ಕೈಯಲ್ಲಿ ಕತ್ತಿ ಬಕೇಟ್ ಹಿಡಿದು ಮಲೆನಾಡಿನ ಗುಡ್ಡವೇರುವ ಮಂದಿ ಮನೆಗೆ ವಾಪಾಸು ಬರುವಾಗ ಪಾತ್ರೆ ತುಂಬಾ ಜೇನುತುಪ್ಪ ಉಕ್ಕುತ್ತಿರುತ್ತದೆ. ಇದು ಮೆ ತಿಂಗಳ ಮಲೆನಾಡಿನ ಜೇನುಕೀಳುವವರ ಸಂಭ್ರಮದ ಕೆಲಸ. ಹಳ್ಳಿಯ ಹಿಂದಿರುವ ಗುಡ್ಡಗಳು ಅದರಲ್ಲಿನ ಹುತ್ತಗಳು, ಮರದ ಪೊಟರೆಗಳು ದಿನವೊಂದಕ್ಕೆ ಸಾವಿರ ರೂಪಾಯಿಯ ಸಂಪಾದನೆಯ ಮೂಲ ಎಂದರೆ ಎಲ್ಲರಿಗೂ ಅಚ್ಚರಿಯಾದರೂ ಸತ್ಯ. ಮೆ ತಿಂಗಳಿನಲ್ಲಿ ಕಾಡು ಜಾತಿಯ ಸಸ
್ಯ ತೆಂಗಾರುಬಳ್ಳಿ ಹೂವನ್ನು ಬಿಡುತ್ತದೆ. ಈ ಹೂವು ಅರಳಿತು ಎಂದರೆ ಜೇನುಹುಳುಗಳಿಗೆ ಮಲೆನಾಡಿನಲ್ಲಿ ಅಂತಿಮ ಆಹಾರದ ಕಣಜ ಮುಗಿಯುತ್ತಿದೆಯೆಂದು ಅರ್ಥ. ಈ ಕೊನೆಯ ಹೂವಿನ ಮಕರಂದ ಹೀರಿ ಜೇನುಕುಟುಂಬ ತತ್ತಿಯಲ್ಲಿ ತುಪ್ಪವನ್ನಾಗಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆ ತುಪ್ಪಕ್ಕೆ ಮನುಷ್ಯ ಕನ್ನ ಹಾಕುತ್ತಾನೆ. ವಾರಕ್ಕೆ ಮೂರು ನಾಲ್ಕು ಜೇನು ಹುಡುಕಿ ವಾರಾಂತ್ಯದಲ್ಲಿ ಒಮ್ಮೆಲೆ ಅಷ್ಟನ್ನೂ ಕಿತ್ತು ಹತ್ತಾರು ಕೆಜಿ ತುಪ್ಪವನ್ನು ಸಂಗ್ರಹಿಸಿ ಹಣ ಮಾಡುವ ಜನ ಪ್ರತಿ ಮಲೆನಾಡಿನಹಳ್ಳಿಯಲ್ಲಿಯೂ ಕಾಣಸಿಗುತ್ತಾರೆ. ಈ ಕಾಡು ಜೇನುತುಪ್ಪಕ್ಕೆ ಕೆಜಿಯೊಂದಕ್ಕೆ ೧೦೦ ರಿಂದ ೧೫೦ ರೂಪಾಯಿ ಇದ್ದು ಉತ್ತಮ ಆದಾಯ ಎಂಬುದು ಕಳೆದ ಮೂವತ್ತು ವರ್ಷದಿಂದ ಜೇನುಕಾಯಕದಲ್ಲಿ ತೊಡಗಿಕೊಂಡಿರುವ ತಾಳಗುಪ್ಪ ಸಮೀಪ ಕೆರೇಕೈ ಗಿಡ್ಡಪ್ಪ. ತುಪ್ಪ ಹಿಂಡಿದ ರೊಟ್ಟನ್ನು ಕಾಯಿಸಿ ಜೇನುಮೇಣವನ್ನು ತಯಾರಿಸಿ ಆಭರಣ ತಯಾರಿಕೆಯವರಿಗೆ ಮಾರಾಟ ಮಾಡಿ ಕೊಂಚ ಆದಾಯ ಗಳಿಸುತ್ತಾರೆ. ಇದರ ಜತೆಯಲ್ಲಿ ಗುಡ್ಡಗಳಲ್ಲಿ ಹುಡುಕಿದ ಜೇನನ್ನು ಪೆಟ್ಟಿಗೆಯೊಳಗೆ ಕೂಡುವವರಿಗೆ ತೋರಿಸಿದರೆ ಇನ್ನೂ ೧೫೦ ರೂಪಾಯಿ ಅಧಿಕ ಆದಾಯವಿದೆ. ಕೆಲವರು ಅಂತಹ ಜೇನನ್ನು ಮರದ ಪೆಟ್ಟಿಗೆಯೊಳಗೆ ಕೂಡಿ ಮನೆಬಾಗಿಲಿನಲ್ಲಿಯೇ ತುಪ್ಪಸಂಗ್ರಹಿಸುತ್ತಾರೆ. ಇವರು ಜೇನು ಹುಡುಕುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಪೆಟ್ಟಿಗೆ ತುಪ್ಪಕ್ಕೆ ಶುದ್ಧತೆಯ ಪಟ್ಟ ಹಾಗೂ ಗುಣಮಟ್ಟ ಇರುವುದರಿಂದ ಇದು ೩೦೦ ರೂಪಾಯಿವರಗೂ ಬಿಕರಿಯಾಗುತ್ತದೆ. ಗುಡ್ಡಗಳಲ್ಲಿ ಜೇನುಹುಡುಕುವ ಕೆಲಸ ತುಸು ಕಷ್ಟಕರವಾದದ್ದು. ಜೇನು ಪತ್ತೆಯಾದಮೇಲೆ ೧೫ ನಿಮಿಷದ ಕಾರ್ಯಾಚರಣೆ ನಡೆಯಿಸಿ ಜೇನುತುಪ್ಪ ಸಂಗ್ರಹಿಸುತ್ತಾರೆ. ಆದರೆ ಪೆಟ್ಟಿಗೆಯೊಳಗೆ ಕೂಡುವುದು ಬಹುಕಷ್ಟಕರವಾದ ಕೆಲಸ. ಒಂದು ಜೇನು ಕುಟುಂಬವನ್ನು ಪೆಟ್ಟಿಗೆಯೊಳಗೆ ಕೂಡಿಸಲು ದಿನಪೂರ್ತಿ ಸಾಹಸ ಮಾಡಬೇಕಾದ ಸಂದರ್ಭ ಬರುತ್ತದೆ. ಈ ಕಾರಣದಿಂದ ಪೆಟ್ಟಿಗೆಗೆ ಜೇನು ಕೂಡಿಸುವವರು ೧೦೦೦ ರೂಪಾಯಿವರೆಗೂ ಹಣ ಕೇಳುತ್ತಾರೆ. ಜೇನು ಸಾಕಾಣಿಕೆ ಹುಚ್ಚಿನವರಿಗೆ ಇಲ್ಲಿ ಹಣ ಗೌಣಪಾತ್ರವನ್ನು ವಹಿಸುತ್ತದೆ. ಇದು ಹವ್ಯಾಸವಾಗಿದ್ದು ಜೇನು ಹುಡುಕುವುದು, ಕೀಳುವುದು, ಸಾಕುವುದು ಮುಂತಾದವುಗಳನ್ನು ಖುಷಿಗಾಗಿ ಮಾಡುವವರು ಹಲವರಿದ್ದಾರೆ. ಇಂಥವರಿಗೆಲ್ಲೆ ಮೆ ತಿಂಗಳು ಎಂದರೆ ಅತ್ಯಂತ ಉತ್ಸಾಹದಾಯಕ ಮಾಸ. ಜೇನು ತುಪ್ಪ ಮೇಣ ಹಾಗೂ ಪೆಟ್ಟಿಗೆಗೆ ಕೂಡುವುದು ಮುಂತಾದ ಎಲ್ಲಾ ಕಡೆ ಈಗ ಹಣದ ಹರಿವು ಇದೆ. ಒಂದುಕಾಲದಲ್ಲಿ ಜೇನು ಖುಷಿಯ ಸಮಾಚಾರವಷ್ಟೇ ಆಗಿತ್ತು, ಆದರೆ ಇಂದು ಇದರ ಹಿಂದೆ ಹಣ ಸ್ವ ಉದ್ಯೋಗ ಹಾಗೂ ಉತ್ತಮ ಆದಾಯ ಇದೆ ಎನ್ನುತ್ತಾರೆ ತಾಳಗುಪ್ಪ ಸಮೀಪದ ಪ್ರಶಾಂತೆ ಕೆರೇಕೈ(೯೪೪೮೯೧೪೭೯೧). ಇವರು ಅಗ್ಗದ ದರದ ಜೇನು ಪೆಟ್ಟಿಗೆ ತಯಾರಿಕೆ ಆರಂಭಿಸಿ ತುಪ್ಪ ಸಂಗ್ರಹಣೆ , ಜೇನು ಪೆಟ್ಟಿಗೆಗೆ ಕೂಡುವುದರ ಉದ್ಯೋಗ ಮಾಡುತ್ತಿದ್ದಾರೆ. ಔಷಧೀಯ ಬಳಕೆಗೆ ಹೆಚ್ಚು ಉಪಯೋಗವಾಗುತ್ತಿರುವ ಜೇನುತುಪ್ಪ ಹತ್ತಾರು ಕೋಟಿ ರೂಪಾಯಿಯ ಉದ್ಯಮ. ಮಲೆನಾಡು ಕಪ್ಪು ತುಡುವೆ ಹಾಗೂ ಹೆಜ್ಜೇನಿನ ಸ್ವರ್ಗ. ಮಳೆಗಾಲ ಆರಂಬಕ್ಕಿಂತ ಮೊದಲು ಇದರ ವಹಿವಾಟು ಅತಿಹೆಚ್ಚು, ನಂತರ ಮತ್ತೆ ಡಿಸೆಂಬರ್ ವರೆಗೆ ಜೇನುಹುಳುಗಳಿಗೆ ಸೇರಿದಂತೆ ಅಲ್ಲಿ ತೊಡಗಿಕೊಂಡವರಿಗೆ ವಿಶ್ರಾಂತಿ ಕಾಲ. ಮಲೆನಾಡಿನ ಸಹಜ ಕಾಡಿನಲ್ಲಿ ಹೇರಳವಾಗಿರುವ ಜೇನು ತಾನು ದುಡಿದು ಬಹಳಷ್ಟು ಜನರಿಗೆ ಉದ್ಯೋಗನೀಡಿದೆ..
No comments:
Post a Comment