Wednesday, July 13, 2011

ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.ಆಷಾಢ ಮಾಸದ ಜಡಿಮಳೆಯಲ್ಲಿ ಮಧ್ಯಾಹ್ನ ಊಟಕ್ಕೆ ನಿಂಬ್ಗಾರ ಇದ್ದರೆ ’ಉಫ್’ ಅದರ ಮಜವೇ ಮಜ. ಕಣ್ಣಲ್ಲಿ ನೀರು ಬಾಯಲ್ಲಿ ನೀರು , ಒಟ್ಟಿನಲ್ಲಿ ಮಜ ಬಿಡಿ. ಆ ನಿಂಬ್ಗಾರಕ್ಕೆ ನಿಜವಾದ್ ರುಚಿಕೊಡುವ ಕೆಲಸ ಮಾಡುವುದು ನಿಂಬೆಹಣ್ಣು. ಈ ನಿಂಬ್ಗಾರ ಎನ್ನುವ ಉಪ್ಪಿನಕಾಯಿ ನೀವು ಈಗಾಗಲೆ ತಿಂದ ಜನ ಆಗಿದ್ದರೆ ಇದನ್ನ ಓದುತ್ತಿದ್ದಂತೆ ಬಾಯಲ್ಲಿ "ಚುಳ್" ಅಂತ ನೀರು ಬಂದಿರುತ್ತದೆ. ನನಗೆ ಹೀಗೆ ಟೈಪಿಸುವಾಗ ಬಾಯಿತುಂಬಾ ಬಂದಾಯ್ತು. ಆಗಲಿ ಈ ಪದಾರ್ಥಕ್ಕೆ ಸಾಸಿವೆ ಕಾಳು, ಸೂಜಿಮೆಣಸು ರುಚಿಕಟ್ಟನ್ನು ಒದಗಿಸುವ ಕೆಲಸ ಮಾಡಿದರೆ ಅದಕ್ಕೊಂದು ವಿಶೇಷ ರುಚಿ ಒದಗಿಸುವ ಕೆಲಸ ಮಾಡುವುದು ಆಷಾಢ ನಿಂಬೆ.
ಅಯ್ಯೋ ಇದ್ಯಾವುದಪ್ಪಾ "ಆಷಾಢನಿಂಬೆ" ಅಂತ ತಲೆಕೆಡಿಸಿಕೊಳ್ಳದಿರಿ. ಇದು ಮಾಮೂಲಿ ನಿಂಬೆಹಣ್ಣು ಆಷಾಢಮಾಸದಲ್ಲಿ ಸಿಕ್ಕಾಪಟ್ಟೆ ಬಿಡುತ್ತದೆ ಅದಕ್ಕೆ ಆ ಹೆಸರು ಕೊಟ್ಟೆ. ಸಾಮಾನ್ಯವಾಗಿ ನಮ್ಮ ತೋಟದ ಬದುವಿನಲ್ಲ್ಲಿ ನಿಂಬೆಗಿಡ ಹಾಕಿರುತ್ತಾರೆ. ಅದು ಈಗ ಗಿಡದತುಂಬಾ ಅರಿಶಿನ ಬಣ್ಣಕ್ಕೆ ತಿರುಗಿಸಿಕೊಂಡ ಹಣ್ಣು ಬಿಟ್ಟಿರುತ್ತದೆ. ಹಾಗೆ ಬಿಟ್ಟದ್ದನ್ನು ಕೊಯ್ಯುವಾಗಲೇ ಒಂಥರಾ ಮಜ. ಪ್ರತೀ ಹಣ್ಣು ಕೊಯ್ದಾಗಲೂ ಅದರಿಂದ ಹೊರಡುವ ಪರಿಮಳ ಇದೆಯಲ್ಲಾ ಅದು ನರನಾಡಿಗಳಿಗೂ ತನ್ನ ಇರುವಿಕೆಯನ್ನು ತಲುಪಿಸುತ್ತದೆ. ತೋಟದಿಂದ ಮನೆಗೆ ತಂದಾಗ ಜಗುಲಿ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದವರು "ಅಯ್ಯೋ ನಿಂಬೆ ಹಣ್ಣು ಕೊಯ್ಕಬಂದ್ಯನಾ... ಏನ್ ಪರಿಮಳ ನೋಡು " ಎನ್ನುವಷ್ಟು ಮಜ ಇರುತ್ತದೆ. ಅದರ ರಸ ಹಿಂಡಿ ಏನೇನೋ ಮಾಡಿ ಒಂದು ವಗ್ಗರಣೆ ಜಡಿದು ಊಟಕ್ಕೆ ಮುಂಚೆ ಬಾಳೆ ತುದಿಯಲ್ಲಿ ಬಡಸಿದಾಗ, ಹಸಿದು ಕುಳಿತ ಜನ ಒಂದು ಚೂರು ತೋರ್ಬೇರಳಿನಲ್ಲಿ ನೆಕ್ಕಿದ ಕೂಡಲೆ ನಾಲಿಗೆ "ಲೊಚ್" ಎಂದು ತನ್ನಷ್ಟಕ್ಕೆ ಲೊಟ್ಟೆ ಹೊಡೆದು ವಾವ್ ಎಂಬ ಉದ್ಘಾರವನ್ನು ಬೇಡವೆಂದರೂ ಹೊರಡಿಸುತ್ತದೆ.
ಅಯ್ಯೋ ನೀವೆಷ್ಟು ಅದೃಷ್ಟವಂತರು, ಹಳ್ಳಿಯ ಜೀವನ ಅದೆಷ್ಟು ಚೆನ್ನ, ಹೀಗೆ ತೋಟಕ್ಕೆ ಹೋಗಿ ಹಾಗೆ ನಳನಳಿಸುವ ನಿಂಬೆ ಹಣ್ಣು ಕೊಯ್ದು ತಂದು ಆಘ್ರಾಣಿಸಿ ಅನುಭವಿಸಬಹುದು, ಹಾಗೂ ಇಲ್ಲಿನ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹಳ್ಳಿಯಲ್ಲಿ ಒಂದೆಕರೆ ತೋಟ ತೆಗೆದುಕೊಂಡು ಹಾಯಾಗಿದ್ದುಬಿಡೋಣ, ಈ ಯಾಂತ್ರಿಕ ಜೀವನ ಬೋರ್ ಬೋರ್" ಎಂದೆಲ್ಲಾ ಅಂದುಕೊಳ್ಳದಿರಿ. ಅಲ್ಲಿನೀವು ಸಂಪಾದಿಸುವ ನೂರನೇ ಒಂದು ಭಾಗದ ಸಂಪಾದನೆ ಇಲ್ಲಿಲ್ಲ. ಆ ಸಂಪಾದನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಅಂಗಡಿಯಲ್ಲಿ ನಿಮಗೆ ಇದರ ಅಪ್ಪನಂತಹ ನಿಂಬೆ ಹಣ್ಣು(ವಯಸ್ಸಾದದ್ದು ಅಂತಲ್ಲ ಮತೆ) ದೊರಕುತ್ತದೆ. ಆ ಹತ್ತು ರೂಪಾಯಿ ಯಾವ ಲೆಕ್ಕ. ಆದರೆ ಇಲ್ಲಿ ಹತ್ತು ರೂಪಾಯಿ(ಸಂಪಾದನೆಯ ವಿಷಯದಲ್ಲಿ) ಯೇ ದೊಡ್ಡ ಲೆಕ್ಕ. ಹಾಗಾಗಿ ನಿಮ್ಮ ಮಜ ನಿಮಗೆ, ನಮ್ಮ ಮಜ ನಮಗೆ. ಪುರ್ಸೊತ್ತಾದರೆ ನಮ್ಮ ಮನೆಗೆ ಬಂದು ಒಂದು ಅನುಭವ ತೆಗೆದುಕೊಳ್ಳಿ. ಅಪರೂಪಕ್ಕೆ ಎಲ್ಲವೂ ಚಂದ ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.

5 comments:

Anonymous said...

ಎಲ್ಲ ಸಂತೋಶಗಳನ್ನೂ ದುಡ್ಡಿಂದಲೇ ಅಳೆಯಲಾಗುವುದಿಲ್ಲ. ೧೦ ರುಪಾಯಿಗೆ ಅಪ್ಪ ಅಜ್ಜನಂತಹ ನಿಂಬೆ ಸಿಕ್ಕರೂ ನಮ್ಮದೇ ತೋಟದಲ್ಲಿ ಸಿಗುವ ಸಂತೊಷ ಸಿಗುವುದಿಲ್ಲ. ನಿಮಗೆ ಸಿಟಿ ಜನರದ್ದು ಆರಾಮು ಅನ್ನಿಸುತ್ತದೆ, ಸಿಟಿಯಲ್ಲಿ ಇದ್ದವರಿಗೆ ನಿಮ್ಮದು ಸುಖ ಅನ್ನಿಸುತ್ತದೆ. ಅಷ್ಟೆ. ನಿಂಬ್ಗಾರಮಯ ಅಂತ ನೀವು ಹಿಂದೊಮ್ಮೆ ಬರೆದಿದ್ದು ನೆನಪಾಯ್ತು. ನಾಲಗೆ ಕಡಿತಾ ಇದೆ.

Shwetha Holla said...

Hmmm..egale oorige hogi amma na hatra madskondu tinnabeku anstha edhe...chanagi barithira...daily oorige hogibandha hage agothe...superb..

Mohan said...

With all that income, city people are getting obese and spending money on diseases. I think agriculture based life style is the best way of living, though it has many problems which are present elsewhere.

Raghu said...

Nice heading..!! Nice article too..

Nimmava,
Raghu

ಸೀತಾರಾಮ. ಕೆ. / SITARAM.K said...

ನಿಂಬೆ ಗಿಂತಾ ಅದರ ಮೇಲಿನ ಲೇಖನ ಓದಿ ವಾ ಎನ್ನಿಸಿತು