Wednesday, February 9, 2011

ಕಾಂಕ್ರೀಟ್ ಕಾಡುಗಳು

(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ ಕತೆ)

ಇಪ್ಪತ್ತೊಂದನೆಯ ಮಹಡಿಯ ಹವಾನಿಯಂತ್ರಿತ ಕೋಣೆಯ ಕಿಟಕಿಯಿಂದ ಕೆಳಗೆ ನೋಡಿದರೆ ಆರಡಿಯ ಮನುಷ್ಯರೇನು? ಬೃಹತ್ ಗಾತ್ರದ ಆನೆಗಳೂ ಇರುವೆಯ ಸಾಲಿನಂತೆ ಕಾಣಿಸುತ್ತವೆ. ಹಾಗೆ ಕಂಡಾಕ್ಷಣ ಅದೇ ಸತ್ಯ ಅಂತ ಅಲ್ಲ, ಆಯಾ ವಸ್ತುಗಳಿಗೆ ಅದರದ್ದೇ ಗಾತ್ರ ಅದಕ್ಕೆ ನಿಯಮಿಸಿದ್ದೇ ಕೆಲಸ. ನೋಡುಗರಾದ ನಾವು ಎಲ್ಲಿದ್ದೇವೆ ಹೇಗಿದ್ದೇವೆ ಎನ್ನುವ ವಿಷಯದಮೇಲೆ ಪ್ರಪಂಚ ದರ್ಶನ. ಈಗ ಐದುಮುಕ್ಕಾಲು ಅಡಿ ಎತ್ತರದ ದೇಹ ಹೊಂದಿರುವ ನಾನಾದರೋ ಅಷ್ಟೆ, ಅದೆಲ್ಲಿಂದ ಬಂದೆ? ಅದೆಲ್ಲಿ ನಿಂತೆ? ಅದೆಲ್ಲಿಗೆ ಹೋಗಿ ತಲುಪುತ್ತೇನೆ? ಎಂದೆಲ್ಲಾ ಆಲೋಚಿಸಿ, ಆನಂತರ ಅದಕ್ಕೊಂದು ಉತ್ತರ ಹುಡುಕುವ ಪ್ರಯತ್ನದಲ್ಲಿ ತೊಡಗಿ ನಂತರ ಸೋತೆ ಅಂತ ಅನಿಸಿ, ಇನ್ನಷ್ಟು ಗಾಢವಾಗಿ ಆಲೋಚಿಸಿದಾಗ ಅಂತಹ ಯೋಚನೆಗಳೆಲ್ಲಾ ವ್ಯರ್ಥ ಅಂತ ಅನ್ನಿಸಿದ್ದಿದೆ. ಆದರೂ ಪ್ರಶ್ನೆ ಕೇಳುವ ಬೇತಾಳನ ರೂಪದ ಒಳಮನಸ್ಸು ಆಗ್ರಹಿಸುತ್ತಲೇ ಇರುತ್ತದೆ "ಉತ್ತರ ಹುಡುಕು, ಉತ್ತರ ಹುಡುಕು" ಎಂದು. ಎಲ್ಲಿಂದ ತರಲಿ ಉತ್ತರವನ್ನ? ಯಾರು ನನ್ನ ಹಪಹಪಿಕೆ ತಣಿಸುವವರು? ಎಲ್ಲಿದ್ದಾರೆ ಅವರು?. ವರ್ಷಪೂರ್ತಿ ದುಡಿದು, ಇಪ್ಪತ್ತು ಸಾವಿರ ರೂಪಾಯಿಗಳನ್ನು ಕಂಡರೆ ಕಣ್ಣರಳಿಸುವ ಒಬ್ಬ ಸಾಧಾರಣ ರೈತನ ಮಗನಾಗಿ ಹುಟ್ಟಿ, ಈಗ ವಾರ್ಷಿಕ ಎರಡು ಸಾವಿರ ಕೋಟಿ ರೂಪಾಯಿ ಆದಾಯದ ಕಂಪನಿಯ ಅತ್ಯುನ್ನತ ಹುದ್ದೆಯಲ್ಲಿರುವಷ್ಟು ಸಾಧಿಸಿರುವ ನನ್ನನ್ನು ಹಾಗೂ ನನ್ನ ದಿನಗಳನ್ನು ಒಂದೇ ಒಂದು ಯಕಶ್ಚಿತ್ ಪ್ರಶ್ನೆ ಕರಿವರಲೆ ಮನೆಯ ತೊಲೆಯನ್ನು ತಿಂದಂತೆ ತಿನ್ನುತ್ತಿದೆ. ಜೀವವಿಲ್ಲದ ಪುತುಪುತು ಎದ್ದಿರುವ ಕಟ್ಟಡಗಳು, ಜೀವವಿದ್ದೂ ಜಡವಾಗಿರುವ ಮನುಷ್ಯರು ದಿನದಿಂದ ದಿನಕ್ಕೆ ರೇಜಿಗೆ ಹುಟ್ಟಿಸತೊಡಗಿದೆ.
ಮಳೆನಾಡಿನ ದಟ್ಟ ಕಾನನದ ನಡುವೆ ಕಿಚಿಪಿಚಿ ಕೆಸರಿನಿಂದ ಮೈ ತೊಯಿಸಿಕೊಂಡು ಕುರುಗೊಡು ಪಂಚೆಯಲ್ಲಿದ್ದ ಅಪ್ಪ ನೆನಪಾಗುತ್ತಾರೆ. ಆಷಾಡ ಮಾಸದಲ್ಲಿ ವರ್ಷಪೂರ್ತಿ ಜೀವನಕ್ಕೆ ಆಸರೆಯಾಗಿರುವ ಎರಡು ಎಕರೆ ಅರಲುಗದ್ದೆ ಹೂಟಿ ಮಾಡುವಾಗ ಗಳೆ ಹೊಡೆಯುವವರ ಜತೆಯಾಗುತ್ತಿದ್ದರು ಅಪ್ಪ. ಮನೆಯ ಎತ್ತುಗಳಿಗೆ ಕಟ್ಟುತ್ತಿದ್ದ ನೇಗಿಲಿಗೆ ಅಪ್ಪನೇ ಸಾರಥಿ. "ಹಾಳಿ ಹೊದ್ದ , ಬಾ ಬಾ ಬಾ, ನೋಡ ಅದ್ರನ್ನ...ಆಗೋತು ಆಗೋತು..." ಎಂದು ರಾಮ ಲಕ್ಷಣರೆಂಬ ಎತ್ತುಗಳನ್ನು ಹುರಿದುಂಬಿಸಿ ಮೊಣಕಾಲಿನಾಳದಲ್ಲಿ ಹುಗಿದಿದ್ದ ಹುಣ್ಣನ್ನೂ ಲೆಕ್ಕಿಸದೆ ಮಾಡುತ್ತಿದ್ದ ಕೆಲಸಗಳು ನೆನಪಾಗುತ್ತವೆ. ಅಪ್ಪನಿಗೆ ಈ ಪ್ರಶ್ನೆಗಳು ಕಾಡಲಿಲ್ಲವೆ?, ಕಾಡಿದ್ದರೆ ಉತ್ತರ ಹುಡುಕಿಕೊಂಡ ಬಗೆ ಹೇಗೆಂದು ಈಗ ತಿಳಿಯುತ್ತಿಲ್ಲ. ಆದರೂ ಅಪ್ಪ ಹೇಳುತ್ತಿದ್ದರು " ಪ್ರಕೃತಿಯಿಂದ ದೂರವಾದಂತೆ ಮನುಷ್ಯನಿಗೆ ಕಾಡುವ ಅತಿ ದೊಡ್ಡ ರೋಗವೆಂದರೆ ಅವ್ಯಕ್ತ ಭಯ" ಅವರು ಹಾಗೆ ಹೇಳುತ್ತಿದ್ದ ಸಮಯದಲ್ಲಿ ನನಗೆ ಅದು ಇಷ್ಟೊಂದು ಗಾಢವಾದ ಮಾತು ಅಂತ ಅನ್ನಿಸುತ್ತಿರಲಿಲ್ಲ. ಅಥವಾ ಅಂದು ಅವರು ಹಾಗೆ ಹೇಳಿದ್ದು ನನ್ನನ್ನು ಉದ್ದೇಶಿಸಿ ಆಗಿರಲೂ ಇಲ್ಲ ಹಾಗಾಗಿ ಮತ್ತೆ ಪ್ರಶ್ನೆ ಹುಟ್ಟಿರಲಿಲ್ಲ. ಈಗ ಹುಟ್ಟಿದೆ ಪ್ರಶ್ನೆ ಬೃಹದಾಕಾರವಾಗಿ, ಆದರೆ ಉತ್ತರಿಸಲು ಅವರಿಲ್ಲ. ಅವರು ಹೇಳಿದ ಸಂದರ್ಭ ಮಾತ್ರಾ ಅಚ್ಚಳಿಯದೆ ಉಳಿದಿದೆ.
********
ಅತ್ತಿಂದಿತ್ತ ಕಾಗೆ ಹಾರದಷ್ಟು, ಕುಂಡೆಕುಣಕನ ಹಕ್ಕಿಯ ರಕ್ಕೆಯೂ ತೊಪ್ಪೆಯಾಗುವಷ್ಟು ಘೊರಾಂಡ್ಲ ಮಳೆ ಬಾನಿಂದ ಸುರಿಯುತ್ತಿತ್ತು. ಹಳ್ಳಿಯ ರೈತರೆಲ್ಲಾ ಹೊಟ್ಟೆಯಲ್ಲಾಗುವ ತಳಮಳ ಹೇಳಲಾರದೆ ತಮ್ಮಷ್ಟಕ್ಕೆ ಗೊಣಗುತ್ತಿದ್ದರು, ಅತಿ ಮಳೆಯನ್ನು ಶಪಿಸುತ್ತಿದ್ದರು. ಮಳೆಯಿಂದುಂಟಾದ ನೀರಿನ ಹರಿವು ರಸ್ತೆ ಗದ್ದೆ ಎಂಬ ಬೇಧವಿಲ್ಲದೆ ಮನೆಯ ಬಾಗಿಲವರಗೆ ಬಂದು ಒದ್ದಿತ್ತು. ಜಡಿಮಳೆಯ ಆರಂಭದಲ್ಲಿ ತೋಟಗದ್ದೆಯಲ್ಲಿನ ಫಸಲು ಕಳೆದುಹೋಗುವ ಬಗ್ಗೆ ಚಿಂತಿಸುತ್ತಿದ್ದ ಜನರು ಸೂರಿನವರೆಗೆ ಬಂದ ಕೆನ್ನೀರಿನ ಬಣ್ಣಕ್ಕೆ ಮನೆಯುಳಿದರೆ ಮತ್ತೆ ಫಸಲು ಬೆಳೆದೇವು ಎಂಬ ತೀರ್ಮಾನಕ್ಕೆ ಬಂದಿದ್ದರು. ಅಂತಹ ಸಮಯದಲ್ಲಿ ಗದ್ದೆಗೆ ಹೋದ ಅಪ್ಪ ಜತೆಯಲ್ಲಿ ಇಬ್ಬರನ್ನು ಮನೆಗೆ ಕರೆದುಕೊಂಡು ಬಂದರು.ಅವರನ್ನು ನೋಡಿದ ಎಲ್ಲರೂ ಗಂಡಹೆಂಡತಿ ಎಂಬ ತೀರ್ಮಾನಕ್ಕೆ ಬರಬಹುದಿತ್ತು. ಆದರೆ ವಿಚಿತ್ರವೆಂದರೆ ಅವರು ಗಂಡಹೆಂಡಿರಲ್ಲ ಎಂಬುದು ಅವರುಗಳು ಒದ್ದೆಮುದ್ದೆಯಾದ ಬಟ್ಟೆ ಬದಲಾಯಿಸುವಾಗ ನಮಗೆ ತಿಳಿಯಿತು.
ಅಪ್ಪ ಕೆಂಬಣ್ಣದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಫಸಲನ್ನು ಹತಾಶನಾಗಿ ಗದ್ದೆ ಏರಿಯಮೇಲೆ ನಿಂತು ನೋಡುತ್ತಿದ್ದಾಗ ಇವರು ಬಂದರಂತೆ. ದೂರದೂರಿನಿಂದ ಜಲಪಾತ ನೋಡಲು ಬಂದದ್ದು, ವಾಪಾಸುಹೊರಟಾಗ ಕಾರು ರಸ್ತೆಯಂಚಿನಲ್ಲಿ ಕೈಕೊಟ್ಟದ್ದು, ಇನ್ನೇನು ರಾತ್ರಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಉಳಿಯಲು ಜಾಗವನ್ನರಸುತ್ತಾ ಹಾದಿಹೋಕರ ಕೇಳಿದಾಗ ಅವರು ಅಪ್ಪನತ್ತ ಬೆಟ್ಟುಮಾಡಿ ತೊರಿಸಿದ್ದು ಎಲ್ಲಾ ವಿವರ ಹೇಳಿ ರಾತ್ರಿ ಕಳೆಯಲು ಅವಕಾಶ ಮಾಡಿಕೊಡಿ ಎಂದು ಕೇಳಿದಾಗ ಅಪ್ಪನಿಗೆ ತನ್ನ ಕಷ್ಟಗಳೆಲ್ಲಾ ಅರೆಕ್ಷಣ ಮರೆತು
" ಮುsಸ್ಸಂಜೆಯಲ್ಲಿ ಈ ಹಳ್ಳಿಕೊಂಪೆಯಲ್ಲಿ ಈ ಗಂಡಹೆಂಡತಿ ಇನ್ನೆಲ್ಲಿ ಹೋದಾರು, ಪಾಪ" ಎಂಬ ಕರುಣಾಪೂರಿತ ದನಿಯಿಂದ ಅವರನ್ನು ಮನೆಯತ್ತ ಕರೆದುಕೊಂಡು ಬಂದಿದ್ದರು.
ಒದ್ದೆ ಬಟ್ಟೆಯ ಬದಲಿಸುತ್ತಾ ಗಂಡಸನ್ನು ಆಕೆ ಏಕವಚನದಲ್ಲಿ ಕರೆದಾಗ ತಟ್ಟೆಯಲ್ಲಿ ಬಿಸಿಬಿಸಿ ಕಷಾಯ ತಂದ ಅಮ್ಮ ಮಿಕಿಮಿಕಿ ಅವರನ್ನೇ ನೋಡಿದ್ದಳು. ಅಮ್ಮನ ಆ ನೋಟವನ್ನು ಅರ್ಥೈಸಿಕೊಂಡ ಆಕೆ " ಅಮ್ಮ ನಾವು ಗಂಡ ಹೆಂಡಿರಲ್ಲ, ಹಾಗಂತ ಪಡ್ಡೆಗಳೂ ಅಲ್ಲ, ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ. ಇಬ್ಬರ ಮನಸ್ಥಿತಿಯೂ ಒಂದೆ ಇದೆ, ಮದುವೆಗಿಂತ ಮೊದಲು ಅರ್ಥಮಾಡಿಕೊಂಡರೆ ನಂತರದ ಜೀವನ ಸುಗಮವಾಗುತ್ತದೆಯಲ್ಲವೇ? ಹಾಗಾಗಿ ಸದ್ಯ ಒಟ್ಟಿಗೆ ಇದ್ದೇವೆ" ಎಂದು ಹೇಳಿದಾಗ ಅಮ್ಮ ಕಕ್ಕಾಬಿಕ್ಕಿ. ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೂ ಅಪ್ಪನ ಮುಖವನ್ನು ದಿಟ್ಟಿಸಿನೋಡದ ಅವಳಿಗೆ ಇವೆಲ್ಲಾ ಅರ್ಥವಾಗದ ವಿಷಯ. ನನಗೂ ಅನುಭವಕ್ಕೆ ಬಂದಿರದಿದ್ದರೂ ಅಲ್ಲಲ್ಲಿ ಓದಿ ಈ ತರಹದ ಜೀವನ ತಿಳಿದಿದ್ದೆನಾದ್ದರಿಂದ ಅದೊಂದು ಮಾಡ್ರನ್ ಅಂತ ಅನ್ನಿಸಿತಷ್ಟೆ. ಕಷಾಯ ಕುಡಿದ ಜೋಡಿ ನಡುಗುತ್ತಿದ್ದುದನ್ನು ಕಂಡ ಅಪ್ಪ ಅವರನ್ನು ಹಿತ್ತಲಬಾಗಿಲಿನಿಂದ ಹೊಡಚಲಬಳಿ ಕರೆದೊಯ್ದರು.
ಮದ್ಯೆ ನಿಗಿನಿಗಿ ಕೆಂಡದ ಹೊಡಚಲಿನ ಬೆಂಕಿ, ಬೆಂಕಿಯಿಂದ ಮೂರಡಿ ಎತ್ತರದಲ್ಲಿ ಒಣಗಲು ಹಾಕಿದ್ದ ಅಪ್ಪನ ಕಂಬಳಿಯ ತುದಿಯ ರೊಣೆಯಿಂದ ಅಜ್ಜಿಸಿಂಬಳದಂತೆ ತೊಟ್ಟಿಕ್ಕುವ ನೀರ ಹನಿ, ಹೊಡಚಲ ಸುತ್ತ ಅಪ್ಪ, ಹೊಸ ಜೋಡಿ ಹಾಗು ನಾನು. ಒಂದಿಷ್ಟು ಹೊತ್ತು ನಮ್ಮ ನಡುವೆ ಮಾತುಗಳ ವಿನಿಮಯ ಇರಲಿಲ್ಲ. ಕಂಬಳಿಯಿಂದ ಬೆಂಕಿಯಮೇಲೆ ಬಿದ್ದು ಚೊಂಯ್ ಎಂಬ ಸದ್ದಿನೊಂದಿಗೆ ಆಯುಷ್ಯಮುಗಿಸಿಕೊಳ್ಳುವ ಹನಿಯ ಶಬ್ಧಕ್ಕೆ ಹೊರಗಡೆಯ ಜಡಿಮಳೆ ಲಯ ಸೇರಿಸುತ್ತಲಿತ್ತು. ಆಗ ಬೆಂಗಳೂರಿಗ ಮಾತನಾಡಲು ಶುರುಮಾಡಿದ.
