Tuesday, October 27, 2009

ಜೇನು ಹುಳುಗಳ ಶತ್ರುಬೇಟೆ


ಜೇನುನೊಣಗಳದ್ದು ಒಂದು ಅದ್ಬುತ ಪ್ರಪಂಚ. ಮನುಷ್ಯನ ಜೀವನಕ್ಕೆ ಹೋಲುವ ಹಲವಾರು ಸಂಗತಿಗಳನ್ನು ಅವುಗಳಿಗೆ ಪ್ರಕೃತಿ ನೀಡಿದೆ. ಯಂತ್ರಗಳ ಬಳಕೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಜೇನಿನ ಪ್ರಪಂಚದಲ್ಲಿ ಹಾಸುಹೊಕ್ಕಾಗಿವೆ. ಅಂತಹ ಒಂದು ಪ್ರಕರಣ ಶತ್ರುಬೇಟೆ. ತನ್ನ ಗೂಡಿನ ಹುಳುಗಳನ್ನು ರಕ್ಷಿಸಿಕೊಳ್ಳಲು ಆಕ್ರಮಣ ಮಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುವ ಜೇನಿನ ವಿಧಾನ ಮೈನವಿರೇಳಿಸುತ್ತದೆ. ಅಂತಹ ಅಪರೂಪದ ಒಂದು ಯುದ್ಧ ನನಗೆ ಕಾಣಿಸಿದ್ದು ಅಚಾನಕ್ಕಾಗಿ ಅದನ್ನು ನಿಮ್ಮಮುಂದೆ ತೆರೆದಿಡುತ್ತಿದ್ದೇನೆ.
ಜೇನಿನ ಶತ್ರುಗಳಲ್ಲಿ ಕಣಜದ ಹುಳು ಪ್ರಮುಖವಾದದ್ದು. ಬಂಡಾರು ಬಡ್ಚಿಗೆ ಎಂಬ ಮಲೆನಾಡು ಗ್ರಾಮ್ಯ ಭಾಷೆಯಲ್ಲಿ ಕರೆಯಿಸಿಕೊಳ್ಳುವ ಕಣಜ ಮಾಂಸಾಹಾರಿ ಕೀಟ. ಗಾತ್ರದಲ್ಲಿ ತುಡುವೆ ಜೇನು ಹುಳುಗಳಿಗಿಂತ ಸುಮಾರು ಹತ್ತು ಪಟ್ಟು ದೊಡ್ಡದಾಗಿರುವ ಅರಿಶಿನ ಬಣ್ಣದ ಮೇಲ್ಮೈ ಹೊಂದಿರುವ ಕಣಜ ದಿನವೊಂದಕ್ಕೆ ಹತ್ತಿಪ್ಪತ್ತು ಜೇನುನೊಣಗಳನ್ನು ಬೇಟೆಯಾಡಿಬಿಡಬಲ್ಲದು. ಜೇನುಗೂಡಿನ ಬಳಿ ಜೊರ್ರನೆ ಹಾರಾಡುತ್ತ ಪಕ್ಕನೆ ಧಾಳಿ ಮಾಡಿ ಆಹಾರ ತರಲು ಹೊರ ಹೊರಡುವ ಜೇನುಹುಳುಗಳನ್ನು ಕಚ್ಚಿಕೊಂಡು ತನ್ನ ಗೂಡಿನಲ್ಲಿನ ಮರಿಗಳಿಗೆ ಆಹಾರವಾಗಿ ನೀಡುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಶತ್ರುವನ್ನು ಮಣಿಸಲು ಜೇನು ಹುಳುಗಳಿಗೆ ಬಹಳ ಕಷ್ಟಕರ ಕೆಲಸ. ಆದರೂ ಅಪರೂಪಕ್ಕೊಮ್ಮೆ ಯುದ್ಧ ಘೋಷಿಸಿ ಗೆದ್ದುಬಿಡುತ್ತವೆ. ಇದು ಅಂತಹ ಒಂದು ಪ್ರಕರಣ.
