Thursday, May 8, 2014

ಮುಂಗಾರಿನ ಗುಡುಗಿಗೆ ಮಯೂರ ನಾಟ್ಯ

"ಗುಡು ಗುಡು ಸದ್ದನು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತು" ಎಂದು ಕವಿಗಳು ಕಾವ್ಯ ರಚಿಸಿದ್ದಾರೆ. ಮಳೆಗಾಲದ ಆರಂಭದಲ್ಲಿ ಗುಡುಗಿನ ಗುಡು ಗುಡು ಸದ್ದು ಎಲ್ಲರೂ ಕೇಳಬಹುದು. ಆದರೆ ಮಯೂರ ನಾಟ್ಯ ಮಾತ್ರಾ ಮರೀಚಿಕೆಯೇ ಸರಿ. ಅಕಸ್ಮಾತ್ ಮಯೂರದ ನಾಟ್ಯ ನೊಡಲು ಸಿಕ್ಕರೂ ಅದು ಬಹು ದೂರದಿಂದ ಮಾತ್ರಾ ಸಾದ್ಯ. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲಿ ವ್ಯಾಪಕಾವಾಗಿರುವ ನವಿಲುಗಳು ಮುಂಗಾರಿನ ಆರಂಭದಲ್ಲಿ ಮುಂಜಾನೆ ಮತ್ತು ಸಂಜೆ ನಾಟ್ಯವನ್ನಾಡುತ್ತವೆ. ಆದರೆ ಮನುಷ್ಯರು ಹತ್ತಿರಹೋದರೆ ಜೀವಭಯದಿಂದ ಓಡಿಹೋಗಿಬಿಡುತ್ತವೆ. ನವಿಲು ನೃತ್ಯದ ಹತ್ತಿರ ದರ್ಶನ ತುಂಬಾ ಸುಂದರವಾಗಿದ್ದರೂ ಎಲ್ಲರಿಗೆ ಅದು ದುರ್ಲಭ. ಈ ಸೌಭಾಗ್ಯವನ್ನು ಹತ್ತಿರದಿಂದ ನೊಡುವ ಭಾಗ್ಯ ತಾಳಗುಪ್ಪ ಸಮೀಪದ ಬೂರ್ಲುಕೆರೆಯ ಜನರಿಗೆ ಮಾತ್ರಾ ತುಂಬಾ ಸುಲಭ. ಸಾಗರ ತಾಲ್ಲೂಕು ತಾಳಗುಪ್ಪ ಸಮೀಪದ ಬೂರ್ಲುಕೆರೆ ಚಂದ್ರಣ್ಣ ಹಾಗೂ ಲಲಿತಾ ದಂಪತಿಗಳ ಅಚ್ಚುಮೆಚ್ಚಿನ ಗಿರಿಯಪ್ಪ ನೆಂಬ ನವಿಲು ಇಲ್ಲಿನ ಜನರಿಗೆ ಪ್ರತಿನಿತ್ಯ ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ ಮಯೂರ ನಾಟ್ಯ ಪ್ರದರ್ಶಿಸುತ್ತಿದ್ದಾನೆ. ಗಿರಿಯಪ್ಪನ ನೃತ್ಯ ನೋಡಿದವರು ನಮ್ಮ ರಾಷ್ಟ್ರಪಕ್ಷಿಯನ್ನಾಗಿಸಿ ಆಯ್ಕೆಮಾಡಿದ್ದಕ್ಕೆ ಕೃತಾರ್ಥರಾಗಲೇಬೇಕು. ನೂರಾರು ಗರಿಗಳನ್ನು ಕೊಡೆಯಾಕಾರದಲ್ಲಿ ಹರಡಿಕೊಂಡು ಐದು ನಿಮಿಷಕ್ಕೊಮ್ಮೆ ಗರಗರ ಸದ್ದು ಮಾಡುತ್ತಾ ಗರಿಗಳನ್ನು ಕುಣಿಸುತ್ತಾ ಸುತ್ತುವ ಗಿರಿಯಪ್ಪನೆಂಬ ನವಿಲ ನೃತ್ಯ ವರ್ಣಿಸಲಸದಳ. ಫೋಟೋ ತೆಗೆಯಲಾರಂಬಿಸಿದರೆ ಇನ್ನಷ್ಟು ಖುಷಿಯಾಗಿ ವಿವಿಧ ರೀತಿಯ ಫೋಸ್ ಕೊಡುವ ಗಿರಿಯಪ್ಪ ಪಕ್ಕಾ ಮನಸ್ಸು ತಿಳಿದವರಂತೆ ವರ್ತಿಸುತ್ತಾನೆ. ಕಾಡುನವಿಲು ನಾಡು ಸೇರಿದ ಬಗೆ: ರಾಷ್ಟ್ರಪಕ್ಷಿ ನವಿಲು ಸಾಮಾನ್ಯವಾಗಿ ಮನುಷ್ಯರ ಸಂಪರ್ಕದಿಂದ ಬಹುದೂರ. ಮನುಷ್ಯನನ್ನು ಕಂಡರೆ ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತವೆ. ಆದರೆ ಬೂರ್ಲುಕೆರೆ ಚಂದ್ರಣ್ಣನ ಮನೆಯಲ್ಲಿ ಹಾಗಿಲ್ಲ. ಅದಕ್ಕೆ ಕಾರಣ ಚಂದ್ರಣ್ಣನವರ ಸಹೋದರ ಪ್ರಕಾಶ್ ರವರ ಮಗಳು ಶೈಲಿನಿಯ ಪಕ್ಷಿಪ್ರೀತಿ. ಈಗ ಮೂರು ವರ್ಷದ ಹಿಂದೆ ಮನೆಯ ತೊಟದ ಬಳಿ ಪೊದೆಯಲ್ಲಿ ಶೈಲಿನಿಗೆ ಎರಡು ನವಿಲುಮರಿಗಳ ಅರ್ತನಾದ ಕೆಳಿತು. ತಾಯಿ ಮರಿಯಿಂದ ದೂರವಾಗಿದ್ದ ಅವುಗಳನ್ನು ಮನೆಗೆ ತಂದು ಭತ್ತ ಹಾಕಿ ಬೆಳಸಿದಳು. ಒಮ್ದು ಮರಿ ಹೆಚ್ಚು ದಿವಸ ಬದುಕಲಿಲ್ಲ, ಇನ್ನೊಂದು ಮಾತ್ರಾ ಶೈಲಿನಿಯ ಜತೆ ಆಡುತ್ತಾ ಅವಳೊಡನೆ ರಾತ್ರಿ ಹಾಸಿಗೆಯಲ್ಲಿ ಮಲಗಿ ಬೆಳೆದು ದೊಡ್ಡದಾಯಿತು. ವಿದ್ಯಾಭ್ಯಾಸದ ನಿಮಿತ್ತ ಶೈಲಿನಿ ಉಡುಪಿಗೆ ಹೋದಾಗ ದೊಡ್ಡಪ್ಪ ಚಂದ್ರಣ್ಣನ ಮಡಿಲು ಸೇರಿತು ಗಿರಿಯಪ್ಪ. ಲಲಿತಾ ಚಂದ್ರ ಶೇಖರ್ ತಮ್ಮ ಮಗುವಿನಂತೆ ಗಿರಿಯಪ್ಪನನ್ನು ಪ್ರೀತಿಸುತ್ತಾರೆ. ಮನೆಯೊಳಗೆ ಮುಕ್ತವಾಗಿ ಸಂಚರಿಸುವ ಗಿರಿಯಪ್ಪ ಸಾಕುನಾಯಿ ಗುಂಡ ನೊಂದಿಗೂ ಆಪ್ತತೆಯಿಂದ ಇದ್ದಾನೆ. ತನಗೆ ಬೇಕೆನಿಸಿದಾಗ ತೋಟ ಗುಡ್ಡ ಬೆಟ್ಟ ಸುತ್ತಾಡಿ ಸಾಕಾದಾಗ ಮನೆ ಸೇರುತ್ತಾನೆ. ಮಳೆ ಗುಡುಗು ಬಂದರೆ ಮನೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ. ನಿತ್ಯ ನೃತ್ಯ: ಮೆ ತಿಂಗಳಿನಲ್ಲಿ ಬೆಳಿಗ್ಗೆ ಪ್ರತಿನಿತ್ಯ ಗರಿಬಿಚ್ಚಿ ನೃತ್ಯ ಮಾಡುವ ಗಿರಿಯಪ್ಪ, ನೋಡಲು ಜನ ಬಂದರೆ ಇನ್ನಷ್ಟು ನೃತ್ಯಕ್ಕೆ ರಂಗೇರಿಸುತ್ತಾನೆ. ಮಿಕ್ಕ ಸಮಯದಲ್ಲಿ ತನಗೆ ಬೇಕಾದಲ್ಲಿ ಮರ ಏರಿ ಅಥವಾ ಕಾಡೊಳಗೆ ಅಡ್ದಾಡುತ್ತಾ ಇರುತ್ತಾನೆ. ಹಸಿವಾದಾಗ ಮನೆಗೆ ಬಂದು ಕಾಳು ತಿನ್ನುತ್ತಾನೆ, ನಾಯಿಗೆ ಹಾಗೂ ನವಿಲಿಗೆ ಅಕ್ಕಪಕ್ಕದಲ್ಲಿ ಕಾಳು ಹಾಕಿದರೂ ಒಂದಕ್ಕೊಂದು ಗಲಾಟೆ ಮಾಡಿಕೊಳ್ಳದೆ ಅವರವರ ಪಾಲನ್ನು ಅವರವರೇ ತಿನ್ನುತ್ತಾರೆ ಎನ್ನುತ್ತಾರೆ ಚಂದ್ರಣ್ಣ.ಕಾಡೊಳಗೆ ಬೇಟೆಗಾರರ ಭಯವಿರುವುದರಿಂದ ಅಪಾಯದ ಭಯ ನಮ್ಮನ್ನು ಕಾಡುತ್ತದೆ, ನಾಲ್ಕು ವರ್ಷದ ಹಿಂದೆ ನನ್ನ ಸಹೋದರ ಪ್ರಕಾಶ ರ ಒಡನಾಡಿಯಾಗಿದ್ದ ನವಿಲು ಕಳ್ಳಬೇಟೆಗಾರರ ಗುಂಡೇಟಿಗೆ ಬಲಿಯಾಗಿತ್ತು. ಅವನ ನೆನಪಿಗೆ ಇವನಿಗೂ ಗಿರಿಯಪ್ಪ ಎಂದೇ ನಾಮಕರನ ಮಾಡಿದ್ದೇವೆ ಎನ್ನುತ್ಟಾರೆ. ಕಾಡಿನ ನವಿಲು ಊರು ಸೇರಿ ನೃತ್ಯದ ಸೊಬಗನ್ನು ಜನರಿಗೆ ಹತ್ತಿರದಿಂದ ಸವಿಯಲು ಅವಕಾಶ ಮಾಡಿಕೊಟ್ಟ ಚಂದ್ರಣ್ಣನ ಕುಟುಂಬಕ್ಕೂ ಗಿರಿಯಪ್ಪನಿಗೂ ಹ್ಯಾಟ್ಸಾಫ್ ಎನ್ನಲೇಬೇಕು. ನವಿಲು: ರಾಷ್ಟ್ರಪಕ್ಷಿ ನವಿಲು ನೋಡಲು ತುಂಬಾ ಸುಂದರ. ಇದರ ಮಾಯಸ್ಸು ೧೨ ರಿಂದ ೧೪ ವರ್ಷಗಳು. ವರ್ಷಕ್ಕೊಮ್ಮೆ ಮೊಟ್ತೆಯನ್ನಿಡುವ ಇವು ಒಮ್ಮೆ ೧೦ ರಿಂದ ೧೫ ಮೊಟ್ಟೆಯನ್ನಿಟ್ಟು ಮರಿಮಾಡುತ್ತವೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮರಿಯಾಗುತ್ತವೆ. ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಹಾಗೂ ಹೆಣ್ಣು ನವಿಲು ಕೋಳಿಯಂತೆ ಇರುವ ಕಾರಣಕ್ಕಾಗಿ ಇವು ಕಳ್ಳ ಬೇಟೆಗಾರರ ಗುಂಡಿಗೆ ಬಲಿಯಾಗುತ್ತವೆ. ಗಂಡುನವಿಲ್ಗೆ ಗರಿ ಇರುವುದರಿಂದ ಸುಲಭದಲ್ಲಿ ಬೇಟೆಗಾರರ ಕೈಗೆ ಸಿಗುತ್ತವೆ. ಇಷ್ಟಿದ್ದರೂ ಪ್ರಕೃತಿಯ ಶಕ್ತಿ ಅಗಾಧ ನವಿಲಿನ ಸಂಖ್ಯೆ ಕ್ಷೀಣಿಸದೆ ಸಮೃದ್ಧಿಯಿದೆ. ನವಿಲಿನ ನೃತ್ಯ ನೋಡಬಯಸುವವರು ಫೋನ್ ಮಾಡಿಕೊಂಡು ಬರಬೇಕಿದೆ: ಚಂದ್ರಣ್ಣ ಮೊಬೈಲ್:9480058299

No comments: