Monday, July 11, 2011

ಆ ನೆನಪುಗಳ ಹಿಂದೆ "ಏನೋ" ಇದೆನಿಮಗೆ ಗೊತ್ತಾ...?. ಥೋ ನಾನು ಯಾವಾಗ್ಲೂ ಹೀಗೆ, ನಿಮಗೆ ಗೊತ್ತಿದ್ದರೆ ಮತ್ತೇಕೆ ನಾನು ಹೇಳುವುದು. ಆದರೆ ಏನು ಮಾಡುವುದು ಮಾತಿಗೆ ಮುಂಚೆ ಹೀಗೆ ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ನನ್ನ ಪರಿಚಯದ ಜನ ಒಬ್ಬರು ಹೀಗೆ ಮಾತಿನ ನಂತರ "ನಾನು ಏನೆ ಹೇಳ್ದೇ ಹೇಳು?" ಅಂತ ಕೇಳಿ ತಮ್ಮ ಮಾತನ್ನು ಮುಂದುವರೆಯಿಸುತ್ತಿದ್ದರು. ಎಲ್ಲೋ ಅಪರೂಪಕ್ಕೆ ಸಿಗುವ ಜನ ಹೀಗೆ ಮಾತಿನ ನಡುವೆ ಕೇಳಿದರೆ ಓಕೆ. ಆದರೆ ನಿತ್ಯ ಸಿಗುವ ಜನಕ್ಕೆ ಅದೊಂತರಾ ಹಿಂಸೆಯಾಗುತ್ತದೆ. ಅವರ ಹೆಂಡತಿಯ ತಮ್ಮ ಇವರ ಈ ಮೇಲ್ಮಾತಿನಿಂದ ರೋಸಿ ಹೋಗಿದ್ದ. ಒಂದು ಸಾರಿ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಹೇಳಿ ಮುಂದೆ ಯಥಾಪ್ರಕಾರ "ನಾನು ಏನು ಹೇಳ್ದೆ ಹೇಳು" ಅಂತ ಹೇಳಿ ಮಾತು ಮುಂದುವರೆಸಲು ಅಣಿಯಾದರು. ಆದರೆ ಬಾವನ ಖಾಯಂ ಡೈಲಾಗ್ ಕೇಳಿ ರೋಸಿದ್ದ ನೆಂಟ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಪುನರುಚ್ಚರಿಸಿದ. ಬಾವ ಕಕ್ಕಾಬಿಕ್ಕಿ.
ಅಷ್ಟೇನೂ ಮಜ ಕೊಡಲಿಲ್ಲವ ಇದು, ಹೋಗಲಿ ಬಿಡಿ ನಾನು ಕುಟ್ಟಲು ಶುರುಮಾಡಿದ್ದೇ ಒಂದು ಈಗ ಬರದದ್ದೇ ಮತ್ತೊಂದು. ಅದೇ ಹೇಳಿದೆನಲ್ಲ ನಾನು ಮೊನ್ನೆ ಜರ್ಮನಿಗೆ ಹೋಗಿದ್ದೆ. ಯಾವಾಗ ಹೇಳಿದ್ದೆ ಎಂದಿರಾ?, ಇರಲಿ ತೀರಾ ಎಲ್ಲದಕ್ಕೂ ಹೀಗೆ ಕೇಳುತ್ತಾಹೋದರೆ ನನಗೂ ರಗಳೆ ಎನೋ ಒಂಚೂರು ಪುರ್ಸತ್ತು ಮಾಡಿಕೊಂಡು ರೀಡಲು ಕುಳಿತ ನಿಮಗೂ ಕಸಿವಿಸಿ. ನಾನು ಜರ್ಮನಿಗೆ ಹೋಗಿದ್ದೆ ಎಂದರೆ ನನ್ನ ಚರಾಸ್ತಿಯಾದ ಈ ದೇಹದ ಸಮೇತವಲ್ಲ. ಮಾನಸಿಕವಾಗಿ ಅಷ್ಟೆ. ನಮ್ಮ ಹೋಂ ಸ್ಟೆ ಗೆ ನವದಂಪತಿಗಳಾದ ಮಂಜುನಾಥ್ ಎಂಡ್ ಜ್ಯೋತಿ ಅತಿಥಿಗಳಾಗಿ ಬಂದು ಒಂದು ವಾರ ಉಳಿದುಕೊಂಡಿದ್ದರು. ಮಂಜುನಾಥ್ ನನ್ನನ್ನು ನಿತ್ಯ ಜರ್ಮನಿಗೆ ಕರೆದುಕೊಂಡು ಹೋಗುತ್ತಿದ್ದರು, ಅವರ ಜತೆ ಹೋಗಿದ್ದೆ ಅಂದೆ. ಈ ಮೇಲಿನ ಪಟದಲ್ಲಿ ಕಾಣುವ ಮಂಜುನಾಥ್ ಒಳ್ಲೆಯ ಮಾತುಗಾರ, ಮನಬಿಚ್ಚಿ ಕೂರಬೇಕಷ್ಟೆ. ತಾವು ಉಳಿದ ಕಾರಣಕ್ಕೆ ನನಗೆ ಹಣಕೊಟ್ಟು ಉಚಿತವಾಗಿ ತಾವು ಕಂಡ ಜರ್ಮನಿಯ ಕುರಿತು ಚನ್ನಾಗಿ ಹೇಳಿದರು. ಅವರಿಗೆ ಅವರದೇ ಆದ ನಿಲುವಿದೆ, ಹಾಗಾಗಿ ಒಳ್ಳೆ ಮಜಕೊಡುತ್ತಾರೆ. ಅವರ ಸ್ನೇಹಿತನೊಬ್ಬ ಹೇಳಿದನಂತೆ "ಅಲ್ಲ ಕಣಯ್ಯಾ ಹಳ್ಳಿಗಳೆಲ್ಲಾ ಆಧುನಿಕತೆಯ ಸೋಂಕಿಗೆ ಬಲಿಯಾಗಿ, ತಮ್ಮ ಮೂಲ ಸೊಗಡನ್ನು ಕಳೆದುಕೊಂಡು ಮಜ ಕೊಡುತ್ತಿಲ್ಲ ಈಗ" ಎಂದನಂತೆ.ಆಗ ಮಂಜುನಾಥ್ ಹೇಳಿದರಂತೆ "ಅದು ಸರಿ ನೀನು ಹಣಕ್ಕೋಸ್ಕರ ಹಳ್ಳಿ ತೊರೆದು ಇಲ್ಲಿ ಜುಂ ಅಂತ ಕಾರಲ್ಲಿ ಓಡಾಡ್ತೀಯಾ, ಆಧುನಿಕತೆಯ ಎಲ್ಲಾ ಸವಲತ್ತುಗಳನ್ನು ಹೆಂಡತಿ ಮಕ್ಕಳ ಸಮೇತ ಅನುಭವಿಸುತ್ತೀಯಾ, ಆದರೆ ನೀನು ಬಿಟ್ಟು ಬಂದ ಹಳ್ಳಿ ಮಾತ್ರಾ ನಿನ್ನನ್ನು ನಿನ್ನ ನೆನಪನ್ನು ನೂರು ವರ್ಷ ಹಿಂದೆ ಇಟ್ಟಿರಬೇಕು ಅಂತ ಅಂದರೆ ಹೇಗೆ, ಅವರೂ ಅನುಭವಿಸಬೇಕಲ್ಲ." ಎಂದರಂತೆ. ಈಗ ನಿಮಗೂ ಒಂಚೂರು ಹಾಗೆ ಅನ್ನಿಸಿರಬೇಕಲ್ಲ..?

ಏನೋ..ಅಷ್ಟು ಹೇಳಿಬಿಟ್ಟರು ಎಂದರೆ ದೊಡ್ದ ಮಜಾನ? ಎಂಬುದು ನಿಮ್ಮ ಪ್ರಶ್ನೆ. ಆದರೆ ಅಷ್ಟೇ ಅಲ್ಲ ಅವರು ತಾವು ಬೆಳೆದದ್ದು, ಓದಿದ್ದು, ಮದುವೆಯಾದದ್ದು, ಜರ್ಮನಿಯ ಅನುಭವ,ಅಲ್ಲಿಯವರ ವರ್ತನೆ, ಅಲ್ಲಿನ ಸರ್ಕಾರದ ಜನರ ಕಾಳಜಿ ಮುಂತಾದ್ದನ್ನೆಲ್ಲಾ ಮಜವಾಗಿ ಹೇಳಿದರು. ಜತೆಗೆ ಆ ಮನುಷ್ಯ ಎಲ್ಲರೂ ನಮ್ಮ ಸರ್ಕಾರವನ್ನು ದೂಷಿಸುವಂತೆ ದೂಷಿಸಲಿಲ್ಲ, ನಮ್ಮ ಸರ್ಕಾರ ಹೀಗಿರುವುದಕ್ಕೆ ನಾವೆಷ್ಟು ಪಾಲುದಾರರು ಎಂಬುದರ ಕುರಿತು ಒಳನೋಟವನ್ನು ಬೀರಿದರು. "ನಾನು ಸಾಫ್ಟ್ ವೇರ್ ಇಂಜನಿಯರ್ ನಿಜ, ನನ್ನ ಸಂಬಳ ಐದಂಕಿಯದೂ ನಿಜ, ಆದರೆ ನಾನೇನೂ ಮಹಾನ್ ಸಂಶೋಧಕನಲ್ಲ. ಸಂಶೋದನೆಗಳು ಏಕವ್ಯಕ್ತಿಯಿಂದ ಮಾತ್ರಾ ಸಾದ್ಯ, ನಾವೆಲ್ಲ ಗುಂಪಿನಲ್ಲಿ ಯಾರೋ ಕಂಡುಹಿಡಿದದ್ದನ್ನ ರೂಪಾಂತರ ಮಾಡುವ ಜನ ಅಷ್ಟೆ. ಅದೂ ಕೂಡ ನನ್ನ ಬದುಕಿನ ನಿರ್ವಹಣೆ, ನನ್ನ ಮಜಕ್ಕೋಸ್ಕರ......" ಹೀಗೆ ಮುಂದುವರೆದರು. ಒಟ್ಟಿನಲ್ಲಿ ಜರ್ಮನಿಯ ಯಾತ್ರೆ ಮಜವಾಗಿತ್ತು.

ಅವರು ಹೋದ ಮಾರನೇ ದಿನ ಪ್ರಸನ್ನರ ಹತ್ರ ಚಾಟಿಸುತ್ತಿದ್ದೆ. ಏನ್ ನಡೀತಾ ಇದೆ ಎಂದರು ಪ್ರಸನ್ನ. ಇನ್ನೊಂದು ಹೋಂ ಸ್ಟೆ ಕಟ್ಟಡದ ಕೆಲಸ ನಡೀತಾ ಇದೆ, ಅದು ಲಕ್ಷುರಿ ಸ್ಟೇ ಎಂದೆ. ಲಕ್ಷುರಿ ಅಂದ್ರೆ?. ಅದೇ ದಿನಕ್ಕೆ ಐದು ಸಾವಿರ ಒಂದು ರೂಂ ಗೆ ಅಂದೆ. ಅಯ್ಯಪ್ಪಾ ಅದು ನಮಗೆ ನಿಲುಕದ್ದು ಎಂದು ಟೈಪಿಸಿ ನಂತರ " ನಾನು ಆವಾಗ ನಿಮ್ಮಮನೆಗೆ ಬಂದಿದ್ದೆನಲ್ಲ ಅದು ನಿಜವಾದ ಹೋಂ ಸ್ಟೆ, ಒಳ್ಳೆ ಮರೆಯಲಾರದ ಊಟ, ತಿರುಗಾಟ ವಾಹ್, ನಂತರ ಅವರೇ ಬ್ರಾಕೆಟ್ ನಲ್ಲಿ ಅದೂ ಬಿಟ್ಟಿಯಾಗಿ ಎಂದು ಟೈಪಿಸಿ "ಹೇಗೆ ನಾಚಿಕೆ ಬಿಟ್ಟು ಟೈಪಿಸಿದ್ದೇನೆ ಅಂತ ಅಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ನನಗೆ ಅವರು ಬಂದದ್ದು ನೆನಪು ತಿರುಗಿದ್ದು ನೆನಪು ಆದರೆ ಹಣದ ವ್ಯವಹಾರ ನೆನಪಿರಲಿಲ್ಲ. ಅಥವಾ ನನಗೆ ಅಂದು ಹಾಗೆ ಅತಿಥಿಗಳನ್ನು(ಎಲ್ಲೋ ವರ್ಷಕ್ಕೆ ಒಬ್ಬಿಬ್ಬರು) ಹಾಗೆ ನೋಡಿಕೊಳ್ಳಲು ಸಾದ್ಯವೂ ಇತ್ತು, ಅದು ಅವರ ಪಾಲಷ್ಟೆ. ಎಂದು ಬಾಯ್ ಎಂದೆ.

ನನಗೆ ಮಂಜುನಾಥ್ ಆವಾಗಾವಾಗ ನೆನಪಾದಂತೆ ನಾನು ಪ್ರಸನ್ನರಿಗೆ ಆವಾಗಾವಾಗ ಹೀಗೆ ನೆನಪಾಗುತ್ತೇನೆಲ್ಲ ಎಂದು ಖುಷಿಯಾಯಿತು. ಆದರೆ ಆ ನೆನಪುಗಳ ಹಿಂದೆ ಏನೋ ಇದೆ, ಆ "ಏನೋ" ಎಂಬುದರ ಹಿಂದೆ ನೋ ಎನ್ನುತ್ತಾ ಹೋದಾಗ ಒಂದು ತರಹ. ಯಸ್ ಎನ್ನುತ್ತಾ ಹೋದಾಗ ಮತ್ತೊಂದು ತರಹಾ ಎನ್ನುವುದಂತೂ ನಿತ್ಯನೂತನ ಸತ್ಯ.

ಅಂತಿಮವಾಗಿ: ನಮ್ಮೂರಲ್ಲೊಬ್ಬರು "ಯನ್ನತ್ರ ದುಡ್ಡೇ ಇಲ್ಯಾ... ದೇವ್ರಾಣೆ" ಎಂದು ಪ್ರತೀ ವಾಕ್ಯದ ಅಂತ್ಯದಲ್ಲಿ ದೇವ್ರಾಣೆಯನ್ನು ಬಳಸುತ್ತಾರೆ. ಮೊನ್ನೆ ಅವರು ಮೂರು ಲಕ್ಷವನ್ನು ಕಳೆದುಕೊಂಡರು, ವ್ಯವಹಾರವೊಂದರಲ್ಲಿ. ಛೆ ಪಾಪ....!

ಖಂಡಿತಾ ಕೊನೇದು:ಎಂತಾ ಬರೆದೆ ಮಾರಾಯ ಒಂದಕ್ಕೊಂದು ಸಂಬಂಧವೇ ಇಲ್ಲಾ ಅಂತ ಅಂದುಕೊಳ್ಳಬೇಡಿ. ಎಲ್ಲೋ ಏನೋ ಒಂಥರಾ ನಂಟಿದೆ. ಗಂಟು ಬಿಚ್ಚಬೇಕಷ್ಟೆ.