"ನೀವು ತುಂಬಾ ಅದೃಷ್ಟವಂತರು, ಸ್ವಚ್ಚ ಗಾಳಿ, ಸುಂದರ ಪರಿಸರ, ಹಸಿರಿನ ನಡುವೆ ಹಕ್ಕಿಗಳಾಗಿ ತೇಲಾಡುತ್ತಿದ್ದಿರಿ. ಇಂತಹ ಬೆಂಕಿಯ ಸುಖ ನನ್ನ ಜೀವನದಲ್ಲಿ ನಾನು ಅನುಭವಿಸುತ್ತಿರುವುದು ಇದೇ ಮೊದಲಬಾರಿ"
ಅದೇಕೋ ಅಪ್ಪ ಪ್ರತಿಕ್ರಿಯಿಸಲಿಲ್ಲ, ಆದರೆ ನನಗೆ ಮನದೊಳಗೆ ಅವರು ಹೇಳುತ್ತಿದ್ದ ಮಾತುಗಳು ನಮ್ಮನ್ನು ಓಲೈಸಲೋ ಅಂತ ಅನ್ನಿಸತೊಡಗಿತ್ತು. ವಾರಕ್ಕೆ ಆರುದಿನ ಇರದ ಕರೆಂಟು, ಇಲ್ಲದ ಟಿ ವಿ, ಕೆಸರಿನಲ್ಲಿ ಮುಳುಗಿದ ರಸ್ತೆ ಹಣವೇ ಇಲ್ಲದ ಅಪ್ಪ, ಹೀಗೆ ಇಂಥಹ ಜೀವನವನ್ನು ಇವರು ಅದೃಷ್ಟ ಅಂತ ಹೇಳಬೇಕಾದರೆ ಅದು ಸುಳ್ಳು, ಮನೆಬಾಗಿಲಿಳಿದರೆ ಟಾರ್, ಓಡಾಡಲು ಸ್ವಂತ ಕಾರ್ ಕೈಕಾಲಿಗೆಲ್ಲ ಆಳುಗಳು ಇದ್ದಾಗ ಮಾತ್ರಾ ಅದೃಷ್ಟ ಎನ್ನಬಹುದು ಈಗಿನ ನಮ್ಮ ಜೀವನ ಅದೆಂತಹಾ ಅದೃಷ್ಟ ಎಂಬ ಆಲೋಚನೆಯ ಬೆನ್ನು ಹತ್ತಿದ್ದ ನನಗೆ ಅವರ ಆಲೋಚನೆಗಳು ಪೇಲವ ಅಂತ ಅನ್ನಿಸಿತ್ತು. ಆತ ಮುಂದುವರೆಸಿದ್ದ
"ನೋಡಿ ನಮ್ಮ ಬದುಕು ಕಾಂಕ್ರೀಟ್ ಕಾಡಿನಲ್ಲಿ ನಲುಗುತ್ತಿವೆ, ನಿತ್ಯ ಬೆಳಿಗ್ಗೆ ಓಡು, ದುಡಿ, ಟ್ಯಾಕ್ಸ್ ಕಟ್ಟು, ಟಾರ್ಗೆಟ್ ರೀಚ್ ಆಗು ಎಂಬಂಥಹ ವಾಕ್ಯಗಳ ಸುತ್ತಲೇ ಸುತ್ತುತ್ತಿರುತ್ತದೆ, ನಮ್ಮ ಉಸಿರಾಟದ ಸದ್ದನ್ನೇ ನಾವು ಕೇಳಲಾರೆವು, ಅಂಥಹ ಹಂತ ತಲುಪಿದ್ದೇವೆ, ಭವಿಷ್ಯದ ಬಗೆಗಿನ ಅವ್ಯಕ್ತ ಭಯ ಕಾಡುತ್ತದೆ, ನಮಗೂ ಸಾಕಾಗಿದೆ ಪೇಟೆಯ ಜನಜಂಗುಳಿ ಮನುಷ್ಯರ ಸಹವಾಸ, ಇಲ್ಲೇ ಎಲ್ಲಿಯಾದರೂ ಹೀಗೆ ಜಮೀನು ಇದ್ದರೆ ಹೇಳಿ, ಕೊಂಡು ಹಾಯಾಗಿರುತ್ತೇವೆ"
ಅವರ ಮಾತುಗಳನ್ನು ಆಲಿಸಿದ ಅಪ್ಪ ಒಮ್ಮೆ ಮುಗುಳ್ನಕ್ಕರು, ಆ ನಗುವಿನಲ್ಲಿ ವ್ಯಂಗ್ಯವನ್ನು ನಾನು ಗುರುತಿಸಿದೆ, ನಂತರ " ಮನುಷ್ಯ ಕೇವಲ ನೋಡುತ್ತಾನೆ ಅದಕ್ಕಾಗಿ ಸಮಸ್ಯೆ ಹೀಗೆಲ್ಲಾ, ಪ್ರಕೃತಿಯಿಂದ ದೂರವಾದಂತೆ ಮನುಷ್ಯನಿಗೆ ಕಾಡುವ ಅತಿ ದೊಡ್ಡ ರೋಗವೆಂದರೆ ಅವ್ಯಕ್ತ ಭಯ" ಎಂದಷ್ಟೇ ಹೇಳಿ ಸುಮ್ಮನಾಗಿದ್ದರು.
*********
ಆರು ತಿಂಗಳುಗಳ ಕಾಲ ಜಿಟಿಜಿಟಿ ಮಳೆ, ಮೈ ಕೈಯೆಲ್ಲಾ ಕೆಸರಾಗಿಸಿಕೊಂಡು ದುಡಿದರೂ ವರ್ಷಪೂರ್ತಿ ಸಿಗದ ಅನ್ನ, ಮೈ ಪೂರ್ತಿ ಮುಚ್ಚದ ಬಟ್ಟೆ, ಎಂಬತಹ ದಿವಸಗಳು ಅಪ್ಪನ ಕಾಲದಲ್ಲಿಯೇ ಸಾಕು ಎಂದು ತೀರ್ಮಾನಿಸಿ ನಾನು ಊರು ಬಿಟ್ಟು ಬೆಂಗಳೂರು ಸೇರಿದೆ. ಸರಿಯಾದ ಚಪ್ಪಲಿಯೂ ಇಲ್ಲದ ಕಾಲಿನಲ್ಲಿ ಹಗಲು ದುಡಿಯುತ್ತಾ ಸಂಜೆ ಓದಿದೆ, ಆವಾಗ ಇದ್ದದ್ದು ಇದೇ ತರಹದ ಕಾಂಕ್ರೀಟ್ ಕಟ್ಟಡಗಳೇ, ಆದರೆ ಅವು ಕಾಡುತ್ತಿರಲಿಲ್ಲ, ನಾನು ಇಂಥಹ ಕಟ್ಟಡಗಳನ್ನು ಹರಿದ ಹವಾಯಿ ಚಪ್ಪಲಿಯಲ್ಲಿ ಸುಡುವ ಟಾರ್ ರಸ್ತೆಯಮೇಲೆ ನಿಂತು ನೋಡಿದ್ದರಿಂದ ಕಾಡುತ್ತಿರಲಿಲ್ಲವೇನೋ, ಆದರೆ ಹಠದ ಬೆನ್ನೇರಿದ ನಾನು ಏರುತ್ತಲೇ ಸಾಗಿದೆ, ಇಪ್ಪತ್ತೊಂದನೆಯ ಮಹಡಿಗೆ ದೇಹವನ್ನಷ್ಟೇ ಏರಿಸಲಿಲ್ಲ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಏರಿದೆ. ನನ್ನ ಪ್ರತಿಷ್ಠೆಯನ್ನ ಪ್ರಪಂಚಕ್ಕೆ ಸಾರಿದೆ. ಗುರಿ ಇದ್ದಾಗ ಕಾಡುತ್ತಿರಲಿಲ್ಲ, ಗುರಿತಲುಪಿ ಇಷ್ಟಾದಮೇಲೆ ಈಗ ಕಾಡುತ್ತಿದೆ ಉತ್ತರವಿಲ್ಲದ ಪ್ರಶ್ನೆ. ಅಂದು ಅವರುಹೇಳಿದ್ದ ಕಾಂಕ್ರೀಟ್ ಕಾಡಿನ ಭಾವಾರ್ಥ ನನಗೆ ಆಗಿರಲಿಲ್ಲ. ಆದರೆ ಇಂದು ನನ್ನನ್ನು ಕಾಡುತ್ತಿದೆ. ಅವೆಲ್ಲಾ ಶುರುವಾಗಿದ್ದು ಇತ್ತೀಚೆಗೆ.
"ಸರ್ ಯುವರ್ ಲಂಚ್ ಬಾಕ್ಸ್ ಈಸ್ ರೆಡಿ" ಅಟೆಂಡರ್ ವಿನೀತನಾಗಿ ಮೇಜಿನ ಮೇಲೆ ಮನೆಯಿಂದ ತಂದ ಊಟದ ಡಬ್ಬಿಯನ್ನಿಟ್ಟು ಹೊರಟುಹೋದನಂತರ ಕೆಲಸದ ಧಾವಂತಕ್ಕೊಂದು ಪುಟ್ಟ ವಿರಾಮ. ಮಧ್ಯಾಹ್ನ ಊಟದ ನಂತರ ಮಲೆನಾಡಿನ ಮನೆಗಳಲ್ಲಿ ಒಂದರ್ದ ಘಂಟೆ ವಿಶ್ರಾಂತಿಯ ವಾಡಿಕೆ. ಅದನ್ನು ನಾನೂ ಇಪ್ಪತ್ತು ವರ್ಷದ ಸುದೀರ್ಘ ದುಡಿಮೆಯನಂತರ ಮತ್ತೆ ನನ್ನದೇ ರೆಸ್ಟ್ ರೂಂನಲ್ಲಿ ಚಾಲ್ತಿಗೆ ತಂದೆ. ಅರ್ದಗಂಟೆಯ ಸಣ್ಣ ನಿದ್ರೆಯನಂತರ ಕಣ್ಣುಬಿಟ್ಟಾಗ, ಜಳಜಳ ಎನ್ನುವ ಬಿಸಿಲಿಗೆ ಸರಕ್ಕನೆ ಭಯದ ಭಾವನೆಗಳು ಅಡರತೊಡಗಿದವು. ನಿದ್ರೆಯ ಮುಗಿಸಿ ಕಣ್ಣುಬಿಡುತ್ತಿದ್ದಂತೆ ರಾಚಿದ ಕಿಟಿಕಿಯಾಚಿಗಿನ ಕಾಂಕ್ರಿಟ್ ಕಟ್ಟಡಗಳು, ಸರಪರ ಸರಿದಾಡುವ ಇರುವೆ ಸಾಲಿನ ವಾಹನಗಳು, ಕರುಳಿನ ಮೂಲೆಯಲ್ಲಿ ಭಯವನ್ನು ಬಿತ್ತತೊಡಗಿದವು.
ಇಂತಹ ದೊಡ್ಡ ಹುದ್ದೆಯಲ್ಲಿರುವಾತ, ವಿದೇಶಿ ಕಂಪನಿಗಳ ನೇತಾರರೊಡನೆ ನೇರ ಸಂಪರ್ಕದಲ್ಲಿರುವಾತ ಅರ್ಥವಿಲ್ಲದ ಸಣ್ಣ ಕಾರಣಕ್ಕೆ ನಿರ್ವಿಣ್ಣನಾಗುತ್ತಾನ? ನನ್ನ ಸಮಸ್ಯೆ ಆಲಿಸಿದವರು ಹಾಗಂತ ಅಂದುಕೊಂಡರೆ ನನ್ನ ಪ್ರತಿಷ್ಠೆಗೆ ಧಕ್ಕೆಯಲ್ಲವೆ ಎಂಬ ಕಾರಣ ನನ್ನ ಭಯವನ್ನು ಹೆಂಡತಿಗೂ ಸೇರಿದಂತೆ ಯಾರಲ್ಲಿಯೂ ಹೇಳಿಕೊಳ್ಳಲಿಲ್ಲ. ಸಮಸ್ಯೆ ಇಷ್ಟೇ, ಎಲ್ಲರೂ ನನ್ನಂತೆ ಹಠಕ್ಕೆ ಬಿದ್ದು ಉನ್ನತ ಹುದ್ದೆಗಳತ್ತ ದೃಷ್ಟಿನೆಟ್ಟರೆ?, ಕೆಸರು ತುಳಿದು ಭತ್ತ ಬೆಳೆಯದಿದ್ದರೆ?. ಕಷ್ಟಪಟ್ಟು ಬಟ್ಟೆ ನೆಯ್ಯದಿದ್ದರೆ?, ನಾವು ಊಟ ಮಾಡುವುದು, ಉಡುವುದು ಏನನ್ನು?. ಎಂಬ ಪ್ರಶ್ನೆ ಆಳದಿಂದ ಪ್ರತೀ ಮಧ್ಯಾಹ್ನದ ಊಟದ ನಂತರದ ಕೋಳಿನಿದ್ರೆಯ ಮರುಕ್ಷಣ ಧುತ್ತನೆ ಏಳುತ್ತದೆ. ಹೊಟ್ಟೆಯಲ್ಲಿ ಅದೇನೋ ತಳಮಳ, ಸಹಿಸಲಾರದ ವೇದನೆ. ಹೇಳಲಾರದ ನೋವು ಅನುಭವಕ್ಕೆ ಮಾತ್ರಾ ಸೀಮಿತ. ಇದೊಂದು ಯೋಚನೆಯೆದುರು ನನ್ನ ಅಂತಸ್ತುಗಳೆಲ್ಲ ಕರಗಿ ನೀರಾಗಿಹೋಗುತ್ತದೆ, ಭಯದ ನಂತರದ ಸಮಯ ನಿರ್ವಿಣ್ಣತೆ ಆವರಿಸಿಕೊಂಡುಬಿಡುತ್ತದೆ. ಅದಕ್ಕೊಂದು ಪರಿಹಾರ ಹುಡುಕುವುದು ಅನಿವಾರ್ಯ. ಇದು ಮಧ್ಯಾಹ್ನದ ನಿದ್ರೆಯಿಂದಾದ ಯೋಚನೆಗಳು ಎಂದರು ಯಾರೋ, ನಿದ್ರೆ ಮಾಡುವುದನ್ನು ಬಿಟ್ಟೆ, ಆದರೆ ಕರುಳಿನ ಮೂಲೆಯಲ್ಲಿ ಛಳಕ್ ಎಂದು ಮೂಡುತ್ತಿದ್ದ ಭಯ ನನ್ನನ್ನು ಬಿಡಲಿಲ್ಲ. ಮಾನಸಿಕ ಜನ್ಯ ಖಾಯಿಲೆ ಎಂದಿತು ಗೂಗಲ್, ಮಾನಸಿಕ ವೈದ್ಯರನ್ನು ಕದ್ದುಮುಚ್ಚಿ ಭೇಟಿಯಾದೆ, ಮಾತ್ರೆಗಳು ಖಾಲಿಯಾಯಿತು ಭಯ ಹಾಗೆಯೇ ಉಳಿಯಿತು. ಸಂಗೀತ, ನಾಟ್ಯ, ನಾಟಕಗಳು ಸಾಹಿತ್ಯ, ಸಾಹಿತಿಗಳು, ಬಿಸಿನೆಸ್ ದಿಗ್ಗಜರು ಎಲ್ಲರಗಿಂತ ಕೆಸರುಮೆಟ್ಟಿ ಅನ್ನ ನೀಡುವ, ಅರೆಬಟ್ಟೆ ಯಲ್ಲಿ ನೂಲುವ ಜನರೇ ಮಹಾತ್ಮರು ಅಂತ ಅನಿಸತೊಡಗಿತು.ದಿನದಿಂದ ದಿನಕ್ಕೆ ಪಟ್ಟಣದ ಜನ,ಸ್ನೇಹಿತರು, ಸರಿಕರು ಎಲ್ಲರೂ ಕಟ್ಟಡಗಳಂತೆ ಜಡವಾಗಿ ಕಾಣಿಸತೊಡಗಿದರು. ಯೋಚನೆಗೆ ಆಲೋಚನೆಯ ಸರಣಿಗಳು ಸಾಲಾಗಿ ಬೆನ್ನತ್ತಿ ಕಾಡತೊಡಗಿದವು. ಇದೇರೀತಿ ಎಲ್ಲ ಕಡೆ ಕಟ್ಟಡಗಳು ಏಳುತ್ತಾ ಹೋದರೆ ಅಕ್ಕಿ ಬೆಳೆಯಲು ಜಾಗವೆಲ್ಲಿ?. ಎಲ್ಲರೂ ಐಷರಾಮಿ ಬದುಕ ಆರಿಸಿಕೊಂಡರೆ ಕೆಸರ ತುಳಿಯುವರ್ಯಾರು? ಎಂಬಂತಹ ಯೋಚನೆ ತೀರಾ ಬಾಲಿಶದ್ದು ಅಂತ ಅನ್ನಿಸಿದರೂ ತಡೆಯದಾದೆ, ನಿತ್ಯ ಕಾಡುವ ಸಮಸ್ಯೆ ಯ ತೀವ್ರತೆ ತಾಳಲಾರದೆ ಹೊರಟೆ ಒಂದು ಮುಂಜಾನೆ.
***********
ಬೆಂಗಳೂರಿನ ಗಿಜಿಗಿಜಿ ಗೆ ವಿದಾಯ ಹೇಳಿದ ಕಾರು ಹೊನ್ನಾವರದತ್ತ ಶರವೇಗದಿಂದ ಓಡುತ್ತಿತ್ತು. ಎತ್ತರೆತ್ತರ ಕಟ್ಟಡಗಳು, ಕೆಟ್ಟ ಕೆಟ್ಟ ಮುಖಗಳು ಹಿಂದೋಡುತ್ತಿದ್ದವು. ಪಟ್ಟಣ ಹಿಂದೋಡಿದಂತೆ ಖಾಲಿಯಾಗಿರುವ ಡಾಂಬರ್ ರಸ್ತೆಗಳು ನನ್ನ ಕಾರಿನ ಬರುವಿಕೆಗಾಗಿಯೇ ಕಾಯುತ್ತಿದ್ದಂತೆ ಸ್ವಾಗತಿಸತೊಡಗಿದವು. "ನಮ್ಮ ಕಂಪನಿಯ ಪ್ರಾಜೆಕ್ಟ್ ಗೋವಾದಲ್ಲಿ ಶುರುವಾಗುತ್ತಿದೆ, ಹಾಗಾಗಿ ನಾನು ಹೋಗಬೇಕು" ಎಂದು ಹೆಂಡತಿಬಳಿ ಸುಳ್ಳು ಹೇಳಿ ಅದಕ್ಕೊಂದು ವಗ್ಗರಣೆಯಾಗಿ ನಂತರ ಹಾಗೆಯೇ ಊರಕಡೆ ಹೋಗದೆ ವರ್ಷಗಳೇ ಸಂದವು ಒಮ್ಮೆ ಹೋಗಿಬರುತ್ತೇನೆ ಎಂಬ ಮಾತನ್ನೂ ಸೇರಿಸಿದ್ದೆ, ಆದರೆ ನಾನು ಹೊರಟಿದ್ದು ಊರಿಗೂ ಅಲ್ಲ ಗೋವಾಕ್ಕೂ ಅಲ್ಲ , "ನಿಮ್ಮ ಈ ಅವ್ಯಕ್ತಭಯದ ಸಮಸ್ಯೆಗೆ ಯಾವುದೇ ವೈದ್ಯರಿಂದ ಶಮನ ಇಲ್ಲ, ಅದೇನಾದರೂ ನೀವು ಮನಸ್ಸು ಸರಿಪಡಿಸಿಕೊಳ್ಳಬೇಕೆಂದರೆ ಗೇರುಸೊಪ್ಪೆಯ ಆನಂದರಾಮಾಶಾಸ್ತ್ರಿಗಳು ಮಾತ್ರಾ ಸಮರ್ಪಕ ಪರಿಹಾರ ಒದಗಿಸಬಲ್ಲರು" ಎಂದು ಶಶಾಂಕ ಹೇಳುತ್ತಿದ್ದಂತೆ " ಅಯ್ಯೋ ದಯಮಾಡಿ ನನಗೆ ಆ ಪೂಜೆ ಪುನಸ್ಕಾರ ಅಂದ್ರೆ ದೂರ ಮಾರಾಯ" ಅಂದಿದ್ದೆ. ಅದಕ್ಕೆ ಆತ " ಅಯ್ಯೋ ಸಾರ್ ಶಾಸ್ತ್ರಿ ಅನ್ನೋದು ಅವರ ಹೆಸರು ಅನ್ನುವುದನ್ನು ಬಿಟ್ಟರೆ ಲವಲೇಶದ ಶಾಸ್ತ್ರವೂ ಅವರಲ್ಲಿಲ್ಲ, ಇದನ್ನು ನೋಡಿ ನಿಮಗೆ ಅಲ್ಪ ಪರಿಚಯ ಆಗಬಹುದು" ಎಂದು ಇಪ್ಪತ್ತು ಪುಟಗಳ ಮಾಸಲು ಪುಸ್ತಕವೊಂದನ್ನು ನನ್ನ ಕೈಗಿಟ್ಟು ಇದು ದಾರಿ ತೋರಿಸಬಹುದು ಎಂದಿದ್ದ. ಅದನ್ನು ಪುಸ್ತಕ ಎನ್ನುವುದಕ್ಕಿಂತಲೂ ಅಲ್ಲಲ್ಲಿ ಪುಟಗಳು ಕಿತ್ತುಹೋಗಿದ್ದ ಕಿರುಹೊತ್ತಿಗೆ ಅನ್ನಬಹುದಿತ್ತು. "ಬದುಕಿನ ರೀತಿ" ಎಂಬ ತಲೆಬರಹ ಹೊತ್ತ ಅದರಲ್ಲಿ ಹತ್ತೆಂಟು ಘಟನೆಗಳಮೂಲಕ ಬದುಕಿನ ಬಾಲ್ಯ,ಯೌವನ ಹಾಗೂ ಮುಪ್ಪಿನ ಬಗ್ಗೆ ವಿವರಿಸಲಾಗಿತ್ತು. ಅದರ ಲೇಖಕ ಆನಂದರಾಮ ಶಾಸ್ತ್ರಿ ಎಂಬ ಹೆಸರನ್ನು ಬಿಟ್ಟರೆ ಮತ್ಯಾವ ವಿವರಣೆ ಅದರಲ್ಲಿ ಇರಲಿಲ್ಲ. ಪುಟಗಳು ಇಪ್ಪತ್ತೇ ಆದರೂ ಅಕ್ಷರಗಳಲ್ಲಿ ಜೀವವಿತ್ತು ಜತೆಗೆ ಅದರಲ್ಲೊಂದು ಚೈತನ್ಯವಿತ್ತು, ಮತ್ತೆ ಮತ್ತೆ ಓದೋಣ ಅನ್ನಿಸುತ್ತಿತ್ತು, ಅದೇನೋ ಅನಿರ್ವಚನೀಯ ಆನಂದ ಪುಸ್ತಕದ ಓದುಗರಿಗೆ ಸಿಗುತ್ತಿತ್ತು. ಪುಸ್ತಕ ಓದಿ ಕುತೂಹಲಗೊಂಡು ಶಶಾಂಕನ ಮಾತಿಗೆ ಬೆಲೆಕೊಟ್ಟು ಬೆಳಗ್ಗೆ ಬೆಂಗಳೂರು ಬಿಟ್ಟಿದ್ದೆ. ಸಾಗರ ದಾಟಿದ ನಂತರ ಮಾವಿನಗುಂಡಿಯೆಂಬ ಊರು ಸಿಗುತ್ತದೆ ಆನಂತರ ಶರಾವತಿ ನದಿಯ ವ್ಯೂವ್ ಪಾಯಿಂಟ್ ನ ಕೊಂಚ ಮುಂದೆ ರಸ್ತೆಯ ಬಲಬದಿಯಲ್ಲಿ ಒಂದು ಕಮಾನು ಕಾಣಿಸುತ್ತದೆ. ಅಲ್ಲಿ ಕಾರು ನಿಲ್ಲಿಸಿ ಒಂದಿನ್ನೂರು ಹೆಜ್ಜೆ ನಡೆದರೆ ಮಲೆನಾಡಿನ ಶೈಲಿಯಲ್ಲಿ ಕಟ್ಟಲಾದ ಮನೆ ಇದೆ. ಅಲ್ಲಿ ಆನಂದರಾಮಾ ಶಾಸ್ತ್ರಿಗಳು ನಿಮಗೆ ಸಿಗುತ್ತಾರೆ, ಇಲ್ಲಿಂದ ಸರಿಯಾಗಿ ನಾಲ್ಕುನೂರು ಕಿಲೋಮೀಟರ್ ಅಂದರೆ ನಿಮ್ಮ ಕಾರಿನಲ್ಲಿ ಎಂಟು ತಾಸು ಪಯಣ, ರಸ್ತೆ ಹಾಳಾಗಿದ್ದರೆ ಹತ್ತು ತಾಸಾದರೂ ಆದೀತೆ, ಎಂದಿದ್ದ ಶಶಾಂಕ. ಅವನು ನನ್ನ ಕೆಳಗೆ ಕೆಲಸಮಾಡುವ ಹುಡುಗನಾದರೂ ನನಗೂ ಅವನಿಗೂ ಅದೇನೋ ಒಂಥರಾ ವೈಯಕ್ತಿಕ ಅನುಬಂಧ. ಶ್ರೀಮಂತ ಮನೆತನದಲ್ಲಿ ಹುಟ್ಟಿ, ಶ್ರೀಮಂತಿಕೆಯನ್ನು ಅನುಭವಿಸದೆ, ಹಣದ ಹೊಳೆ ಎಂದರೆ ಮಾನವೀಯತೆಯನ್ನು ಮರೆಸುತ್ತದೆ ಎಂಬ ತತ್ವಕ್ಕೆ ಇಳಿದು ಮನೆ ಅಂತಸ್ತು ಎಲ್ಲವನ್ನೂ ತೊರೆದು ಚೆನ್ನಾಗಿ ಬದುಕಲು ಕೊಂಚ ಹಣವೇ ಸಾಕು ಎಂದು ನೌಕರಿಗೆ ಇಳಿದಿದ್ದ ವ್ಯಕ್ತಿ. ನಾನು ಅವನಿಗೆ ಬುದ್ಧ ಅಂತ ಅಡ್ಡ ಹೆಸರಿನಿಂದ ಕರೆಯುತ್ತಿದ್ದೆ. ಅವನು ಜೀವನ ಆಯ್ಕೆಮಾಡಿಕೊಂಡ ಬಗೆ ಬದುಕುವ ರೀತಿ ಹಾಗೂ ಅವನ ಆದರ್ಶಗಳೆಲ್ಲಾ ಭಾವನಾತ್ಮಕವಾಗಿ ಬದುಕುವವರ ಹುಚ್ಚು ಅಂತ ಆರಂಭದಲ್ಲಿ ಅನಿಸುತ್ತಿತ್ತು. ಆದರೆ ನನಗೆ ಅವ್ಯಕ್ತಭಯಗಳು ಕಾಡಲಾರಂಬಿಸಿದ ನಂತರ ಸಹಾಯಕ್ಕೆ ಸಿಕ್ಕ ವ್ಯಕ್ತಿಯೇ ಆತನಾಗಿದ್ದ.
ಬಿಸಿಲಿನ ಜಳ ರಸ್ತೆಗೆ ಬಡಿದು ನನ್ನ ಕಣ್ಣಿಗೆ ತಲುಪುತ್ತಿದ್ದ ಓಘಕಡಿಮೆಯಾಗುತ್ತಿದ್ದಂತೆ ಬಯಲುಸೀಮೆಯ ಪರಿಧಿ ದಾಟಿ ಮಲೆನಾಡು ಪ್ರವೇಶಿಸುತ್ತಿದ್ದ ಅನುಭವ ಆಯಿತು. ಕಾರಿನ ಏಸಿ ಆಫ್ ಮಾಡಿ ಕಿಟಕಿಗಾಜುಗಳನ್ನು ಇಳಿಸಿ ಕಾರಿನ ವೇಗ ತಗ್ಗಿಸಿದೆ. ಮರಗಳು ಈಗ ಸ್ವಲ್ಪ ನಿಧಾನಗತಿಯಲ್ಲಿ ಹಿಂದೋಡತೊಡಗಿದವು. ಮಲೆನಾಡಿನ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ ಅಪ್ಪ, ಅಮ್ಮ, ಬೆಳೆದ ಊರು, ನೆನಪಿಗೆ ಬಂದು ಅದೇನೋ ಹಿತವಾದ ಆನಂದವನ್ನು ನೀಡತೊಡಗಿದವು. ಆದರೆ ಈ ಆನಂದ ಕ್ಷಣಿಕ ನಾಳೆಯಿಂದ ಮತ್ತದೇ ಗಿಜಿಗಿಜಿ, ಹಸಿಬೆವರಿನ ವಾಸನೆಯ ಜನ, ಬಿಸಿದಗೆಯ ಗಾಳಿ ಎಂಬುದು ನೆನಪಾಗಿ ಅನುಭವಿಸುತ್ತಿದ್ದ ಸುಖಕ್ಕೊಂದು ಮುಸುಕು ಮುಚ್ಚಿತು. ತಕ್ಷಣ ಆನಂದರಾಮಾ ಶಾಸ್ತ್ರಿಗಳ ಪುಸ್ತಕದಲ್ಲಿಹ ಸಾಲೊಂದು ನೆನಪಾಯಿತು. "ಜೀವನದಲ್ಲಿ ಕಷ್ಟವನ್ನು ಅನುಭವಿಸಬಹುದು ಆದರೆ ಸುಖವನ್ನು ಅನುಭವಿಸುವುದು ಕಷ್ಟ, ಕಾರಣ ಕಷ್ಟಕಾಲದ ವರ್ತಮಾನದಲ್ಲಿ ಕಷ್ಟದಾಚೆಗಿನ ಸುಖದ ಕಲ್ಪನೆಯಲ್ಲಿ ಇರುತ್ತೇವೆ, ಸುಖದಕಾಲದಲ್ಲಿ ಅದರಾಚೆಗೆ ಬರಬಹುದಾದ ಕಷ್ಟಗಳನ್ನು ನೆನೆದುಕೊಂಡು ಕೊರಗುತ್ತೇವೆ. ನಿತ್ಯದ ಬದುಕು ಸುಖದಂತೆ ಜನರಿಗೆ ಅನ್ನಿಸಿದರೂ ನಮ್ಮ ಆಂತರ್ಯ ಸುಖದಾಚೆಗಿನ ಕಷ್ಟವನ್ನು ಕಲ್ಪಿಸಿಕೊಂಡು ವರ್ತಮಾನವನ್ನು ನರಕವನ್ನಾಗಿಸುತ್ತದೆ". ಎಂತಹ ಸತ್ಯದ ಮಾತದು, ತಂಪಿನ ಸುಖ ಅನುಭವಿಸುವುದ ಬಿಟ್ಟು ನಾನು ಬಿಸಿಲಿನ ಕಲ್ಪನೆಗೆ ಹೋಗಿದ್ದೆ. ಎಲ್ಲೆಂದೆಲ್ಲೋ ಯೋಚಿಸುತ್ತಾ ಹೋಗುತ್ತಿದ್ದ ನನಗೆ ದಾರಿಸವೆದದ್ದೇ ತಿಳಿಯದಂತೆ ಒಂಬತ್ತು ತಾಸು ಕಳೆದಿತ್ತು.
