Tuesday, July 5, 2011

ಗಂಟೆ ಸದ್ದು ಅಪ್ಪಯ್ಯನದು ಜಾಗಟೆ ಅಪ್ಪೀದು

ಎಂಬತ್ನಾಲ್ಕರ ಅಪ್ಪಯ್ಯ ಹದಿನಾಲ್ಕರ ಅಪ್ಪಿ ಹಾಗೂ ಈ ಜನರೇಷನ್ ಗ್ಯಾಪ್ ನಡುವೆ ಅಪ್ಪಯ್ಯನ ಮಗನೂ ಅಪ್ಪಿಯ ಅಪ್ಪಯ್ಯನೂ ಆದ ನಲವತ್ನಾಲ್ಕರ ನಾನು. ಇದು ನಮ್ಮ ಮನೆಯ ಗಂಡು ದಿಕ್ಕಿನ ಚಿತ್ರಣ. ನನ್ನ ಹೆಂಡತಿ ಅರ್ಥಾತ್ ಅಪ್ಪಿಯ ಅಮ್ಮ ಮತ್ತು ನನ್ನ ಅಮ್ಮ ಅಂದರೆ ಅಪ್ಪಯ್ಯನ ಹೆಂಡತಿ ಎಂಬಲ್ಲಿಗೆ ಈ ಬ್ಲಾಗಿನ ಕೆಳಗಡೆ ಕಾಣುವ ನಮ್ಮ ಮನೆಯೊಳಗಿನ ಸಂಸಾರದ ಜನರು. ಅಯ್ಯೋ ಸಾಕು ಸಂಸಾರ ಚಿತ್ರಣ ಮುಂದುವರೆಸು ಅಂದಿರಾ. ಸರಿ ಕೇಳಿ.

೮೪ ಕ್ಕೆ ತಾಳ್ಮೆ ಎಂಬುದು ಇಲ್ಲ ೧೪ ಕ್ಕೆ ತಾಳ್ಮೆಯ ಅವಶ್ಯಕತೆ ಇಲ್ಲ. ಹಾಗಾಗಿ ಇವೆರಡರ ನಡುವೆ ನಾನು ಹೈರಾಣಾಗಿಬಿಡುತ್ತೇನೆ. ಸಿಕ್ಕಾಪಟ್ಟೆ ತಾಳ್ಮೆ ನನಗೆ ಭಗವಂತ ಅಥವಾ ಜೀವನ ಕಲಿಸಿಕೊಟ್ಟ ಪರಿಣಾಮವಾಗಿ ಮುಗುಳ್ನಗುತ್ತಾ ನಿಭಾಯಿಸುತ್ತೇನೆ. ಅಥವಾ ಅದು ಅನಿವಾರ್ಯ. ಅಪ್ಪಯ್ಯನದು ಒಂಥರಾ ಹಿಟ್ಲರ್ ಆಡಳಿತ. ತಾನು ಹೇಳಿದಂತೆ ನಮ್ಮ ಮನೆಯೇನು ಇಡೀ ಪ್ರಪಂಚವೇ ನಡೆಯಬೇಕು ಎನ್ನುವ ಮನಸ್ಸು. ದೇಹಕ್ಕೆ ವಯಸ್ಸಾದರೂ ಮನಸ್ಸು ಬಗ್ಗದು. ಹಾಗಾಗಿ ಅಜ್ಜ ಮೊಮ್ಮಗನ ಯುದ್ದ ಆವಾಗಾವಾಗ ನಡೆಯುತ್ತಲೇ ಇರುತ್ತದೆ. ೪೪ ರ ನಾನು ಏನಾದರೂ ಉಪಾಯ ಮಾಡಿ ಸಮಾಧಾನ ಮಾಡಿ ಮುಂದೆ ಸಾಗಬೇಕು ಹಲಬಾರಿ. ಈ ಸಮಾಧಾನಕ್ಕೆ ಅರ್ದಾಂಗಿಯೂ ಸಹಕಾರಿ ಎನ್ನಿ ಅಜ್ಜಿಯೂ ಜತೆಗೆ ಎನ್ನಿ, ಹೌದೌದು ಎನ್ನುತ್ತೇನೆ ನಾನು.

ಬೆಳಗ್ಗೆ ಬೆಳಗ್ಗೆ ಉಷ:ಕಾಲದಲ್ಲಿ..! ಅಪ್ಪಯ್ಯ ಸ್ನಾನಮಾಡಿ ಬರೊಬ್ಬರಿ ಮೂರುತಾಸಿನ ಪೂಜೆ ಮುಗಿಸಿ ಆಚೆ ಬಂದರೆ ಗರಂ ಗರಂ.ತಿಂಡಿ ತಿಂದು ಜಗುಲಿಯ ಖುರ್ಚಿಯ ಮೇಲೆ ಕುಳಿತಾಗ ಮೊಮ್ಮಗ ಕಾರ್ಟೂನ್ ನೆಟ್ ವರ್ಕ್ ಹಾಕಿ ಬೆಂಚ್ ಮೇಲೆ ಮಲಗಿದ್ದನ್ನು ಕಂಡು "ಅದೆಂತಾ ಹಗಲು ಮೂರೊತ್ತು ಟಿವಿಯೋ.." ಎಂಬ ಅಸಹನೆಯ ಸ್ವರ ಹೊರಡುತ್ತದೆ. ಮೊಮ್ಮಗನೋ" ನೀನು ಮುಕ್ತ... ನೋಡಿರೆ ಅಡ್ಡಿಲ್ಯಾ" ಕೆಣಕುತ್ತಾನೆ. "ತೆಗೆದುಬಿಟ್ರೆ ಹಲ್ಲು ಉದುರಿಹೋಕು" ಅಜ್ಜನ ಅವಾಜು. ಹೀಗೆ ಮಾತಿನ ಚಕಮಕಿ ನಡೆಯುತ್ತಿರುವಾಗ ಅಪ್ಪಿಯ ಅಮ್ಮನ ಪ್ರವೇಶ "ಅಪೀ... ಟಿವಿ ಆಫ್ ಮಾಡ ಮಾರಾಯ. ಮನೆಯೆಲ್ಲ ರಗಳೆ". "ನೀ ಸುಮ್ನಿರು ಅಮ" ಅಪ್ಪಿಯ ಉತ್ತರ. "ಯಂಗೆ ಎದುರುತ್ತರ ಕೊಡ್ತ್ಯ" ಅಪ್ಪಿಯ ಅಮ್ಮನ ದನಿ. ಹೀಗೆ ತಾರಕಕ್ಕೆ ಏರುವ ಹಂತದಲ್ಲಿ ಅಪ್ಪಿಯ ಅಜ್ಜ ಎದ್ದು ಟಿವಿ ಬಂದ್ ಮಾಡಿ ಬಿಡುತ್ತಾನೆ. ಅಲ್ಲಿಗೆ ಅಪ್ಪಿಯ ಸಿಟ್ಟು ನೆತ್ತಿಗೆ. ಅಂತಹ ಕ್ಷಣಗಳಲ್ಲಿ ನನ್ನ ಪ್ರವೇಶವಾಗಿ ಮಿಕಮಿಕ ಎಂದು ಕಣ್ಣರಳಿಸಿ ನೋಡಿ ಅಕಸ್ಮಾತ್ ಕಣ್ಣಿನ ದೃಷ್ಟಿಗೆ ಹೆದರಿದರೆ ಹೆದರಲಿ ಎಂದು ನಂತರ ಅದಾಗದಿದ್ದಾಗ ಏನೇನೂ ಉಪಾಯ ಮಾಡಿ ತಣಿಸುವುದಿದೆ.

ಇಷ್ಟೆಲ್ಲಾ ಆಗುತ್ತಿದ್ದಂತೆ ಅಜ್ಜ "ಆ ರಾಮಕೃಷ್ಣ ಎಲ್ಲಿಗೆ ಹೋದ್ನೋ, ಒಂಬತ್ತು ಗಂಟೆಯಾದರೂ ಇನ್ನು ಪತ್ತೆ ಇಲ್ಲೆ" ಎಂದು ಮನೆಕೆಲಸದವನನ್ನು ಅನ್ನಲು ಶುರುಮಾಡುತ್ತಾನೆ. ಹಾಗೆ ಮನೆಕೆಲಸದವನ್ನು ಅನ್ನಲು ಕಾರಣ ’ವಾರಕ್ಕೆ ಕನಿಷ್ಟ ಐದು ಬಾರಿ ತಾಳಗುಪ್ಪಕ್ಕೆ ಹೋಗಬೇಕು, ಬಸ್ ಸ್ಟ್ಯಾಂಡ ಗೆ ಬೈಕ್ ನಲ್ಲಿ ಬಿಟ್ಟುಕೊಡಲು ರಾಮಕೃಷ್ಣ ಬೇಕು. ಈಗ ನನಗೆ ಅವೆಲ್ಲಾ ಅರ್ಥವಾಗಿ "ಆನು ಬಿಟ್ಕೊಡ್ತಿ, ಬಾ’ ಅಂದರೆ ಒಂದು ದಿವಸದ ಬೆಳಗಿನ ಗರಂ ತಣ್ಣಗಾದಂತೆ. ಇನ್ನು ಸಂಜೆಯದು ಮತ್ತೊಂದು ರೀತಿ ಮುಂದುವರೆಯುತ್ತದೆ. ಅಜ್ಜಂಗೆ ಈ ಟಿವಿ ಬೇಕೇಬೇಕು ಅಪ್ಪಿಗೆ ಕಾರ್ಟೂನ್ ಬೇಕೆ ಬೇಕು ಮತ್ತೆ ಜಟಾಪಟಿ ಶುರು.

ಈ ರಗಳೆಗೆ ತಿಲಾಂಜಲಿ ಇಡಲು ತೀರ್ಮಾನಿಸಿ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ಪಿಯ ಕೋಣೆಗೆ ಪೋರ್ಟ್ ಬಲ್ ಟಿವಿ ತಂದು ಕೂರಿಸಿದೆ. ಈಗ ಟಿವಿ ರಗಳೆ ಬಂದ್. "ಅಯ್ಯೋ ಶಿವನೆ ಮಗ ಎಸ್ ಎಸ್ ಎಲ್ ಸಿ ಓದುತ್ತಿದ್ದಾನೆ ಎಂದಿರಿ ಅವನಿಗೆ ಒಂದು ಟಿವಿ ತಂದುಕೊಟ್ಟಿರಾ?, ಎಂತಾ ಜನ ನೀವು, ನಮ್ಮ ಮನೆಯಲ್ಲಿ ಓದುತ್ತಿರುವ ಮಗ ಎಸ್ ಎಸ್ ಎಲ್ ಸಿ ಆದರೆ ಕೇಬಲ್ ತೆಗೆಸುತ್ತೇವೆ, ನೀವೋ...." ಎಂದಿರಾ. ಹೌದು ಮಗ ಟಿವಿ ನೋಡುತ್ತಾ ಎಸ್ ಎಸ್ ಎಲ್ ಸಿ ಫೇಲ್ ಆದರೆ ಮನೆಯಲ್ಲಿ ಇರಲು ಒಂದು ಜನ ಆದಂತಾಗುತ್ತದೆ. ನಮ್ಮ ಊರುಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ, ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ ಎಂದೆಲ್ಲಾ ನೀವು ಪತ್ರಿಕೆಗಳಲ್ಲಿ ಓದುತ್ತಾ ಇದ್ದೀರಿ, ಇರುವ ಒಬ್ಬ ಮಗನೂ ನಿಮ್ಮಂತೆ ಓದಿ ಆಮೆಲೆ ಪಟ್ಟಣ ಸೇರಿ "ಅಯ್ಯೋ, ನಗರದ ಜೀವದಲ್ಲಿ ನಾವು ಕಳೆದು ಹೋಗಿದ್ದೇವೆ, ಹಳ್ಳಿಯೇ ಚಂದ"ಎಂದು ಅಲವತ್ತು ಕೊಳ್ಳದೇ ಇರಲಿ ಎಂದು ಹೀಗೆ . ಆದರೂ ಇದು ಸ್ವಲ್ಪ ಅತಿ ಎಂದಿರಾ. ಜಗುಲಿಯಲ್ಲಿ ಗಂಟೆ ಸದ್ದು ಶುರುವಾಗಿದೆ, ರಾಮಕೃಷ್ಣಾ.....ರಾಮಕೃಷ್ಣಾ..... ಎಂದು. ಅದಕ್ಕಿನ್ನೊಂದು ಮಾರ್ಗ ಯೋಚಿಸಬೇಕು, ಆನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಬರಲಾ....

13 comments:

ವಿ.ರಾ.ಹೆ. said...

ಇದ್ದ ಹಳ್ಳಿ ಬಿಟ್ಟು ಬಂದು ನಗರ ಸೇರಿಕೊಂಡು ಬಿಡಲು ಮನಸಿಲ್ಲದಿದ್ದರೂ ಹಳ್ಳಿಯೇ ಚಂದ ಅಂತ ಅಲವತ್ತುಕೊಳ್ಳುವವರು.. ಹ್ಮ್..

ಜನರೇಶನ್ ಗ್ಯಾಪಿನ ಜಟಾಪಟಿ ಎಲ್ಲಾ ಕಡೆಯೂ ಇದ್ದಿದ್ದೇ.. ಹಂಗೇ ಎಸ್ಸೆಲ್ಸಿ ಆದ್ಕೂಡ್ಲೇ ಒಂದು ಬೈಕೂ ತೆಕ್ಕೊಟ್ಬಿಡಿ , ಅಪ್ಪಿ ಆರಾಮಿರ್ಲಿ :)

ತೇಜಸ್ವಿನಿ ಹೆಗಡೆ said...

:D ಸೂಪರ್... ಟಿ.ವಿ. ನೋಡಿದ್ರೆ ಓದಲ್ಲ ಅನ್ನೋದ ಹಳೆಯದಾಯ್ತು.. ಈಗ ನೋಡ್ತಾ ನೋಡ್ತಾ ಪಾಠದ ಕಾಲ ಶುರುವಾಗಿದೆ. ನನ್ನ ಪುಟ್ಟಿ ಈಗಲೇ.. ಕಾರ್ಟೂನ್ ಹಾಕಿದ್ರೆ ಮಾತ್ರ ಬರೀತೆ ಹೇಳ್ತು... ಹಾಂಗಾಗಿ.. ಯೋಚನೆ ಮಾಡಡಿ. ಅಪ್ಪಿ ಚಲೋ ಓದಿ.. ಹಳ್ಳಿಯಲ್ಲೇ ಇದ್ದು.. ಅಗ್ರಿಕಲ್ಚರ್ ಕ್ಷೇತ್ರದಲ್ಲೇ ಯಶಸ್ಸನ್ನು ಪಡೆಯುವಂತಾಗಲಿ.

Sushrutha Dodderi said...

ayyoooooo.. nange nin mele love bandhothu raaghaNNa.. :-)

Manjunatha Kollegala said...

ಆ ಕೊನೇ ಮಾತು ನಿಮ್ಮ ಬರಹವನ್ನ ಯಾವುದೋ ಎತ್ತರಕ್ಕೆ ತಗೊಂಡು ಹೋಯ್ತು :) ಒಳ್ಳೇ ಬರಹ

Shashi jois said...

ನಿಮ್ಮ ಕತೆ ಓದಿ ನನ್ನ ಮಾವನ ನೆನಪಾಯ್ತು ಮರ್ರೆ...
ಚಿತ್ರದಲ್ಲಿರುವ ನಿಮ್ಮ ಅಪ್ಪಯ್ಯನನ್ನು ನೋಡಿ ನನ್ನ ಮಾವನನ್ನು ನೋಡಿದ ಹಾಗೇ ಆಯ್ತು....
ನಿಜ ಅಜ್ಜ-ಮೊಮ್ಮಕ್ಕಳ ಗಲಾಟೆಯಲ್ಲಿ ಅಪ್ಪ ಪಡ್ಚ ಅಲ್ವ!!!!!!!!!!
ಅದರೆ ಏನು ಮಾಡೋದು ಯಾರಿಗೂ ಹೇಳೋಕು ಅಗೊಲ್ವಲ್ಲ ...

Unknown said...

ವಿ.ತೇ.ಸು.ಮ.ಶ
ಎಲ್ಲರಿಗೂ ತ್ಯಾಂಕ್ಸ್.

mitaxar said...

chenadiddu...

ಸೀತಾರಾಮ. ಕೆ. / SITARAM.K said...

nice

umesh desai said...

very good sir

venu said...

wonderful.... raghumava

Hosmane Muthu said...

ಮನಸ್ಸಿನ ಭಾವನೆಗಿಂತ ಸಂಭಂದಗಳು ಅತ್ಯಂತ ಕಠಿಣತರಹದ್ದು.
ಇದು ನಮ್ಮ ಸೂಕ್ಷ್ಮತೆಗಳ ಮೇಲೆ
ಸದಾ ದಾಳಿಯಿಡುತ್ತದೆ.ಕೆಲವೊಮ್ಮೆ ಈ ಜಂಜಾಟದಲ್ಲಿ
ನಾವು ಸೋಲುತ್ತಾ ಹೋಗುತ್ತೇವೆ. ಮನಸ್ಸಾಕ್ಷಿಗೆ
ವಿರುದ್ದವಾಗಿಯು ನೆಡೆದು ಬಿಡುವ ಪರಿಸ್ಥಿತಿ ಎದುರಾಗುತ್ತದೆ. ಕೊನೆಗೆ ನಮ್ಮ ನೆಡೆಯನ್ನೇ ಜಾಣತನದಿಂದ ನಿಭಾಯಿಸುವ ಪರಿಸ್ಥಿತಿ. ಹೀಗೆಯೇ ಸಾಗುತ್ತದೆ ಎಲ್ಲಾ.....

Anonymous said...

:-)
malathi S

Bharatheesha P said...

raganna super. maga SSLC pass aglikke TV enu problem madalla ansatte. ava andkotane ille TV irvaga yavaga bekadru nodbodu. matte yava tondarenu ilde nodi nodi bore agatte. aaga anivaryavagi svalpa svalpa nadru odle bekagatte. yavdukke aldidru, atleast TIME PASS ge.