ಲೋಕಾಯುಕ್ತರ ರಾಜಿನಾಮೆಯ ದಿನ
ಭ್ರಷ್ಟರ ನಿಗ್ರಹಿಸಲಾರೆ ಎಂದ ದಿನ
ತಮ್ಮ ಸಂಕಷ್ಟಕ್ಕೆ ಸರ್ಕಾರವನ್ನು ಹೊಣೆಯಾಗಿಸಿದ ದಿನ
ಗದ್ದೆಯಾ ಮೂಲೆಯಲ್ಲಿ ಕೂತ ರೈತನೊಬ್ಬ ಯೋಚಿಸುತ್ತಿದ್ದ
ನಾನೂ ಮುಷ್ಕರ ಹೂಡಬೇಕು, ಅಕ್ಕಿ ಬೆಳೆಯಬಾರದು ಭತ್ತ ಬಿತ್ತಬಾರದು
ವೈದ್ಯರು ಮುಷ್ಕರ ನಿರತ ದಿನ
ಔಷಧಿ ಮಾತ್ರೆ ಸಿಗದ ದಿನ
ನಮ್ಮ ಬೇಡಿಕೆ ಈಡೇರಿಸಿ ಅಂದ ದಿನ
ಕೊಟ್ಟಿಗೆಯಾ ಮೂಲೆಯಲ್ಲಿ ಕೂತ ಗೌಳಿಯೊಬ್ಬ ಚಿಂತಿಸುತ್ತಿದ್ದ
ನಾನೂ ಬೇಡಿಕೆಯನ್ನಿಡಬೇಕು, ಹಿಂಡಿ ನೀಡಬಾರದು,ಹಾಲು ಕರೆಯಬಾರದು
ಬ್ಯಾಂಕ್ ನೌಕರರ ಹೋರಾಟದ ದಿನ
ವಹಿವಾಟೆಲ್ಲ ನಿಂತ ದಿನ
ಸಂಬಳ ಏರಿಕೆ ಬೇಡಿಕೆಯ ದಿನ
ಮಗ್ಗದಾ ಮೂಲೆಯಲ್ಲಿ ಕೂತ ನೇಕಾರನೊಬ್ಬ ಆಲೋಚಿಸುತ್ತಿದ್ದ
ನಾನು ಕೂಗಬೇಕು, ಹತ್ತಿ ಬಿಚ್ಚಬಾರದು, ಬಟ್ಟೆ ನೆಯ್ಯಬಾರದು.
ಬೆಚ್ಚಿದರು ಬೆದರಿದರು ರಾಜಕಾರಣಿಗಳು,
ಲೋಕಾಯುಕ್ತರ ವೈದ್ಯರ ನೌಕರರ ಸಮಸ್ಯೆ ನೀಗಿತಲ್ಲಿ.
ಚುಚ್ಚಿಸಿದರು ಬೆದರಿಸಿದರು ಆಡಳಿತಗಾರರು,
ನೇತಾಡಿತು ದೇಹ ಆಲದ ಮರದ ಕೊಂಬೆಯಲ್ಲಿ.
2 comments:
ಇದೇ ವಿಪರ್ಯಾಸ!
ವೈಧ್ಯರು, ಬ್ಯಾಂಕ್ ನೌಕರರು, ಸಾರಿಗೆ ನೌಕರರು ರಾಜಕಾರಣಿಗಳು ಎಲ್ಲರೂ ಮುಷ್ಕರ ಹೂಡುವವರೇ! ಆದರೆ ರೈತ ಮುಷ್ಕರ ಹೂಡಿದರೆ ಪರಿಸ್ಥಿತಿ ಏನಾಗಬಹುದು?
ಆದರೆ ಅದು ಸಾಧ್ಯವಿಲ್ಲ! ಏಕೆಂದರೆ ರೈತ ಅಷ್ಟೊಂದು ಯೋಚಿಸಲಾರ. ಅವನಿಗೆ ಆತ್ಮಹತ್ಯೆಯೇ ಸುಲಭವಾಗಿ ಕಾಣುವಾಗ ಮುಷ್ಕರದ ಹಂಗೇಕೆ?
ಚೆಂದದ ಪರಿಹಾರ! ಆದರೇ ಸಾಧ್ಯವೇ?
Post a Comment