Sunday, September 5, 2010

ಜೋಗದ ನೆರೆ ನಿಪ್ಲಿ


ಶಿವಮೊಗ್ಗ ಜಿಲ್ಲೆಯ ಜೋಗಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಜಲಪಾತದಲ್ಲಿ ನೀರಿಲ್ಲದಿದ್ದರೆ ಬೇಸರವಾಗುತ್ತದೆ. ವರುಣನ ಕೃಪೆಯಿಲ್ಲದ ವರ್ಷಗಳಲ್ಲಿ ನೀರಿಲ್ಲದಿದ್ದರೆ ಜೋಗಕ್ಕೆ ರಂಗಿಲ್ಲ. ಇರುವ ಅಲ್ಪಸ್ವಲ್ಪ ನೀರಿಗೆ ತಲೆ ಕೊಡೋಣವೆಂದರೂ ೯೦೦ ಅಡಿ ಪ್ರಪಾತಕ್ಕೆ ಇಳಿಯಬೇಕು. ಅಂತ ಸಮಯದಲ್ಲಿ ಖುಷ್ ಕೊಡುವ ಜಲಪಾತಗಳೆಂದರೆ ಜೋಗದ ಸುತ್ತಮುತ್ತಲು ಇರುವ ನೀರಧಾರೆಗಳು. ಅಂತಹ ಒಂದು ಜಲಧಾರೆ ನಿಪ್ಪಲಿ ಡ್ಯಾಂ.
ಜೋಗದಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದತ್ತ ಸಾಗುವ ಮಾರ್ಗದಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿ ಹಲಗೇರಿ ಎಂಬ ಊರಿನ ಬಳಿ ಇರುವ ನಿಪ್ಲಿ ಎಂಬಲ್ಲಿ ಕೃಷಿನೀರಾವರಿಗಾಗಿ ಒಂದು ಡ್ಯಾಂ ಕಟ್ಟಲಾಗಿದೆ. ಡ್ಯಾಂ ನ ವಿಸ್ತೀರ್ಣ ಮೂವತ್ತು ಎಕರೆಯಷ್ಟು ಇರುವುದರಿಂದ ಮಳೆಗಾಲ ಆರಂಭವಾದ ಕೆಲವೇ ದಿವಸಗಳಲ್ಲಿ ಆಣೆಕಟ್ಟು ಭರ್ತಿಯಾಗುತ್ತದೆ. ಆಣೆಕಟ್ಟು ಭರ್ತಿಯಾಗಿ ನಂತರದ ಹೊರಹರಿವು ಇನ್ನೂರು ಅಡಿ ಮುಂದೆ ಹೋಗಿ ನಯನಮನೋಹರ ಜಲಪಾತವೊಂದರ ಸೃಷ್ಟಿಗೆ ಕಾರಣವಾಗಿದೆ. ಹೊರಹರಿವಿನ ಇನ್ನೂರು ಮೀಟರ್ ಜಾಗ ಲ್ಯಾಟ್ರೇಟ್ ಕಲ್ಲಿನ ಸ್ಥಳವಾದ್ದರಿಂದ ನೀರಾಟಕ್ಕೆ ಪ್ರಶಸ್ಥ ಸ್ಥಳ. ಜಲಪಾತದ ಮೇಲ್ಬಾಗದಲ್ಲಿ ನಡೆದು ಸಾಗಬೇಕಾದ ಸಂದರ್ಭದಲ್ಲಿ ಇಲ್ಲೊಂದು ಅದ್ಬುತ ಜಲಧಾರೆ ಇದೆ ಎಂಬ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ನೀರು ಬೀಳುವ ಅಂತಿಮ ಘಟ್ಟ "ವಾವ್" ಎನ್ನುವಷ್ಟು ಖುಷಿನೀಡುತ್ತದೆ. ಹದಿನೆಂಟು ಅಡಿ ಎತ್ತರದಿಂದ ಬೀಳುವ ಅರವತ್ತು ಅಡಿ ಅಗಲದ ಈ ಜಲಧಾರೆ ಸಂತೋಷ ನೀಡುವುದು ಖಂಡಿತ. ಜಲಪಾತದಲ್ಲಿ ನೀರು ಕಡಿಮೆಯಿದ್ದರೆ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಈಜುಬಲ್ಲವರು ಆಣೆಕಟ್ಟಿನ ಹಿನ್ನೀರಿನಲ್ಲಿ ತೇಲಬಹುದು. ಅಪಾಯಕಾರಿ ಆಳವಿಲ್ಲದ ಕಾರಣ ಇಲ್ಲಿ ಈಜು ನಿರ್ಭಯ. ಅಕ್ಟೋಬರ್ ಅಂತ್ಯದವರೆಗೂ ಈ ಜಲಪಾತದಡಿಯಲ್ಲಿ ತಲೆಕೊಟ್ಟು ಕುಳಿತುಕೊಳ್ಳಬಹುದು. ಆನಂತರದ ಜೂನ್ ತಿಂಗಳವರೆಗೆ ಅಣೆಕಟ್ಟಿನ ನೀರಿನಲ್ಲಿ ಮೋಜಿಗಷ್ಟೆ ಸೀಮಿತ. ಇಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿ "ನಮ್ಮನೆ" ಮತ್ತು "ಮತ್ತುಗ" ಎಂಬ ಎರಡು ಹೋಂ ಸ್ಟೇಗಳು ಇದ್ದು ಅಲ್ಲಿ ವಸತಿಮಾಡಿದವರಿಗೆ ಈ ನೀರಧಾರೆಯ ಪತ್ತೆ ಸುಲಭ. (ನಮ್ಮನೆ: ೦೮೧೮೩೨೦೭೩೬೧- ಮತ್ತುಗ: ೯೪೪೮೦ ೬೮೮೭೦ )
ಇನ್ನೋಮ್ಮೆ ಜೋಗಕ್ಕೆ ಬರುವಾಗ ನಿಪ್ಪಲಿ ಜಲಪಾತಕ್ಕೆ ಭೇಟಿ ಕೊಡುವುದನ್ನ ಮರೆಯಬೇಡಿ. ಆದರೆ ನೆನಪಿರಲಿ ಅದು ಜೂನ್ ನಿಂದ ಅಕ್ಟೋಬರ್ ಅಂತ್ಯದೊಳಗಾಗಿರಬೇಕು. ಸಪ್ಟೆಂಬರ್ ಅಂತ್ಯದೊಳಗಾದರೆ ಅತಿ ಸುಂದರ.

(ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿತ ಬರಹ)
http://prajavani.net/Content/Sep52010/weekly20100904202796.asp

2 comments:

ದಿನಕರ ಮೊಗೇರ said...

tumbaa chennaagide vivaraNe....
ishta aaytu....

ಸೀತಾರಾಮ. ಕೆ. / SITARAM.K said...

ಉಪಾಯುಕ್ತ ಮಾಹಿತಿ. ಸುಂದರ ವಿವರಣೆ.