3 comments:

prasca said...

ನೀರ್ಕಜೆ ಹೇಳಿದ್ರು ರಾಘಣ್ಣ ನಿಮ್ಗೆ ಬತ್ತಿ ಇಟ್ಟಿದರೆ ಅಂತ. ಏನಿರ್ಬಹುದು ಎಂದು ಆತುರವಾಗಿ ನೋಡ್ಲಿಕ್ಕೆ ಬಂದೆ.

ನಿಮ್ಮ ಮಾತು ನಿಜ.
ನೀವು ಲಕ್ಷುರಿ ಎಂದಾಗ್ಲೆ ನನಗೂ ನೆನಪಾದದ್ದು ನಾನಂದು ಬಂದಿದ್ದು ಬಿಟ್ಟಿ ಅಲ್ವ ಎಂದು. ಲಕ್ಷುರಿ ಎಂದು ಹೊರಟಾಗಲೇ ಅಲ್ವೆ ಹಣದ ನೆನಪಾಗುವುದು. ಬಿಟ್ಟಿಯನ್ನು (ಬ್ರಾಕೆಟ್ನಲ್ಲಿ) ಹಾಕಿರ್ಲಿಲ್ಲ ನೇರವಾಗಿ ಹಾಕಿದ್ದೆ ;)

ಏನೇ ಆದ್ರೂ ಆ ಹಲಸಿನ ಹಪ್ಪಳದ ಅಪ್ಪಟ ಹವ್ಯಕರ ಮನೆಯ ಊಟ ಮರೆಯಲು ಸಾಧ್ಯವಿಲ್ಲ. ಅಂದು ನಾನು ಕಳುಹಿಸಿದ ಸಣ್ಣ ಮಿಂಚೆಯೊಂದನ್ನು ದಟ್ಸ್ ಕನ್ನಡದ ಶ್ಯಾಂ ಲೇಖನವನ್ನೇ ಮಾಡಿದ್ರೂ ಆಗ್ಲೂ ಕೂಡ ನನಗೆ ಬಿಟ್ಟಿ ಪದ ಹೊಳೆದಿರಲಿಲ್ಲ, ನೀವು ಲಕ್ಷುರಿ ಎಂಬ ಪದಕ್ಕೆ ಒತ್ತು ಕೊಟ್ಟಾಗ ನಾನು ಹಾಗೆ ಹೇಳಿರ್ಬೇಕು ಕ್ಷಮಿಸಿ.

shreeshum said...

"ನೀವು ಲಕ್ಷುರಿ ಎಂಬ ಪದಕ್ಕೆ ಒತ್ತು ಕೊಟ್ಟಾಗ ನಾನು ಹಾಗೆ ಹೇಳಿರ್ಬೇಕು ಕ್ಷಮಿಸಿ."
ಅಯ್ಯೋ ಹೀಗೆಲ್ಲಾ ಯಾಕೆ?, ನೀವು ಏನೇನೋ ಅರ್ಥಮಾಡಿಕೊಂಡುಬಿಟ್ಟಿರಿ. ಕ್ಷಮಿಸೋ ಕೆಲ್ಸ ಇಲ್ಲೆಲ್ಲಿ?, ನೆನಪುಗಳ ವಿಷಯಕ್ಕೆ ವಿಚಾರ ಅಷ್ಟೆ. ನೀರ್ಕಜೆ "ಬತ್ತಿ" ಎಂದು ತಪ್ಪು ತಿಳಿದುಕೊಂಡಿದ್ದಾರೆ. ವಿಷಯ ವಿಚಾರ ಅಷ್ಟೆ.

Gowtham said...

ಛೆ! ೩ ಲಕ್ಷ ಕಲ್ಕೊಂಡ್ರಾ? ಹೋಂ ಸ್ಟೇ ಕೆಲಸ ಮಳೆಯಿಂದ ನಿಂತಿದ್ದ ಈಗ?