Friday, November 2, 2012

ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

"ಬಾಲ್ಯ" ವಾವ್ ಅದೆರಡು ಅಕ್ಷರದಲ್ಲಿಯೇ ಮಜ ಇದೆ. ಬಡತನವಿರಲಿ, ಸಿರಿತನವಿರಲಿ ಇರಲಿ ಇಲ್ಲದಿರಲಿ ಬಾಲ್ಯ ಬಾಲ್ಯವೇ. ಅಲ್ಲೊಂದಿಷ್ಟು ಸುಮಧುರ ನೆನಪುಗಳು ನಮ್ಮ ನೆನಪಿನ ಕೋಶದಲ್ಲಿ ದಾಖಲಿಸುತ್ತವೆ. ಅದನ್ನು ಬೇಕೆಂದಾಗ ನೆನಪಿಗೆ ತಂದುಕೊಂಡು ಮಜ ಅನುಭವಿಸಬಹುದು. ಹಿಡಿದ-ಹಿಡಿಯದ ಮೀನು, ಕೆಸರಾಟ, ಮರಳು ಗುಡ್ಡೆಯಲ್ಲಿ ಗುಬ್ಬಿ ಹುಳ ಅರಸಿದ್ದು, ಗುಮ್ಮ ಅಂತ ಹೆದರಿಕೊಂಡಿದ್ದು, ಪಾಪದ ಕೆಂಪು ಪೀಟಿಯ ಅಂಡಿಗೆ ದಾರ ಕಟ್ಟಿ ಹೆಲಿಕ್ಯಾಪ್ಟರ್ ಅಂತ ಆಟ ಆಡಿದ್ದು, ಅದೊಂದು ಜೀವಿ ಎಂಬ ಅರಿವಿಲ್ಲದೇ ಅದಕ್ಕೆ ಹಿಂಸೆ ನೀಡಿ ಮಜ ಅನುಭವಿಸಿದ್ದು, ಹಸಿರುಳ್ಳೆ ಹಾವಿನ ಬಾಲ ಹಿಡಿದು ಗರಗರ ತಿರುಗಿಸಿ ಹಾರಿ ಬಿಟ್ಟಿದ್ದು, ಬಸ್ಸಿಗೆ ಕಲ್ಲು ಹೊಡೆದದ್ದು, ಹೀಗೆ ಒಂದಾ ಎರಡಾ..? ಸಾಲು ಸಾಲು ನೆನಪುಗಳು ಮುಗುಳ್ನಗೆ ಮೂಡಲು ಸಹಕರಿಸುತ್ತವೆ. ಅದು ಸರಿ ಅದೇ ತರಹದ ಹುಡುಗಾಟಿಕೆಯನ್ನು ಈಗ ನಿಮ್ಮ ಮಕ್ಕಳು ಮಾಡಲು ಹೊರಟಿದ್ದಾರೆ, ಮತ್ತೇಕೆ ಅವನ್ನು ಗದರಿಸುತ್ತೀರಿ, ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

2 comments:

Muthu B'lore said...

ಬಾಲ್ಯದ ಅನುಭೂತಿಯೇ ಅಂತಹದು ಕನಸುಗಳನ್ನು ಕಟ್ಟಿಕೊಡಬಲ್ಲ ಆಸೆಗಳ ಪುಕ್ಕಗಳನ್ನು ಸಿಕ್ಕಿಸಬಲ್ಲ ನಾವಲ್ಲದ ನಮ್ಮನ್ನು ನಮಗೇ ಒಪ್ಪಿಸಿಕೊಟ್ಟು ಅದರಿಂದ ಸಿಗುವ ಲವಲವಿಕೆಯನ್ನು ಎಂದಿನ ಬದುಕಿಗೆ ತುಂಬಿಸಿ ಕೊಡುವಂತದ್ದು. ಜೀವವನಲ್ಲಿ ಬಾಲ್ಯದ ಸುಂದರ ನೆನಪುಗಳು ಬಹಳ ಬೇಗ ಮಾಸಿಹೋಗುವನ್ತದ್ದಲ್ಲ. ಅದು ಸದಾ ನವನವೀನ. ಅಳಿಸದ ಮಧುರ ಭಾವಗೀತ. ಬಾಲ್ಯ ಹಲವಾವು ಕಾರಣಗಳಿಗಾಗಿ ಅತಿ ಮುಖ್ಯವಾದುದು. ಆಗ ನೂರೆಂಟು ಕನಸುಗಳು, ಹಾಗು ಗುರಿಗಳು. ಏನೆಲ್ಲಾ ವಿಷಯ ಯೋಚಿಸುವ, ಆನಂದಿಸುವ ಅದ್ಬುತ ಕಲ್ಪನಾ ಶಕ್ತಿ. ಬಾಲ್ಯದಲ್ಲಿ ಕಲಿತದ್ದು ಮನದಲ್ಲಿ ಚಿರಕಾಲ ನೆನಪಿರುತ್ತದೆ ಬದುಕಿನ ಒಟ್ಟು ಕಾಲಮಾನದಲ್ಲಿನ ಆನಂದದ ಘಳಿಗೆಗಳಲ್ಲಿ ಬಾಲ್ಯದ್ದೇ ಸಿಂಹ ಪಾಲು.

Unknown said...

ನೆನಪು ಬೇಡ ಬೇಡವೆಂದರೂ ಮನಸಿಗೆ ದಾಳಿ ಇಡುತ್ತಿವೆ...ಕಾರಣ ಇನ್ನು ನಾವೆಂದೂ ಆ ದಿನಗಳನ್ನು ಅನುಭವಿಸಲು ಸಾಧ್ಯವೇ ಇಲ್ಲ... ಕಾಲ ಉರುಳಿ ಹೊಗಿದೆ... ದಶಕಗಳು ಸಂದಿವೆ... ಆದರೂ ಅಚ್ಚಳಿಯದೆ ಮನಸಿನಲ್ಲಿ ಉಳಿದಿದೆ... ನೆನಪುಗಳು... ಹೌದು ನೆನಪುಗಳ ಮಾತು ಮಧುರ... ಆ ನೆನಪುಗಳು ಎಂದೆಂದಿಗೂ ಅಮರ-ಮಧುರ... ಭಾವೆನಗಳು ಮಧುರ... ಮಾತು ಮಧುರ... ಅನುಭವಗಳು ಮಧುರ.. ಆದರೆ ಇಂದಿಗೆ ಅವೆಲ್ಲವೂ ಕೇವಲ ನೆನಪು... ಮನದಲ್ಲುಳಿಯುವ ಅಚ್ಚಳಿಯದ ನೆನಪು... ... 

ಮತ್ತೆ ಮತ್ತೆ ನೆನಪಾಗುತ್ತಿರುವ ಬಾಲ್ಯದ ದಿನಗಳು...
ಶುಕ್ರವಾರ ಬಂದಾಕ್ಷಣ ಸಂಜೆಯಾಗುವುದನ್ನೇ ಕಾಯುವ ಮನಸ್ಸು... ಶನಿವಾರ ಭಾನುವಾರದ ರಜೆ ಸವಿಯುವ ಭರಾಟೆ...ಗೆಳೆಯ ಗೆಳತಿಯರಲ್ಲಿ ರಜೆಯ ಮಜಾ ವರ್ಣಿಸುವ ಸೊಗಸು... ರಜೆಯ ದಿನಗಳಲ್ಲಿ ಅಜ್ಜನ ಮನೆಯ ಪಯಣ... ನೆಂಟರಿಷ್ಟರೊಂದಿಗೆ ಕಳೆದ ದಿನಗಳು... ಬೆಟ್ಟದಿಂದ ಬಿದ್ದು ಕೈ-ಕಾಲು ಮರಿದು ಮನೆಯಲ್ಲಿ ಬೈಯಿಸಿಕೊಂಡಿದ್ದು, ಅಡುಗೆ ಮನೆ ಆಟಗಳು, ಹುಡುಗರು ಕ್ರಿಕೆಟ್ ಆಡುತ್ತರೆಂದು ನಾನು ಆಡಿ ಜಾರಿ ಬಿದ್ದಿದ್ದು... ಅಕ್ಕಂದಿರೊಂದಿಗೆ ಜಗಳವಾಡಿದರೂ ನಂತರ ಒಂದಾದ ಕ್ಷಣ.... ರಾಜ್ಯ ಮಟ್ಟದ ಕಬಡಿ ಕೋಕೋ ಪಂದ್ಯದಲ್ಲಿ ಜಯಗಳಿಸಿದಾಗ ನನ್ನ ತಾಯಿ-ತಂದೆ ಕಣ್ಣಲ್ಲಿ ಬಂದ ಆನಂದ ಬಾಷ್ಪ... ಮನೆಯಂಗಳದಲ್ಲಿ ಬಂದ ಗುಬ್ಬಿ ಮರಿಗಳು ಕೈಗೆ ಸಿಗದಿದ್ದಾಗ ಅದುಬೇಕು ಎಂದು ಹಠ ಮಾಡಿದ್ದು... ಮಳೆಗಾಲದಲ್ಲಿ ಮಳೆಯಲ್ಲಿ ನೆನೆದಿದ್ದು....
ಮನೆಮಂದಿಯೊಂದಿಗೆ ಆಚರಿಸಿ ಹಬ್ಬ ಹರಿದಿನ...ಸಹ ಭೋಜನ, ತೋಟದಲ್ಲೊಂದಷ್ಟು ಸುತ್ತಾಟ... ಕೆಲಸ... ಬೆಟ್ಟ-ಗುಡ್ಡ ಕಾಡು ಮೇಡು ಸುತ್ತಿನ ಸಂತಸದ ಕ್ಷಣ, ಮಳೆಗಾಲದಲ್ಲಿ ಸುರಿದ ಮಳೆನೀರಿಗೆ ತಡೆಯೊಡ್ಡುವ ವ್ಯರ್ಥ ಪ್ರಯತ್ನ... ಪುಸ್ತಕ ಹರಿದು ದೋಣಿ ಮಾಡಿ ಪೆಟ್ಟುತಿಂದ ಆ ಕ್ಷಣ...ಶಾಲೆಯ ಬಿಸಿಯೂಟ...ಬಿಸಿಯೂಟದ ತಯಾರಿ... ಲೆಕ್ಕದ ಮಾಸ್ಟರರ ಪೆಟ್ಟಿನ ರುಚಿ, ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆ... ವಾರ್ಷಿಕ ರಜೆಯ ಸಂಭ್ರಮ ಛೇ...ಇದೆಲ್ಲ ಇಂದು ಮತ್ತೆ ಬೇಕೆಂದರೆ ಸಿಗಲು ಸಾಧ್ಯವೇ...ಬಾಲ್ಯದ ಅನುಭವಗಳು ಇಂದು ಕೇವಲ ನೆನಪು ಮಾತ್ರ...... 

ಆದರೆ ಆ ಬಾಲ್ಯದ ಖುಷಿ ಇಗ ಎಲ್ಲೋ ಮಾಯವಾಯಿತು ......?
ಇದು ಯಾಂತ್ರಿಕ ಜೀವನ... ಎಲ್ಲಿ ನೋಡಿದರಲ್ಲಿ ಕರ್ಕಶ... ಮನದಲ್ಲೂ ಹೊರಗೂ... ಎಂಬಂತೆ... ಕ್ಷಣ ಕ್ಷಣವೂ ನೆಮ್ಮದಿಯಿಲ್ಲದ ಬದುಕು... ಬದುಕಬೇಕೆಂದು ಬದುಕುವ ಬದುಕು... ಉಸಿರು ನಿಲ್ಲುವ ತನಕ ಬದುಕುವ ಚಟ.... ಇಲ್ಲಿ ಹೊರನೋಟಕ್ಕೆ ಜೀವವಿದೆ. ಆದರೆ ಜೀವಂತಿಕೆಯಿಲ್ಲ...ಎಲ್ಲವೂ ಯಾಂತ್ರೀಕೃತ... ಊಟ, ತಿಂಡಿ, ಮಾತುಕತೆ, ವೃತ್ತಿ... ದೈನಂದಿನ ಕೆಲಸ ಕಾರ್ಯ ಎಲ್ಲವೂ... ಗಡಿಯಾರದ ಮುಳ್ಳು, ಹಂತ ಹಂತ ತಲುಪುತ್ತಿದ್ದಂತೆ ನಾವೂ ಒಂದೊಂದು ಕಾರ್ಯವನ್ನು ಆ ಸಮಯಕ್ಕನುಗುಣವಾಗಿ ಮಾಡುವ ರೀತಿ... ಅಲ್ಲಿ ಯಾವೊಂದು ಜೀವಂತಿಯೇ ಇಲ್ಲವೇನೋ ಎಂಬಂತಾಗುತ್ತಿದೆ.
ಬೆಳಗ್ಗೇಳುವುದೂ ಒಂದು ಯಾಂತ್ರಿಕತೆ... ಅಲರಾಂ ಬಡಿದಾಕ್ಷಣ ಬೆಡ್ ನಿಂದೇಳುವುದು...ಹರಿಬರಿಯಲ್ಲಿ ನಿತ್ಯದ ಕಾರ್ಯ ಮುಗಿಸು... ಮನೆಯವರಿಗೆ ತಿಂಡಿಯ ಶಾಸ್ತ್ರ... ಮಧ್ಯಾಹ್ನ ಅಡುಗೆ ಮುಗಿಸಿ.. ಬೆಗನೆ ಹೊರಡುವ ಭರಾಟೆ... ಅಲ್ಲಿ ಅಪ್ಪ ಅಮ್ಮ..... ಮನೆ ಮನ ತುಂಬಿದ ಮಾತುಗಳಿಗೆ ಅವಕಾಶವೇ ಇಲ್ಲ... ಜೊತೆಯಾಗಿ ಕುಳಿತು ಹರಟೆಹೊಡೆಯುವ ಪ್ರವೃತ್ತಿಯಂತು ಇಲ್ಲವೇ ಇಲ್ಲ...ಕಾರಣ ಸಮಯದ ಅಭಾವ...

ಮತ್ತೆ ಮತ್ತೆ ಅದೇ ಕಚೇರಿ...ಅದೇ ಕೆಲಸದೊತ್ತಡ...ಮಧ್ಯಾಹ್ನದ ಊಟಕ್ಕೂ ಸಿಗದ ಸಮಯ... ಕೆಲಸವಿಲ್ಲದಿದ್ದರೂ ಕೆಲಸವಿದ್ದಂತೆ ನಟಿಸುವ ಸುತ್ತಮುತ್ತಲಿನ ಜನರು.... ಅದೂ ಒಂದು ರೀತಿಯ ಬ್ಯುಸಿ ಜೀವನ... 

ಅಗತ್ಯವಿದ್ದರೂ ಇಲ್ಲದಿದ್ದರೂ ರಿಂಗಣಿಸುವ ಫೋನುಗಳು... ಕೆಲಸವಿದ್ದರೂ ಇಲ್ಲದಿದ್ದರೂ ಪರದೆಯ ಮುಂದೆ ಕುಳಿತು...ಬೇಕಾದ್ದನ್ನು ಬೇಡವಾದ್ದನ್ನು ನೋಡುವ , ನೋಡುವಂತೆ ಮಾಡುವ ಇಂದಿನ ಕಂಪ್ಯೂಟರ್... ಟಚ್ ಸ್ಕ್ರೀನ್, ಐ ಪ್ಯಾಡ್ ಭರಾಟೆ, ಇಷ್ಟವಿಲ್ಲದಿದ್ದರೂ ಇತರರೆದುರು ತಾನೇನೂ ಕಮ್ಮಿಯಿಲ್ಲ ಎಂಬಂತೆ ಬ್ಲೂ ಟೂತ್ ಸಿಕ್ಕಿಸಿಕೊಂಡು ನಡೆದಾಡುವ ಠೀವಿ... ಇತರರೆದುರು ಶೋಕೀ ಜೀವನ...ಇದುವೇ ಇಂದಿನ ಜೀವನ ...