Monday, March 1, 2010

ನಭೋ ಮಂಡಲ ಗಡ ಗಡ

ಪ್ರಳಯ ಖಂಡಿತಾ ಆಗುತ್ತೆ. ಆದರೆಅದರ ಮುನ್ಸೂಚನೆ ಅಂತ ನಮಗೆ ಹಲವಾರು ತರಹದ ವಿದ್ಯಮಾನಗಳು ಕಾಣಿಸತೊಡಗುತ್ತವೆ ಅವೆಲ್ಲಾ ಹೀಗೆ.
ಸಾಕಷ್ಟು ಆಸ್ತಿ ಹೊಂದಿರುವ ಅಣ್ಣ ತಮ್ಮಂದಿರು ಹಿಸ್ಸೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಸಕಲ ಚರ ಸ್ಥಿರ ಆಸ್ತಿಗಳೂ ಒಂದಿನಿತೂ ವಿವಾದವಿಲ್ಲದೆ ಹಂಚಿಕೆಯಾಗುತ್ತದೆ. ಅಪ್ಪ ಅಮ್ಮ "ಭಗವಂತನನ್ನು ನಂಬಿದವರು ತಾವು ಏನನ್ನೂ ಇಟ್ಟುಕೊಳ್ಳುವುದಿಲ್ಲ" ಎಂದುಬಿಡುತ್ತಾರೆ. ಇನ್ನೆಲ್ಲಾ ಸಾಂಗೋಪಸಾಂಗವಾಗಿ ಮುಗಿಯಿತು ಅನ್ನುವಷ್ಟರಲ್ಲಿ ತಮ್ಮನ ಕಿವಿಯಲ್ಲಿ ಆತನ ಹೆಂಡತಿ ಏನೋ ಪಿಸುಗುಟ್ಟುತ್ತಾಳೆ ತಕ್ಷಣ ಆತ ತರಲೆ ತೆಗೆಯುತ್ತಾನೆ. " ಎಲ್ಲಾ ಸರಿ ಅಪ್ಪ ಅಮ್ಮ ದೇವರು, ನನ್ನ ಹೆತ್ತು ಹೊತ್ತು ಬೆಳೆಸಿದವರು ಅವರು ನನ್ನೊಟ್ಟಿಗೆ "ಇರಬೇಕು. ತಕ್ಷಣ ಅಣ್ಣನ ಹೆಂಡತಿ ಗುಸುಗುಟ್ಟುತ್ತಾಳೆ ಅಣ್ಣ " ಅದು ಆಗದ ಮಾತು ನನ್ನನ್ನೂ ಅವರೇ ಬೆಳಸಿದ್ದು ಅವರು ನನ್ನೊಟ್ಟಿಗೆ ಇರಬೇಕು" ಎಂದು ಗದ್ದಲವನ್ನೆಬಿಸುತ್ತಾನೆ". ಮಾತಿಗೆ ಮಾತು ಬೆಳೆದು ಅಮ್ಮ ಅಪ್ಪ ನನಗೆ ನನಗೆ ಎಂದು ಹಂಚು ಹಾರಿಹೋಗುವ ಮಟ್ಟಿಗೆ ಗಲಾಟೆ. ತಮ್ಮ "ಬಂಗಾರ ಎಲ್ಲ ನೀನೆ ಇಟ್ಟುಕೋ ಅಮ್ಮ ಅಪ್ಪ ನನಗಿರಲಿ" ಎನ್ನುತ್ತಾನೆ. ಅಣ್ಣ ನನ್ನ ಆಸ್ತಿ ನೀನಿಟ್ಟುಕೋ ಅಪ್ಪ ಅಮ್ಮ ನನಗಿರಲಿ ಎಂದು ಕೂಗುತ್ತಾನೆ,
ಹೀಗೆ ಹಾರಾಟ ಚೀರಾಟ ಜೋರಾಗುವಷ್ಟರಲ್ಲಿ ನಭೋ ಮಂಡಲ ಗಡಗಡ ಸದ್ದಿನೊಂದಿಗೆ..........
ಪ್ರಖ್ಯಾತ ಜ್ಯೋತಿಷಿಯೊಬ್ಬರು ಇದ್ದಕ್ಕಿಂದ್ದಂತೆ ತಮ್ಮ ಆಸ್ತಿಯನ್ನೆಲ್ಲಾ ದಾನ ಮಾಡಲು ಆರಂಭಿಸುತ್ತಾರೆ. ಇಟ್ಟದ್ದು ಪರರಿಗೆ ಕೊಟ್ಟದ್ದು ತನಗೆ ಎಂಬ ತತ್ವ ಎಂದು ಎಲ್ಲವನ್ನೂ ದಾನ ದಾನ ದಾನ ಶುರುಮಾಡುತ್ತಾರೆ. ಯಾರೇ ಭವಿಷ್ಯ ಕೇಳಲು ಬಂದರೂ "ನೀರೇ ನೀರೂ" ಎನೂ ಕಾಣಿಸುತ್ತಿಲ್ಲ ಅನ್ನುತ್ತಾರೆ.
ತಕ್ಷಣ ನಭೋ ಮಂಡಲ ಗಡ ಗಡ.
ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತಿರುತ್ತದೆ. ಅಧ್ಯಕ್ಷರೂ ಗೀತಾ ನಾಗಭೂಷಣರಂತಯೇ ಮತ್ತೊಬ್ಬರು. ಅವರು ಭಾಷಣ ಶುರು ಮಾಡುತ್ತಾರೆ. " ನಾವು ಬರಹಗಾರರು ಬರೀ ಬೊಗಳೆ ಬಿಟ್ಟಿದಷ್ಟೇ, ಬರೆದ ಬರಹಕ್ಕೆ ಕಾಸು ತೆಗೆದುಕೊಂಡಿದ್ದೇವೆ. ಬಡತನದ ಕತೆ ಶ್ರೀಮಂತರಿಗೆ ಹೇಳಿದ್ದೇವೆ. ರೈತರಿಗೆ ಕರುಣೆ ತೋರಿದ ಬರಹ ಬರೆದು ನಾವು ಕಾಸು ಮಾಡಿಕೊಂಡಿದ್ದೇವೆ. ಕನ್ನಡ ಕನ್ನಡ ಎಂದು ಜಪ ಮಾಡುತ್ತಾ ನಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳುಹಿಸಿ ಅವರು ಅಮೆರಿಕಾದಲ್ಲಿ ಸೆಟ್ಲ್ ಆಗುವಂತೆ ನೋಡಿಕೊಂಡಿದ್ದೇವೆ. ರಾಜಕಾರಣಿಗಳೇ ಎಷ್ಟೋ ಮೇಲು. ಅವರು ಹಲವು ಕೆಲಸಗಳನ್ನು ಮಾಡಿಸಿದ್ದಾರೆ. ನಾವುಗಳು ಬುರುಡೇ ದಾಸರು. ಹಾಗಾಗಿ ಈಗ ನನಗೆ ಕೊಟ್ಟ ಹದಿನೈದು ಲಕ್ಷ ರೂಪಾಯಿಗಳನ್ನು ಇಲ್ಲೇ ಇರುವ ರೈತರಿಗೆ ನೀಡುತ್ತಿದ್ದೇನೆ. "
ತಕ್ಷಣ
ಗಡ ಗಡ ಗಡ ನೀರೋ ನೀರು.
ಇಂತಹ ಘಟನೆ ನಿಮಗೂ ಸಾವಿರ ಹೊಳೆಯುತ್ತೆ. ಅದಾದ ದಿವಸವೇ ಪ್ರಳಯ. ಅಲ್ಲಿವರಗೆ ಜುಂ ಜಂ ಜಮಾಯ್ಸಿ.