ಶಶಾಂಕ ಹೇಳಿದ ಮಾವಿನಗುಂಡಿ ಊರಿನ ಫಲಕ ಗೋಚರಿಸಿತು, ಆನಂದರಾಮಾ ಶಾಸ್ತ್ರಿಗಳ ಕಾಣುವ ತವಕ ತುಸು ಹೆಚ್ಚಿದಂತಾಗಿ ಕಾರಿನ ವೇಗ ಹೆಚ್ಚಿಸಿದೆ, ನೋಡನೋಡುತ್ತಿದ್ದಂತೆ ಶರಾವತಿಯ ಕಣಿವೆಯ ವಿಹಂಗಮ ನೋಟದ ಜಾಗ ಬಂದೇಬಿಟ್ಟಿತು. ಒಮ್ಮೆ ಅಲ್ಲಿ ಸ್ವಲ್ಪ ಹೊತ್ತು ದೃಷ್ಟಿ ಹಾಯಿಸುವ ಮನಸ್ಸಾದರೂ ಅದಕ್ಕಿಂತ ಹೆಚ್ಚಿನ ಆಸಕ್ತಿ ಶಾಸ್ತ್ರಿಗಳ ಭೇಟಿಯಾದ್ದರಿಂದ ಜತೆಗೆ ಸೂರ್ಯ ಮುಳುಗುವ ಹವಣಿಕೆಯಲ್ಲಿ ತೊಡಗಿದ್ದರಿಂದ ಕಾರನ್ನು ಮೊಂದೋಡಿಸಿದೆ. ರಸ್ತೆಯ ಬಲಬಾಗದಲ್ಲಿ ಬೃಹತ್ ಕಮಾನು ಗೋಚರಿಸಿತು. ಕಾರನ್ನು ಪಕ್ಕದಲ್ಲಿ ನಿಲ್ಲಿಸಿ ಕಮಾನಿನಡಿಯಲ್ಲಿ ಹೆಜ್ಜೆಹಾಕತೊಡಗಿದೆ. ಅದು ರಸ್ತೆಯೆನ್ನುವುದಕ್ಕಿಂತ ಕಲ್ಲಿನ ರಾಶಿ ಎನ್ನಬಹುದಿತ್ತು. ಅದರ ನಡುವೆ ದಾರಿಯನ್ನು ಹುಡುಕಿಕೊಳ್ಳುವುದು ಒಂದು ಜಾಣತನದ ಕೆಲಸವಾಗಿತ್ತು. ಆಗಲೆ ಕತ್ತಲಾವರಿಸಲು ಶುರುವಾದ್ದರಿಂದ ಬೇಗನೆ ಹೆಜ್ಜೆಹಾಕಿದೆ. ತುಸು ಮುಂದೆ ಸಾಗುತ್ತಿದ್ದಂತೆ ಮಂಗಳೂರು ಹಂಚಿನ ಮನೆ ಕಾಣಿಸಿತು, ಮನೆಯ ಬೇಲಿಯ ಪಕ್ಕದಲ್ಲಿ ಒಬ್ಬಾತ ಕುಡಗೋಲು ಹಿಡಿದುಕೊಂಡು ಅದೇನೋ ನೆಲದಲ್ಲಿ ಕೆದರುತ್ತಿದ್ದ, ಆತನ ಬಳಿ "ಆನಂದರಾಮ ಶಾಸ್ತ್ರಿಗಳ ಮನೆ ಇದೇಯೇನಪ್ಪಾ?" ಎಂದೆ. ಆತ ಮಾತನಾಡಲಿಲ್ಲ, ಆದರೆ ಹೌದೆಂದು ತಲೆ ಆಡಿಸಿ ಸಂಜ್ಞೆ ಮಾಡಿದ. "ಶಾಸ್ತ್ರಿಗಳು ಇದ್ದಾರ? " ಕೇಳಿದೆ. ಅದಕ್ಕೂ ಆತನ ಉತ್ತರ ಅಷ್ಟೆ.
ಎರಡು ಅಥವಾ ಹೆಚ್ಚೆಂದರೆ ಮೂರು ಜನರು ವಾಸಿಸಬಹುದಾದ ಪುಟ್ಟ ಮನೆ. ಹೊರಗಡೆ ವಿಶಾಲವಾದ ಚಪ್ಪರ ಹಾಕಿ ಬದಿಯಲ್ಲಿ ಮಂಚವೊಂದನ್ನು ಹಾಕಿದ್ದರು. ಮನೆಯ ಬಾಗಿಲು ಹಾಕಿದ್ದರಿಂದ ಮೇಲು ದನಿಯಲ್ಲಿ ಕೂಗಿದೆ. ಒಳಗಡೆಯಿಂದ ಯಾವ ಸದ್ದೂ ಬರಲಿಲ್ಲ. ಬೇಲಿಯಾಚೆ ಇದ್ದವನ ಬಳಿ ಮತ್ತೆ ವಿಚಾರಿಸೋಣ ಎಂದು ಆಚೆ ಬಂದೆ, ಅಲ್ಲಿ ಆತ ಕಾಣಿಸಲಿಲ್ಲ. ಸ್ವಲ್ಪ ಗಟ್ಟಿದನಿಯಲ್ಲಿ ಯಾರಾದರೂ ಇದ್ದೀರಾ ಅಂದೆ, ನನ್ನ ದನಿ ಮತ್ತೆ ನನಗೆ ಕೇಳಿಸಿತಷ್ಟೆ, ಮತ್ತೆ ಮನೆಯತ್ತ ವಾಪಾಸು ಬಂದು ಮಂಚದ ಮೆಲೆ ತುಸು ಹೊತ್ತು ಕುಳಿತು ಕಾಯೋಣ ಎಂದು ನಿರ್ಧರಿಸಿ ವಿರಮಿಸಿದೆ.
ಸುಖಕ್ಕೋ, ದು:ಖಕ್ಕೋ ಕೂಗುವ ಹಕ್ಕಿ ಪಕ್ಷಿ, ಕ್ರಿಮಿ ಕೀಟಗಳ ದನಿ, ಸೂರ್ಯನ ಬಿಸಿಯ ಮರೆಸಿದ ಹಾಲ್ಬೆಳದಿಂಗಳು, ಮನುಷ್ಯರ ಸುಳಿದಾಟವೇ ಇಲ್ಲದ ಜಾಗ, ದೂರದಲ್ಲೇಲ್ಲೋ ಊಳಿಡುತ್ತಿದ್ದ ಕಾಡು ಪ್ರಾಣಿ, ಅನತಿ ದೂರದಲ್ಲಿ ಹರಿಯುವ ನೀರಿನ ಜುಳುಜುಳು ನಿನಾದ, ಹೆಣ್ಣಿಗಾಗಿ ಸಿಳ್ಳೆ ಹೊಡೆಯುತ್ತಿರುವ ಗೋಪಿ ಹಕ್ಕಿಯ ರಾಗ, ಇವೆಲ್ಲದರ ನಡುವೆ ನಾನು, ಮೂವತ್ತು ವರ್ಷಗಳ ನಂತರ ರಾತ್ರಿಯ ನಿರವತೆಯ ಸುಖವನ್ನನುಭವಿಸಿದೆ. ಚಂದ್ರನ ಮರೆಮಾಚಲು ಮೋಡ ಯತ್ನಿಸಿದಾಗ ಪಳಕ್ಕನೆ ಮಿಂಚುವ ನಕ್ಷತ್ರ ಎಣಿಸಿದೆ, ಸರ್ರನೆ ಜಾರಿದ ಉಲ್ಕೆಯ ನೋಡಿದೆ, ಜೀರುಂಡೆಯ ಜಿರ್ ಜಿರ್ರ್ರ್, ಕಪ್ಪೆಯ ವಟರ್ರ್ ವಟರ್ರ್, ಗೂಬೆಯ ಗುಮ್, ಬಾವಲಿಯ ರಕ್ಕೆಯ ಪಟಪಟ, ಸದ್ದುಗಳನ್ನು ಹುಡುಕಿ ಗುರುತಿಸಿ ಆಲಿಸಿದೆ, ಚಂದ್ರನ ಸುತ್ತ ಕಟ್ಟಿದ ಮೋಡದ ಕೊಡೆಯ ದೂರ ಲೆಕ್ಕ ಹಾಕಿ ಮಳೆಯ ದಿವಸವನ್ನು ಗುಣಿಸಿ ಬಾಗಿಸಿದೆ. ಸೊಂಯ್ಯೋ ಎಂಬ ಗಾಳಿಯ ಸದ್ದಿಗೆ ಬೆರಗಾದೆ, ನನ್ನದೇ ಉಸಿರಿನ ಏರಿಳಿತದ ಸದ್ದನ್ನು ಆಲಿಸಿದೆ, ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಕೊರೆಯುವ ಗಾಳಿಯಲ್ಲಿ ಉಲ್ಲಾಸದ ಮನಸ್ಥಿತಿಯಲ್ಲಿ ಮಂಚದ ಮೇಲೆ ಮಲಗಿ ತೇಲಾಡಿದೆ.