ಮಳೆಗಾಲ ಹಾಗೂ ಮಳೆಗಾಲದ ನಂತರದ ಒಂದೆರಡು ತಿಂಗಳುಗಳವೆರೆಗೆ ಜೇನುಪೆಟ್ಟಿಗೆಗೆ ಕಣಜದ ಕಾಟ ಅತಿ ಹೆಚ್ಚು. ದಿನಾಲು ಬೆಳಿಗ್ಗೆ ಜೇನುಪೆಟ್ಟಿಗೆ ಇಟ್ಟುಕೊಂಡವರಿಗೆ ಕಣಜ ಓಡಿಸುವುದು ಒಂದು ಕೆಲಸ. ಅದೇ ರೀತಿ ಕಣಜವೇನಾದರೂ ಬಂದಿರಬಹುದಾ ಎಂದು ಪೆಟ್ಟಿಗೆಯ ಬಳಿ ನಿಂತಿದ್ದೆ. ನಾನು ನಿಂತ ಕೆಲಕ್ಷಣಗಳಲ್ಲಿ ಜೊರ್ರನೆ ಸದ್ದು ಮಾಡುತ್ತಾ ಕಣಜವೊಂದು ಹಾರಿ ಬಂತು. ಅದಕ್ಕೆ ನನ್ನ ಇರುವು ಅರಿವಾಯಿತಿರಬೇಕು ಮತ್ತೆ ತಟ್ಟನೆ ಮಾಯವಾಯಿತು. ಅಷ್ಟರಲ್ಲಿ ನನಗೆ ಜೇನುಗೂಡಿನ ಬಳಿ ಹಾರಾಡುವ ಕಣಜದ ಫೋಟೋ ತೆಗೆಯುವ ಆಲೋಚನೆ ಬಂದು ಕ್ಯಾಮೆರಾ ತರಲು ಒಳಗೆ ಹೋದೆ. ಮತ್ತೆ ವಾಪಾಸು ಬರುವಷ್ಟರಲ್ಲಿ ಯಥಾಪ್ರಕಾರ ಕಣಜ ಜೇನುಪೆಟ್ಟಿಗೆಯನ್ನು ಸುತ್ತುವರೆಯುತಿತ್ತು. ಹಾಗೆಯೇ ಒಂದೆರಡು ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಶಟರ್ ಬಟನ್ ಒತ್ತುವುದಕ್ಕೂ ಕಣಜ ಬೆರೆಡೆ ಹಾರಿಬಿಡುತ್ತಿತು. ಎಲ್ಲಾದರೂ ಕುಳಿತುಕೊಂಡಾಗ ಫೋಟೋ ತೆಗೆದರಾಯಿತೆಂದು ಸುಮ್ಮನೆ ಅಲ್ಲಿಯೇ ನಿಂತೆ. ಜೇನುಪೆಟ್ಟಿಗೆಯ ಸುತ್ತ ಕಣಜದ ಹಾರಾಟದ ಸುಳಿವು ಜೇನುಪೆಟ್ಟಿಗೆಯೋಳಗೆ ತಲುಪಿತ್ತಿರಬೇಕು. ಬಾಗಿಲ ಬಳಿ ಮಿಲಿಟರಿ ಜೇನುಹುಳುಗಳ ರಭಸ ಜೋರಾಗತೊಡಗಿತು. ಅಂತಹ ಅವಕಾಶವನ್ನು ಕಣಜ ಸದುಪಯೋಗಪಡಿಸಿಕೊಳ್ಳುತ್ತದೆ. ಹಾಗೆ ವ್ಯಗ್ರವಾಗಿ ಜೇನುಗೂಡಿನ ಬಾಗಿಲಬಳಿ ಕುಳಿತುಕೊಳ್ಳುವ ಜೇನುಗಳೇ ಕಣಜದ ಬಲಿ. ಆದರೆ ಈ ಕ್ಷಣ ಮಾತ್ರಾ ಬೇರೆಯೇ ಆಗಿತ್ತು.
ನನ್ನ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿರುವ ಕಣಜ ರೊಯ್ಯನೆ ಹಾರಿ ಬಂದು ಜೇನುಪೆಟ್ಟಿಗೆಯ ಬಾಗಿಲಬಳಿ ಹಾರಿ ಬಂದು ಕುಳಿತುಕೊಂಡಿತು. ಸಾಮಾನ್ಯವಾಗಿ ಕಣಜ ಹಾರಿಬಂದು ಜೇನುಗೂಡಿನ ಬಾಗಿಲಬಳಿ ಕುಳಿತ ಮರುಕ್ಷಣ ಒಂದು ಜೇನುನೊಣ ಬಲಿಯಾಯಿತೆಂದೇ ಅರ್ಥ. ಆದರೆ ಇಲ್ಲಿ ಹಾಗಾಗಲಿಲ್ಲ. ಕುಳಿತ ಕಣಜದ ಫೋಟೋ ತೆಗೆಯಲು ಬಟನ್ ಒತ್ತಿದೆ, ನನ್ನ ದುರಾದೃಷ್ಟ ಕ್ಯಾಮೆರಾದ ಬ್ಯಾಟರಿ ಟಿನ್ ಎಂದು ಶಬ್ಧಮಾಡಿ ಸ್ತಬ್ದವಾಯಿತು. ತಥ್ ಎನ್ನುತ್ತಾ ಲಗುಬಗೆಯಿಂದ ಒಳಗೆ ಹೋಗಿ ಬ್ಯಾಟರಿ ಬದಲಾಯಿಸಿಕೊಂಡು ಬಂದೆ. ನಾನು ವಾಪಾಸು ಜೇನುಗೂಡಿನ ಬಳಿ ಬರುವುದಕ್ಕೂ ಜೇನುನೊಣಗಳು ಕಣಜವನ್ನು ಆಕ್ರಮಿಸಿಕೊಳ್ಳುವುದಕ್ಕೂ ಸರಿಯಾಯಿತು. ಪ್ರತೀ ಬಾರಿಯೂ ವಿಜಯೋತ್ಸಾಹದಿಂದ ಬಲಿ ತೆಗೆದುಕೊಂಡು ಹೋಗುತ್ತಿದ್ದ ಕಣಜಕ್ಕೆ ಇದು ಅನಿರೀಕ್ಷಿತ ಆಘಾತ. ಕ್ಷಣವೊಂದರಲ್ಲಿ ಮೂವತ್ತು ನಲವತ್ತು ಜೇನು ನೊಣಗಳು ಒಟ್ಟಾಗಿ ಕಣಜವನ್ನು ಮುತ್ತಿಕೊಂಡವು. ಕಣಜಕ್ಕೆ ಮಿಸುಕಾಡಲೂ ಆಗದಂತೆ ಅದರ ಸುತ್ತ ಉಂಡೆಯಾಕಾರದಲ್ಲಿ ಸೆಕೆಂಡಿನ ಅಂತರದಲ್ಲಿ ನೂರಾರು ಜೇನು ಮುತ್ತಿದವು. ಹೀಗೆ ಮುತ್ತಿದ ಜೇನು ನೊಣಗಳು ಕಣಜವನ್ನು ಚುಚ್ಚುವುದಿಲ್ಲ. ಜೇನಿಗಿಂತ ಹತ್ತು ಪಟ್ಟು ಶಕ್ತಿಯುತವಾದ ಕಣಜವನ್ನು ಜೇನುಗಳು ಉಪಾಯದಿಂದ ಕೊಲ್ಲುತ್ತವೆ. ಹೀಗೆ ಒಮ್ಮಿಂದೊಮ್ಮೆಲೆ ನೂರಾರು ನೊಣಗಳು ಮುತ್ತುವುದರಿಂದ ಒಳಗಡೆ ತಾಪಮಾನ ಹೆಚ್ಚುವುದರ ಜತೆ ಕಣಜಕ್ಕೆ ಉಸಿರಾಡಲೂ ಆಗದ ಸ್ಥಿತಿ ತಲುಪಿ ಸಾವನ್ನಪ್ಪುತ್ತದೆ.
ಸುಮಾರು ಹತ್ತು ನಿಮಿಷಗಳ ಕಾಲ ಕಣಜವನ್ನು ಮುತ್ತಿದ ಜೇನುನೊಣಗಳು ಅದರ ಸಾವು ಖಚಿತವಾದನಂತರ ಒಂದೊಂದಾಗಿ ಗೂಡಿನೊಳಗಡೆ ಸೇರಿಕೊಂಡವು. ಕಣಜದ ಸಾವಿನ ಅಪರೂಪದ ಕ್ಷಣಗಳನ್ನು ಜೇನಿನ ಮಿಲಿಟರಿ ಪಡೆಯ ವಿಜಯೋತ್ಸಾಹವನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡು ನಾನು ಕಂಪ್ಯೂಟರ್ನತ್ತ ಸಾಗಿದೆ.

1 comment:

ವಿ.ರಾ.ಹೆ. said...

super, inthadnella yavdaru patrike/magazinegaadru kalsu Sharmanna.