3 comments:

ಮೃತ್ಯುಂಜಯ ಹೊಸಮನೆ said...

ನೀನು ಹೇಳಿದ್ದೆಲ್ಲಾ ಆಗೊದಿದ್ರೆ ಪ್ರಳಯ ಆಗ್ಲಿ ಮಾರಾಯಾ..!ಅದ್ಸರಿ..ಹೀಗೆಲ್ಲಾ ಕಲ್ಪನೆ ಮಾಡ್ತೀಯಲ್ಲಾ..ನಿಂಗೆ ವಿವೇಕ ಬರೋದು ಯಾವಾಗ?

Unknown said...

ಹಿಂದೆ ಸೇರಿದ್ದ "ಅ" ಅಕಸ್ಮಾತ್ ಅಳಿಸಿ ಹೋದಾಗ........!

ಮಾವೆಂಸ said...

ನೀನು ಎಂತ ಮಾಡಿದ್ರೆ ಪ್ರಳಯ ಆಗ್ತು ಮತ್ತು ನಾನು ಪ್ರಳಯ ಆಗದಿರಕ್ಕೆ ಏನು ಮಾಡಲಾಗ?

ಮಾರಿಜಾತ್ರೆ ‘ಜಾಣ’ನಾಯಿಗಳು ಮಾಡಿದಂತೆ ಮಾತ್ರ ಮಾಡಡ ಪ್ಲೀಸ್......