Tuesday, July 6, 2010

ಕಂಗನ ಹಳ್ಳು.


ಸಹಜ ಕಾಡು ಎಂದರೆ ವೈವಿಧ್ಯಗಳ ಆಗರ. ಔಷಧಿಯ ಕಣಜ. ರಾಮಾಯಣದ ಹನುಮಂತ ಹೊತ್ತು ತಂದ ಸಂಜೀವಿನಿ ಬೆಟ್ಟದಂತೆ ಹಿಂದೆ ಮಲೆನಾಡಿನಲ್ಲಿ ನೂರಾರು ಗುಡ್ಡಗಳಿದ್ದವು. ಅವು ಕುರುಚಲು ಕಾಡಲ್ಲ ನಾನಾ ವಿಧದ ಜಾತಿಯ ಸಸ್ಯ ಸಂಪತ್ತು ಅಲ್ಲಿತ್ತು. ಇಂದು ಅಕೇಶಿಯಾ ಯುಪಟೋರಿಯಂ ಆ ಜಾಗಗಳನ್ನು ಆಕ್ರಮಿಸಿಕೊಂಡಿದೆ.ಈ ಆಕ್ರಮಣದಿಂದಾಗಿ ಅನೇಕ ಔಷಧೀಯ ಗಿಡಗಳು ಕಣ್ಮರೆಯಾಯಿತು. ಇರಲಿ ಅದು ಪ್ರಕೃತಿಯ ಆಸೆಯೂ ಆಗಿತ್ತೇನೋ. ಕಾರಣ ಈ ಕ್ಷಣದ ವರೆಗೆ ಏನು ನಡೆಯಿತೋ ಅದನ್ನು ಬದಲಾಯಿಸಲು ಆಗುವುದಿಲ್ಲ. ಅಂತಹ ಕಣ್ಮರೆಯ ವರ್ಗಕ್ಕೆ ಸೇರುವ ಅಪರೂಪದ ಬಳ್ಳಿ ಸಸ್ಯ ಗ್ರಾಮ್ಯ ಭಾಷೆಯಲ್ಲಿ ಕರೆಯುವ ಈ ಕಂಗನ ಹಳ್ಳು.
ಈ ಸಸ್ಯ ಮೊದಲನೆಯದಾಗಿ ಮಕ್ಕಳಿಗೆ ಬಹುಪ್ರಿಯ. ಮಳೆಗಾಲದ ದಿನಗಳಲ್ಲಿ ಹಿಂದೆ ಬಿದಿರಿನಿಂದ ಪೆಟ್ಟಲು ಎಂಬ ಆಟಿಕೆಯನ್ನು ತಯಾರಿಸುತ್ತಿದ್ದರು. ಅದು ಮಕ್ಕಳ ಎಕೆ ೪೭ . ಈ ಕಂಗನ ಹಳ್ಳು ಅದಕ್ಕೆ ಬಳಸುವ ಗುಂಡು. ಜುಮ್ಮ ಎಣ್ನೆಕಾಯಿ ಮುಂತಾದ ನಾನಾ ಅಸ್ತ್ರಗಳ ಜತೆಯಲ್ಲಿ ಕಂಗನಹಳ್ಳೂ ಪೆಟ್ಟಲುಗುಂಡಾಗಿ ಬಳಕೆಯಾಗುತ್ತಿತ್ತು. ಪೆಟ್ಟಲಿನ ಹೋಲಿನಲ್ಲಿ ಕಂಗನ ಹಳ್ಳ(ಕಾಯಿ) ಇಟ್ಟು ಹೊಡೆದರೆ ಸೋಂಂಂಯ್ ಟಬಕ್ ಎಂಬ ಸದ್ಧಿನ ಜತೆ ಪಟಾರನೆ ಹಸಿರುಬಣ್ಣದ ರಸವನ್ನು ಹೊಗೆಯ ರೂಪದಲ್ಲಿ ಉಗುಳುತ್ತಿತ್ತು. ಹಾಗಾಗಿ ಮಕ್ಕಳಪ್ರಿಯ ಕಾಯಿ ಕಂಗನ ಹಳ್ಳು.
ಈ ಸಸ್ಯದ ಕಾಯಿ ಯಥೇಚ್ಚ ಔಷಧೀಯ ಗುಣವನ್ನು ಹೊಂದಿದೆ. ನಂಜು ಹೆಚ್ಚಾದಲ್ಲಿ ಇದರ ಎಣ್ಣೆಯನ್ನು ಬಳಸುತ್ತಾರೆ. ಷುಗರ್ ಗೂ ಇದರ ರಸ ಸ್ವಲ್ಪಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಹಳ್ಳಿ ವೈದ್ಯರ ಆಂಬೋಣ.
ಹೀಗೆಲ್ಲಾ ಇರುವ ಈ ಬಳ್ಳಿ ನಿಧಾನ ಅವಸಾನದತ್ತ ಸರಿಯುತ್ತಿದೆ. ಹೀಗೆ ಲೇಖನ ಬರೆಯುತ್ತಾ ಕುಂತರೆ ಅದು ಪರಿಹಾರವಲ್ಲ ಎಂಬ ವಾಸ್ತವ ಅರಿವಾಗಿ ನಾವು ಒಂದಿಷ್ಟು ಬಳ್ಳಿ ಕಾಪಾಡಿದ್ದೇವೆ. ಆದರೆ ನಮ್ಮ ಯತ್ನ ಹಲವು ಬಾರಿ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ. ಹತ್ತು ಬಳ್ಳಿಗಳಲ್ಲಿ ಮೂರು ಮಾತ್ರಾ ಉಳಿದು ಈ ವರ್ಷ ಯಥೇಚ್ಚ ಕಾಯಿಬಿಟ್ಟಿದೆ. ಮುಂದೆ ಅದರ ಬೀಜದ ಮೂಲಕ ಬಳ್ಳಿ ಪ್ರಸರಣವಾಗುತ್ತೋ ಕಾದುನೋಡಬೇಕು

4 comments:

ಮನದಾಳದಿಂದ............ said...

nice article and great job!
keep it up!

ಸೀತಾರಾಮ. ಕೆ. / SITARAM.K said...

ಉಪಯುಕ್ತ ಮಾಹಿತಿ!
ಬಳ್ಳಿ ಉಳಿಸುವಲ್ಲಿನ ತಮ್ಮ ಕಾಳಜಿ ಪ್ರಶ೦ಸನೀಯ!
ಧನ್ಯವಾದಗಳು.

Unknown said...

ಧನ್ಯವಾದಗಳು
ಪ್ರವೀಣ್ ಮತ್ತು ಸೀತಾರಾಂ ರವರಿಗೆ

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಬರಹ