ಗಿಳಿಯು ಪಂಜರದೊಳಗಿದೆ ಅಂತ ಸದ್ಯ ನಾನು ಹಾಡಬಹುದು. ಅದು ಯಾವತ್ತು ಹಾರಿ ಹೋಗುತ್ತೋ ಅಥವಾ ನನಗೆ ಛೆ ಪಾಪ ಅನ್ನಿಸಿ ಹಾರಿಸುತ್ತೆನೆಯೋ ಗೊತ್ತಿಲ್ಲ. ಹಾಗೆ ಹಾರಿ ಹೋದ ದಿನ "ಗಿಳಿಯು ಪಂಜರದೊಳಿಲ್ಲ" ಅಂತ ಹಾಡಬೇಕಾಗಬಹುದು. ಜಯಕೃಷ್ಣ ಮೊಬೈಲಿಸಿ ನಮ್ಮ ತೋಟದಲ್ಲಿ ಮೂರು ಗಿಳಿಮರಿಗಳು ಇವೆ ಬೇಕಾ? ಅಂತ ಕೇಳಿದಾಗ ಇಲ್ಲ ಅನ್ನಲಾಗಲಿಲ್ಲ. ಹಾಗಂತ ಸರ್ವತಂತ್ರ ಸ್ವಂತಂತ್ರ್ಯವಾಘಿ ಹಾರಾಡುವ ಹಕ್ಕಿ ಪಕ್ಷಿಗಳನ್ನು ಕೂಡಿಹಾಕಿ ಚಂದ ನೋಡಲೂ ಮನಸ್ಸಾಗುತ್ತಿಲ್ಲ. ಹೀಗೆ ಅರೆ ಮನಸ್ಸಿನಿಂದ ಮೂರೂ ಗಿಳಿಮರಿಗಳನ್ನು ಅಂದೇ ಸಾಗರದಿಂದ ಸಾವಿರ ರೂಪಾಯಿ ತೆತ್ತು ಜಾಲರಿ ಬೋನು ತರಿಸಿ ಒಳಗಿಟ್ಟು ಬಾಳೆಹಣ್ಣು ತಿನ್ನಿಸತೊಡಗಿದೆ. ನೂರಾರು ಅವತಾರಗಳಲ್ಲಿ ಇದೂ ಒಂದು ಆಗಿಹೋಗಲಿ ಎಂಬ ಘನ ಉದ್ದೇಶದಿಂದ. ಅವುಕ್ಕೆ ಇನ್ನು ರಾಮರಾಮ-ಬಾ ಬಾ- ಆರಾಮ- ಎಂಬಂತಹ ಎರಡಕ್ಷರಗಳ ಮಾತನ್ನು ಕಲಿಸುವ ಇರಾದೆ ಇದೆ. ಸದ್ಯ ಬಾಳೆಹಣ್ಣು ತಿನ್ನಿಸುವ ಕಾಯಕ ನಡೆದಿದೆ. ಎಂದು ಮುಕ್ತಾಯ ಹೇಗೆ ಮುಕ್ತಾಯ ಗೊತ್ತಿಲ್ಲ ಆರಂಭ ಆಗಿದೆ. ಅಷ್ಟರೊಳಗೆ ಒಮ್ಮೆ ಬನ್ನಿರಲ್ಲ. "ಅರೆರೆರೆರೆ ಗಿಣಿರಾಮ, ಹೊಯ್ ಪಂಚರಂಗೀ ರಾಮ" ಅನ್ನಿರಲ್ಲ.
1 comment:
ನಾನು ಪಂಜರದ ಪಕ್ಷಿ ಇನ್ನು ನನಗಾರು ಗತಿ
ಕೇಳ ಬಯಸುವಿರೆನು ನನ್ನ ಕಥೆಯಾ...?
ಯಾರ ಸಂತೋಷಕ್ಕೆಂದು ಹಿಡಿದು ತಂದರೋ
ನನ್ನ.....
ಅಲ್ಲಿ ಬನ ಬನದಲ್ಲಿ ಕಾಡ ಗಿಡಗಿಡದಲ್ಲಿ ಕೊಂಬೆ
ಕೊಂಬೆಗೂ, ಹೂವು ಸಾವಿರಾರು. ಬನದ ಹಣ್ಣಿನ
ರುಚಿಯ ಬರಿನೆನೆದರೇನುಂಟು ಮರಳಿ ದೊರೆಯಲು
ಬಹುದೇ ತೌರಿನವರು.
ಇದು ನಾನು ಪ್ರೈಮರಿ ಶಾಲೆಯಲ್ಲಿದ್ದಾಗೆ ಕಲಿತ
ಪದ್ಯ. (ಪದ್ಯದ ಬಹಳ ಸಾಲುಗಳು ಮರೆತಿದೆ)
ಇದು ಆಗ ನನ್ನ ಎಳೆಯ ಮನಸ್ಸಿನ ಮೇಲೆ
ಬಹಳ ಪರಿಣಾಮ ಬೀರಿದ ಪದ್ಯ. ನಂತರ
ಹೈಸ್ಕೂಲ್ ನಲ್ಲಿ ಕೀಟ್ಸ್ ಕವಿಯ ಡೌ(DOVE)
ಪದ್ಯ. ಸ್ವಾತಂತ್ರದ ಹಂಬಲವೇ ಎರೆಡು ಪದ್ಯಗಳ
ಮುಖ್ಯ ದ್ವನಿ.
ನಮ್ಮ ಜನಪದ ಕೂಡ "ಹಾರಾಡೋ ಗಿಳಿ ಚೆಂದ"
ಅಂತ ಹೇಳಿದೆ.ಹೀಗಿರುವಾಗ ಗಿಳಿಮರಿಗಳು ಬೆಳೆದು
ಬಾನಗಲ ಗರಿಬಿಚ್ಚಿ ಹಾರಾಡಲಿ.ಅದನ್ನು ಕಂಡು
ನಾವೆಲ್ಲಾ ಹಿರಿ ಹಿರಿ ಹಿಗ್ಗೋಣ. ಸ್ವಾತಂತ್ರ ಚಿರಾಯುವಾಗಲಿ.
Post a Comment