Monday, September 6, 2010

ಸೃಷ್ಟಿ ಕ್ರಿಯೆಯ ಸೋಜಿಗ


ಮನುಷ್ಯ ತನಗೆ ಬೇಕಾದ ಸಸ್ಯಗಳ ಬೀಜವನ್ನು ಸಂಗ್ರಹಿಸುತ್ತಾನೆ.ಬೇಕಾದೆಡೆ ಬಿತ್ತುತ್ತಾನೆ ಬೇಕಾದ್ದದ್ದನ್ನೇ ಬೆಳೆಯುತ್ತಾನೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಹಾಗಾಗಿ ಮನುಷ್ಯನಿಗೆ ಬೇಕಾದ ಅವನ ಜೀವನಕ್ಕೆ ಅವಶ್ಯಕತೆಇರುವ ಸಸ್ಯಗಳ ಬೀಜಗಳು ಕಣಜದಲ್ಲಿ ಭದ್ರವಾಗಿ ಶೇಕರಿಸಲ್ಪಡುತ್ತವೆ ತನ್ಮೂಲಕ ಸಂತಾನಭಿವೃದ್ಧಿಯ ಆನಂದವನ್ನು ಹೊಂದುತ್ತವೆ.ಕಾಡಿನ ಸಹಜ ಸಸ್ಯಗಳು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ಸಸ್ಯ ತಾನು ಬೆಳೆಯಬೇಕು ತನ್ನ ಸಂತಾನವನ್ನೂ ಬೆಳೆಸಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ ಅದರ ಜೀವಕ್ಕೆ ಕುತ್ತು ಹಾಗಾಗಿ ಅವುಗಳಲ್ಲಿ ಹಲವಾರು ಸಸ್ಯಗಳು ತನ್ನದೇ ಹಣ್ಣಿನೊಳಗೆ ಬೀಜವನ್ನಿಟ್ಟು ಪಕ್ಷಿಗಳನ್ನು ಆಕರ್ಷಿಸಿ ಅದರಮೂಲಕ ಸಂತಾನವನ್ನು ಪಸರಿಸುತ್ತವೆ.
ಇದೆಲ್ಲದರ ಹೊರತಾಗಿ ಕೆಲವು ಸಸ್ಯಗಳು ತಮ್ಮ ಬೀಜವನ್ನು ಆಕಾಶದಲ್ಲಿ ತೇಲಿಬಿಟ್ಟು ಗಿರಿಗಿಟ್ಟಿಯಂತೆ ಹಾರಾಡುತ್ತಾ ಹೆಲಿಕ್ಯಾಪ್ಟರ್ ತಾಂತ್ರಿಕವಿಧಾನ ಬಳಸಿ ಪಸರಿಸುತ್ತವೆ. ಅವು ನೋಡಲು ಅಂದ, ಅಲ್ಲಿನ ನಿಸರಗದ ಅಚ್ಚರಿಯನ್ನು ಸವಿಯಲು ಆನಂದ. ಅಂತಹ ಒಂದು ಸಸ್ಯ ಇದು.
ದೊಡ್ಡ ಉರಾಳ ಎಂದು ಗ್ರಾಮ್ಯ ಭಾಷೆಯಲ್ಲಿ ಕರಯಿಸಿಕೊಳ್ಳುವ ಈ ಗಿಡ ಕೆಂಪನೆಯ ಹೂವನ್ನುಬಿಡುತ್ತದೆ. ಇದರ ಎಲೆಗಳನ್ನು ಕಿವುಚಿ ರಸ ಹಿಂಡಿ ತತ್ಕಾಲದ ಗಾಯಗಳಿಗೆ ಟಿಂಚರ್ ರೀತಿ ಬಳಸುತ್ತಾರೆ ಮಲೆನಾಡಿಗರು. ಈ ಗಿಡದ ಹೂವು ಬಲಿತು ಬೀಜವಾದಾಗ ಹತ್ತಿಯನ್ನು ಹೋಲುವ ಸಣ್ಣದಾದ ನವಿರಾದ ಎಳೆಯ ದಾರಗಳು ಬೀಜದ ತುದಿಯಲ್ಲಿ ಜೋತಾಡುತ್ತವೆ. ಸಣ್ಣ ಕಪ್ಪು ಬಣ್ಣದ ಬೀಜಕ್ಕೆ ಇಪ್ಪತ್ತು ಇಪ್ಪತ್ತೈದು ದಾರಗಳು ನೇತಾಡುತ್ತಿರುತ್ತವೆ. ಜೂನ್ ತಿಂಗಳಿನಲ್ಲಿ ಗಾಳಿ ಯರ್ರಾಬಿರ್ರಿ ಬೀಸತೊಡಗಿದಾಗ ಬಲಿತ ಬೀಜಗಳು ಸಾರಾಗವಾಗಿ ಗಾಳಿಯಲ್ಲಿ ದಾರದ ಸಹಾಯದಿಂದ ತೆಲತೊಡಗುತ್ತವೆ. ಗಾಳಿಯ ರಭಸಕ್ಕನುಗುಣವಾಗಿ ಬೀಜಗಳು ಎರಡು ಕಿಲೋಮೀಟರ್ ದೂರದವರೆಗೂ ಹಾರಿಹೋಗಿ ಬೀಳುವುದುಂಟು. ಬೀಜ ಇಳಿಯುವಾಗ ಚಿಕ್ಕ ಚಿಕ್ಕ ಹೆಲಿಕ್ಯಾಪ್ಟರ್ ಇಳಿಯುವ ಭಾಸವಾಗುತ್ತದೆ. ಅಲ್ಲಿ ಭೂಮಿಕಂಡ ಬೀಜ ಮೊಳಕೆಯೊಡೆಯುತ್ತವೆ. ಪ್ರಕೃತಿಯ ಚಕ್ರದಲ್ಲಿ ತನ್ನ ಪಾತ್ರವನ್ನು ದೊಡ್ಡ ಉರಾಳ ಹೀಗೆ ಯಶಸ್ವಿಯಾಗಿ ನಿರ್ವಹಿಸುತ್ತದೆ. ಅದರ ಬೀಜಪ್ರಸರಣ ಕ್ರಿಯೆ ನೋಡಲು, ಬೀಜ ಗಾಳಿಗೆ ಗಿಡ ಬಿಟ್ಟು ಹೊರಡುವ ಕ್ರಿಯೆ ವೀಕ್ಷಿಸಲು ಅದ್ಬುತವೆನಿಸುತ್ತದೆ. ಪ್ರಕೃತಿ ಮೌನವಾಗಿದ್ದು ತನ್ನದೇ ರೀತಿಯಲ್ಲಿ ಸೃಷ್ಟಿ ಕ್ರಿಯಯ ಸೌಜಿಗಗಳನ್ನು ಒಂದೊಂದು ಜೀವಿಯಲ್ಲಿಯೂ ಒಂದೊಂದು ಬಗೆಯಾಗಿ ಹುದುಗಿಸಿಟ್ಟಿದೆ. ಸ್ವಚ್ಛ ಹೃದಯದಿಂದ ಗಮನಿಸುವ ಮನಸ್ಸು ನಮಗಿರಬೇಕಷ್ಟೆ.

(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ)

2 comments:

ಸೀತಾರಾಮ. ಕೆ. / SITARAM.K said...

ಅಜ್ಜನ ಕೂದಲು ಎಂದು ನಾವು ಈ ಬೀಜದೊಡನೆ ಆಟ ಆಡುತ್ತಿದ್ದೆವು. ಬೀಜ ಒಡೆದು ಅದರಲ್ಲಿನ ಈ ರೆಕ್ಕೆ ಬೀಜಗಳನ್ನು ಗಾಳಿಯಲ್ಲಿ ಹಾರಬಿದುತ್ತಿದ್ದೆವು.
ಮಾಹಿತಿಗೆ ಧನ್ಯವಾದಗಳು. ಚೆಂದವಾಗಿ ಹೇಳಿದ್ದಿರಾ.

Anonymous said...

nature never ceases to amaze alwaa??
Read it in VK
:-)
malathi S