"ನೀವೇನಾ ಬೆಂಗಳೂರಿನಿಂದ ಬಂದವರು ನನ್ನ ನೋಡಲು" ದೃಢವಾದ ದನಿ ನನ್ನನ್ನು ಪ್ರಕೃತಿಯ ಆಸ್ವಾದನೆಯಿಂದ ಆಚೆ ತಂದಿತು . "ಹೌದು" ನನ್ನ ಬಗೆಗೆ ಅವರಲ್ಲಿದ್ದ ಮಾಹಿತಿಗೆ ಅಚ್ಚರಿಯಿಂದ ಅವರತ್ತ ನೊಡುತ್ತಾ ಹೇಳಿದೆ. ಶುಭ್ರವಾದ ಶ್ವೇತವಸ್ತ್ರ, ಮುಖದಲ್ಲಿ ಅದೇನೋ ವಿಶಿಷ್ಠವಾದ ತೇಜಸ್ಸು, ಆಳವಾದ ಜ್ಞಾನದ ಪ್ರಭೆಯನ್ನು ಹೊರಸೂಸುತ್ತಿರುವ ಕಣ್ಣುಗಳು, ಹಾಗೆಯೇ ಅವರನ್ನು ಎವೆಯಿಕ್ಕದೆ ನೋಡುತ್ತಿದ್ದ ನನ್ನನ್ನು "ಹ್ಞೂ ..ಹೇಳಿ.." ಎಂಬ ಶಾಸ್ರಿಗಳ ಸ್ವರ ವಾಸ್ತವಕ್ಕೆ ತಂದಿತು. ಹಳ್ಳಿಯಲ್ಲಿ ಹುಟ್ಟಿದ್ದು, ಕಷ್ಟಪಟ್ಟು ಓದಿದ್ದು, ಬೆಳೆದು ನಿಂತದ್ದು ಈಗ ಕ್ಷುಲ್ಲಕ ಯೋಚನೆಗಳು ಜೀವನ, ಜೀವ ಎಲ್ಲವನ್ನೂ ಹಿಂಡುತ್ತಿದ್ದದ್ದನ್ನು ವಿವರಿಸಿ ಪರಿಹಾರದ ಉತ್ತರಕ್ಕಾಗಿ ಅವರತ್ತ ದೃಷ್ಟಿ ನೆಟ್ಟೆ.
ನಾನು ಒಂದಿಷ್ಟು ವಾಕ್ಯಗಳನ್ನು ಹೇಳಬಲ್ಲೆ ಅದರಲ್ಲಿ ನಿನ್ನ ಸಮಸ್ಯೆಗೆ ಪರಿಹಾರವಿದೆ, ಹುಡುಕುವ, ಕಂಡುಕೊಳ್ಳುವ ಯತ್ನ ನಿನ್ನಿಂದ ಆದಾಗ ಮಾತ್ರಾ ಪರಿಹಾರ ಸಾದ್ಯ. ನಾನು ದೇವರನ್ನೂ ತೋರಿಸಬಲ್ಲೆ ಆದರೆ ನೊಡುವ ಸಾಮರ್ಥ್ಯ ನಿನ್ನಲ್ಲಿ ಇರಬೇಕು , ಯಾವುದೂ ಶಾಶ್ವತವಲ್ಲ’ ಎಂಬ ಮಾತು ನೋವಿದ್ದಾಗ, ಕಷ್ಟವಿದ್ದಾಗ ಸುಖನೀಡುತ್ತದೆ, ಅದೇ ವಾಕ್ಯ ಸುಖದಲ್ಲಿದ್ದಾಗ ಕಳೆದುಹೋಗುವ ಸುಖವ ನೆನೆದು ಭಯ ತರಿಸುತ್ತದೆ. ಪದಪುಂಜಗಳು ಯಾವತ್ತೂ ತಟಸ್ಥ, ವ್ಯಕ್ತಿ ಅರ್ಥೈಸುವ ಕಾಲ ಅರ್ಥಮಾಡಿಕೊಳ್ಳುವ ವಿಧಾನ ಬೇರೆ. ಹಣ ಆರೋಗ್ಯ ಎರಡೂ ಮನುಷ್ಯನ ಅಭೂತಪೂರ್ವ ಆಸ್ತಿಗಳು, ಅವುಗಳ ಮಹತ್ವದ ಅರಿವು ಅವು ಇಲ್ಲದಿದ್ದಾಗ ಮಾತ್ರಾ. ಗುರಿ ತಲುಪಿದ ಮನುಷ್ಯನಿಗಿಂತ ಗುರಿ ತಲುಪದ ಮನುಷ್ಯನೇ ಸುಖಿ, ಒಂದು ಗುರಿ ತಲುಪಿದ ಮನುಷ್ಯ ಮರುಕ್ಷಣ ಮತ್ತೊಂದು ಗುರಿ ನಿಗದಿಪಡಿಸಿಕೊಳ್ಳದಿದ್ದರೆ ಹತಾಶ ಆವರಿಸಿಕೊಂಡು ಕ್ಷುಲ್ಲಕ ಯೋಚನೆಗಳು ಕಾಡುತ್ತವೆ, ಗುರುವಿನ ಆಯ್ಕೆ ಅಸಮರ್ಪಕವಾಗಿದ್ದಲ್ಲಿ ಭ್ರಮನಿರಸ ಕಟ್ಟಿಟ್ಟ ಬುತ್ತಿ, ಹಾಗಾಗಿ ನಮಗೆ ನಾವೆ ಗುರುವಾಗುವುದೊಳಿತು. ಕಡಿಮೆ ಯೋಚಿಸುವವ ಹೆಚ್ಚು ಸುಖಿ, ಸಾದಾರಣ ಮನುಷ್ಯ ಬೇರೆಯವರ ನೋಡುತ್ತಾ ಬದುಕುತ್ತಾನೆ ಹಾಗಾಗಿ ಕೊರಗು ಹೆಚ್ಚು. ಮನುಷ್ಯನ ಬಾಲ್ಯ ಬಹುಮುಖ್ಯ ಅಲ್ಲಿ ಸಮರ್ಪಕ ವಿಕಸನವಾಗದಿದ್ದರೆ ಜೀವನಪೂರ್ತಿ ಋಣಾತ್ಮಕತೆ ಕಾಡುತ್ತದೆ. ಯೋಚಿಸುವ ಜನರಿಗೆ ಸುಖದಲ್ಲಿ ತೇಲಾಡಲು ಇಷ್ಟು ಸಾಕು. ಇಂದು ನಾನು ಅಸಹಾಯಕನಾಗಿದ್ದೇನೆ, ನಿನಗೆ ಕನಿಷ್ಟ ಊಟವನ್ನೂ ನೀಡುವ ತಾಕತ್ತು ನನ್ನಲ್ಲಿಲ್ಲ, ಇಲ್ಲಿ ಇದೇ ಮಂಚದ ಮೇಲೆ ಮಲಗಿ ನಾಳೆ ಬೆಳಿಗ್ಗೆ ಊರಿಗೆ ಹೋಗು ಸುಖದ ಬದುಕು ನಿನ್ನದಾಗುತ್ತದೆ ಅದು ಅನಿವಾರ್ಯ ಕೂಡ. ಎಂದು ಹೇಳಿ ಒಳನಡೆದರು. ಆನಂದರಾಮಾ ಶಾಸ್ತ್ರಿಗಳ ವಾಕ್ಯಗಳನ್ನು ಇಂಚಿಚೂ ವಿಮರ್ಶೆಗೆ ಒಳಪಡಿಸಿದೆ, ನನ್ನ ಸಮಸ್ಯೆಗೆ ಕ್ಷುಲ್ಲಕ ಯೋಚನೆಗೆ ಸಮರ್ಥ ಪರಿಹಾರ ಸಿಕ್ಕಿತು. ಅಲ್ಲಿಯೇ ಮುಂದಿನ ಸುಖದ ಬದುಕಿಗೆ ಮತ್ತೊಂದು ಗುರಿನಿಗದಿಪಡಿಸಿಕೊಳ್ಳುತ್ತಾ ಮಂದ ಬೆಳಕಿನಲ್ಲಿ ಮಂಚದಮೇಲೆ ಆಳದ ನಿದ್ರೆಗೆ ಜಾರಿದೆ.
