Friday, October 30, 2009

ಹಬ್ಬದ ಇಲಾಡಿಯ "ಸೋಬೇಟೆ"
ದೀಪಾವಳಿ, ಭೂಮಿಹುಣ್ಣಿಮೆಯ ಹಬ್ಬಗಳೆಂದರೆ ಭೂತಾಯಿಯ ಮಕ್ಕಳಾದ ರೈತರಿಗೆ ವಿಶೇಷದ ದಿನಗಳು. ಕೃಷಿ ಕೆಲಸಗಳು ಮುಗಿದಿರುತ್ತವೆ. ಫಸಲು ಕಣ್ಣೆದುರಿಗೆ ನಳನಳಿಸುತ್ತಿರುತ್ತದೆ. ಪ್ರಕೃತಿಯ ಮಳೆಗಾಲದ ಅಬ್ಬರದಿಂದ ಉಳಿಸಿಕೊಂಡ ತೆನೆಭರಿತ ಫಸಲನ್ನು ೨-೩ ತಿಂಗಳುಗಳ ಕಾಲ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಂಡರೆ ವರ್ಷಪೂರ್ತಿ ಗೆದ್ದಂತಯೇ. ಆ ರಕ್ಷಣೆಯ ಕೆಲಸ ಹಗಲುರಾತ್ರಿಯದು. ಅಲ್ಲಿ ಸ್ವಲ್ಪ ಏರುಪೇರಾದರೂ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದಕ್ಕೆ ಉಪಾಯವಾಗಿಯೇ ಹಬ್ಬದ ಮಾರನೇ ದಿವಸಗಳನ್ನು ಮಲೆನಾಡಿನ ರೈತರುಗಳು ಸೋಬೇಟೆ ಗಾಗಿ ಮೀಸಲಿಡುತ್ತಾರೆ. ಮೋಜು ಮಜದ ಜತೆಗೆ ಒಂದೇ ಕಲ್ಲಿನಲ್ಲಿ ಮೂರ್ನಾಲ್ಕು ಹಕ್ಕಿ ಹೊಡೆದ ಹಾಗಿನ ಕೆಲಸ ಈ ಸೋಬೇಟೆ.
ಏನಿದು ಸೋಬೇಟೆ? ಎಂಬ ಪ್ರಶ್ನೆಗೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ಸೋಸಿ ಆಡುವ ಬೇಟೆ ಎಂದರ್ಥ. ಭೂಮಿ ಹುಣ್ಣಿಮೆ ಹಾಗೂ ದೀಪಾವಳಿಯ ಮಾರನೇ ದಿನ ಕೃಷಿಕರು ಇಲಾಡಿ(ರಜ) ವನ್ನು ಆಚರಿಸುತ್ತಾರೆ. ಅಂದು ಊರಿನ ಯುವಕರು ನಡುವಯಸ್ಕರು ಸೇರಿ ಸೋಬೇಟೆಗೆ ಹೊರಡುತ್ತಾರೆ. ನೂರು ಅಡಿ ಉದ್ದದ ಬಲೆ, ಈಟಿ ಯೊಂದಿಗೆ ಇಪ್ಪತ್ತು ಮೂವತ್ತು ಜನರ ತಂಡ ಊರಿನಿಂದ ದೂರದ ಕಾಡಿನ ತಪ್ಪಲಿಗೆ ತೆರಳುತ್ತದೆ. ಗದ್ದೆ ಬದುವಿನ ಮೇಲ್ಬಾಗದಲ್ಲಿ ಕಾಡು ಪ್ರಾಣಿಗಳು ಇಳಿಯುವ ಜಾಗದಲ್ಲಿ ಮರದ ಗೂಟ ನೆಟ್ಟು ಅದಕ್ಕೆ ಬಲೆಯನ್ನು ಕಟ್ಟಲಾಗುತ್ತದೆ. ಅಲ್ಲಿ ಮೂರ್ನಾಲ್ಕು ಜನ ಈಟಿಯನ್ನು ಹಿಡಿದುಕೊಂಡು ಕಾವಲುಕಾಯುತ್ತಾ ನಿಲ್ಲುತ್ತಾರೆ. ಈಗ ಅರ್ದ ಕೆಲಸ ಮುಗಿದಂತೆ. ಇನ್ನುಳಿದ ತಾಕತ್ತಿನ ಕೆಲಸ ಯುವಕರದ್ದು. ಬಲೆ ಇರುವ ಜಾಗದ ಮತ್ತೊಂದು ಕಡೆಯಿಂದ ಮಿಕ್ಕುಳಿದ ಜನರ ತಂಡ ಕಾಡನ್ನು ಪ್ರವೇಶಿಸುತ್ತದೆ. ಕಾಡಿನೊಳಗಿನಿಂದ ದೊಡ್ಡದಾಗಿ "ಹುಯ್...ಹುಯ್" ಎಂದು ಕೂಗುತ್ತಾ ಒಂದುಕಡೆಯಿಂದ ಕಾಡನ್ನು ಸೋಸುತ್ತಾ ಬಲೆಯಿರುವೆಡೆ ಬರುತ್ತಾರೆ. ಕಾಡಿನ ಗಾತ್ರಕ್ಕನುಗುಣವಾಗಿ ಬೇಟೆಯ ಸಮಯ ತಗಲುತ್ತದೆ. ಒಮ್ಮೊಮ್ಮೆ ೧೦ ತಾಸುಗಳನ್ನು ತೆಗೆದುಕೊಳ್ಳುವುದೂ ಉಂಟು. ಹಾಗೆ ಕಾಡನ್ನು ಸೋಸುತ್ತಾ ಬಲೆಯ ಕಡೆ ಸಾಗುವಾಗ ಕಾಡಿನಲ್ಲಿರುವ ಕಾಡುಹಂದಿ, ಕಾಡುಕುರಿ, ಬರ್ಕ ಮುಂತಾದ ಪ್ರಾಣಿಗಳನ್ನು ಬೆದರಿಸುತ್ತಾರೆ. ಅವು ಬಲೆಯತ್ತ ಹೋಗಿ ಅಲ್ಲಿಂದ ಸಿಕ್ಕಿಬಿದ್ದ ತಕ್ಷಣ ಅಲ್ಲಿದ್ದವರು ಈಟಿಯಿಂದ ಇರಿದು ಪ್ರಾಣಿಯನ್ನು ಕೊಲ್ಲುತ್ತಾರೆ. ಅಲ್ಲಿಗೆ ಸೋಬೇಟೆಯ ಕಾರ್ಯಾಚರಣೆ ಮುಗಿದಂತೆ.ಮುಂದಿನದು ಸೋಬೇಟೆಯ ವಿಜಯೋತ್ಸವ ಎಂದರೆ ಕೊಂದಪಾಪ ತಿಂದು ಪರಿಹಾರ. ಅಕಸ್ಮಾತ್ ಬೇಟೆಯ ಸಮಯದಲ್ಲಿ ಅಜಾಗರೂಕತೆಯಿಂದ ಪ್ರಾಣಿಯನ್ನು ತಪ್ಪಿಸಿಕೊಳ್ಳಲು ಬಿಟಲ್ಲಿ ಅದಕ್ಕೆ ಕಾರಣೀಕರ್ತರಾದವರ ಮೇಲೆ ಆರೋಪಗಳೂ ಇರುತ್ತವೆ. ಈ ಆರೋಪದ ಭರಾಟೆ ಒಮ್ಮೊಮ್ಮೆ ಅತಿರೇಕಕೆ ಹೋಗಿ ದೊಡ್ಡಮಟ್ಟದ ಗಲಾಟೆಯಾಗುವುದೂ ಉಂಟು.

