Tuesday, January 11, 2011

"ಗೌರಿ" ಹೂವು

ಪೂಜೆ ಪುನಸ್ಕಾರ ಎಂದರೆ ಹೂವುಗಳಿಲ್ಲದೇ ಸಾಗದು. ಹಬ್ಬಹರಿದಿನಗಳಲ್ಲಿ ಹೂವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಗಣಪತಿ ಹಬ್ಬ, ದೀಪಾವಳಿ ಹಬ್ಬ ಹೀಗೆ ಹಬ್ಬಗಳ ಸಾಲೇ ಇರುವಾಗ ಹೂವುಗಳ ಸರಗಳೇ ಬಿಕರಿಯಾಗಿಬಿಡುತ್ತವೆ. ಅಂಗಡಿಗೆ ಹೋಗಿ ಅವರವರ ಜೇಬಿನ ಗಾತ್ರಕ್ಕನುಗುಣವಾಗಿ ಹೂವುಗಳ ಖರೀದಿ ನಡೆಯುತ್ತದೆ. ಸರಿಬಿಡಿ ಅದು ಪಟ್ಟಣಿಗರ ಕತೆಯಾಯಿತು. ಹಳ್ಳಿಗಳಲ್ಲಿ ಹೂವು ಖರೀದಿಸುವ ಜನರ ಸಂಖ್ಯೆ ಕಡಿಮೆ. ಮನೆಯ ಹಿತ್ತಲಿನಲ್ಲಿ ಭಗವಂತನ ಪ್ರೀತ್ಯರ್ಥಕ್ಕಾಗಿಯೇ ಹೂವಿನಗಿಡಗಳ ದಂಡೇ ಇರುತ್ತದೆ. ಸರಿ ಅದೂ ಕೂಡ ನೆಟ್ಟಗಿಡದ ಬಿಟ್ಟ ಹೂವಿನ ಕತೆಯಾಯಿತು. ಆದರೆ ಇಲ್ಲೊಂದು ಹಬ್ಬಗಳಿಗಾಗಿಯೇ ಪ್ರಕೃತಿ ಹೂವೊಂದನ್ನು ಅರಳಿಸಿ ನಿಂತಿದೆ. ಅದೇ ಗೌರೀ ಹೂವು.ಕೃಷ್ಣ ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿಯವರೆಗೆ ಹದಿನೈದು ದಿನಗಳ ಕಾಲ ಮಲೆನಾಡಿನ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಅರಳುತ್ತದೆ ಈ ಗೌರಿ. ಹೆಸರು ಗೌರಿಯಾದರೂ ಗಣಪತಿಗೆ ಶ್ರೇಷ್ಠ ಎಂಬ ನಂಬಿಕೆ ಹಿಂದಿನಕಾಲದಿಂದಲೂ ನಡೆದುಬಂದ ಪರಿಣಾಮ ಗಣೇಶ ಹಬ್ಬದ ಸಂದರ್ಭದಲ್ಲಿ ಗುಡ್ಡಗಾಡು ಅಲೆದು ಹುಡುಕಿ ತಂದು ಗಣಪತಿಯ ಮುಡಿಗೇರಿಸಿ ಸಂಭ್ರಮಿಸುತ್ತಾರೆ ದೈವಭಕ್ತರು. ಹದಿನೈದು ದಿನದಿನಗಳಿಂದ ಇಪ್ಪತ್ತು ದಿವಸಗಳವರೆಗೆ ದಿನಕ್ಕೊಂದರಂತೆ ಹೂವುಬಿಡುವ ಗೌರಿಯ ಬಣ್ಣ ಬಹು ಆಕರ್ಷಣೀಯ. ಒಂದೆರಡು ತಿಂಗಳು ಗಿಡ ಹಾಗೆಯೇ ಇದ್ದು, ನಂತರ ಸಾವನ್ನಪ್ಪುತ್ತದೆ ಮತ್ತೆ ಮುಂದಿನ ವರ್ಷ ತನ್ನಷ್ಟಕ್ಕೆ ಗಣಪತಿ ಹಬ್ಬಕ್ಕೆ ಹೂ ನೀಡಲು ಸರಿಯಾಗಿ ಚಿಗುರಿನಿಲ್ಲುತ್ತದೆ.
ಆಂಗ್ಲಭಾಷೆಯಲ್ಲಿ ಗ್ಲೋರಿಸಾ (Gloriosa) ಎಂದು ಕರೆಯಿಸಿಕೊಳ್ಳುವ ಇದು ಆರ್ಕಿಡ್ ವಂಶ. ವರ್ಷಕ್ಕೊಮ್ಮೆ ಮಾತ್ರಾ ಹೂವಾಗುವ ಗೌರಿಯ ಗಡ್ಡೆ ಹಾಗೂ ಬೀಜ ವಿಷಯುಕ್ತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗೌರಿ ಗಿಡವನ್ನು ಕೃತಕವಾಗಿ ಬೆಳೆದು ಅದರ ಬೀಜವನ್ನು ಸಂಗ್ರಹಿಸಿ ಔಷಧಿಗಳಿಗೆ ಉಪಯೋಗಿಸುತ್ತಾರೆ. ಗೌರಿ ಹೂವಿನ ಬಗ್ಗೆ ಸವಿವರವಾದ ಹೆಚ್ಚಿನ ಮಾಹಿತಿಗೆ http://en.wikipedia.org/wiki/Gloriosa_(genus) ಗೆ ಭೇಟಿ ನೀಡಬಹುದು.

5 comments:

Anonymous said...

Hi Raghu, Nice story! Remembered my primary school days. When I was going to Talavata School, I used to hunt this plant in the forest during July/August. This is one of the beautiful flowers among all wild flowers in the tropical forest. Very beautiful to see this plant with lot of flowers in the rain forest!

This plant belongs Colchicaceae family, not orchid family. Looks like it belongs to Orchid family, but it is not even distant relative to Orchid.

-Murthy

mitaxar said...

ಒಳ್ಳೆಯ ಮಾಹಿತಿ.
ಇಂದಿನ ಪೀಳಿಗೆಗೆ ಇಂತಹ ಹೂವುಗಳ ಪರಿಚಯವೇ ಇಲ್ಲ. ಪರಿಚಯಿಸಿದ್ದಕ್ಕೆ ವಂದನೆಗಳು.

ಸಾಗರದಾಚೆಯ ಇಂಚರ said...

Gouri hoovu andakoodale oorina habbada nenapu baruttade
aa dingalalli gouri hoovu bekaadashtittu
ittichege tumba nashisuttide

Handigodu Muthu said...

ಅಂದು ಹೂವು ಕೊಯ್ಯುವುದರಿಂದಲೇ ಹುಡುಗರ ಹಬ್ಬ
ಶುರುವಾಗುತ್ತಿತ್ತು. ಹಬ್ಬದ ಸಂದರ್ಬದಲ್ಲಿ ಗೌರಿ ಹೂವಿನ
ಜೊತೆಗೆ ಬ್ಯಾಣದಿಂದ ವಿಷ್ಣು ಕಾಂತಿ, ಕಳ್ ಹೂವು,
ಬೆಳ್ಳೆಟ್ಟೆ ಎಲೆ,ಬುಟ್ಟಿ ತುಂಬಿಸಿಕೊಂಡು ಬಂದದ್ದು ಇನ್ನೂ ಹಸಿರಾಗಿದೆ.ಅವತ್ತಿನ ಕಾಲದಲ್ಲಿ ಹಾದಿ ಹೊದ್ದಿನಲ್ಲೂ ಗಿಡಗಳು ಹೂವು ಚಿಮ್ಮಿಸುತ್ತಿದ್ದ ಪುಷ್ಕಳ ಕಾಲ.ಈಗ ನೆನೆದರೆ ಮನಸ್ಸು
ಅಂದಿಗೆ ಕಳೆದು ಹೋಗುತ್ತದೆ.

Srusti said...

ಗೌರಿ ಗಣಪತಿ ಹಬ್ಬಕ್ಕೆಂದೇ ಈ ಹೂಗಳನ್ನ ಕೊಯ್ದು ತರುತ್ತಿದ್ದೆ. ಒಮ್ಮೆ ಹಸಿರು ಹಾವಿನ ಕೋಪವನ್ನು ನೋಡಿದ್ದೆ ಈ ಹೂವಿನಿಂದಾಗಿ! ನನ್ನಿಗಳು ನೆನಪಿಸಿದ್ದಕ್ಕೆ.