Tuesday, February 26, 2013

ಯಂತ್ರದ ಮಂತ್ರ ಪಠಿಸಿ ಯಶಸ್ವಿಯಾದ ಕೃಷಿಕಇತ್ತೀಚಿನ ದಿವಸಗಳಲ್ಲಿ ಕೃಷಿಕರ ಸಾಮೂಹಿಕ ಕೊರಗು ಎಂದರೆ ಕೃಷಿಕಾರ್ಮಿಕರ ಕೊರತೆ, ದುಬಾರಿ ಕೂಲಿ ಒಂದೆಡೆಯಾದರೆ, ಕೃಷಿಕಾರ್ಮಿಕರೇ ಇಲ್ಲದಿರುವುದು ಇನ್ನೊಂದೆಡೆ. ಈ ನೆಪವನ್ನೊಡ್ಡಿ ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ಕೂಗು ಎಲ್ಲಡೆ. ಆದರೆ ತಂತ್ರಜ್ಞಾನ ಅತ್ಯುತ್ತಮವಾಗಿರುವ ಇಂದಿನ ದಿನಗಳಲ್ಲಿ ಯಂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಕೂಲಿ ಕಾರ್ಮಿಕರ ಕೊರತೆ ಸಮಸ್ಯೆಯೇ ಅಲ್ಲ ಅದು ಕಳ್ಳನಿಗೊಂದು ಪಿಳ್ಳೆ ನೆವ ಅಷ್ಟೆ ಎನ್ನುತ್ತಾ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಸ್ವಾವಲಂಬಿಯಾಗಿ, ಎಂಟು ಎಕರೆ ತೋಟ ನಳನಳಿಸುವಂತೆ, ಕೃಷಿಕರಲ್ಲದವರೂ ಬೆಕ್ಕಸಬೆರಗಾಗುವಂತೆ ಮಾಡಿ ತೋರಿಸಿದ್ದಾರೆ ಸಾಗರ ತಾಲ್ಲೂಕು ಸಸರವಳ್ಳಿ ಗ್ರಾಮದ ಸಮೀದ ಊರಿನ ಕಾನುತೋಟದ ಗುರು.
ಸಾಗರದಿಂದ ೧೨ ಕಿಲೋಮೀಟರ್ ದೂರದ ತಾಳಗುಪ್ಪ ಹೊಬಳಿಯಲ್ಲಿರುವ ಕಾನುತೋಟ ಎಂಬುದು ಒಂಟಿಮನೆಯ ಊರು. ಶೇಷಗಿರಿಯಪ್ಪನವರ ಶ್ರಮದಿಂದ ಮೂಡಿದ ಎಂಟು ಎಕರೆ ಅವರ ಹಿರಿಯ ಮಗನಾದ ಗುರುವಿನ ಉಸ್ತುವಾರಿಗೆ ಈಗ ಹದಿನೈದು ವರ್ಷಗಳ ಹಿಂದೆ ಸಿಕ್ಕಿತು. ದೂರದ ಗುಡ್ಡದಿಂದ ಹರಿದು ಬರುವ ಅಬ್ಬಿ ನೀರಿನ ಸಮೃದ್ಧಿ ಒಂದೆಡೆಯಾದರೆ ಒಂಟಿಮನೆಯ ಕಾರಣದಿಂದ ರಸ್ತೆ, ವಿದ್ಯುತ್,ನಂತಹ ಸಾಮೂಹಿಕ ಸವಲತ್ತುಗಳಿಗೆ ಏಕಾಂಗಿ ಹೋರಾಟ ಸಮಸ್ಯೆ ಇನ್ನೊಂದೆಡೆ. ಇವನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ ಗುರು ಯಶಸ್ವೀ ಕೃಷಿಕ ಎನಿಸಿಕೊಂಡಿದ್ದಾರೆ. ಗುರುರವರ ಕೃಷಿಯಲ್ಲಿನ ಯಾಂತ್ರೀಕರಣದ ಮಜಲು ಮನೆಯ ವಿದ್ಯುತ್ ದೀಪದಿಂದಲೇ ಆರಂಭಗೊಳ್ಳುತ್ತದೆ.
ಅಬ್ಬಿ ನೀರಿನ ಜನರೇಟರ್: ವಿದ್ಯುತ್ ಸಮಸ್ಯೆ ಬಹುವಾಗಿ ಎಲ್ಲರನ್ನು ಕಾಡುವ ಸಂಗತಿ. ದಿನದ ಬಹುಪಾಲು ಸಮಯ ಪವರ್ ಕಟ್ ಎಂಬ ಪೆಡಂಬೂತಕ್ಕೆ ನಲುಗದವರಿಲ್ಲ. ಆದರೆ ಕಾನು ತೋಟದ ಗುರುರವರಿಗೆ ಈ ಸಮಸ್ಯೆ ಕಾಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಕಾರಣ ಇವರು ತಮ್ಮದೇ ಸ್ವಂತ ವಿದ್ಯುತ್ ಉತ್ಪಾದನಾ ಘಟಕ ಹೊಂದಿದ್ದಾರೆ. ಗುಡ್ಡದಿಂದ ಇಳಿದು ತೋಟದಲ್ಲಿ ಹರಿದು ಹೊಳೆ ಸೇರುತ್ತಿದ್ದ ಅಬ್ಬಿನೀರಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪೈಪ್ ಹಾಕಿಸಿ ಮನೆಯ ಪಕ್ಕದಲ್ಲಿ ಜನರೇಟರ್ ಒಂದನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಮನೆಯಲ್ಲಿ ಪವರ್ ಕಟ್ ಪ್ರಶ್ನೆ ಇಲ್ಲ. ವಿದ್ಯುತ್ ನಲ್ಲಿ ಸ್ವಾವಲಂಬಿಯಾದರೆ ಕೃಷಿ ಕೈಂಕರ್ಯಗಳಿಗೆ ಯಂತ್ರಬಳಸುವ ಬಹುದೊಡ್ಡ ಸಮಸ್ಯೆ ನಿವಾರಣೆಯಾದಂತೆ ಎಂಬುದು ಗುರುರವರ ಅನುಭವವೇದ್ಯ ಮಾತು.
ಕೃಷಿಉಪಯೋಗಿ ಯಂತ್ರಗಳು: ಅಡಿಕೆ ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ, ಅಡಿಕೆ ಸುಲಿಯುವ ಯಂತ್ರ, ಮೆಣಸಿನ ಕಾಳು ಬೇರ್ಪಡಿಸುವ ಯಂತ್ರ, ಅಡಿಕೆ ಬೇಯಿಸಲು ರಾಟೆ,ಕೊಟ್ಟಿಗೆ ತೊಳೆಯುವ ಯಂತ್ರ ಹೀಗೆ ಸಾಲು ಸಾಲು ಯಂತ್ರಗಳ ಬಳಕೆ ಇಲ್ಲಿ ಕಾಣಸಿಗುತ್ತವೆ. ಒಂದೆರಡು ಕೃಷಿ ಕಾರ್ಮಿಕರ ಜತೆ ಸೇರಿಕೊಂಡ ಗುರು ಇವೆಲ್ಲವನ್ನೂ ನಿಭಾಯಿಸುತ್ತಾರೆ. ಇದರಿಂದಾಗಿ ಕೂಲಿಕಾರ್ಮಿಕರ ಅವಲಂಬನೆ ತಪ್ಪುವುದರ ಜತೆ ಕೃಷಿ ಕೆಲಸಗಳು ಸಮಯಕ್ಕೆ ಸರಿಯಾಗಿ ಸಾಗುತ್ತವೆ ಎನ್ನುತ್ತಾರೆ.
ಕಾಳುಮೆಣಸಿನ ಕೃಷಿ: ಮಲೆನಾಡಿನಲ್ಲಿ ಅಡಿಕೆ ಕೃಷಿ ಸಾಮಾನ್ಯ. ಕಾಳುಮೆಣಸಿನ ಕೃಷಿಯನ್ನು ಬಳ್ಳಿಯ ಕಟ್ಟೆ ರೋಗದ ಕಾರಣದಿಂದ ಬಹುಪಾಲು ಕೃಷಿಕರು ಕೈಬಿಟ್ಟಿದ್ದಾರೆ. ಗುರು ರವರು ಉಪಬೆಳೆಯಾಗಿ ಕಾಳುಮೆಣಸಿನ ಕೃಷಿಗೆ ಒತ್ತು ನೀಡಿದ್ದಾರೆ, ಪಣಿಯೂರು, ಕೊಟ್ಟಾಯಾಂ ಕರಿಮುಂಡ, ಕೇರಳ ಕರಿಮುಂಡ, ಮುಂತಾದ ನಾಲ್ಕಾರು ತಳಿಯ ಅಭಿವೃದ್ಧಿಗೆ ಆದ್ಯತೆ ನೀಡಿ ವರ್ಷವೊಂದಕ್ಕೆ ೮ ರಿಂದ ಹತ್ತು ಕ್ವಿಂಟಾಲ್ ಕಾಳು ಮೆಣಸು ಬೆಳೆಯುತ್ತಾರೆ. ಮೆಣಸಿನ ಬಳ್ಳಿಗೆ ಕಟ್ಟೆ ರೋಗ ಇರುವುದು ನಿಜವಾದರೂ ಪ್ರತೀ ವರ್ಷ ಹೆಚ್ಚು ಬಳ್ಳಿಗಳನ್ನು ನಾಟಿ ಮಾಡುವುದರ ಮೂಲಕ ಹಾಗೂ ಅಡಿಕೆ ಮರದ ಬುಡವನ್ನು ಗುದ್ದಲಿಯಿಂದ ಅಗೆಯುವುದನ್ನು ನಿಲ್ಲಿಸುವುದರ ಮೂಲಕ ರೋಗ ಹತೋಟಿ ಸಾದ್ಯ ಎನ್ನುತ್ತಾರೆ ಗುರು.
ದ್ರವ ಗೊಬ್ಬರ: ಅಡಿಕೆ ತೋಟಕ್ಕೆ ಹೆಚ್ಚು ಕಾರ್ಮಿಕರನ್ನು ಬೇಡುವ ಕೆಲಸ ಗೊಬ್ಬರ ಪೂರೈಕೆ ಹಾಗೂ ಮರದಿಂದ ಇಳಿಸಿದ ಅಡಿಕೆ ಗೊನೆಗಳ ಸಾಗಾಟ. ಇವೆರಡಕ್ಕೂ ಗುರುರವರು ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ದ್ರವರೂಪಿ ಗೊಬ್ಬರದ ಟ್ಯಾಂಕ್ ಮಾಡಿಸಿಕೊಂಡಿರುವ ಗುರುರವರು ತಮ್ಮ ತೋಟದ ಎಲ್ಲಾ ಮರಗಳಿಗೂ ಪೈಪ್ ಮುಖಾಂತರ ಗೊಬ್ಬರ ಹರಿಯಬಿಡುತ್ತಾರೆ. ಇದರಿಂದಾಗಿ ಅಡಿಕೆ ಮರಗಳ ಬುಡ ಬಿಡಿಸುವ ಕೆಲಸವೂ ಇಲ್ಲದರ ಜತೆಗೆ ಹತಾರಗಳ ಕಬ್ಬಿಣದಿಂದ ಮರದ ಬೇರುಗಳು ಹಾನಿಗೊಳಗಾಗುವುದೂ ಇಲ್ಲ. ಅಡಿಕೆ ಗೊನೆಗಳ ಸಾಗಾಟಕ್ಕೆ ಅಡಿಕೆತೋಟದೊಳಗೆ ತೆರೆದ ಜೀಪ್ ಓಡಾಡುವಂತಹ ರಸ್ತೆಯನ್ನು ನಿರ್ಮಿಸಿಕೊಂಡಿದ್ದು ಇದರ ಮೂಲಕ ಅಡಿಕೆಗೊನೆಗಳ ಸಾಗಾಟವನ್ನು ಮಾಡುತ್ತಾರೆ. ಇಷ್ಟೆಲ್ಲಾ ಯಂತ್ರ ಬಳಕೆಯಿಂದ ಒಮ್ಮೊಮ್ಮೆ ದುರಸ್ತಿ ಕಾರ್ಯದ ಸಮಸ್ಯೆ ಇರುವುದು ನಿಜವಾದರೂ ಬಹುಪಾಲು ಒಳ್ಳಯದೇ ಆಗುತ್ತದೆ ಎನ್ನುತ್ತಾರೆ ಗುರು
ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಯಶಸ್ವೀ ಕೃಷಿಕ ಜೀವನ ನಡೆಸುತ್ತಿರುವ ಗುರುರವರಿಗೆ ಪತ್ನಿ ಹೇಮಾ ಸಾಥ್ ನೀಡುತ್ತಿದ್ದಾರೆ.  ಕೃಷಿಗೆ ಪೂರಕವಾಗಿ ಒಗ್ಗಿ ಆಸಕ್ತಿಯಿಂದ ಪತಿಗೆ ಪೂರಕವಾಗಿ ನಡೆದುಕೊಂಡು ಕೃಷಿಕತನದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮನೆಯ ಸುತ್ತಮುತ್ತಲಿನ ಜಾಗಗಳಲ್ಲಿ ಮನೆ ಬಳೆಕೆಯ ಎಲ್ಲಾ ತರಕಾರಿಯನ್ನು ತಾವೇ ಖುದ್ದು ಬೆಳೆದುಕೊಳ್ಳುತ್ತಿದ್ದಾರೆ. ೭೫ ವರ್ಷದ ತಂದೆ ಶೇಷಗಿರಿಯಪ್ಪನವರು ಸ್ವಂತ ಆಸಕ್ತಿಯಿಂದ ಪುಸ್ತಕಗಳನ್ನು ಓದಿ ಕಂದಾಯ ಇಲಾಖೆಯ ಎಲ್ಲಾ ಕಾನೂನುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಕೃಷಿಕ ಕೇವಲ ಹೊಲದಲ್ಲಿ ಮಾತ್ರಾ ದುಡಿಯದೆ, ತನಗೆ ಸರ್ಕಾರದಿಂದ ಬರಬೇಕಾದ ಸವಲತ್ತುಗಳನ್ನು ಸ್ವತಃ ತಿಳಿದುಕೊಂಡರೆ, ಕಾನೂನಿನ ಜ್ಞಾನ ಪಡೆದುಕೊಂಡರೆ ಮಾತ್ರಾ ಯಶಸ್ಸು ಎನ್ನುವುದು ಶೇಷಗಿರಿಯಪ್ಪನವರ ಮಾತುಗಳು. ಕಾಲ ಬದಲಾದಂತೆ ಕೃಷಿಕನೂ ಬದಲಾದರೆ ಸ್ವರ್ಗ ಸ್ವ ಸ್ಥಳದಲ್ಲಿ ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ಕಾನುತೋಟದ ಈ ಕೃಷಿ ಕುಟುಂಬ ಉದಾಹರಣೆಯಾಗಿ ನಿಲ್ಲುತ್ತದೆ.
ಫೋನ್: ೦೮೧೮೩೨೩೧೫೬೫

1 comment:

Anonymous said...

ಓದಿ ಬಲು ಖುಷಿ ಆಯಿತು. ಕೃಷಿಕರ ಶ್ರಮದಿಂದ ಮನುಜರ ಹೊಟ್ಟೆ ತುಂಬಲು ಸಾಧ್ಯ.
ಮಾಲಾ