ಸಣ್ಣದಾಗಿ ಕೊರೆಯುವ ಚಳಿಯಿಂದ ಎಚ್ಚರವಾಗಿ ಕಣ್ಬಿಟ್ಟೆ, ಪ್ರಕೃತಿ ಉದಯರಾಗ ಹಾಡುತ್ತಿತ್ತು. ಸುತ್ತಲಿನ ಜೀವಿಗಳೆಲ್ಲಾ ತಾಳ,ಧ್ವನಿ,ರಾಗ,ಲಯ,ಗತಿ ಮುಂತಾದವುಗಳನ್ನೆಲ್ಲಾ ಸಮರ್ಪಕವಾಗಿ ಹಂಚಿಕೊಂಡಿದ್ದವು. ಅಯ್ಯೋ ನಾನು ಇಷ್ಟು ಸುಲಭದಲ್ಲಿ ರಾತ್ರಿ ಕಳೆದೆನಾ ಎಂದು ಆಶ್ಚರ್ಯವಾಯಿತು. ಆನಂದರಾಮಾ ಶಾಸ್ತ್ರಿಗಳ ಮಾತು ಮನಸ್ಸಿನಾಳದಲ್ಲಿ ನಾಟಿ ಅದೇನೋ ಉತ್ಸಾಹ ಜೀವದಲ್ಲಿ ತುಂಬಿತ್ತು. ವಾಪಾಸು ಹೊರಡಲನುವಾದೆ ರಾತ್ರಿ ಇಲ್ಲದ ಊಟ ಹೊಟ್ಟೆ ಚುರುಗುಟ್ಟುತ್ತಿತ್ತು. ಶಾಸ್ತ್ರಿಗಳಿಗೆ ವಿದಾಯ ಹೇಳಿ ಹೋಗೋಣ ಎಂದು ಮೇಲು ದನಿಯಲ್ಲಿ ಹಲವಾರು ಬಾರಿ ಕರೆದೆ ಉತ್ತರವಿಲ್ಲ, ಮತ್ತೇಕೆ ತೊಂದರೆ ನೀಡುವುದು ಎಂದು ತೀರ್ಮಾನಿಸಿ ಕಲ್ಲುದಾರಿಯತ್ತ ಹೆಜ್ಜೆ ನಿಧಾನ ಇಡುತ್ತಾ ಟಾರ್ ರಸ್ತೆಗೆ ಇಳಿದೆ.
"ಈ ಬೆಳಗಾ ಮುಂಚೆ ಎಲ್ಲೋಗಿದ್ರಿ ಸೋಮೀ.." ನಾನು ರಸ್ತೆಗೆ ಇಳಿಯುತ್ತಿದ್ದಂತೆ ಕಪ್ಪು ಕಂಬಳಿ ಹೊದ್ದು ನಾಲ್ಕೆಂಟು ದನಗಳನ್ನು ಹೊಡೆದುಕೊಂಡು ಹೊರಟವನೊಬ್ಬ ವಿಚಾರಿಸಿದ
"ಆನಂದರಾಮಾ ಶಾಸ್ತ್ರಿಗಳ ಮನೆಗೆ," ಎಂದು ಹೇಳಿ ಕಾರಿನತ್ತ ಸಾಗಿದೆ.
"ಬಾಳ ಒಳ್ಳೆರಾಗಿದ್ರು...ಪಾಪ..ನೀವು ದೂರದಿಂದ ನೋಡಕೆ ಬಂದಿದ್ರೇನೋ"
ಆತನ ಅನುಕಂಪದ ವಾಕ್ಯಗಳು ನನಗೆ ಸಂಶಯ ಮೂಡಿಸಿ, "ಒಳ್ಳೆರಾಗಿದ್ರು ಅಂದ್ರೆ...?" ಎಂದೆ.
"ಮತ್ತೇನು ಹೇಳದು ಸೋಮಿ, ಅವ್ರು ತೀರಿ ಇವತ್ತಿಗೆ ಒಂದೂವರೆ ತಿಂಗ್ಳು ಆತಲ, ಅವ್ರ ಮಗ ಹೋಗಿ ಹೋಗಿ ಮಾತು ಬರ್ದೀರೋ ಮೂಗನ್ನ ಮನೆ ಕಾಯೋದಕ್ಕೆ ಬಿಟ್ಟು ಪ್ಯಾಟೇ ಸೇರಿದಾರೆ...ಅವನೋ ಆ ಮನೇನ ಹೊತ್ಗೊಂಡು ಹೋದ್ರೋ ಮಾತಾಡಲ್ಲ, ಸಂಜೆವರಿಗೆ ಅಲ್ಲಿ ಇರ್ತಾನೆ ರಾತ್ರಿ........."
ನನಗೆ ಆತನ ಮುಂದಿನ ಮಾತುಗಳು ಸ್ಪಷ್ಟವಾಗಲಿಲ್ಲ, ಒಮ್ಮೆ ಅದೆಂತದೋ ವಿಚಿತ್ರ ಅನುಭವವಾಯಿತು, ರಾತ್ರಿಯ ಘಟನೆಗಳೆಲ್ಲಾ ಪುಂಖಾನುಪುಂಖವಾಗಿ ಕಣ್ಮುಂದೆ ತೇಲಿಬಂತು, ರಾತ್ರಿ ನಾನು ಕಂಡಿದ್ದು ಕನಸಾ..? ಪುಸ್ತಕದಲ್ಲಿ ಓದಿದ ಸಾಲುಗಳು ಅಂತರಾಳದಲ್ಲಿ ಹುದುಗಿ ಮಥನಗೊಂಡು ನನಗೇ ದಾರಿದೀಪವಾಯಿತಾ? ಅರ್ಥವಾಗಲಿಲ್ಲ. ಕೈಕಾಲುಗಳು ಗಡಗಡ ನಡುಗಲಾರಂಬಿಸಿದ್ದು ಕೇವಲ ಹಸಿವಿನ ಕಾರಣದಿಂದ ಮಾತ್ರಾ ಅಲ್ಲ ಎಂಬುದು ಅರಿವಾಗಿ ಕ್ಷಣ ಸಾವಾರಿಸಿಕೊಂಡು ಕಾರನ್ನು ಬೆಂಗಳೂರಿನತ್ತ ಓಡಿಸಲಾರಂಬಿಸಿದೆ. ಬೃಹತ್ ಗಾತ್ರದ ಮರಗಳು, ಆಕಾಶಕ್ಕೆ ಮುಟ್ಟಿದಂತಿರುವ ಗುಡ್ಡಗಳು ಸರಸರನೆ ವೇಗವಾಗಿ ಹಿಂದೆ ಸರಿಯತೊಡಗಿದವು,
************

5 comments:

prasca said...

ಓಹ್ ಸೂಪರ್ಬ್ ಸರ್

Digwas Bellemane said...

ಚೆನ್ನಾಗಿದೆ

ಮನದಾಳದಿಂದ............ said...

ಅರ್ಥಗರ್ಭಿತ ಕತೆ......
ಹಣವೊಂದೇ ಮುಖ್ಯ ಅಲ್ಲ ಎನ್ನುವ ಮಾತು ನಿಜ...........

ಮಹಾಬಲಗಿರಿ ಭಟ್ಟ said...

ಚನ್ನಾಗಿದೆ ಸರ್

Handigodu Muthu said...

ನಮಗೆ ಸದಾ ಬೇಕಾದ ನಿರುಪದ್ರವಿ ಜೀವನ
ನಗರ ಜೀವನದಲ್ಲಿ ಸಿಗಬಹುದೆಂದುಕೊಂಡರೆ,
ಆ ಮಾತು ದೂರವೇ ಉಳಿಯಿತು. ಪೇಟೆಗಳು
ಬೌಗೋಳಿಕವಾಗಿ ಬೆಳೆದಂತೆಲ್ಲಾ ಜೈವಿಕವಾಗಿ
ಒತ್ತಡದ ಕೇಂದ್ರಗಳಾಗುತ್ತಿವೆ. ಮನುಷ್ಯನ
ದೌರ್ಬಲ್ಯಗಳನ್ನ ದಿನ ದಿನಕ್ಕೂ,ಉಲ್ಬಣಗೊಳಿಸುತ್ತಿವೆ.
ನಗರದ ಮಂದಿ "ದ್ರುತರಾಷ್ಟ್ರಾಲಿಂಗ"ನಕ್ಕೆ ಸಿಕ್ಕು
ನರಳುತ್ತಿದ್ದಂತೆ ಕಂಡರೆ ಅಚ್ಚರಿ ಪಡಬೇಕಾದ್ದಿಲ್ಲ.
ಹೀಗಿರುವಾಗ ನಮಗೆ ಈ 'ಕಾಂಕ್ರೀಟ್' ಕಾಡಿನ
ಬಗ್ಗೆ ಆಸೆಗಳು ಉಳಿಯುವುದಾದರೂ ಹೇಗೆ..?
ನಾವು ಸದಾ ಬೇಕೆಂದು ದ್ಯಾನಿಸುವ
ನಿರುಮ್ಮಳವಾದ ಜೀವನ ನಗರದೊಳಗೆ ಸಿಗುವುದಿಲ್ಲ.
ಅದು ನಮ್ಮೊರಿನ ತಗ್ಗು-ದಿನ್ನೆಗಳಲ್ಲಿ,ಮರ-ಹಸಿರುಗಳಲ್ಲಿ
ಸಿಗುವುದೆಂಬ ಬರವಸೆ ಇದೆ. ಹಾಗಾಗಿ ಮನಸ್ಸು ಸದಾ
ಊರಿನ ನೆನಪಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ.