Saturday, May 24, 2008

ಗುಟ್ಕಾ ಮತ್ತು ಬೋಳಿಮಗ


ಬೆಂಗಳೂರಿನ ಮಳೆ ಎಂದರೆ ಗಿಜಿ ಗಿಜಿ ಪಚ ಪಚ. ಕಪ್ಪನೆಯ ನೀರು ವ್ಯಾ.. ಜಯನಗರದ ಎಂಟನೇ ಬ್ಲಾಕಿನ ಮೂಲೆ ಅಂಗಡಿಯಲ್ಲಿ ಮಳೆರಾಯನಿಂದ ತಪ್ಪಿಸಿಕೊಂಡು ಅವನನ್ನೇ ನೋಡುತ್ತಾ ನಿಂತಿದ್ದೆ. "ಯಂತಾ ಮಳೇರಿ.. ಮಾಣಿಕ್ ಚಂದ್ ಕೊಡಿ... ಗುಟ್ಕಾ ಅಂತ ಇಲ್ದಿದ್ರೆ ಚಳಿ ಹಿಡಿದು ಸಾಯ್ಬೇಕಿತ್ತು...ಅಲ್ಲಾ ಯಾವ ಬೋಳಿಮಗ ಕಂಡು ಹಿಡಿದಾ ಈ ಗುಟ್ಕಾನ ಅಂತ " ಹಿಂದಿನಿಂದ ಹೆಣ್ಣು ದನಿ ಕೇಳಿದಾಗ ಸ್ವಲ್ಪ ಅಚ್ಚರಿಗೊಂಡು ತಿರುಗಿ ನೋಡಿದೆ. ಊರಲ್ಲಿ ಗಂಡು ಮಕ್ಕಳು ಗಬ್ಬುವಾಸನೆಯ ಗುಟ್ಕಾ ತಿನ್ನುವುದನ್ನು ಎಲ್ಲರೂ ನೊಡಿದ್ದಾರೆ,ಪೇಟೆಯಲ್ಲಿ ಸಣ್ಣ ಮಕ್ಕಳು ತಿನ್ನುವುದನ್ನು ನಾನೂ ನೋಡಿದ್ದೀನಿ. ಅಕ್ಕ,ಹೆಂಡತಿ, ಅಮ್ಮ, ಮುಂತಾದ ಮಹಿಳಾಮಣಿಗಳ ಮತ್ತು ಪೆಜತ್ತಾಯರಂತಹ ಸಾತ್ವಿಕ ದಂಡಿನ ಹತ್ತಿರ ನಾನೂ ವಾಚಾಮಗೋಚರ ಉಗಿಸಿಕೊಂಡಿದ್ದೀನಿ. ಗುಟ್ಕಾ ಹಾಕದವರಿಗೆ ಗಬ್ಬು ವಾಸನೆಯ ಸೂಸುವ ತಿನ್ನುವವರಿಗೆ ಆಸ್ವಾದ ನಿಡುವ ಸ್ಟಾರ್ ಪಾನ್ ಪರಾಗ್ ನಾನೂ ತಿಂದಿದ್ದೀನಿ, ಆದರೆ ದೇವರಾಣೆ ಹೇಳ್ತೀನಿ ಹೆಂಗಸರು ಈ ಪಾಟಿ ಗುಟ್ಕಾ ತಿನ್ನುವುದನ್ನು ನೋಡಿರಲಿಲ್ಲ. ಠಾಕುಠೀಕಾಗಿದ್ದ ಸುಮಾರು ಐವತ್ತರ ಹರೆಯದ ಆ ಹೆಂಗಸು ಖರೀದಿಸಿದ್ದು ಅನಾಮತ್ತು ಇಪ್ಪತ್ತು ಗ್ಗುಟ್ಕಾ . ಇಷ್ಟಗಲಾ ಕಣ್ಣುಬಿಟ್ಟು ನೋಡುತ್ತಿದ್ದ ನನ್ನನ್ನು ನೋಡಿದ ಆಕೆ " ದರಿದ್ರದ್ದು ಕಣ್ರಿ ಬಿಡೋಕಾಗಲ್ಲ, ಕೆಟ್ಟ ಗಳಿಗೇಲಿ ಕಲ್ತೆ" ಎಂದು ಅರ್ದಂಬರ್ದ ಸ್ವಗತದ ಮಾತನ್ನು ಹೇಳಿ ಪರ್ರನೆ ಗುಟ್ಕಾ ಪ್ಯಾಕೆಟ್ ಹರಿದು ಬಾಯಿಗೆ ಸುರಿದುಕೊಂಡು ಮಳೆ ನಿಂತ ಕೂಡಲೆ ಅಲ್ಲಿಂದ ರೈಟ್ ಎಂದಳು. ನನ್ನೋಳಗಿದ್ದ ಅಡಿಕೆ ಬೆಳೆಗಾರನಿಗೆ ಯೆಲಾ ಅಡಿಕೆಬೆಳೆಗಾರ ನನ್ಮಗನೆ ಯಾವಾಗ್ಲೂ "ಅಡಿಕೆ ರೇಟ್ ಒಂದಲ್ಲಾ ಒಂದು ದಿನ ಬಿದ್ದೋಗುತ್ತೆ ಜೀವನ ಹೆಂಗೆ ಮಾಡ್ತೀಯಾ ಅಂತ" ಹೆದರುಸ್ತಿದ್ದೆ, ಈ ಪಾಟಿ ಹೆಂಗಸರು ಮಕ್ಳೆಲ್ಲಾ ತಿಂದು ಹಾಳಾಕ್ತೀನಿ ಅಂತಾ ಇದಾರೆ, ಪ್ರಪಂಚ ಸುಟ್ಟು ನೀನು ಗುಮ್ ಅಂತ ಆರಾಮಾಗಿ ಇರು" ಅಂತ ಹೇಳಿಕೊಂಡೆ. ಅಡಿಕೆ ಬೆಳೆದು ತಾವು ತಿನ್ನದೆ ಇರೋರು ಬುದ್ದಿವಂತರು. ಬೆಳೆದು ತಿನ್ನೋರು ನನ್ನಂಗೆ ಮಧ್ಯಮವಂತರು, ಪಾಪ ಕೊಂಡು ತಿನ್ನೋರು ಗ್ರಾಚಾರವಂತರು ಅಂತ ಅನ್ನಿಸ್ತು. ಅದೇ ಸತ್ಯ ಅಂತಲ್ಲ , ಸತ್ಯ ಇದ್ರೂ ಇರಬೈದು.. ಹ ಹ.ಹ . ಮನೆಗೆ ಬಂದು ಅಡಿಕೆ ಮೇಲೆ ಒಂದು ಕತೆ ಬರೆಯಲು ಕುಂತೆ. ಅದು ಬರೆಯೋಕೆ ಅಂತ ಕುಂತಿದ್ದೊಂದು ಬರೆದಿದ್ದೊಂದು ಅಂತ ಆಗೋಯ್ತು. ಕತೆ ಕಳ್ಸಿದ ವಾರದಲ್ಲೇ ಕನ್ನಡ ಪ್ರಭದ ವಿದ್ಯಾರಶ್ಮಿಯವರು ಮುಂದಿನ ವಾರ ಸಾಪ್ತಾಹಿಕಪ್ರಭದಲ್ಲಿ ನಿಮ್ಮ ಕತೆ ಬರುತ್ತೆ ಅಂತ ಮೈಲ್ ಮಾಡಿಯೇ ಬಿಟ್ರು. ಇಲ್ಲಿದೆಯಾ ನೊಡಿ:- ಕನ್ನಡ ಪ್ರಭ ವೆಬ್ ಸೈಟ್ ಓಪೆನ್ ಆದ್ಮೇಲೆ ಪೇಜ್ ನಂಬರ್ ಹದಿನೈದರ ಮೇಲೆ ಕ್ಲಿಕ್ ಮಾಡಿ. http://www.kannadaprabha.com/pdf/epaper.asp?pdfdate=4/20/2008

1 comment:

srputtur said...

ನಿಮ್ಮ ಬರಹ ಓದಿ ಖುಶಿ ಅಯಿತು.