ಸಂಬಳ ೭೦೦ ರೂ) ಖರ್ಚಿಗೆ ಬಂತು ಎಂದು ವೈದ್ಯ ರ ಮುಂದೆ ಸಣ್ಣ ಮುಖ ಮಾಡಿ ಎಷ್ಟು? ಎಂದಳು.
ವೈದ್ಯರು "ಎರಡು ರೂಪಾಯಿ" ಎಂದು ಸಹಜವಾಗಿ ಹೇಳಿದರು.
ನಮಗೆ ನಂಬಲಾಗದ ಸತ್ಯ . ಅಕ್ಕ ಇಷ್ಟೆಲ್ಲಾ ಕೆಲಸಕ್ಕೆ ಅದು ಅತೀ ಕಡಿಮೆಯಾಯಿತೆಂದು ಇಪ್ಪತ್ತು ರೂಪಾಯಿ ಕೊಟ್ಟು ಹೊರಡಲನುವಾದಳು. ಆದರೆ ವೈದ್ಯರು ನನ್ನ ಕೆಲಸಕ್ಕೆ ನಾನು ಬಿಲ್ ಮಾಡುವುದು ನೀವಲ್ಲ ಎಂದು ಹೇಳಿ ಮಿಕ್ಕ ಹದಿನೆಂಟು ವಾಪಾಸು ಕೊಟ್ಟು ನೆಕ್ಸ್ಟ್ ಎಂದರು.
ಅಕಸ್ಮಾತ್ ಈಗಿನ ಕಾಲದಲ್ಲಿ ಹೀಗಾಗಿದ್ದರೆ..ಕನಿಷ್ಟವೆಂದರೂ....? ಎಂಬ ರಾಗದ ಪ್ರಶ್ನೆ ನಿಮಗೆ ಹುಟ್ಟುತ್ತದೆ ಎಂದು ನನಗೆ ಗೊತ್ತು. ಇಲ್ಲ ಈಗಲೂ ಅಂತಹ ಸಿದ್ಧಾಂತಕ್ಕೆ ಜೋತುಬಿದ್ದ ವೈದ್ಯರು ಇದ್ದಾರೆ. ಡಾ ದೀಪಕ್ ಎಂಬ ಹರೆಯದ ವೈದ್ಯ. ಅವರ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ.

3 comments:

ವಿ.ರಾ.ಹೆ. said...

nammoorallu obru doctor idAre, ivattigU avara fees 10 rupayi !

shivu.k said...

ಅಹಾ! ಎಂಥ ಎಡವಟ್ಟು ಮಾಡಿಕೊಂಡುಬಿಟ್ಟಿದ್ದೀರಿ...ಆದ್ರೆ ಡಾಕ್ಟರ್ ಒಳ್ಳೆಯವನಿರಬೇಕು...ಕೇವಲ ಎರಡು ರೂಪಾಯಿ ತೆಗೆದುಕೊಂಡಿದ್ದಾನೆ ಅಂಥವನು ಸಿಗುವುದು...ತೀರ ಕಮ್ಮಿ.

Dr.K.G.Bhat,M.B:B.S said...

it is nothing surprising.it was 25 years ago.i have been in medical practice since 25 years and initially my fees(so called,because it used to include medicines too)was in the same range.all doctors are not after money,what drives them to do what they sometimes do is because of the high expectation of the patient.
and you people today have money and consult specialist even for an illness that your local doctor can easily treat.go to a specialist and you will be charged accordingly as he has to carry out various investigations as that is how specialized practice is.