ಆದರೆ ಇಂದಿನ ವಾತಾವರಣದಲ್ಲಿ ಹಳ್ಳಿಗಾಡಿನಲ್ಲಿ ಈ ಸೋಬೇಟೆಯ ಸಾಹಸ ಕಡಿಮೆಯಾಗುತ್ತಿವೆ. ಕಾಡು ಕಾಡಿನ ಪ್ರಾಣಿಗಳು ಕಡಿಮೆಯಾಗಿದ್ದು ಒಂದೆಡೆಯಾದರೆ ಹಳ್ಳಿಗಳಲ್ಲಿನ ಯುವಕರ ಪಟ್ಟಣ ವಲಸೆಯಿಂದಾಗಿ ಸೋಬೇಟೆಗಾರರು ಇಲ್ಲವಾಗುತ್ತಿದ್ದಾರೆ. ಆದರೂ ಸಂಪ್ರದಾಯ ಬಿಡಲೊಲ್ಲದ ಸಾಗರ-ಸಿದ್ದಾಪುರ-ಸೊರಬ ತಾಲ್ಲೂಕಿನ ರೈತರು ಪ್ರಾಣಿಗಳು ಸಿಗಲಿ ಬಿಡಲಿ "ಸೋಬೇಟೆ" ಯ ಆಚರಣೆಯನ್ನಂತೂ ಪ್ರತೀವರ್ಷ ಮಾಡುತ್ತಾರೆ. ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ ಎನ್ನುವ ಅಭಿಪ್ರಾಯ ಕೆಲವರದ್ದು ಇದೆ.
ಕಾಡು ಪ್ರಾಣಿಗಳಿಂದ ಫಸಲು ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು ಪರೋಕ್ಷ ಉದ್ದೇಶ ಮಾಂಸದ್ದಾಗಿದೆ. ಸೋಬೇಟೆ ಯಶಸ್ವೀಯಾಗಬೇಕೆಂದರೆ ಕಾಡು ಕೂಡ ಹೇರಳವಾಗಿರಬೇಕಾಗಿದೆ. ಕಾಡಿದ್ದರೆ ನಾಡು ಎಂಬುದು ನಾಣ್ಣುಡಿಗೆ ಸೀಮಿತವಾಗಿರದೆ ಅನುಷ್ಠಾನಕ್ಕೆ ಪೂರ್ಣಪ್ರಮಾಣದಲ್ಲಿ ಬಂದಲ್ಲಿ ಸೋಬೇಟೇಯಂತಹ ಸಾಹಸ ಉಳಿಯುತ್ತದೆ

No comments: