Tuesday, June 17, 2008

ಕ್ಯಾನ್ಸರ್ ನಿಂದಾದ ಈ ಸಾವು ನ್ಯಾಯವೇ...?


ಆ ಮನೆಯಲ್ಲೀಗ ಸೂತಕದ ಛಾಯೆ. ಹದಿಹರೆಯದ ಮನೆಯ ಯಜಮಾನ ಸಾವನ್ನಪ್ಪಿದ್ದಾನೆ. ಸಿನಿಮಾದಲ್ಲಾದರೆ "ಈ ದೇಹದಿಂದ ದೂರವಾದೆ ಏಕೆ ಆತ್ಮನೆ..? ಈ ಸಾವು ನ್ಯಾಯವೇ? ಎಂಬ ಹಾಡು ಹಾಡಿ ಕಣ್ಣೀರು ಸುರಿಸಬಹುದಿತ್ತು. ಲಯಬದ್ಧವಾದ ಹಾಡಿಗೆ ಪ್ರೇಕ್ಷಕರೂ ಸೊರ ಸೊರ ಎಂದು ಕಣ್ಣೀರು ಸುರಿಸುತ್ತಿದ್ದರು. ಆದರೆ ಇದು ವಾಸ್ತವ ಜಗತ್ತು. ಹಾಗಾಗಿ ಅವರವರ ಪಾಡು ಅವರವರಿಗೆ. ಇದೆಲ್ಲಾ ಹೇಗಾಯಿತು? ಏ ಕಾಯಿತು ಎಂದು ತಿಳಿಯುವುದರೊಳಗೆ ಎಲ್ಲಾ ಮುಗಿದೇ ಹೋಯಿತು. ಇಂತಹ ಸಾವುಗಳು ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುತ್ತಿವೆ, ನಾಗರೀಕ ಸಮಾಜವೆನಿಸಿಕೊಂಡ ಈ ಕಾಲದಲ್ಲಿಯೂ ನಾವು ಇವನ್ನೆಲ್ಲಾ ನೋಡುತ್ತಾ ಸುಮ್ಮನುಳಿಯುತ್ತೇವೆ. ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಆದರ್ಶದ ಭಾಷಣ ಮಾಡುತ್ತೇವೆ,

ಹದಿಹರೆಯದ ಆ ಯುವಕನಿಗೆ ಬಾಯಿ ಕ್ಯಾನ್ಸರ್. ಸುಮಾರು ೫೦ ವರ್ಷಗಳ ಹಿಂದೆ ಬಾಯಿಕ್ಯಾನ್ಸರ್ ಬಂದು ದವಡೆ ಕೀಳಿಸಿಕೊಂಡು ನಂತರ ಬಹಳ ವರ್ಷಗಳ ಕಾಲ ಬದುಕಿದ ಹಲವು ಜನರು ಸಿಗುತ್ತಾರೆ. ಆದರೆ ಈತ ಮೊದಲನೇ ಹಂತದಲ್ಲಿ ತಿಳಿದರು ೯ ತಿಂಗಳಿಗಿಂತ ಹೆಚ್ಚಿಗೆ ಬದುಕಲಿಲ್ಲ. ಇಂತಹ ವಿಜ್ಞಾನ ಯುಗದಲ್ಲೀಯೂ ಸಾವಿಗೆ ಶರಣಾದ. ಈ ಸಾವಿಗೆ ಸುವ್ಯಸ್ಥಿತ ಸಮಾಜ ಹೊಣೆ ಎಂದರೂ ತಪ್ಪಿಲ್ಲ. ಆತನ ಅಜ್ಞಾನ ಎಂದರೂ ಸರಿಯೇ. ಅವೆಲ್ಲಾ ಇಲ್ಲಿಯವರೆಗೆ ಆಗಿದ್ದೆಲ್ಲವೂ ಆಗಬೇಕಾದ್ದೇ ಎಂಬ ಹುಂಬ ಮಾತಿಗೆ ಕಟ್ಟು ಬಿದ್ದು ಬಾಯಿಮುಚ್ಚಿಕೊಂಡಿರೋಣ, ಅದು ಹೇಗಾಯ್ತು ಅಂತ ಸ್ವಲ್ಪ ನೋಡೋಣ

16ರ ಹರೆಯದ ಮಾಣಿ ಎಸ್.ಎಸ್.ಎಲ್.ಸಿಗೆ ವಿದ್ಯೆ ಸಾಕು ಎಂದು ಸಲಾಂ ಹೊಡೆದ. ದೊಡ್ಡ ಕುಟುಂಬ1 ಐದಾರು ಎಕರೆ ಭಾಗಾಯ್ತು ಸಾಕು ಇನ್ನೇಕೆ ಎಂದಿದ್ದರೂ ಇದ್ದೀತು. ಮನೆಯಲ್ಲಿ ಸುಮ್ಮನೆ ಇದ್ದಾಗ ಪಕ್ಕದವರ್ಯಾರೋ ಹ್ವಾಯ್ ಎಂದರು." ಒಂದು ಬೀಡಿ ಸೇದಾ ಎಂತು , ನೀನೇನು ಆಕ್ತಲ್ಲೆ , ನೀನೇನು ದುಡ್ಡು ಕೊಡಕ ದೂಪ ಹಾಕಕ, ಒಂದು ಬೀಡಿ ಸೇದಿರೆ ಚಟ ಅಂಟ್ಕ್ಯತ್ತಲ್ಲೆ ತಗ " ಎಂದರು. ಮಾಣಿಗೆ ಅದು ಮಜ ಅಂತ ಅನ್ನಿಸಿತು. ಆದರೂ ಸಣ್ಣಕ್ಕೆ ಅಧೈರ್ಯ ತೋರಿದ." ಅಯ್ಯೋ ರಾಮಾ ಯಂತಕೆ ಹೆದರ್ತ್ಯಾ..? ಖಾಯಿಲೆ ಬಪ್ಪದಾದ್ರೆ ಹ್ಯಾಂಗಾರು ಬರ್ತು. ಬೀಡಿ ಸೇದದೆ ಇದ್ದವರು ಸಾವಿರಾರು ವರ್ಷ ಬದುಕಿದ್ವನಾ? ತಗಳ" ಮತ್ತೊಬ್ಬರು ದನಿ ಸೇರಿಸಿದರು. ಅಪ್ಪಿ ಬೆಪ್ಪಾದ ಸುಮ್ಮನೆ ಅಂಟಿಕೊಂಡಿದ್ದು ನೋಡನೋಡುತ್ತಲೇ ಚಟವಾಯಿತು. ಆನಂತರ ಮತ್ತೊಬ್ಬರು ಈತನನ್ನು ಬಳಸಿಕೊಳ್ಳಲು ಮುಂದಾದರು. ಪಾಪ ಅಪ್ಪಿಯನ್ನು ನೀನೆ ಜಗತ್ತಿನಲ್ಲಿ ಅತೀ ಬುದ್ದಿವಂತ ಎಂದರು. ತಾವು ಕುಡಿಯುತ್ತಿದ್ದ ಬಾಟ್ಲಿಯಲ್ಲಿ ಅರ್ದ ಎರಸಿ ಕೊಟ್ಟರು. ಆವಾಗಲೂ ಅದೇ ಮಾತು. ಅಯ್ಯೋ ರಾಮಾ ಕುಡಿದೇ ಇದ್ದವರು ಸಾವಿರ ವರ್ಷ ಬದುಕ್ತ್ವನ ಮಳ್ಳು..?

ಇರಲಿ ಅಪರೂಪಕ್ಕೊಮ್ಮೆ ಕುಡಿತ ದಿನಾ ಒಂದು ಕಟ್ಟು ಬೀಡಿ ಮೂವತ್ತೆಂಟು ವರ್ಷಕ್ಕೆ ಸಾಯಗೊಡುವುದಿಲ್ಲ. ಆದರೆ ಜತೆಯಲ್ಲಿ ಮಂಡೆ ಬಿಸಿ ಆಯುಷ್ಯವನ್ನು ತಿಂದು ಬಿಡುತ್ತದೆ. ಅಮಾಯಕ ಸಾತ್ವಿಕ ಹುಡುಗನಿಗೆ ತಲೆಯಲ್ಲಿ ಏನೇನೋ ತುಂಬಿ ಸಾತ್ವಿಕ ಜನರ ವಿರುದ್ಧ ಗುರು-ಹಿರಿಯರ ವಿರುದ್ಧ ಮಾತಾಡುವಂತೆ ಎತ್ತಿಕಟ್ಟಿದರು. ತಮಗೆ ಆಗದವರ ವಿರುದ್ದ್ಜ ಅಪ್ಪಿಯ ಮೂಲಕ ಬಾಯಿತೆವಲು ತೀರಿಸಿಕೊಂಡರು. ಮಾಣೀಗೆ ಮಾತ್ರಾ ನಿತ್ಯ ತಲೆಬಿಸಿ ಇತ್ತ ನಾಸ್ತಿಕನಾಗಲಾರ ಅತ್ತ ಆಸ್ತಿಕರು ಹೆದರುತ್ತಾರೆ ಹಾಗಾಗಿ ಅಲ್ಲಿ ಸೇರಲಾರ. ಆವಾಗ ಹಲ್ಲು ನೋವು ಕಾಣಿಸಿಕೊಂಡಿತು, ಮಾಮೂಲಿ ಹಲ್ಲು ನೋವುತಾನೆ ? ಎಂದು ಕೀಳಿಸ ಹೋದ . ಡಾಕ್ಟರ್ರು ಇದು ದವಡೆ ಕ್ಯಾನ್ಸರ್ ಎಂದರು. ಸುತ್ತಮುತ್ತಲಿನ ನಿತ್ಯ ಸ್ನೇಹಿತರು ಮಳ್ಳನಾ ಸುಳ್ಳೆ ಎಂದರು. ಈತನೂ ಸುಳ್ಳು ಎಂದ . ಆದರೆ ಕೆಟ್ಟ ಕ್ರಿಮಿ ಆಗಲೆ ದವಡೆಯನ್ನು ತಿನ್ನತೊಡಗಿತ್ತು. ಇರಲಿ ಬಿಡಿ ಇವತ್ತಿನ ಕಾಲದಲ್ಲಿ ಆರಂಭಹಂತದಲ್ಲಿರುವ ದವಡೆ ಕ್ಯಾನ್ಸರ್ ಮಹಾ ದೊಡ್ಡ ಖಾಯಿಲೆ ಅಲ್ಲ. ಸಮರ್ಪಕವಾದ ಚಿಕಿತ್ಸೆ ಸಿಕ್ಕರೆ ವಾಷ್ ಔಟ್. ಆದರೆ ಹಾಗಾಗಲಿಲ್ಲ . ಅಪ್ಪಿಯ ನಿತ್ಯ ಜೀವನದ ಸಲಹೆಕಾರರು ಕಣ್ಮರೆಯಾದರು. ಅಪ್ಪಿ ಕಂಗಾಲಾದ. ಯಶಸ್ವಿನಿಯಂತಹ ಒಳ್ಳೆಯೆ ವ್ಯವಸ್ಥೆಯಿದ್ದರೂ ಬಳಸಿಕೊಳ್ಳುವ ಸೂಕ್ತ ಮಾರ್ಗದರ್ಶನ ಇಲ್ಲದೆ ಮೊನ್ನೆ ಕೈಲಾಸ ವಾಸಿಯಾದ. ನಾರು ಬೇರು ಔಷಧಿ ಕೊಡುವ ನಾಟಿ ವೈದ್ಯರು ಆತನಿಗೆ ಗ್ಯಾರಂಟಿ ಕೊಟ್ಟಿದ್ದರಂತೆ. ಅದು ಈ ತರಹ ಅಂತ ಗೊತ್ತಿರಲಿಲ್ಲ.

ಹೊಗೆ ಹಾರುವಹೊತ್ತಿಗೆ ಅವರೆಲ್ಲಾ ಬಂದಿದ್ದರು. ಸಾವನ್ನು ನಿಗಂಟು ಮಾಡಿಕೊಳ್ಳಲಾ.. ಎಂಬ ಅನುಮಾನ ನನಗೆ.

ಅಪ್ಪಿ ಒಳ್ಳೆಯ ತಮಾಷೆಗಾರನಾಗಿದ್ದ. ಒಳ್ಳೆಯ ಹೃದಯವಂತನಾಗಿದ್ದ. ಹುಷಾರು ಮಾಡಲು ನಾವೂ ಪ್ರಯತ್ನ ಪಟ್ಟಾಗಿತ್ತು. ಆದರೆ ಸಹಕಾರ ಸಿಗಲಿಲ್ಲ. ಈಗ ಆತ ಇಲ್ಲ ಏನು ಹೇಳಿದರೂ ಪ್ರಯೋಜನವಿಲ್ಲ. ಪ್ರತೀ ಹೇಳಿಕೆಗೂ ವಿಭಿನ್ನ ಅರ್ಥ ಹುಟ್ಟಿಕೊಳ್ಳುತ್ತದೆ. ಸಣ್ಣ ಸಣ್ಣ ಇಬ್ಬರು ಮಕ್ಕಳನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ. ಆದರೆ ಮಾಡುವುದೇನು?. ಆಗಬೇಕಾದ್ದು ಆಗಿಯೇ ಆಗುತ್ತದೆ. ನಾವ್ಯಾರು..? ಎಂಬ ಉತ್ತರದಂತಹ ಪ್ರಶ್ನೆ ಮಾತ್ರಾ ಉಳಿಯುತ್ತದೆ ಮನಸ್ಸಿನಲ್ಲಿ

2 comments:

R.K. said...

Shreeshumravare,
Nimma maneya photo nijavaagiyoo frame olage bedisitta chitrapatadanteyE atyanta sundaravaagideide.

shreeshum said...

ok Thanks . credit appyange transfer madti