Tuesday, August 7, 2012

ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

                "ನೋಡಿ ನಾನು ಹೀಗೆ ಹೇಳುತ್ತಿದ್ದೀನಿ ಅಂತ ನೀನು ತಪ್ಪು ತಿಳಿದುಕೊಳ್ಳಬೇಡ. ಇತ್ತೀಚೆಗೆ ನೀನು ತೀರಾ ಒಂಥರಾ ಆಗುತ್ತಿದ್ದಿ, ಯಾವಾಗಲೂ ಬೇಡದ ಚಿಂತೆ, ಅದೇ ಮಾತು, ಎಲ್ಲಿ ಕಳೆದುಹೋಗಿದ್ದೀ ನೀನು" ಆತ ಹಾಗಂದ ಕ್ಷಣ ನಾನು ಒಮ್ಮೆ ತಬ್ಬಿಬ್ಬಾದೆ. ಹೌದಾ....? ಅಂತ ನನ್ನನ್ನು ನಾನು ಕೇಳಿಕೊಂಡೆ ರಾತ್ರಿ ಮಲಗಿದಾಗ. ಹೌದೇ ಹೌದು ಈ ಒಂದು ವರ್ಷದಲ್ಲಿ ಮನೆ ಕಟ್ಟುವಾಗಿನ ಸಮಯದಲ್ಲಿ ಬಂದ ತರ್ಲೆಗಳ ಬಗ್ಗೆ ಯೋಚಿಸುತ್ತಾ ನಾನು ಅವರಂತೆ ಆಡಲು ಶುರುವಿಟ್ಟುಕೊಂಡಿದ್ದೆ. ನಿಂತಲ್ಲಿ ಕುಂತಲ್ಲಿ ನಾನೂ ತರ್ಲೆ ಅರ್ಜಿ ಹಾಕಬೇಕು ಅವರಿಗೂ ಹೀಗೆ ಆಟ ಆಡಿಸಬೇಕು, ನಾನು ಕಟ್ಟಿಸುತ್ತಿದ್ದ ಸ್ವಂತ ಜಾಗದ ಮನೆಗೆ ಇಷ್ಟೆಲ್ಲಾ ತೊಂದರೆ ಕೊಟ್ಟರು ಅಂತಾದರೆ ಅವರೆಲ್ಲಾ ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡ ಮನೆಗಳಿಗೆ ನಾನೂ ಹೈಕೋರ್ಟ್ ಗೆ ಹೋಗಿ ಸ್ಟೆ ತರಬೇಕು, ಛೆ ಛೇ ಛೇ ಅಂತದ್ದೇ ಆಲೋಚನೆಯಿಂದ ನಿಧಾನ ಇಳಿಯತೊಡಗಿದ್ದೆ. ಆವಾಗಲೇ ಅವನು ಎಚ್ಚರಿಸಿದ, ಅವನೆಂದರೆ ಬೇರೆ ಯಾರೂ ಅಲ್ಲ ನನ್ನೊಳಗಿನ ಅವನು.

                ನೋಡಿ ನಾವೂ ನೀವು ಯಾರು ಎಷ್ಟೇ ಹಾರಾಡಲಿ ಕೂಗಾಡಲಿ ಚೀರಾಡಲಿ ಇಲ್ಲಿ ಒಂದು ಶಿಸ್ತುಬದ್ಧ ನಿಯಮವಿದೆ ನೀತಿಇದೆ. ನಮ್ಮ ಮನಸ್ಸಿಗೆ ಸ್ವಭಾವಕ್ಕೆ ಸುಖದ ನಿದ್ರೆಗೆ ಯಾವುದು ಆರಾಮದಾಯಕವೋ ಆ ಬಿಳಲನ್ನು ಹಿಡಿದುಕೊಂಡು ಜೀವನ ಯಾತ್ರೆ ಮುಗಿಸಬೇಕು. ಗುರಿಯೊಂದು ಗುರುವೊಂದು ಸಮರ್ಪಕವಾಗಿ ಸಿಕ್ಕಲ್ಲಿ ನಿಮ್ಮ ಅದೃಷ್ಟ, ಅಕಸ್ಮಾತ್ ಸಿಗದಿದ್ದಲ್ಲಿ ಗುರಿ ಹುಡುಕಿಕೊಂಡು ಗುರು ಪಡೆದುಕೊಂಡಲ್ಲಿ ಅದು ನಿಮ್ಮ ತಾಕತ್ತು. ಈ ತಾಕತ್ತು ಅದೃಷ್ಟದ ಆಟ ಹೇಗೂ ಸಾಗಬಹುದು. ಕಳೆದ ದಿನಗಳನ್ನು ಪದೇ ಪದೇ ಹಿಂತಿರುಗಿ ನೋಡಿದಲ್ಲಿ ಅಲ್ಲಿ ಸ್ಪಷ್ಟವಾಗಿ ನಮ್ಮ ತಪ್ಪುಗಳು ಗೋಚರಿಸತೊಡಗಿದರೆ ಮುಂದಿನ ದಾರಿ ಸುಗಮ. ಮೊನ್ನೆ ಯೆಲ್ಲೋ ಓದಿದೆ, ಕಳೆದ ಕಾಲ ರದ್ದಿ ಪೇಪರ್-ವರ್ತಮಾನ ನ್ಯೂಸ್ ಪೇಪರ್-ಭವಿಷ್ಯ ಖಾಲಿ ಪೇಪರ್. ವಾವ್ ಚನ್ನಾಗಿದೆ ಅಲ್ಲವೇ?. ಖಾಲಿ ಪೇಪರ್ ನಲ್ಲಿ ನಮ್ಮ ಭವಿಷ್ಯವನ್ನು ಬರೆಯುವ ಯತ್ನದಲ್ಲಿ ಹಿಂದಿನದು ಸಹಾಯಕ್ಕೆ ಬರಬೇಕು ಆವಾಗ ಸ್ವಲ್ಪ ಮಜ ಅನುಭವಿಸಿಕೊಳ್ಳಬಹುದು.
                "ಅಲ್ಲಾ ಗುರು... ಏನಂತ ಬರೆಯುತ್ತಿದ್ದೀಯಾ..? ನನಗಂತೂ ತಲೆ ಬುಡ ಅರ್ಥವಾಗುತ್ತಿಲ್ಲ" ಅಂತ ಪಾಪ ನೀವು ಲೊಚಗುಟ್ಟುತ್ತಿದ್ದೀರಿ ಅಂತ ಗೊತ್ತು. ಈಗ ನಿಮಗೆ ನನ್ನ ಬರಹ ಅರ್ಥವಾಗುತ್ತಿಲ್ಲ. ಮುಂದೊಂದು ದಿವಸ ಅರ್ಥವಾಗಬಹುದು, ಓದಿದಿರಿ ತಾನೆ?. ನಿಮ್ಮ ಸುಪ್ತಮನಸ್ಸಿನಲ್ಲಿ ಸ್ಟಾಕ್ ಆಗಿದೆ, ಇನ್ನು ನಿಶ್ಚಿಂತೆಯಿಂದ ನಿಮ್ಮಕೆಲಸದಲ್ಲಿ ತೊಡಗಿ. ನಾನು ಇನ್ನೊಂದೆರಡು ಸಾಲು ಕುಟ್ಟಿ ಮುಗಿಸುತ್ತೇನೆ.
               ಈ ಪಟದಲ್ಲಿ ಹೂವಿನ ಚಿತ್ರವೊಂದಿದೆ. ಆ ಹೂವಿಗೆ ಚಂದದ ಪರಿಮಳವೊಂದಿದೆ. ಆ ಪರಿಮಳ ಆಸ್ವಾದಿಸಲು ನಮಗೆ ನಿಮಗೆ ಮೂಗಿದೆ. ಪಟಪಟ ಮಿಟುಕಿಸುತ್ತಾ ಹೂವ ನೋಡಲು ಸುಂದರ ಎರಡು ಕಣ್ಣಿದೆ, ಹೂವ ಕೊಯ್ದು ಮೂಗಿನ ಬಳಿ ಒಡ್ಡಲು ಕೈಯಿದೆ, ಗಿಡದ ಬಳಿ ಸಾಗಲು ಕಾಲಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲಾ ಹತ್ತಿಪ್ಪತ್ತು ನಿಮಿಷ ಬೇಕಾಬಿಟ್ಟಿ ಸಮಯ ಬಿದ್ದಿದೆ. ಆದರೆ ನಾವು ಆಘ್ರಾಣಿಸುವ ಕೆಲಸ ಮರೆತಿದ್ದೇವೆ. ರಸ್ತೆಯಲ್ಲಿ ಸಾಗುತ್ತಿದ್ದಾಗ ಅದಾಗಿಯೇ ಮೂಗಿಗೆ ಬಂದು ಬಡಿಯುವ ಗಬ್ಬು ನಾತವನ್ನು ಸೇದುವ ಮಟ್ಟಿಗೆ ಮೂಗನ್ನು ಬಳಸಿಕೊಳ್ಳುತ್ತಿದ್ದೇವೆ. ಇಲ್ಲ ನನ್ನನ್ನೂ ಸೇರಿದಂತೆ ನೀವೂ ಬದಲಾಗಬೇಕಿದೆ. ಭಗವಂತ ಕೊಟ್ಟ ಎಲ್ಲಾ ಅವಯವಗಳನ್ನು ನಾವು ಉಪಯೋಗಿಸಬೇಕಿದೆ. ಅದು ಕೂಡ ಸದುಪಯೋಗಕ್ಕೆ ಮಾತ್ರಾ . ಆಗಲೇ ಸಾರ್ಥಕ. ಇಲ್ಲದಿದ್ದಲ್ಲಿ ನಿರರ್ಥಕ.

1 comment:

shridhar said...

Nija .. Badalaagabekide ...
Olleya kivi maatu .. chennagide ...