Friday, August 6, 2010

ಈ ಸಮಯ ನಿಂಬ್ ಗಾರಮಯ

ಗೊತ್ತು ನಿಂಬೆಬಾಗದ ಫೋಟೋ ನೋಡಿದ ತಕ್ಷಣ ನಿಮ್ಮ ಬಾಯೊಳಗೆ ಚೊಳ್ ಅಂತ ನೀರು ಬಂತು ಅಂತ. ಆದರೆ ಒಂದೇ ಒಂದು ಸಮಾಧಾನ ಎಂದ್ರೆ ಅಂಗಡಿಗೆ ಹೋಗಿ ನೀವೂ ಇನ್ನೊಂದೆರಡು ಘಂಟೆಯೊಳಗೆ ಟೇಸ್ಟ್ ನೋಡಿ ಲೊಟ್ಟ ಬಾರಿಸಬಹುದು. ಇರಲಿ ಅವೆಲ್ಲಾ ಆಮೇಲಿನ ಕತೆಯಾಯಿತು ಈಗ ವಿಷಯಕ್ಕೆ ಬರೋಣ.
ಹತ್ತು ಗಂಟೆಯ ಹೊತ್ತಿಗೆ ನಾನು ಮೆತ್ತಿನ ಮೇಲೆ ಕಂಪ್ಯೂಟರ್ ಕುಟ್ಟುತ್ತಾ ಇರುವಾಗ ಕೆಳಗಿನಿಂದ "ರೀ........." ಎಂಬ ವಿಶೇಷ ಸ್ವರ ಕೇಳಿತು ಅಂತಾದ ಕೂಡಲೆ ನಾನು ಕ್ಯಾಮೆರಾ ಹಿಡಿದು ಹೊರಟುಬಿಡುತ್ತೇನೆ. ಇದೆಲ್ಲಾ ಶುರುವಾಗಿದ್ದು "ಸೌತೇ ಕಾಯಿ ಉಪ್ಪುಕಾರದ" ಬರಹದಿಂದ. ಬ್ಲಾಗಲ್ಲಿ ನೋಡಿದ ನನ್ನ ಅಕ್ಕಂದಿರೋ ಮತ್ಯಾರೋ ನನ್ನವಳ ಪರಿಚಯಸ್ತರು " ಅಯ್ಯೋ ಕವಿತಾ..ನಿನ್ನ ಫೋಟೋ ಪೇಪರ್ರಲ್ಲಿ ಬೈಂದಲೇ...." ಅಂತ ಫೋನ್ ಮಾಡಬಿಟ್ಟಿದ್ದಾರೆ.(ಗುಟ್ಟು ಇದು ನಿಮ್ಮೊಳಗೆ ಇರಲಿ) ಆದರ ಪರಿಣಾಮವಾಗಿ ಈಗ ಮನೆಯಲ್ಲಿ ಏನೇ ಹೊಸ ಪದಾಥ ಮಾಡುವಾಗ ನಾನು ಅಡಿಗೆಮನೆಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲಬೇಕು, ಮತ್ತೆ ಮಾಡುವ ವಿಧಾನ ತಿಳಿಯಬೇಕು. ನಂತರ ಬ್ಲಾಗಲ್ಲಿ ಬರೆಯಬೇಕು. ನೀವಾದರೋ ಕಾಮೆಂಟಿನಲ್ಲಿ "ವಾವ್" ಎಂದು ಬರೆದು ಆಮೇಲೆ "ಇದು ಎಂತು ಹೇಳಿ ಬರ್ದಿಕ್ಕೆ, ಎಲ್ಲರಿಗೂ ಗೊತ್ತಿದ್ದಪ" ಅಂತ ಅಂದುಬಿಡಬಹುದು. ಆದರೆ ಇಲ್ಲಿ ನಿಮ್ಮ ಕಾಮೆಂಟಿಗೆ ಖುಷ್ ಆಗಿ ಮತ್ತೊಂದು ಪದಾರ್ಥ ಬರೀರಿ ಅಂತ ಹೇಳುವ ಜನ ತಯಾರಾಗಿರುತ್ತಾರೆ. ಇರಲಿ ಲೈಫು ಎಂದರೆ ವೈಫು, ಮುಂದೇ ನೋಡೋಣ.
ಬರೋಬ್ಬರಿ ಮಳೆಗಾಲದ ಆಗಸ್ಟ್ ತಿಂಗಳಿನಲ್ಲಿ ಹಿತ್ತಲಿನ ಗಿಡದಲ್ಲಿ ನಿಂಬೆ ಹಣ್ಣು ತೊನೆದಾಡುತ್ತಿರುತ್ತದೆ. ಉಪ್ಪಿನಕಾಯಿಯೂ ಬೇಸರ ಬರುವಷ್ಟು, ಪಾನಕ ಮಾಡಿ ತಣ್ಣಗೆ ನೇಟೋಣ ಎಂದರೆ ಚಳಿ ಚಳಿ. ಆಗಲೇ ಈ ನಿಂಬೆಗಾರದ ಬಗೆ. ಒಂದೇ ಒಂದು ಹನಿ ನಾಲಿಗೆ ಮೇಲಿಟ್ಟರೆ ಲೊಚ್ ಎಂಬ ಶಬ್ಧ ತನ್ನಷ್ಟಕ್ಕೆ. ಅದಕ್ಕೆ ಹಾಕುವ ಸೂಜಿಮೆಣಸಿನ ಕಾಯಿ ಗಂಟಲನ್ನು ಗರಂ ಮಾಡಿಬಿಡುತ್ತದೆ. ನಿಂಬೆ ಕಡಿಯಿಂದ ಬೀಜ ತೆಗೆದು ಕೇವಲ ರಸ ಪಾತ್ರೆಗೆ ಹಾಕಿಟ್ಟುಕೊಂಡು, ಸಾಸಿವೆ ಜೀರಿಗೆ ಹಾಗೂ ಉದ್ದಿನಬೇಳೆ ಸೂಜಿಮೆಣಸು ಹುರಿದುಕೊಂಡು ನಂತರ ಹುಳಿ ಸೇರಿಸಿ ಬೀಸಿದರಾಯಿತು. ಆನಂತರ ಒಳ್ಳೆಯ ಗೋಕರ್ಣದ ಇಂಗು ಹಾಕಿ ಒಂದು ಒಗ್ಗರಣೆ ಜಡಿದರೆ ನಿಂಬ್ ಗಾರ ರೆಡಿ.
ಗೊತ್ತಿದ್ದರೂ ಮಾಡಿ ಗೊತ್ತಿಲ್ಲದಿದ್ದರೂ ಮಾಡಿ ಅಥವಾ ನಾಳೆ ನಾಡಿದ್ದರೊಳಗೆ ನಮ್ಮ ಮನೆಗೆ ಬನ್ನಿ.

5 comments:

ಮನಸಿನ ಮಾತುಗಳು said...

na ootakke bandu bidti...;-)..hangu Pg li madale agtalle...:) nale ,naadiddu officege raje raghanna... :-)

PARAANJAPE K.N. said...

ಖಂದಿತ ಒಂದು ದಿನ ನಿಮ್ಮಲ್ಲಿಗೆ ಹಾಜರಿ ಹಾಕುವೆ

ಮನಸ್ವಿ said...

ಹೆಹ್ಹೆ.. ರಾಘಣ್ಣ ಹಿಂಗಾ ಸಮಾಚಾರ, ಕ್ಯಾಮರಾಮನ್ ಆಗ್ತಾ ಇದ್ಯ? ಪಾಪ!

g.mruthyunjaya said...

ಘೋರಾನ್ದ್ಲ ಮಳೆಗಾಲ, ಹ್ವಾರ್ಯ, ನೇಟೋಣ ಮುಂತಾದ ಅಚ್ಚ ಮಲೆನಾಡ ದೇಸೀ ಶಬ್ದಗಳು ಮರೆತುಹೋಗದಂತೆ ಅವುಗಳನ್ನು ಬಳಕೆಯಲ್ಲಿಡುತ್ತಿರುವುದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಸ್ವಾಮೀ ತಮ್ಮ ವಿಳಾಸ ಕೊಡಿ ದಯವಿಟ್ಟು. ಈ ಆದಿತ್ಯವಾರ ಎಲ್ಲ ಬ್ಲಾಗಿಗರನ್ನು ಸೇರಿಸಿ ಕರೆದುಕೊಂಡು ಬರುತ್ತೇನೆ. ಅದೇನನ್ನು ಅದ್ಯಾರ್ಯಾರು ಬರೆಯಲು ಹೇಳುವರೋ ಅವರಿಂದ ಅವನ್ನೆಲ್ಲಾ ಮಾಡಿಸಿಬಿಡಿ! ತಿಂದೇ ವಾಹ್ ಹೇಳುತ್ತೇವೆ.

ನಿಮ್ಬೆಗಾರ ಚೆನ್ನಾಗಿದೆ.