Sunday, March 28, 2010

ಶಿಲೆಗಳ ನಡುವಿನ ಜಲಪಾತ



ಜಲಪಾತಗಳ ಸೊಬಗನ್ನು ಬಲ್ಲವರೇ ಬಲ್ಲರು. ಎತ್ತರದಿಂದ ದುಮ್ಮಿಕ್ಕುವ ಬೆಳ್ಳಿನೊರೆಯ ಆನಂದಿಸದ ಮನುಷ್ಯರಿಲ್ಲ. ಮಲೆನಾಡು ಜಲಪಾತದ ಆಗರ. ಅಂತಹ ಒಂದು ಅದ್ಭುತ ಜಲಪಾತ ಹಿಡ್ಲುಮನೆ ಜಲಪಾತ"
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಪರ್ವತದಿಂದ ಹೊರಡುವ ನೀರು ಎರಡು ಕವಲಾಗಿ ಒಂದೆಡೆ "ಅರಿಶನಗುಂಡಿ" ಎಂಬ ಜಲಪಾತವನ್ನು ನಿರ್ಮಿಸಿದರೆ ಇನ್ನೊಂದೆಡೆ "ಹಿಡ್ಲುಮನೆ" ಎಂಬ ಜಲಪಾತವನ್ನು ನಿರ್ಮಿಸಿದೆ. ಅರಿಶಿನಗುಂಡಿ ತಾಕತ್ತಿನ ಜನರಿಗೆ ಮಾತ್ರಾ ಸೀಮಿತ. ಆದ್ರೆ ಹಿಡ್ಲುಮನೆ ಮಾತ್ರಾ ಹಾಗಲ್ಲ ಸಾಮಾನ್ಯ ಜನರೆಲ್ಲ ಅನುಭವಿಸಬಹುದು. ಹೊಸನಗರ-ಕೊಲ್ಲೂರು ದಾರಿಯಲ್ಲಿ ಸಿಗುವ ನಿಟ್ಟೂರಿಗೆ ಬಂದು ಅಲ್ಲಿಂದ ವಾಹನ(ಒಂದು ಜೀಪಿಗೆ ೫೦೦ ರೂ ಬಾಡಿಗೆ) ಮುಖಾಂತರ ಎಂಟು ಕಿಲೋಮೀಟರ್ ದೂರ ಕ್ರಮಿಸಿದರೆ ಹಿಡ್ಲುಮನೆ ಜಲಪಾತ ಬುಡದ ವರೆಗೂ ತಲುಪಬಹುದು. ಆನಂತರ ಬತ್ತ-ಕಬ್ಬಿನ ಗದ್ದೆಯ ದಾರಿಯಲ್ಲಿ ಅರ್ದ ಕಿಲೋಮೀಟರ್ ಸಾಗಿದರೆ "ಹಿಡ್ಲುಮನೆ" ಜಲಪಾತದ ಬುಡ ಸಿಗುತ್ತದೆ.
ಸಾಮಾನ್ಯವಾಗಿ ಜಲಪಾತಗಳೆಂದರೆ ಕಡಿದಾದ ಜಾಗದಿಂದ ನೇರವಾಗಿ ಬೀಳುತ್ತದೆ. ಆದರೆ ಓರೆಯಾಗಿ ಬೀಳುವುದು ಹಿಡ್ಲುಮನೆ ಜಲಪಾತದ ವೈಶಿಷ್ಟ್ಯ. ಜಲಪಾತ ನೋಡುವವರು ನೀರುಬೀಳುವ ಜಾಗದಲ್ಲಿಯೇ ಏರುತ್ತಾ ಸಾಗಬೇಕು. ಹಾಗಾಗಿ ಭರ್ಜರಿ ಮಳೆಗಾಳದ ದಿನಗಳಾದ ಜೂನ್ ನಿಂದ ಸಪ್ಟೆಂಬರ್ ತಿಂಗಳುಗಳಲ್ಲಿ ಈ ಜಲಪಾತ ನೋಡಲು ಕಷ್ಟಕರ. ಆನಂತರದ ದಿನಗಳಲ್ಲಿ ಜಲಪಾತದ ದಾರಿಯಲ್ಲಿ ಸಾಗುತ್ತಾ ಹಂತಹಂತವಾಗಿ ಏಳು ಮಜಲುಗಳಲ್ಲಿ ಹರಿಯುವ ಜಲಪಾತದ ಸೊಬಗನ್ನು ಅನುಭವಿಸಬಹುದು.
ನಡುಬೇಸಿಗೆಯ ದಿನಗಳಲ್ಲೂ ಸೂರ್ಯನ ಕಿರಣವನ್ನು ನೆಲಕ್ಕೆ ಬಿಟ್ಟುಕೊಡದ ಬೃಹತ್ ಮರಗಳ ಸಾಲುಗಳನ್ನು ಹಾಗೂ ಪಶ್ಚಿಮಘಟ್ಟಗಳ ಸೃಷ್ಟಿಯನ್ನು ಕಣ್ತುಂಬಿಕೊಳ್ಳಬಹುದು.
ಒಂದು ಕಿಲೋಮೀಟರ್ ದೂರದವರೆಗೂ ಕಪ್ಪುಶಿಲೆಗಳ ಪದರುಗಳ ನಡುವೆ ನಾಟ್ಯವಾಡುತ್ತಾ ಬೆಳ್ಳಿನೊರೆಯಂತೆ ಹರಿಯುವ ನೀರು ಎಂತಹವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಪ್ರಕೃತಿಪ್ರಿಯರಿಗೆ ಇಷ್ಟವಾಗುತ್ತದೆ ಈ ಶಿಲಾಪಾತದಲ್ಲಿನ ಜಲಪಾತ. ಮಾರ್ಚಿನ ನಂತರ ನೀರಿನ ಓಘ ಕಡಿಮೆಯಾದರೂ ಕಪ್ಪುಕಲ್ಲುಗಳ,ಹಸಿರು ಕಾಡುಗಳ ಸೊಬಗನ್ನು ಸವಿಯಬಹುದು.

2 comments:

shivu.k said...

ಜಲಪಾತದ ಫೋಟೊ ನೋಡಿದರೆ ಹೋಗಬೇಕೆನಿಸುತ್ತದೆ. ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

prasca said...

ಶರ್ಮ ಸಾರ್,
ಇದೂ ಕೂಡ ಹತ್ತಲಿಕ್ಕೆ ಸ್ವಲ್ಪ ಕಷ್ಟವೇ ಇದೆ ಅಲ್ವ? ಮೊದಲೆರಡು ಹಂತದ ನಂತರ ಕಡಿದಾದ ದಾರಿ ಬಲು ತ್ರಾಸದಾಯಕ