Monday, May 19, 2014

ಕಾ ಕೆ ಕಾಹಾ....

ಎಂಟನೇ ತರಗತಿಯ ಸಂಸ್ಕೃತ ಮೇಷ್ಟ್ರು ನಮಗೆ  ಕಾ ಕೆ ಕಾ: , ಕಾಂ ಕೆ ಕಾ: ಅಂತ ಬಾಯಿಪಾಠ ಮಾಡಿಸಲು ಯತ್ನಿಸಿದ್ದುಂಟು.  ನಾವು ಮಾತ್ರಾ  ಕಾಕೆ ಕಾಕಾ ಎಂದು ಹಿಂದಿನ ಬೇಂಚಿನಲ್ಲಿ ಪಕ್ಕಾ  ಕಾಗೆಯಂತೆ ಒದರುತ್ತಿದ್ದೆವು. ಹಾಗೆ ಒದರಿದ ಕೆಲವರು ಇಂದು ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದಾರೆ ಇನ್ನು ಕೆಲವರು ಬೇಕಾಬಿಟ್ಟಿಯಾಗಿಯೂ ಹೋಗಿದ್ದಾರೆ. ಆದರೆ ಹಾಗೆಲ್ಲ ಏರಿದ್ದಕ್ಕೂ ಅಥವಾ ಇಳಿದಿದ್ದಕ್ಕೂ ಈ ಕಾಕೆ ಕಾ:  ಸಂಬಂಧ ಇಲ್ಲ ಅಂತ ತೀರಾ ತಳ್ಳಿ ಹಾಕಲಾಗದು.  ರಾಮಹ ರಾಮೌ ರಾಮಾಃ ದಂತೆಯೇ ಈ ಕಾ ಕೆ ಕಾಹ  ವನ್ನು ಎದ್ದು ಬಿದ್ದು ಗಟ್ಟುಹೊಡೆದು ಪರೀಕ್ಷೆಯಲ್ಲಿ ಪಕ್ಕಾ ಹಾಗೆಯೇ ಬರೆದು ನೂರಾ ಇಪ್ಪತ್ತೈದಕ್ಕೆ ನೂರಾ ಇಪ್ಪತ್ತು ಪಡೆದು ಒಬ್ಬ ನನ್ನ ಸ್ನೇಹಿತ ಅಂದು ಬೀಗಿದ್ದ. ಪಾಪ ಇಂದು ಅವನು ಸಂಜೆಯಾದಕೂಡಲೇ ಒಮ್ಮೊಮ್ಮೆ ಮಟ ಮಟ ಮಧ್ಯಾಹ್ನವೂ  ತೊಂಬತ್ತು ಹಾಕಿ ಕಣ್ಣು ಕೆಂಪಗೆ ಮಾಡಿಕೊಂಡು ಕಾಗೆಯಂತೆಯೇ ಒದರುತ್ತಾನೆ. ನಮ್ಮ ಜೊತೆ ಹಾಗೆಲ್ಲಾ ಕೂಗಾಡುತ್ತಿದ್ದವನು  ಓದೋದು ನನಗೆ ಒಗ್ಗಿದ್ದಲ್ಲ ಅಂತ ಪುಸ್ತಕ ಮಡಚಿಟ್ಟು  ಪಕ್ಕಾ ವ್ಯವಹಾರಸ್ಥನಾಗಿ ಠಾಕು ಠೀಕಾಗಿದ್ದಾನೆ, ಮಗದೊಬ್ಬ ನೂರಕ್ಕೆ ತೊಂಬತ್ತು ಗಳಿಸಿ ತೊಂಬತ್ತು ಮುಟ್ಟದೆ ಸೂಪರ್ ಪೋಸ್ಟ್ ನಲ್ಲಿ ಜುಂ ಅಂತ ಇದ್ದಾನೆ.                                     ನಾನೂ   ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ ಆಗಿಬಿಟ್ಟೆ ಅಂತ ಬಹಳ ಜನ ಅಂದುಕೊಂಡಿದ್ದರು. ಹಾಗಾಗಲಿಲ್ಲ. ಅಪ್ಪನ ಲೆಕ್ಕಾಚಾರ ಹಿಡಿದರೆ  ತಿಥಿ ದಿವಸ ಕಾಗೆ ಕರೆಸುವ ಜನ ನಾನಾಗಬೇಕಾಗಿತ್ತು. ಆದರೆ ಆಗಲಿಲ್ಲ. ಇತ್ತಲೆ ಇದ್ದೇನೆ  ಹಾಯಾಗಿ. ಕಾಗೆ ಕಂಡಕೂಡಲೆ ಕಾ ಕಾ ಎನ್ನುತ್ತ .

No comments: